More

    ಇನ್ನು 3 ತಿಂಗಳು ಸಿಆರ್‌ಜಡ್ ಮರಳಿಲ್ಲ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರಾವಳಿ ನಿಯಂತ್ರಣ ವಲಯ (ಸಿಆರ್‌ಜಡ್)ದಲ್ಲಿ ಮರಳು ದಿಬ್ಬ ತೆರವಿಗೆ ಪರಿಸರ ಇಲಾಖೆ ನೀಡಿರುವ ಅನುಮತಿ ಮುಗಿದ ಹಿನ್ನೆಲೆಯಲ್ಲಿ ಮರಳುಗಾರಿಕೆ ಸ್ಥಗಿತಗೊಂಡು ಎರಡು ವಾರಗಳಾಗುತ್ತಿವೆ.

    ಸಿಆರ್‌ಜಡ್ ವ್ಯಾಪ್ತಿಯಲ್ಲಿ ಸೆ.16ರವರೆಗೆ ಮರಳುಗಾರಿಕೆಗೆ ಈ ಹಿಂದೆ ಕ್ಲಿಯರೆನ್ಸ್ ನೀಡಲಾಗಿತ್ತು. ಇನ್ನು ಈ ವಲಯದಲ್ಲಿ ಮರಳುಗಾರಿಕೆ ನಡೆಸಲು ಪ್ರಕ್ರಿಯೆಗಳು ಹೊಸದಾಗಿ ನಡೆಯಬೇಕಿರುವುದರಿಂದ ಮುಂದಿನ ಮೂರು ತಿಂಗಳು ಸಿಆರ್‌ಜಡ್‌ನಿಂದ ಮರಳು ಸಿಗಲಾರದು.

    ಆದರೆ ಕರಾವಳಿ ನಿಯಂತ್ರಣ ವಲಯೇತರ ಪ್ರದೇಶ (ನಾನ್ ಸಿಆರ್‌ಜಡ್)ದಲ್ಲಿ ಎಂದಿನಂತೆ ಮರಳುಗಾರಿಕೆ ಮುಂದುವರಿಯುವ ಕಾರಣ ಜಿಲ್ಲೆಯಲ್ಲಿ ಮರಳು ಕೊರತೆ ಎದುರಾಗದು ಎನ್ನುವುದು ಅಧಿಕಾರಿಗಳ ಹೇಳಿಕೆ.

    ಸಿಆರ್‌ಜಡ್‌ನಲ್ಲಿ 2019ರ ಡಿ.26ಕ್ಕೆ ಕೊನೆಗೊಂಡಿದ್ದ ಮರಳುಗಾರಿಕೆ ಕರ್ನಾಟಕ ಕರಾವಳಿ ವಲಯ ನಿರ್ವಹಣೆ ಸಮಿತಿಯ (ಕೆಸಿಜಡ್‌ಎಂ) ಅನುಮೋದನೆ ಪ್ರಕ್ರಿಯೆ ನಡೆದು 2020ರ ನವೆಂಬರ್‌ನಲ್ಲಿ ಮರು ಆರಂಭಗೊಂಡಿತ್ತು. ನವೆಂಬರ್‌ನಿಂದ ಈವರೆಗೆ ಒಟ್ಟು 2,35,414 ಮೆಟ್ರಿಕ್ ಟನ್ ಮರಳು ತೆರವುಗೊಳಿಸಲಾಗಿದೆ. ನೇತ್ರಾವತಿ ನದಿಯಲ್ಲಿ 8, ಗುರುಪುರ ನದಿಯಲ್ಲಿ 4 ಹಾಗೂ ಶಾಂಭವಿ ನದಿಯಲ್ಲಿ 1 ಬ್ಲಾಕ್ ಸೇರಿದಂತೆ 13 ಬ್ಲಾಕ್‌ಗಳಲ್ಲಿ ಮರಳು ತೆರವಿಗೆ ಎರಡು ಹಂತಗಳಲ್ಲಿ 105 ಮಂದಿ ಗುತ್ತಿಗೆದಾರರಿಗೆ ಮರಳು ತೆಗೆಯಲು ಪರವಾನಗಿ ನೀಡಲಾಗಿತ್ತು.

    ಜೂ.1ರಿಂದ ಎರಡು ತಿಂಗಳ ಕಾಲ ಜಾರಿಯಲ್ಲಿದ್ದ ಮರಳುಗಾರಿಕೆ ನಿಷೇಧ ಜು.31ಕ್ಕೆ ಕೊನೆಗೊಂಡು ಆಗಸ್ಟ್ ಮಧ್ಯಭಾಗದಲ್ಲಿ ಪರವಾನಗಿದಾರರಿಗೆ ಮರಳುಗಾರಿಕೆಗೆ ಅವಕಾಶ ನೀಡಲಾಗಿತ್ತು. ಜಿಲ್ಲೆಯ ನಾನ್ ಸಿಆರ್‌ಜಡ್‌ನಲ್ಲಿ ಇ-ಟೆಂಡರ್ ಮೂಲಕ ಒಟ್ಟು 16 ಬ್ಲಾಕ್‌ಗಳ ಗುತ್ತಿಗೆ ಮಂಜೂರು ಮಾಡಲಾಗಿದೆ. ಅಲ್ಲದೆ 30 ಬ್ಲಾಕ್‌ಗಳಿಗೆ ಈ ಮೊದಲು ಕೆಲವರು ತಡೆಯಾಜ್ಞೆ ತರಲಾಗಿರುವುದನ್ನು ಕೋರ್ಟ್ ತೆರವುಗೊಳಿಸಿದ್ದು, ಅಲ್ಲಿಗೂ ಟೆಂಡರ್ ಮಾಡುವ ಕಾರಣ ಅಲ್ಲೂ ಶೀಘ್ರ ಮರಳುಗಾರಿಕೆ ಶುರುವಾಗಲಿದೆ.

    ಸಿಆರ್‌ಝಡ್ ವಿಳಂಬ: ಸಿಆರ್‌ಜಡ್‌ನಲ್ಲಿ ಇನ್ನೂ ಮರಳು ದಿಬ್ಬಗಳನ್ನು ಮೀನುಗಾರರು ಗುರುತಿಸಿಲ್ಲ. ಅವರು ನೇತ್ರಾವತಿ, ಫಲ್ಗುಣಿ, ಶಾಂಭವಿ ನದಿಗಳಲ್ಲಿ ಮರಳು ದಿಬ್ಬ, ದಾಸ್ತಾನು ಎಲ್ಲೆಲ್ಲಿ ಇದೆ ಎನ್ನುವುದರ ಮಾಹಿತಿ ನೀಡಿದ ಬಳಿಕ ಬೇಥಮೆಟ್ರಿ ಸರ್ವೇ ನಡೆದು ಮರಳು ದಿಬ್ಬಗಳನ್ನು ಗುರುತಿಸಿ ಇದರ ಬಗ್ಗೆ ತಾಂತ್ರಿಕ ವರದಿ ಪಡೆಯಲಾಗುತ್ತದೆ. ಜಿಲ್ಲಾಧಿಕಾರಿ ಅಧ್ಯಕ್ಷತೆಯ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ವರದಿ ಪರಿಶೀಲಿಸಿ ಕರ್ನಾಟಕ ಕರಾವಳಿ ವಲಯ ನಿರ್ವಹಣೆ ಸಮಿತಿಗೆ(ಕೆಸಿಜಡ್‌ಎಂ) ಅನುಮೋದನೆಗೆ ಕಳುಹಿಸಿಕೊಡುತ್ತದೆ. ಕೆಸಿಜಡ್‌ಎಂ ಅನುಮೋದನೆ ಬಳಿಕ ಹೊಸದಾಗಿ ಮರಳುಗಾರಿಕೆ ಪ್ರಕ್ರಿಯೆಗಳಿಗೆ ಚಾಲನೆ ದೊರಕುತ್ತದೆ.

    ಇನ್ನೂ ಮರಳು ದಿಬ್ಬಗಳನ್ನು ಗುರುತಿಸುವ ಕೆಲಸ ನಡೆದಿಲ್ಲ. ಅದರ ಬಳಿಕ ಎಲ್ಲ ಪ್ರಕ್ರಿಯೆ ಪೂರ್ಣಗೊಳ್ಳುವುದಕ್ಕೆ 2ರಿಂದ ಮೂರು ತಿಂಗಳು ತಗುಲಬಹುದು. ನಾನ್ ಸಿಆರ್‌ಜನಲ್ಲಿ ಮರಳುಗಾರಿಕೆ ನಡೆಯುತ್ತಿರುವುದರಿಂದ ಮರಳು ಕೊರತೆಯಾಗದು.
    ನಿರಂಜನ್, ಹಿರಿಯ ಭೂವಿಜ್ಞಾನಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಮಂಗಳೂರು

    ಉಡುಪಿಯಲ್ಲಿ ಶೀಘ್ರ ಅನುಮತಿ: ಉಡುಪಿ: ಬ್ರಹ್ಮಾವರ, ಉಡುಪಿ ಸಿಆರ್‌ಜಡ್ ವ್ಯಾಪ್ತಿಯಲ್ಲಿ ಮರಳು ದಿಬ್ಬ ತೆರವು ಮಾಡಲು ಶೀಘ್ರ ಅನುಮತಿ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಅಧ್ಯಕ್ಷತೆಯ 7 ಸದಸ್ಯರ ಸಮಿತಿಯ ಎರಡು ಸುತ್ತಿನ ಸಭೆ ಮುಗಿದಿದ್ದು, ಉಡುಪಿ, ಬ್ರಹ್ಮಾವರ ಭಾಗದಲ್ಲಿನ ಸೀತಾ, ಸ್ವರ್ಣ ನದಿಗಳಲ್ಲಿ 19 ಬ್ಲಾಕ್‌ಗಳಲ್ಲಿ ಮರಳು ದಿಬ್ಬ ತೆರವಿಗೆ ಪ್ರಕ್ರಿಯೆಗಳು ನಡೆಯುತ್ತಿದೆ. ಈ ಭಾಗದಲ್ಲಿ ಎನ್‌ಐಟಿಕೆ ಸಮೀಕ್ಷೆ ಮುಗಿಸಿದ್ದು, 8.86 ಲಕ್ಷ ಮೆಟ್ರಿಕ್ ಟನ್ ಲಭ್ಯವಿದೆ. ಕುಂದಾಪುರ ಸಿಆರ್‌ಜಡ್ ಭಾಗದಲ್ಲಿ ಮರಳುಗಾರಿಕೆ ಒಂದು ತಿಂಗಳ ಹಿಂದೆ ಆರಂಭಗೊಂಡಿದೆ. ಕುಂದಾಪುರ ಸಿಆರ್‌ಜಡ್ ಸೌಪರ್ಣಿಕಾ ಮತ್ತು ವಾರಾಹಿ ಭಾಗದ 4 ಬ್ಲಾಕ್‌ಗಳಲ್ಲಿ 40 ಕಡೆಗಳಿಗೆ ಮರಳುದಿಬ್ಬ ತೆರವಿಗೆ ಲೈಸೆನ್ಸ್ ನೀಡಲಾಗಿದೆ. ಇದರಲ್ಲಿ 5.67 ಲಕ್ಷ ಮೆಟ್ರಿಕ್ ಟನ್ ಮರಳು ಲಭ್ಯವಿದೆ. ನಾನ್ ಸಿಆರ್‌ಜಡ್ ವ್ಯಾಪ್ತಿಯ ್ಕೂರು ಬ್ಲಾಕ್‌ನಲ್ಲಿ ಅ.5ರ ನಂತರ ಮರಳು ದಿಬ್ಬ ತೆರವು ನಡೆಯಲಿದೆ ಎಂದು ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ಬೂ ವಿಜ್ಞಾನಿ ಸಂದೀಪ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts