More

    ಶಾಲಾ ಕಾಲೇಜಿಗೊಂದು ಶ್ರೀಗಂಧದ ಗಿಡ

    ನವೀನ್ ಬಿಲ್ಗುಣಿ ಶಿವಮೊಗ್ಗ
    ಶ್ರೀಗಂಧವನ್ನು ಉಳಿಸಿ ಬೆಳೆಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನಾನಾ ಕಸರತ್ತು ನಡೆಸುತ್ತಿವೆ. ಅರಿವು ಮೂಡಿಸಿದರೂ ಕಳ್ಳರ ಭಯದಿಂದ ಶ್ರೀಗಂಧ ಬೆಳೆಯಲು ಜನ ಹಿಂದೇಟು ಹಾಕುವಂತಾಗಿದೆ. ಆದರೆ ಶಿವಮೊಗ್ಗದಲ್ಲಿ ಪರಿಸರಾಸಕ್ತರ ತಂಡವೊಂದು ವಿಶೇಷ ಕಾಳಜಿವಹಿಸಿ ಶಾಲಾ ಕಾಲೇಜಿಗೆ ಒಂದರಂತೆ ಶ್ರೀಗಂಧದ ಸಸಿ ನೆಟ್ಟು ಬೆಳೆಸಲು ಮುಂದಾಗಿದೆ.
    ಶ್ರೀ ವಿದ್ಯಾದೀಪ ಪರಿಸರ ಸೇವಾ ಸಂಘದ ಹೆಸರಿನಲ್ಲಿ ಏಳು ಜನರ ತಂಡವೊಂದು ಜಿಲ್ಲಾದ್ಯಂತ 2,600 ಶಾಲೆಗಳು ಮತ್ತು 257 ಕಾಲೇಜುಗಳ ಆವರಣದಲ್ಲಿ ಶ್ರೀಗಂಧ ಸಸಿಗಳನ್ನು ನೆಟ್ಟು ಅರಿವು ಮೂಡಿಸಲು ಸಜ್ಜಾಗಿದೆ. ಈಗಾಗಲೇ ಅರಣ್ಯ ಇಲಾಖೆಯಿಂದ ಬರೋಬ್ಬರಿ ನಾಲ್ಕು ಸಾವಿರ ಸಸಿಗಳನ್ನು ಪಡೆದುಕೊಂಡು ಮೂರ್ನಾಲ್ಕು ಕಡೆ ಸದ್ದಿಲ್ಲದೆ ಸಸಿಗಳನ್ನು ನೆಡುವ ಕಾರ್ಯವನ್ನೂ ಮಾಡುತ್ತಿದೆ. ಸಮಾನಮನಸ್ಕರ ತಂಡಕ್ಕೆ ಕಟ್ಟೆ ಗೆಳೆಯರ ಬಳಗ ಸೇರಿದಂತೆ ಶಿವಮೊಗ್ಗದ ಕೆಲ ಸಂಘಸಂಸ್ಥೆಗಳು, ಪರಿಸರಾಸಕ್ತರು ಕೈಜೋಡಿಸುತ್ತಿದ್ದಾರೆ. ಜತೆಗೆ ಅರಣ್ಯ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆಗಳೂ ಬೆನ್ನೆಲುಬಾಗಿ ನಿಂತಿವೆ. ಇದರಿಂದ ಮಳೆಗಾಲ ಮುಗಿಯುವುದರೊಳಗೆ ಸರ್ಕಾರಿ ಶಾಲಾ ಕಾಲೇಜಿನಲ್ಲಿ ಶ್ರೀಗಂಧದ ಸಸಿಗಳನ್ನು ನೆಡಲು ಎಲ್ಲ ತಯಾರಿಗಳನ್ನೂ ಮಾಡಿಕೊಂಡಿದ್ದಾರೆ.
    ಗ್ರಾಪಂ ಸದಸ್ಯರು, ಕಾರ್ಖಾನೆ ನೌಕರರು, ಟೈಲರ್, ಸೇಲ್ಸ್‌ಮನ್ ಸೇರಿದಂತೆ ವಿವಿಧ ವೃತ್ತಿಗಳಲ್ಲಿ ತೊಡಗಿಕೊಂಡಿರುವ ಸಮಾನ ಮನಸ್ಕರು ನಶಿಸುತ್ತಿರುವ ಶ್ರೀಗಂಧದ ಬಗ್ಗೆ ಶಾಲಾ ಹಂತದಿಂದಲೇ ಮಕ್ಕಳಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ಈಗಾಗಲೇ ಶಿಕ್ಷಣ ಇಲಾಖೆ ಸಹಕಾರದೊಂದಿಗೆ ಸರ್ಕಾರಿ ಶಾಲಾ ಕಾಲೇಜುಗಳನ್ನು ಆಯ್ದುಕೊಂಡು ಮಲೆನಾಡನ್ನು ಶ್ರೀಗಂಧದ ಬೀಡನ್ನಾಗಿಸಲು ಶ್ರಮಿಸುತ್ತಿದ್ದಾರೆ.
    ಅರಿವು ಮೂಡಿಸುವ ಗುರಿ: ಭಾರತೀಯ ಸಂಸ್ಕೃತಿಯಲ್ಲಿ ಶ್ರೀಗಂಧಕ್ಕೆ ವಿಶಿಷ್ಟ ಸ್ಥಾನವಿದೆ. ಇಂದು ಶ್ರೀಗಂಧದ ಗಿಡ-ಮರಗಳು ಕಣ್ಮರೆಯಾಗುತ್ತಿವೆ. ಬೆಳಗ್ಗೆ ನೋಡಿದ ಗಿಡ-ಮರಗಳು ರಾತ್ರೋರಾತ್ರಿ ಕಡಿತಲೆ ಆಗುತ್ತಿವೆ. ಇದೇ ಪರಿಸ್ಥಿತಿ ಮುಂದುವರಿದರೆ ಕೆಲವೇ ವರ್ಷಗಳಲ್ಲಿ ಮಲೆನಾಡಿನಲ್ಲಿ ಶ್ರೀಗಂಧ ನಶಿಸಿಹೋಗಲಿದೆ. ಹೊಸ ಪೀಳಿಗೆಗೆ ಶ್ರೀಗಂಧದ ಬಗ್ಗೆ ಗಂಧಗಾಳಿಯೂ ಇಲ್ಲದಂತೆ ಆಗಲಿದೆ. ಹಾಗಾಗಿ ಭವಿಷ್ಯದ ಯುವ ಪೀಳಿಗೆಯಲ್ಲಿ ಅರಿವು ಮೂಡಿಸುವ ಉದ್ದೇಶವನ್ನು ಸಂಘ ಹೊಂದಿದ್ದು ಅದಕ್ಕಾಗಿ ಶಾಲಾ ಕಾಲೇಜು ಆವರಣಗಳನ್ನೇ ಆಯ್ದುಕೊಂಡಿದೆ.
    ರಕ್ಷಣೆ ಸುಲಭದ ಕೆಲಸವಲ್ಲ: ಶ್ರೀಗಂಧದ ಸಸಿಗಳನ್ನು ತಂದು ನೆಡುವುದು ಸುಲಭ. ಆದರೆ ಅವುಗಳನ್ನು ರಕ್ಷಣೆ ಮಾಡುವುದು ಕಷ್ಟಕರ. ಖಾಸಗಿ ಜಾಗದಲ್ಲಿದ್ದೂ ಬೇಲಿ ನಿರ್ಮಿಸಿ ಕಾವಲುಗಾರರನ್ನು ನೇಮಿಸಿದರೂ ಬಹಳಷ್ಟು ಬಾರಿ ಮಾಲೀಕರಿಗೆ ಚಳ್ಳೆಹಣ್ಣು ತಿನ್ನಿಸುವ ಕಳ್ಳರು ಶ್ರೀಗಂಧದ ಮರಗಳನ್ನು ಕಡಿತಲೆ ಮಾಡಿ ಕದ್ದೊಯ್ಯುವುದು ಸಾಮಾನ್ಯವಾಗಿದೆ. ಶ್ರೀಗಂಧದ ಮರಗಳು 15ರಿಂದ 20 ವರ್ಷದೊಳಗೆ ಕಟಾವಿಗೆ ಬರುತ್ತವೆ. ಕಳ್ಳರು 8-10 ವರ್ಷದೊಳಗೇ ಕೊಡಲಿ ಪೆಟ್ಟು ಹಾಕುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರಿ ಜಾಗದಲ್ಲಿದ್ದ ಗಂಧದ ಮರಗಳನ್ನು ಕಳ್ಳರು ಬಿಡುತ್ತಾರೆಯೇ ಎಂಬ ಪ್ರಶ್ನೆ ಹಲವರನ್ನು ಕಾಡುತ್ತಿದೆ.
    ಗೋ ಗ್ರೋ ಸ್ಯಾಂಡಲ್‌ಗೆ ಹಿನ್ನಡೆ: ಸರ್ಕಾರ ಅರಣ್ಯ ಇಲಾಖೆ ಮೂಲಕ ಶ್ರೀಗಂಧದ ಗಿಡಗಳನ್ನು ಬೆಳೆಸಲು ರೈತರನ್ನು ಪ್ರೋತ್ಸಾಹಿಸುವ ಕೆಲಸವನ್ನು ಮಾಡುತ್ತಿದೆ. ಅದಕ್ಕಾಗಿ ಗೋ ಗ್ರೋ ಸ್ಯಾಂಡಲ್ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು ಪ್ರತಿ ಗಿಡಕ್ಕೆ ವರ್ಷಕ್ಕೆ 35 ರೂ.ನಂತೆ ಮೂರು ವರ್ಷಕ್ಕೆ 105 ರೂ. ಸಬ್ಸಿಡಿಯನ್ನೂ ನೀಡುತ್ತಿದೆ. ಆದರೆ ದೀರ್ಘ ಕಾಲದ ಬೆಳೆಯಾಗಿರುವ ಕಾರಣ ರೈತರು ಕೂಡ ಶ್ರೀಗಂಧ ಬೆಳೆಸಲು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ಹಿನ್ನಡೆಯಾಗಿದೆ. ಇದರಿಂದ ಸಾವಿರಾರು ಶ್ರೀಗಂಧ ಸಸಿಗಳು ಅರಣ್ಯ ಇಲಾಖೆ ನರ್ಸರಿಗಳಲ್ಲೇ ಹಾಳಾಗುತ್ತಿವೆ.
    ವಾರ್ಡ್‌ಗಳಲ್ಲಿ ಲಕ್ಷ್ಮಣ-ಸೀತಾಫಲ: ಶಾಲಾ ಕಾಲೇಜುಗಳಲ್ಲಿ ಶ್ರೀಗಂಧದ ಜತೆಗೆ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್‌ಗೊಂಡು ಸಾವಿರ ಔಷಧ ಸಸ್ಯವನ್ನು ನೆಡಲು ಆಲೋಚನೆ ನಡೆಸಿದ್ದಾರೆ. ಇದಕ್ಕಾಗಿ ಶಿಕ್ಷಣ ಇಲಾಖೆಯು ಕ್ಯಾನ್ಸರ್‌ಗೆ ರಾಮಬಾಣವಾದ 45 ಸಾವಿರ ಲಕ್ಷ್ಮಣ ಮತ್ತು ಸೀತಾಫಲ ಸಸಿಗಳನ್ನು ನೀಡಲು ಒಪ್ಪಿಕೊಂಡಿದೆ. ಶಿವಮೊಗ್ಗದಲ್ಲಿ 32 ವಾರ್ಡ್‌ಗಳಿದ್ದು ವಾರ್ಡ್‌ಗೆ ಒಂದು ಸಾವಿರ ಸಸಿ ನೆಟ್ಟರೂ 32 ಸಾವಿರ ಲಕ್ಷ್ಮಣ-ಸೀತಾಫಲ ಸಸಿಗಳನ್ನು ನೆಟ್ಟಂತಾಗುತ್ತದೆ. ಮುಂದಿನ ದಿನಗಳಲ್ಲಿ ಕೆಲವೇ ದಿನಗಳಲ್ಲಿ ನೆಡಲು ತಯಾರಿ ಮಾಡಿಕೊಂಡಿದ್ದಾರೆ.
    ಸಸಿ ಉಚಿತ ಆದ್ರೆ ಸಾಗಣೆ ವೆಚ್ಚ 5 ರೂ.!
    ಅರಣ್ಯ ಇಲಾಖೆ ಉಂಬ್ಳೆಬೈಲ್ ವಲಯದಿಂದ 1 ರೂಪಾಯಿಯ 4 ಸಾವಿರ ಶ್ರೀಗಂಧದ ಸಸಿಗಳನ್ನು ಉಚಿತವಾಗಿ ಸಂಘಕ್ಕೆ ಕೊಡುಗೆಯಾಗಿ ನೀಡಿದೆ. ಆದರೆ ಸಾಗಣೆ ವೆಚ್ಚ ಸೇರಿದಂತೆ ಪ್ರತಿ ಗಿಡಕ್ಕೆ ಕನಿಷ್ಠ 5 ರೂ.ವರೆಗೂ ವೆಚ್ಚ ತಗುಲುತ್ತಿದೆ. ಎಲ್ಲ ಖರ್ಚನ್ನು ತಂಡದ ಸದಸ್ಯರೇ ಹಾಕಿಕೊಂಡಿದ್ದಾರೆ ಎಂಬುದು ವಿಶೇಷ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts