More

    ಟೋಕಿಯೊದಲ್ಲಿ ಒಂದೇ ದಿನಕ್ಕೆ ಸಾನಿಯಾ-ಅಂಕಿತಾ, ಪ್ರಣತಿ ಸವಾಲು ಅಂತ್ಯ

    ಟೋಕಿಯೊ: ಸಾನಿಯಾ ಮಿರ್ಜಾ ಮತ್ತು ಒಲಿಂಪಿಕ್ಸ್‌ಗೆ ಪದಾರ್ಪಣೆ ಮಾಡಿದ ಅಂಕಿತಾ ರೈನಾ ಜೋಡಿ ಟೋಕಿಯೊ ಒಲಿಂಪಿಕ್ಸ್‌ನ ಟೆನಿಸ್ ಕ್ರೀಡೆಯಲ್ಲಿ ಮಹಿಳಾ ಡಬಲ್ಸ್ ವಿಭಾಗದ ಟೆನಿಸ್ ಸ್ಪರ್ಧೆಯಲ್ಲಿ ಮೊದಲ ಸುತ್ತಿನಲ್ಲೇ ಹೊರಬಿದ್ದು ನಿರಾಸೆ ಮೂಡಿಸಿತು. ಇನ್ನೀಗ ಸುಮಿತ್ ನಗಾಲ್ ಟೆನಿಸ್ ಸ್ಪರ್ಧೆಯಲ್ಲಿ ಸವಾಲು ಉಳಿಸಿಕೊಂಡಿರುವ ಏಕೈಕ ಭಾರತೀಯರಾಗಿದ್ದಾರೆ.

    ಸಾನಿಯಾ-ಅಂಕಿತಾ ಜೋಡಿ ಮೊದಲ ಸುತ್ತಿನ ಪಂದ್ಯದಲ್ಲಿ ಉಕ್ರೇನ್‌ನ ನಾಡಿಯಾ-ಲಿಯುಡ್‌ಮೈಲಾ ಕಿಚೆನಾಕ್ ಸಹೋದರಿಯರ ವಿರುದ್ಧ 6-0, 6-7, 8-10ರಿಂದ ಶರಣಾಯಿತು. ಮೊದಲ ಸೆಟ್ ಗೆದ್ದು ಆರಂಭಿಕ ಮೇಲುಗೈ ಸಾಧಿಸಿದ್ದ ಸಾನಿಯಾ-ಅಂಕಿತಾ ಜೋಡಿ 2ನೇ ಸೆಟ್‌ನಲ್ಲೂ 5-3ರಿಂದ ಮುನ್ನಡೆ ಸಾಧಿಸಿ ಜಯದತ್ತ ಮುನ್ನಡೆದಿತ್ತು. ಆದರೆ ಬಳಿಕ 6-6 ಸಮಬಲ ಕಂಡು, ಟೈಬ್ರೇಕರ್‌ನಲ್ಲಿ ಎಡವಿದರು. ಸೂಪರ್ ಟೈಬ್ರೇಕ್‌ನಲ್ಲಿ ಮೊದಲಿಗೆ 1-8 ಹಿನ್ನಡೆ ಕಂಡ ಸಾನಿಯಾ ಜೋಡಿ, ಬಳಿಕ ತಿರುಗೇಟು ನೀಡಿ 8-8 ಸಮಬಲ ಸಾಧಿಸಿತು. ಆದರೆ ಮುಂದಿನ ಎರಡೂ ಅಂಕ ಬಿಟ್ಟುಕೊಟ್ಟ ಸಾನಿಯಾ-ಅಂಕಿತಾ ಒಂದೇ ದಿನದಲ್ಲಿ ಒಲಿಂಪಿಕ್ಸ್ ಅಭಿಯಾನ ಮುಗಿಸಿದರು.

    ಇದನ್ನೂ ಓದಿ: ಒಲಿಂಪಿಕ್ಸ್ ​ಬೆಳ್ಳಿ ವಿಜೇತೆ ಮೀರಾಬಾಯಿ ಚಿನ್ನದ ಕಿವಿಯೋಲೆಗೆ ಅನುಷ್ಕಾ ಶರ್ಮ ಫಿದಾ!

    ಪ್ರಣತಿ ಫೈನಲ್‌ಗೇರಲು ವಿಫಲ
    ಜಿಮ್ನಾಸ್ಟಿಕ್ಸ್ ಸ್ಪರ್ಧೆಯಲ್ಲಿರುವ ಭಾರತದ ಏಕೈಕ ಜಿಮ್ನಾಸ್ಟ್ ಪ್ರಣತಿ ನಾಯಕ್ ಭಾನುವಾರ ನಡೆದ ಆರ್ಟಿಸ್ಟಿಕ್ಸ್ ಜಿಮ್ನಾಸ್ಟಿಕ್ಸ್‌ನ ಆಲ್ರೌಂಡ್ ವಿಭಾಗದಲ್ಲಿ ಫೈನಲ್‌ಗೇರಲು ವಿಫಲರಾದರು. ಪಶ್ಚಿಮ ಬಂಗಾಳದ 26 ವರ್ಷದ ಪ್ರಣತಿ ಒಟ್ಟು 42.565 ಅಂಕ ಗಳಿಸಿದರು. ಇದರಿಂದ ಸಬ್​ ಡಿವಿಷನ್-2ರಲ್ಲಿ ಅವರು 29ನೇ ಸ್ಥಾನ ಗಳಿಸಿದರು. ಒಟ್ಟು 5 ಸಬ್​ ಡಿವಿಷನ್​ಗಳಿದ್ದು, ಅಗ್ರ 24 ಜಿಮ್ನಾಸ್ಟ್​ಗಳು ಆಲ್ರೌಂಡ್​ ವಿಭಾಗದ ಫೈನಲ್​ಗೇರಲಿದ್ದಾರೆ. ಪ್ರತಿ ವಿಭಾಗದಿಂದ ಒಟ್ಟು 8 ಜಿಮ್ನಾಸ್ಟ್​ಗಳಿಗೆ ಫೈನಲ್​ಗೇರುವ ಅವಕಾಶವಿದ್ದರೂ, ಪ್ರಣತಿ ಎಲ್ಲ ವಿಭಾಗದಲ್ಲೂ ಕೆಳಾರ್ಧದಲ್ಲಿ ಸ್ಥಾನ ಪಡೆದು ಒಂದೇ ದಿನದಲ್ಲಿ ಅಭಿಯಾನ ಮುಗಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts