More

    ಸಂತೆ ಮಾರುಕಟ್ಟೆ ಬಂದ್ ಮಾಡಿಸಿದ ಪುರಸಭೆ ಅಧಿಕಾರಿಗಳು

    ಹಾನಗಲ್ಲ: ಕರೊನಾ ವೈರಸ್ ತಡೆಗಟ್ಟುವ ಉದ್ದೇಶದಿಂದ ತಾಲೂಕಿನಲ್ಲಿ ಮಾ. 31ರವರೆಗೆ 144 ಕಲಂ ಜಾರಿಗೊಳಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಶುಕ್ರವಾರ ನಡೆಯುವ ಹಾನಗಲ್ಲ ಸಂತೆಗೆ ತರಕಾರಿ ಮಾರಾಟಕ್ಕೆಂದು ಬಂದ ವ್ಯಾಪಾರಸ್ಥರನ್ನು ಪುರಸಭೆ ಅಧಿಕಾರಿಗಳು ಪೊಲೀಸರ ನೆರವಿನೊಂದಿಗೆ ತಡೆದ ಘಟನೆ ನಡೆಯಿತು.

    ಪಟ್ಟಣದ ದತ್ತ ದೇವಸ್ಥಾನದಿಂದ ಸೋಮವಾರಪೇಟೆಯ ಪ್ರಸನ್ನ ಮಾರುತಿ ದೇವಸ್ಥಾನದವರೆಗೆ ನಡೆಯುವ ಸಂತೆಯ ಸ್ಥಳದಲ್ಲಿ ಬೆಳಗ್ಗೆಯಿಂದಲೇ ಪುರಸಭೆ ಸಿಬ್ಬಂದಿ ತರಕಾರಿ ಮೂಟೆಗಳೊಂದಿಗೆ ಬಂದ ವಾಹನಗಳನ್ನು ಮರಳಿ ಕಳಹಿಸಿದ್ದರು. ಆದರೆ, ಆ ವಾಹನಗಳು ಬೇರೆ ರಸ್ತೆಗಳ ಮೂಲಕ ಹಳೇ ಬಸ್ ನಿಲ್ದಾಣದ ಸಮೀಪ ಮುಖ್ಯ ರಸ್ತೆಯುದ್ದಕ್ಕೂ ಪಾದಚಾರಿ ರಸ್ತೆಯ ಮೇಲೆ ತರಕಾರಿಗಳನ್ನಿಟ್ಟು ಮಾರಾಟ ಮಾಡಲು ಮುಂದಾದರು. ಇದನ್ನು ಗಮನಿಸಿದ ಪುರಸಭೆ ಅಧಿಕಾರಿಗಳು, ಸಿಬ್ಬಂದಿ ತರಕಾರಿ ವ್ಯಾಪಾರಸ್ಥರನ್ನು ಚದುರಿಸಿದರು. ಈ ವೇಳೆ ಮಾತಿನ ಚಕಮಕಿ ನಡೆದು, ಪುರಸಭೆ ನೈರ್ಮಲ್ಯ ವಿಭಾಗದ ಅಧಿಕಾರಿ ಶಿವಾನಂದ ಕ್ಯಾಲಕೊಂಡ, ಪೊಲೀಸ್ ಸಿಬ್ಬಂದಿ ಕರೆಸಿ ಅಂಗಡಿಗಳನ್ನು ಎತ್ತಂಗಡಿ ಮಾಡಿದರು. ಈ ಮಧ್ಯೆ ತರಕಾರಿಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಬಹಳಷ್ಟು ಮಧ್ಯವರ್ತಿಗಳು ಪರಿಸ್ಥಿತಿಯ ಲಾಭ ಪಡೆದುಕೊಂಡರು.

    ತರಕಾರಿ ಬೆಲೆ ಹೆಚ್ಚಿಸಬಾರದು: ಸಂತೆ ಬಂದ್ ಮಾಡಿದ್ದರಿಂದ ತರಕಾರಿ ಬೆಲೆಯನ್ನು ಹೆಚ್ಚಿಸಿ ತಮಗಿಷ್ಟ ಬಂದಂತೆ ಹೆಚ್ಚಿನ ದರಕ್ಕೆ ಮಾರಾಟ ಮಾಡಬಾರದು. ಅಂಥ ಘಟನೆಗಳು ಕಂಡು ಬಂದಲ್ಲಿ ಜಿಲ್ಲಾಡಳಿತದ ಗಮನಕ್ಕೆ ತಂದು ಅಂಥ ವ್ಯಾಪಾರಸ್ಥರ ಮೇಲೆ ಕ್ರಮ ಜರುಗಿಸಬೇಕಾಗುತ್ತದೆ ಎಂದು ಪುರಸಭೆ ಮುಖ್ಯಾಧಿಕಾರಿ ಎಚ್.ಎನ್. ಭಜಕ್ಕನವರ ಎಚ್ಚರಿಸಿದ್ದಾರೆ.

    ಜನತಾ ಕರ್ಫ್ಯೂಗೆ ವ್ಯಾಪಕ ಬೆಂಬಲ: ಕರೊನಾ ವೈರಸ್ ಹರಡುವಿಕೆ ತಡೆಯುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಭಾನುವಾರದ ಜನತಾ ಕರ್ಫ್ಯೂ ಗೆ ಹಾನಗಲ್ಲ ತಾಲೂಕಿನಾದ್ಯಂತ ಸಾರ್ವಜನಿಕ ವಲಯದಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಭಾನುವಾರ ಬೆಳಗ್ಗೆ 7ರಿಂದ ರಾತ್ರಿ 9ರವರೆಗೆ ಎಲ್ಲ ಅಂಗಡಿ-ಮುಂಗಟ್ಟು ಬಂದ್ ಮಾಡಲು ವ್ಯಾಪಾರಸ್ಥರು ನಿರ್ಧರಿಸಿದ್ದಾರೆ.

    ಮೆಟಡೋರ್ ಸಂಚಾರ ಬಂದ್ : ಹಾವೇರಿ-ಹಾನಗಲ್ಲ, ಹಾನಗಲ್ಲ-ಶಿರಶಿ, ಹಾನಗಲ್ಲ-ಮುಂಡಗೋಡ ಮಾರ್ಗದಲ್ಲಿ ಪ್ರತಿದಿನ ಸಂಚರಿಸುವ 50ಕ್ಕೂ ಅಧಿಕ ಮೆಟಡೋರ್​ಗಳ ಸಂಚಾರವನ್ನು ಭಾನುವಾರದ ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ರದ್ದುಪಡಿಸಿರುವುದಾಗಿ ಮೆಟಡೋರ್​ಗಳ ಮಾಲೀಕರ ಸಂಘದ ಅಧ್ಯಕ್ಷ ಮೌನೇಶ ಬಡಿಗೇರ ತಿಳಿಸಿದ್ದಾರೆ.

    ವಾಯವ್ಯ ಸಾರಿಗೆ ಸಂಪೂರ್ಣ ಬಂದ್: ಭಾನುವಾರದ ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ಎಲ್ಲ ವಾಹನಗಳ ಸಂಚಾರ ಸಂಪೂರ್ಣವಾಗಿ ಬಂದ್ ಮಾಡುವುದಾಗಿ ಘಟಕ ವ್ಯವಸ್ಥಾಪಕ ವಿ.ಎಂ. ಅರ್ಕಚಾರಿ ತಿಳಿಸಿದ್ದಾರೆ. ಸೋಮವಾರ ಬೆಳಗ್ಗೆಯಿಂದ ಎಂದಿನಂತೆ ಬಸ್​ಗಳು ಸಂಚರಿಸಲಿವೆ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts