More

    ಮಾತಿನ ಒಡತಿ ಸರಸ್ವತಿ, ಮಾತಂಗಿಯಲ್ಲೂ ಮಾತಿದೆ

    ಮಾರಂಭಗಳಲ್ಲಿ ಸಾಮಾನ್ಯವಾಗಿ ಅತಿಥಿಗಳನ್ನು ಭಾಷಣಕ್ಕೆ ಆಹ್ವಾನಿಸುವಾಗ ನಿರ್ವಾಹಕರು ಈಗ ಸನ್ಮಾನ್ಯ ………… ಅವರು ಎರಡು ಮಾತುಗಳನ್ನು ಆಡಬೇಕು ಅನ್ನುತ್ತಾರೆ. ಅದರ ಅರ್ಥ ಎರಡೇ ಮಾತುಗಳಲ್ಲಿ ಭಾಷಣ ಮುಗಿಸಬೇಕು ಎಂದಲ್ಲ. ಎರಡು ಮಾತು ಅನ್ನುವುದು ಒಂದು ನುಡಿಗಟ್ಟು. ಚುಟುಕಾಗಿ ಕೆಲವು ಮಾತುಗಳನ್ನು ಹೇಳಬೇಕೆಂಬುದು ಅದರ ಹಿಂದಿರುವ ಭಾವ. ಆದರೆ ವಾಚು ನೋಡುವ ಚಾಳಿ ಇಲ್ಲದ ವಾಚಾಳಿ ಅತಿಥಿಗಳು ಎರಡು ಮಾತು ಅನ್ನುತ್ತ ಗಂಟೆಗಟ್ಟಲೆ ಕೊರೆಯುವುದೂ ಉಂಟು. ಅಂಥವರು ಭಾಷಣ ಆರಂಭಿಸುವಾಗ ಎರಡೇ ಎರಡು ಮಾತು ಅಂದರೂ ಮುಗಿಸುವಾಗ ಕೇಳುಗರ ಎರಡೂ ಕಿವಿ ಪರದೆ ತೂತಾಗುತ್ತದೆ. ಸಮಯದ ಮಿತಿ ಮೀರಿ ಮಾತನಾಡುವುದು ಬಹಳಷ್ಟು ಭಾಷಣಕಾರರ ದೌರ್ಬಲ್ಯ. ನಾನೂ ಇದಕ್ಕೆ ಅಪವಾದವಲ್ಲ. ‘ಬರೆಯೋದೇನೋ ಚುಟುಕ, ಕೊರೆಯೋಕೆ ನಿಂತ್ರೆ ಕಟುಕ’ ಅಂತ ನನ್ನ ವಾಚಾಳಿತನವನ್ನು ನಾನೇ ಟೀಕಿಸಿಕೊಂಡಿದ್ದೇನೆ. ಏನು ಮಾಡುವುದು? ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದ್ದರೆ ಮಾತು ನಿಲ್ಲಿಸಲು ಮನಸ್ಸೇ ಬರುವುದಿಲ್ಲ. ಆದರೂ ಕೂಡಾ ವಿಶ್ವ ಮಹಿಳಾ ದಿನದಂದು ಮಹಿಳೆಯರ ಬಗ್ಗೆ ಎರಡು ಮಾತಾಡಿ ಅಂತ ಯಾರಾದರೂ ಹೇಳಿದರೆ ನಾನು ಚುಟುಕಾಗಿ ಹೀಗೆ ಹೇಳುತ್ತೇನೆ:

    ಮಹಿಳಾ ದಿನದಂದು

    ಮಹಿಳೆಯರ ಬಗ್ಗೆ

    ಎರಡು ಮಾತು

    ಮಹಿಳೆ

    ಮಾತು!

    ಮಹಿಳೆ ಎಂದ ತಕ್ಷಣ ನಮಗೆ ನೆನಪಾಗುವುದು ಮಾತು. ಇದು ಮಹಿಳೆಯರನ್ನು ಟೀಕಿಸಲು ಹೇಳುವ ಮಾತಲ್ಲ. ಮಾತು ಮಹಿಳೆಯರ ದೌರ್ಬಲ್ಯವೆಂದು ತಿಳಿಯುವುದು ತಪ್ಪು. ಮಾತೇ ಅವರ ವೈಶಿಷ್ಟ್ಯ ಮತ್ತು ಶಕ್ತಿ. ಮಹಿಳೆಯರನ್ನು ಮಾತೆಯರು ಅನ್ನುವುದು ಅತ್ಯಂತ ಅರ್ಥಪೂರ್ಣ. ಮಾತಿನ ಅಧಿದೇವತೆ ಮಾತೆ ಸರಸ್ವತಿ. ಸರಸ್ವತಿಯ ಇನ್ನೊಂದು ಹೆಸರು ವಾಣಿ. ವಾಣಿ ಎಂದರೂ ಮಾತೇ. ಗೀರ್ವಾಣಿ ಅಂದರೂ ಸರಸ್ವತಿಯೇ. (ಚೀರಾಡುತ್ತಾ ಮಾತಾಡುವ ಮಹಿಳೆಯರನ್ನು ಚೀರ್ವಾಣಿ ಅನ್ನಬಹುದು.) ಸರಸ್ವತಿ ಮಾತಿನ ಒಡತಿಯಾದ್ದರಿಂದ ಸಾಮಾನ್ಯ ಮಹಿಳೆಯರಿಗಿಂತ ಆಕೆ ಹೆಚ್ಚು ಮಾತನಾಡುತ್ತಾಳೆ. ವಾಗ್ದೇವಿಯ ವಾಗ್ಧಾರೆಯನ್ನು ಕೇಳಲು ಎರಡು ಕಿವಿಗಳು ಸಾಕಾಗುವುದಿಲ್ಲ. ಆದ್ದರಿಂದಲೇ ಅವಳ ಪತಿ ಬ್ರಹ್ಮನಿಗೆ ಎಂಟು ಕಿವಿಗಳು ಮತ್ತು ಹೆಂಡತಿಯ ಮಾತಿಗೆ ತಲೆದೂಗಲು ಚತುಮುಖ! ಮೂರು ಲೋಕದ ಗಂಡ ಎನ್ನಿಸಿಕೊಂಡ ಅರ್ಜುಣ ಬಾಣ ಪ್ರಯೋಗದಲ್ಲಿ ಅದ್ವಿತೀಯನಾಗಿದ್ದರೂ ಮಡದಿ ದ್ರೌಪದಿಯ ವಾಗ್ಬಾಣಕ್ಕೆ ಹೆದರುತ್ತಿದ್ದ. ದುರ್ಗೆಯ ಇನ್ನೊಂದು ಹೆಸರಾದ ಮಾತಂಗಿಯಲ್ಲೂ ಮಾತು ಉಂಟು.

    ಪ್ರಯಾಣ ಮಾಡುವಾಗ ಇಬ್ಬರು ಗಂಡಸರು ಅಕ್ಕಪಕ್ಕ ಕುಳಿತಿದ್ದರೆ ಇಬ್ಬರೂ ಮಾತನಾಡಲು ಬಿಗುಮಾನ ತೋರಿಸುತ್ತಾರೆ. ಅವರು ಮಾತನಾಡಿಸಲಿ ಎಂದು ಇವರು, ಇವರು ಮಾತನಾಡಿಸಲಿ ಎಂದು ಅವರು ಸುಮ್ಮನಿರುತ್ತಾರೆ. ಈಗಂತೂ ಮೊಬೈಲ್ ಇರುವುದರಿಂದ ಕಿವಿಗೆ ಇಯರ್ ಫೋನ್ ಹಾಕಿಕೊಂಡರೆ ಮಾತೇ ಬೇಡ. ಹೀಗಾಗಿ ಗಂಡಸರು ಸಹ ಪ್ರಯಾಣಿಕನ ಜತೆ ಮಾತನಾಡದೆ ಪ್ರಯಾಣ ಮುಗಿಸುವುದು ಸಾಮಾನ್ಯ. ಅದೇ ಇಬ್ಬರು ಮಹಿಳೆಯರು ಅಕ್ಕಪಕ್ಕ ಕುಳಿತು ಪ್ರಯಾಣಿಸಿದರೆ ಮಾತಾಡದೆ ಇರುವ ಸಾಧ್ಯತೆ ಬಹಳ ಕಡಿಮೆ. ನೀವು ಎಲ್ಲಿ ಇಳೀತೀರಿ? ಅಂತ ಒಂದು ಪ್ರಶ್ನೆ ಯಾರಾದರೊಬ್ಬರು ಕೇಳಿದರೆ ಸಾಕು ಮಾತಿನ ಬಂಡಿ ಚಾಲೂ ಆಗಿಬಿಡುತ್ತದೆ. ಪ್ರಯಾಣ ಮುಗಿಯುವಷ್ಟರಲ್ಲಿ ಇಬ್ಬರ ಮನೆಯ ವಿಷಯಗಳಲ್ಲದೆ ನೆರೆ ಮನೆಯವರ ಮತ್ತು ಸಂಬಂಧಿಕರ ಅದೆಷ್ಟೋ ಸುದ್ದಿಗಳು ವಿನಿಮಯವಾಗಿರುತ್ತದೆ. ಮೊಬೈಲ್ ಬಂದ ಮೇಲೆ ಯುವತಿಯರ ಪಟ್ಟಾಂಗ ಕಡಿಮೆಯಾಗಿದ್ದರೂ ಆಂಟಿಯರು ಇನ್ನೂ ಮೌನವಾಗಿ ಮೊಬೈಲ್​ನಲ್ಲಿ ಸಿನಿಮಾ ನೋಡುವ ಚಟ ಬೆಳೆಸಿಕೊಂಡಿಲ್ಲ. ಅವರಿಗೆ ಮಾತೇ ಹೆಚ್ಚು ಇಷ್ಟ.

    ದಿನವೂ ರ್ಪಾನಲ್ಲಿ ವಾಕಿಂಗ್ ಮಾಡುವಾಗ ನಾನು ಗಮನಿಸಿದಂತೆ ಅಲ್ಲೂ ಮಹಿಳೆಯರೇ ಹೆಚ್ಚು ಮಾತನಾಡುತ್ತಾರೆ. ಗಂಡಸರು ಒಂಟಿಯಾಗಿ ನಡೆಯಲು ಇಷ್ಟಪಟ್ಟರೆ ಹೆಂಗಸರಿಗೆ ಮಾತಾಡುತ್ತ ನಡೆಯುವುದೇ ಖುಷಿ. ಅಪರೂಪಕ್ಕೆ ನನ್ನ ಜತೆ ವಾಕಿಂಗ್ ಮಾಡುವ ನನ್ನ ಹೆಂಡತಿ ಪರಿಚಯದ ಹೆಂಗಸರು ಕಣ್ಣಿಗೆ ಬಿದ್ದರೆ ತತ್​ಕ್ಷಣ ಪಕ್ಷಾಂತರ ಮಾಡುತ್ತಾಳೆ. ವಾಕ್ ಮಾಡುವಾಗ ಮಾತಾಡಿದರೆ ತಪ್ಪೇನಿಲ್ಲ. ಏಕೆಂದರೆ ವಾಕ್ ಎಂಬ ಶಬ್ದಕ್ಕೆ ನಿಘಂಟಿನಲ್ಲಿ ಮಾತು ಎಂಬ ಅರ್ಥ ನೀಡಿದ್ದಾರೆ! ವಾಕ್ಯ, ವಾಕ್ಪಟು, ವಾಗ್ದಾನ, ವಾಗ್ವಾದ, ವಾಗ್ಯುದ್ಧ ಮುಂತಾದ ಮಾತಿಗೆ ಸಂಬಂಧಿಸಿದ ಪದಗಳು ಹುಟ್ಟಿದ್ದು ವಾಕ್​ನಿಂದ. ವಾಕ್​ಗೆ ದೇವಿಯಾದ ಶಾರದೆ ವಾಗ್ದೇವಿ. ಹೀಗಾಗಿ ವಾಕಿಂಗ್, ಪ್ರಯಾಣ, ಸಮಾರಂಭ ಮುಂತಾದ ಯಾವುದೇ ಸಂದರ್ಭದಲ್ಲಿ ಮಹಿಳೆಯರು ಮಾತಾಡಿದರೆ ಅದು ತಪ್ಪಲ್ಲ. ಈಗಂತೂ ಉಚಿತ ಮೊಬೈಲ್ ಕರೆಗಳ ಸೌಲಭ್ಯವಿರುವುದರಿಂದ ಮಹಿಳೆಯರು ಅವರ ಸ್ನೇಹಿತೆಯರ ಜತೆ ಗಂಟೆಗಟ್ಟಲೆ ಮಾತಾಡುತ್ತಾರೆ. ಹೆಂಗಸರ ಮಾತುಕತೆಯಲ್ಲಿ ಉಪಯೋಗಕ್ಕೆ ಬಾರದ ಕಾಡುಹರಟೆ ಸಾಕಷ್ಟು ಇರುವುದು ನಿಜ. ಆದರೆ ಎಲ್ಲವನ್ನೂ ಕೆಲಸಕ್ಕೆ ಬಾರದ್ದು ಎಂದು ಭಾವಿಸಬಾರದು. ದುಬಾರಿ ವಸ್ತುಗಳ ಖರೀದಿ, ಮಕ್ಕಳ ಶಿಕ್ಷಣ, ಮದುವೆ, ವೈದ್ಯರು, ಆಸ್ಪತ್ರೆಗಳು ಮುಂತಾದವುಗಳಿಗೆ ಸಂಬಂಧಿಸಿದ ಮಹತ್ವದ ಮಾಹಿತಿ ಮಹಿಳೆಯರ ಸಂಭಾಷಣೆಯಲ್ಲಿ ಸಿಗುತ್ತದೆ.

    ಒಂದು ವಿಚಿತ್ರ ಗಮನಿಸಿದ್ದೀರಾ? ಮನೆಯಲ್ಲಿ ಗಂಡನ ಜತೆ, ಹೊರಗೆ ಗೆಳತಿಯರ ಜತೆ ಎಷ್ಟು ಹೊತ್ತು ಬೇಕಾದರೂ ಮಾತನಾಡುವ ಮಹಿಳೆಯರು ಸಭೆಯಲ್ಲಿ ವೇದಿಕೆಯ ಮೇಲೆ ನಿಂತು ಭಾಷಣ ಮಾಡಲು ಹಿಂದೇಟು ಹಾಕುತ್ತಾರೆ. ಒಳ್ಳೆಯ ವಾಗ್ಮಿ ಎಂದು ಪ್ರಸಿದ್ಧರಾದ ಮಹಿಳೆಯರ ಸಂಖ್ಯೆ ಹೆಚ್ಚಿಲ್ಲ. ಪುರುಷರಲ್ಲಿ ಉತ್ತಮ ವಾಗ್ಮಿಗಳು ಬೇಕಾದಷ್ಟು ಮಂದಿ ಸಿಗುತ್ತಾರೆ. ಸಭೆಗಳಲ್ಲಿ ನನ್ನನ್ನು ಪರಿಚಯಿಸುವಾಗ ಕೆಲವರು ಇವರು ಕವಿಗಳು ಮಾತ್ರವಲ್ಲ ಒಳ್ಳೆಯ ವಾಗ್ಮಿಗಳೂ ಆಗಿದ್ದಾರೆ ಅನ್ನುವುದುಂಟು. ಇದಕ್ಕೆ ನನ್ನ ಮಡದಿಯ ಪ್ರತಿಕ್ರಿಯೆ ಹೀಗಿದೆ:

    ಎಲ್ಲರೂ ಹೇಳುತ್ತಾರೆ

    ನನ್ನ ಯಜಮಾನರು

    ಅತ್ಯುತ್ತಮ ವಾಗ್ಮಿ

    ಅವರ ಮಾತಿಗೆ

    ಎಲ್ಲರೂ ತಲೆದೂಗುತ್ತಾರೆ

    ಎಕ್ಸೆಪ್ಟ್ ಮಿ !

    ವಕೀಲರಿಗೆ ಮಾತೇ ಬಂಡವಾಳ. ಮಾತಾಡುವುದೇ ಅವರ ಕೆಲಸ. ಆದರೆ ಹೆಣ್ಣು ಮಕ್ಕಳು ವಕೀಲಿ ವೃತ್ತಿಯತ್ತ ಆಕರ್ಷಿತರಾಗುವುದು ಕಡಿಮೆ. ಗೂಗಲ್​ನಲ್ಲಿ ಸಿಕ್ಕಿದ ಭಾರತದ ಐವರು ಪ್ರಸಿದ್ಧ ವಕೀಲರ ಪಟ್ಟಿಯಲ್ಲಿ ಒಬ್ಬ ಮಹಿಳೆಯೂ ಇಲ್ಲ. ಫಾಲಿ ನಾರಿಮನ್ ಎಂಬ ಹೆಸರು ಇದೆಯಾದರೂ ಅವರು ನಾರಿಯಲ್ಲ! ಮಾತಿನ ಮಲ್ಲಿಯರು ಅನ್ನಿಸಿಕೊಂಡ ಮಹಿಳೆಯರು ವಕೀಲರಾಗಲು ಹೆಚ್ಚು ಆಸಕ್ತಿ ತೋರಿಸದಿರುವುದು ವಿಪರ್ಯಾಸವೇ ಸರಿ. ಎಫ್​ಎಂ ರೇಡಿಯೋ ಮತ್ತು ಟಿವಿ ಶೋಗಳಲ್ಲಿ ಪಟಪಟನೆ ಪಟಾಕಿ ಸಿಡಿಸಿದಂತೆ ಮಾತನಾಡುವ ಮಹಿಳೆಯರು ತಮ್ಮ ಮಾತಿನ ಶಕ್ತಿಯನ್ನು ಚೆನ್ನಾಗಿ ದುಡಿಸಿಕೊಳ್ಳುತ್ತಿದ್ದಾರೆ ಅನ್ನಬಹುದು.

    ಮಾತಿನ ಹಾಗೆ ಮಹಿಳೆಯರ ಇನ್ನೊಂದು ವಿಶೇಷ ಗುಣವೆಂದರೆ ಸೌಂದರ್ಯ ಪ್ರಜ್ಞೆ. ನಮ್ಮ ಮನೆಗೆ ಬರುವ ಸ್ನೇಹಿತರು ನನ್ನ ಜತೆ ಫೋಟೊ ತೆಗೆಸಿಕೊಳ್ಳಲು ಬಯಸಿದರೆ ನಾನು ಯಾವ ಡ್ರೆಸ್ ಹಾಕಿಕೊಂಡಿದ್ದರೂ ಒಪ್ಪಿಕೊಳ್ಳುತ್ತೇನೆ. ಆದರೆ ನನ್ನ ಹೆಂಡತಿ ಮನೆಯಲ್ಲಿ ಹಾಕುವ ಉಡುಗೆಯಲ್ಲಿ ಫೋಟೋಗೆ ಬರುವುದಿಲ್ಲ. ತಾವು ಸುಂದರವಾಗಿ ಕಾಣಬೇಕೆಂಬ ಬಯಕೆ ಎಲ್ಲ ಮಹಿಳೆಯರಲ್ಲೂ ಇರುತ್ತದೆ. ತಾವಷ್ಟೇ ಅಲ್ಲ ಬೇರೆ ಹೆಂಗಸರು ಎಷ್ಟು ಚೆನ್ನಾಗಿ ಕಾಣುತ್ತಿದ್ದಾರೆ ಎಂಬ ಬಗ್ಗೆಯೂ ಅವರು ತಲೆಕೆಡಿಸಿಕೊಳ್ಳುತ್ತಾರೆ. ಮದುವೆ, ಆರತಕ್ಷತೆ ಮುಂತಾದ ಸಮಾರಂಭಗಳಿಗೆ ಹೋದಾಗ ಮಹಿಳೆಯರು ಒಬ್ಬರನ್ನೊಬ್ಬರು ತಿನ್ನುವ ಹಾಗೆ ನೋಡುವುದಕ್ಕೆ ಇದೇ ಕಾರಣ. ಮಾನ್ಯ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲು ಸಿದ್ಧರಾಗುತ್ತಿದ್ದಾಗ ನಾನು ವರಮಾನ ತೆರಿಗೆ ಎಷ್ಟು ಕಡಿಮೆ ಮಾಡಬಹುದು ಅಂತ ಯೋಚಿಸುತ್ತಿದ್ದರೆ ನನ್ನಾಕೆ ಅವರು ಯಾವ ಸೀರೆ ಉಡಬಹುದು ಎಂದು ಚಿಂತಿಸುತ್ತಿದ್ದಳು. ಸಚಿವೆ ಹಳದಿ ಸೀರೆಯುಟ್ಟು ಬಜೆಟ್ ಭಾಷಣದ ಪ್ರತಿಯನ್ನು ಕೆಂಪು ಬಟ್ಟೆಯ ಕಡತದಲ್ಲಿ ಇಟ್ಟುಕೊಂಡು ಸಂಸತ್ತನ್ನು ಪ್ರವೇಶಿಸುತ್ತಿದ್ದಾಗ ಇವಳು ‘ಹ್ವಾಯ್ ಅಲ್ಕಾಣಿ. ವಿತ್ತ ಸಚಿವೆ ಎಷ್ಟ್ ಚಂದ ಕಾಂತ್ರು, ಥೇಟ್ ಕನ್ನಡದ ಬಾವುಟದ ಹಾಂಗೆ’ ಅಂದಳು. ನನ್ನ ಪುಣ್ಯ. ನನಗೂ ಅಂಥದೇ ರೇಶ್ಮೆ ಸೀರೆ ಬೇಕು ಅನ್ನಲಿಲ್ಲ!

    ಹೆಂಗಸರು ಗಂಡಸರಿಗಿಂತ ಹೆಚ್ಚು ಅಳುತ್ತಾರೆ ಎಂದು ಧೈರ್ಯವಾಗಿ ಹೇಳಬಹುದು. ಏಕೆಂದರೆ ಇದು ವೈಜ್ಞಾನಿಕ ಸಂಶೋಧನೆಗಳಿಂದ ದೃಢಪಟ್ಟ ಸಂಗತಿ. ಆಕಾಶರಾಯ ವರ್ಷಋತುವಿನಲ್ಲಿ ಮಳೆ ಸುರಿಸಿದರೆ ಮಹಿಳೆ ವರ್ಷದ ಎಲ್ಲಾ ಋತುಗಳಲ್ಲೂ ಅಳುವಿನ ಮಳೆ ಸುರಿಸಬಲ್ಲಳು. ನಗು ಆರೋಗ್ಯಕ್ಕೆ ಒಳ್ಳೆಯದು. ನಕ್ಕು ಹಗುರಾಗಬೇಕು ಎಂದು ವೈದ್ಯರು ಹೇಳುತ್ತಾರೆ. ಮಹಿಳೆಯರು ಪುರುಷರ ಹಾಗೆ ಗಹಗಹಿಸಿ ನಗುವುದಿಲ್ಲ. ದುಃಖವಾದಾಗ ಅತ್ತು ಹಗುರಾಗುತ್ತಾರೆ. ಹೀಗಾಗಿ ಸ್ತ್ರೀಯರು ಹೃದಯಾಘಾತಕ್ಕೆ ಈಡಾಗುವುದು ಕಡಿಮೆ. ಅವರ ಹೃದಯ ಗಟ್ಟಿ.

    ಹೆಂಗಸರ ಹೃದಯದಷ್ಟು

    ಗಟ್ಟಿಯಲ್ಲವಂತೆ

    ಗಂಡಸರ ಗುಂಡಿಗೆ

    ಆದ್ದರಿಂದಲೆ ಹೆಂಡತಿ ಎಂದರೆ

    ವಿಪರೀತ ಭಯ ಗಂಡಿಗೆ!

    ಪುರುಷರಲ್ಲಿ ಇಲ್ಲದ ಇನ್ನೂ ಹಲವು ವಿಶಿಷ್ಟ ಗುಣಗಳು ಮಹಿಳೆಯರಲ್ಲಿವೆ. ಸಹನೆ, ಕರುಣೆ, ವಾತ್ಸಲ್ಯ ಮುಂತಾದ ಅನೇಕ ಉತ್ತಮ ಗುಣಗಳನ್ನು ಸೃಷ್ಟಿಕರ್ತ ಮಹಿಳೆಯರಿಗೆ ಹೆಚ್ಚಿನ ಪ್ರಮಾಣದಲ್ಲಿ ನೀಡಿರುವುದನ್ನು ನೋಡಿದಾಗ ನಿಜಕ್ಕೂ ನನಗೆ ಅಸೂಯೆಯಾಗುತ್ತದೆ. ಅಂದಹಾಗೆ ಅಸೂಯೆಯೂ ಹೆಂಗಸರಲ್ಲೇ ಹೆಚ್ಚು ಎನ್ನುವುದು ಗಂಡಸರ ಅನಿಸಿಕೆ.

    ಸ್ವಾಮೀ ನೀವು ಯಾವ ಕಾಲದಲ್ಲಿದ್ದೀರಿ? ಮಹಿಳೆಯರನ್ನು ಬರೀ ಮಾತು, ಸೌಂದರ್ಯ, ಅಳು ಮುಂತಾದವುಗಳಿಗೆ ಸೀಮಿತಗೊಳಿಸಬೇಡಿ. ಹೆಣ್ಣು ಮಕ್ಕಳು ಈಗ ಎಲ್ಲಾ ಕ್ಷೇತ್ರಗಳಲ್ಲೂ ಪುರುಷರಿಗೆ ಸರಿಸಾಟಿಯಾಗಿ ದುಡಿಯುತ್ತಿದ್ದಾರೆ. ‘ನ ಸ್ತ್ರೀ ಸ್ವಾತಂತ್ರ್ಯಮರ್ಹತಿ’ ಅನ್ನುವ ಮನೋಭಾವವನ್ನು ತಲೆಯಿಂದ ತೆಗೆಯಿರಿ. ಮಹಿಳೆಯರಿಗೆ ಈಗ ಪುರುಷರ ಹಂಗು ರಕ್ಷಣೆ ಬೇಡ ಅಂತೀರಾ? ಅದೂ ನಿಜ.

    ಹುಡುಗ ಹೇಳಿದ-ಪ್ರಿಯೆ

    ನೀನು ಕಣ್ಣು ನಾನು ರೆಪ್ಪೆ

    ಹುಡುಗಿ ಅಂದಳು-

    ಅಯ್ಯೋ ಬೆಪ್ಪೆ

    ನಾನು ಹಣ್ಣು ನೀನು ಸಿಪ್ಪೆ!

    ಆದರೆ ಕಾನೂನನ್ನು ಎಷ್ಟು ಬಿಗಿಗೊಳಿಸಿದರೂ ಲಿಂಗ ತಾರತಮ್ಯ, ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಪ್ರಕರಣಗಳು ನಡೆಯುತ್ತಲೇ ಇವೆ. ಅಪರಾಧಿಗಳು ಕಾನೂನಿನ ಕುಣಿಕೆಯನ್ನು ಕುಣಿಸುತ್ತಲೇ ಇದ್ದಾರೆ. ಆದ್ದರಿಂದ ಒಂದು ಕಿವಿಮಾತು. ಹೆಣ್ಣು ಮಕ್ಕಳು ಭರತನಾಟ್ಯ, ಕೂಚಿಪುಡಿ ಕಲಿಯದಿದ್ದರೂ ಪರವಾಗಿಲ್ಲ. ಹೊರಗೆ ಹೋಗುವಾಗ ವ್ಯಾನಿಟಿ ಬ್ಯಾಗಿನಲ್ಲಿ ಮೆಣಸಿನ ಪುಡಿ ಇಟ್ಟುಕೊಳ್ಳುವುದು ಒಳ್ಳೆಯದು.

    ಮುಗಿಸುವ ಮುನ್ನ: ‘ಮದುವೆಯಾಗಿ ತಿಂಗಳಿಲ್ಲ ನೋಡಿರಣ್ಣ ಹೇಗಿದೆ/ ನಾನು ಕೂಗಿದಾಗಲೆಲ್ಲ ಬರುವಳೆನ್ನ ಶಾರದೆ’ ಎಂದು ಕವಿ ಕೆ.ಎಸ್.ನರಸಿಂಹಸ್ವಾಮಿಯವರು ಹೆಮ್ಮೆಯಿಂದ ಬರೆದಿದ್ದರು. ಈಗ ಕಾಲ ಬದಲಾಗಿದೆ.

    ನನ್ನಾಕೆ ಹೇಳುತ್ತಿದ್ದಳು

    ಅವಳ ಗೆಳತಿಯ ಹತ್ತಿರ-

    ನಾರೀ ಶಕ್ತಿಗೆ

    ಒಂದು ನಿದರ್ಶನ

    ಎಲ್ಲಿದ್ದರೂ ಓಡೋಡಿ

    ಬರುತ್ತಾರೆ ನನ್ನ ಗಂಡ

    ನಾ

    ರೀ ಅಂದಾಕ್ಷಣ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts