More

    ಅನ್ನದಾತರ ಹಬ್ಬ ಕಾರ ಹುಣ್ಣಿಮೆ- ವೈಜ್ಞಾನಿಕ ನೆಲೆಗಟ್ಟಿನ ಜತೆಗೆ ಜಾನಪದ ಹಿನ್ನೆಲೆ…

    |ಪ್ರೊ. ವಿದ್ವಾನ್ ನವೀನಶಾಸ್ತ್ರಿ ರಾ. ಪುರಾಣಿಕ

    ಸನಾತನ ಧರ್ಮದ ಅನುಸರಣೆಯಲ್ಲಿ ಹಬ್ಬಗಳ ಆಚರಣೆಗೆ ಬಹಳಷ್ಟು ಮಹತ್ವವಿದೆ. ಕೆಲವು ಹಬ್ಬಗಳು ಐತಿಹಾಸಿಕ ಹಿನ್ನೆಲೆಯ ಪ್ರತೀಕವಾದರೆ ಇನ್ನು ಕೆಲವು ಹಬ್ಬಗಳು ಧಾರ್ವಿುಕ ನಂಬಿಕೆಗಳ ಪ್ರತೀಕ. ಮತ್ತೂ ಕೆಲವು ಹಬ್ಬಗಳು ಋತುಮಾನಗಳಿಗೆ ಅನುಗುಣವಾದ ಹಿನ್ನೆಲೆ ಹೊಂದಿವೆ. ಹಿರಿಯರು ಮಾಡಿರುವ ಸಂಪ್ರದಾಯಗಳ ಆಚರಣೆಯು ಸಂಬಂಧಗಳನ್ನು ಗಟ್ಟಿಗೊಳಿಸುತ್ತದೆ. ವೈಜ್ಞಾನಿಕ ನೆಲೆಗಟ್ಟಿನ ಜತೆಗೆ ಜಾನಪದ ಹಿನ್ನೆಲೆಯ ವಿಶಿಷ್ಟ ಹಬ್ಬಗಳೂ ಇವೆ. ಅಂತಹ ಹಬ್ಬಗಳಲ್ಲಿ ಕಾರಹುಣ್ಣಿಮೆಯೂ ಒಂದು.

    ರೈತಾಪಿ ವರ್ಗದ ಜನ ಕೃಷಿ ಚಟುವಟಿಕೆ ನಡೆಸಲು ಸಿದ್ಧವಾಗುವುದಕ್ಕೆ ಅಣಿ ಮಾಡಿಕೊಡುವ ಹಬ್ಬವೇ ಕಾರಹುಣ್ಣಿಮೆ. ಜ್ಯೇಷ್ಠ ಮಾಸ ಶುಕ್ಲ ಪಕ್ಷದಂದು ಬರುವ ಈ ಹುಣ್ಣಿಮೆ ಕರ್ನಾಟಕದಾದ್ಯಂತ ಆಚರಣೆಯಲ್ಲಿದ್ದರೂ ಉತ್ತರ ಕರ್ನಾಟಕ ಭಾಗದಲ್ಲಿ ಇದರ ಸಂಭ್ರಮ, ಸಡಗರ ಹೆಚ್ಚು. ಮಹಾರಾಷ್ಟ್ರದಲ್ಲೂ ಇದನ್ನು ಆಚರಿಸುತ್ತಾರೆ. ಕೆಲವೆಡೆ ಇದನ್ನು ಕಾರಹಬ್ಬ ಎಂದೂ ಕರೆಯುತ್ತಾರೆ. ಈ ಹಬ್ಬಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಶಿಲಾಶಾಸನಗಳಲ್ಲಿ ಇದರ ಬಗ್ಗೆ ಇರುವ ಉಲ್ಲೇಖಗಳು ಆಚರಣೆಯ ಪುರಾತನ ಸಂಪ್ರದಾಯಕ್ಕೆ ಸಾಕ್ಷಿ. ಸಾಂಸ್ಕೃತಿಕವಾಗಿ ಇದನ್ನು ಎತ್ತಿನ ಹುಣ್ಣಿಮೆ ಎಂದು ಕರೆಯಲಾಗುತ್ತದೆ. ಕೃಷಿಕರಲ್ಲದವರು ಕೃಷಿ ಪ್ರಧಾನವಾದ ಎತ್ತುಗಳನ್ನು ಪೂಜಿಸುವ ಸಲುವಾಗಿ ಹಿಟ್ಟು ಅಥವಾ ಮಣ್ಣಿನಲ್ಲಿ ಜೋಡೆತ್ತಿನ ಮೂರ್ತಿಗಳನ್ನು ಮಾಡಿ ಅವುಗಳಿಗೆ ಕೋಡುಬಳೆ, ಕರಿಗಡುಬು, ಕಿಚಡಿಯ ನೈವೇದ್ಯ ಮಾಡುತ್ತಾರೆ. ಇನ್ನು ಹಲವೆಡೆ ಇದನ್ನು ವಟಸಾವಿತ್ರಿ ಪೂಜಾ ವ್ರತ, ಕಥಾಶ್ರವಣ ಮುಂತಾಗಿ ಆಯಾ ಪದ್ಧತಿಗೆ ಅನುಗುಣವಾಗಿ ಆಚರಿಸುವ ಪದ್ಧತಿಯೂ ಇದೆ. ಅಂದಿನ ದಿನ ಸುಮಂಗಲಿಯರು ಆಲದ ಮರವನ್ನು ಪೂಜಿಸಿ, ಋತುಮಾನಕ್ಕೆ ತಕ್ಕಂತೆ ಸಿಗುವ ನೀರಲಹಣ್ಣು,

    ಮಾವಿನ ಹಣ್ಣಿನ ನೈವೇದ್ಯ ಮಾಡಿ ಸಾವಿತ್ರಿದೇವಿಯನ್ನು ಸ್ತುತಿಸುವುದು ಈ ಸಂಪ್ರದಾಯದ ವೈಶಿಷ್ಟ್ಯ ಎತ್ತಿನ ಪೂಜೆಯಾದ ನಂತರ ಗುಳ್ಳವ್ವ, ಗುಗ್ಗವ್ವ ಎನ್ನುವ ಮತ್ತೊಂದು ಹಬ್ಬವನ್ನು ಆಚರಿಸಲಾಗುತ್ತದೆ. ಇದರಲ್ಲಿ ಮಣ್ಣಿನ ಮತ್ತು ನೆಲದ ಪೂಜಾ ಕಾರ್ಯ ನೆರವೇರಿಸುತ್ತಾರೆ. ಕಾರಹುಣ್ಣಿಮೆ ಎರಡು ದಿನ ಮಾಡುವ ಹಬ್ಬ. ಹುಣ್ಣಿಮೆಯ ಮುನ್ನಾ ದಿನ ಅಂದರೆ ಹೊನ್ನುಗ್ಗೆಯ ದಿನ ಹಳ್ಳಿಗರು ತಮ್ಮ ಮನೆಯಲ್ಲಿನ ರಾಸು ಅಥವಾ ಎತ್ತುಗಳನ್ನು ತೊಳೆದು, ಸಿಂಗರಿಸುತ್ತಾರೆ. ಕೊಂಬಿಗೆ ಬಣ್ಣ ಬಳಿದು ಕೊಡಣಸು ಹಾಕಿ ಬಣ್ಣ ಬಣ್ಣದ ರಿಬ್ಬನ್ ಕಟ್ಟಿ, ಕತ್ತಿಗೆ ಹುರಿಗೆಜ್ಜೆ ಸಸ, ಜ್ಯೂಲಾ, ಬಾಸಿಂಗ, ಕಿರುಗಂಟೆ ಸರ ಮುಂತಾದವುಗಳನ್ನು ಹಾಕಿ, ಮೈ ತುಂಬ ವಿವಿಧ ಬಣ್ಣದ ಬಳೆಗಳ ಚಿತ್ತಾರ ಮೂಡಿಸುತ್ತಾರೆ. ಮದುಮಕ್ಕಳಂತೆ ಅಲಂಕರಿಸುತ್ತಾರೆ. ನಂತರ ಅವುಗಳಿಗೆ ಪೂಜೆ ಸಲ್ಲಿಸಿ ಕಲಶದಾರತಿ ಬೆಳಗುತ್ತಾರೆ. ಜೋಳದ ಹುಗ್ಗಿ (ಹರಗ, ಕಿಚಡಿ) ಪ್ರಸಾದವನ್ನು ಎತ್ತುಗಳಿಗೆ ತಿನ್ನಿಸಲಾಗುತ್ತದೆ. ಈ ರೀತಿ ಮಾಡುವ ಹುಗ್ಗಿಯನ್ನು ಹೊನ್ನುಗ್ಗಿ ಎಂದು ಕರೆಯಲಾಗುತ್ತದೆ. ಇದರ ಮಾರನೇ ದಿನವೇ ಕಾರಹುಣ್ಣಿಮೆ. ಈ ದಿನ ಸಿಂಗರಿಸಿದ ಹಸುಗಳನ್ನು ವಾದ್ಯಸಮೇತ ಊರಿನೆಲ್ಲೆಡೆ ಮೆರವಣಿಗೆ ಮಾಡುವ ಸಂಪ್ರದಾಯ ಕೆಲವೆಡೆ ಇದೆ.

    ಇನ್ನು ಕೆಲವು ಕಡೆ ಬಿತ್ತನೆ ಬೀಜಗಳನ್ನು ಪೂಜಿಸುತ್ತಾರೆ. ಭೂತಾಯಿಯನ್ನು ಪೂಜಿಸಿ, ನಮಿಸಿ ಅಂದಿನ ದಿನ ಬೀಜವನ್ನು ಭೂಮಿಗೆ ಹಾಕುವ ಮುಹೂರ್ತವನ್ನು ನೆರವೇರಿಸುತ್ತಾರೆ.ಕಾರಹುಣ್ಣಿಮೆಯ ಸಂಜೆ ಕರಿಹರಿಯುವ ಸಂಪ್ರದಾಯ ಪಾಲನೆಯಾಗುತ್ತದೆ. ಇದು ಮುಂದಿನ ವರ್ಷದ ಬೆಳೆಯ ಭವಿಷ್ಯ ಕಂಡುಕೊಳ್ಳುವ ಸಂಪ್ರದಾಯ. ಈ ಪ್ರಕ್ರಿಯೆ ಫಾಲ್ಗುಣ ಮಾಸದವರೆಗೆ ಮುಂದುವರಿಯುತ್ತದೆ. ಹೋಳಿಯನ್ನು ಸುಟ್ಟಾದ ಮೇಲೆ, ಆ ಹೋಳಿಯ ಬೂದಿಯನ್ನು ತಮಟೆಗಳೊಂದಿಗೆ ಪೂಜಿಸಿ ಮನೆಗೆ ತಂದುಕೊಳ್ಳಲಾಗುತ್ತದೆ. ಹೋಳಿ ಹುಣ್ಣಿಮೆಯ ದಿನ ಊರಿನ ಕೃಷಿ ಸಂಪತ್ತೆಲ್ಲಾ ಊರು ಸೇರಿಕೊಂಡು ಭದ್ರವಾಗಿರುವ ವೇಳೆ,

    ಆ ಸಂಪತ್ತಿಗೆ ಹೊರಗಿನಿಂದ ಯಾವುದೇ ಉಪದ್ರವ ಆಗಬಾರದೆಂದು ಈ ಕರಿಕಟ್ಟುವ ಕಾರ್ಯ ಮಾಡಲಾಗುತ್ತದೆ. ಅನಾದಿಕಾಲದಿಂದಲೂ ಈ ಸಂಪ್ರದಾಯ ನಡೆದುಕೊಂಡು ಬಂದಿದೆ. ಹೋಳಿಹುಣ್ಣಿಮೆಯ ದಿನ ಕಟ್ಟಿದ ಈ ಕರಿಯನ್ನು ಕಾರಹುಣ್ಣಿಮೆಯ ಸಂಜೆ ಹರಿಯಲಾಗುತ್ತದೆ. ಕರಿಹರಿಯುವ ಆಚರಣೆಯಲ್ಲಿ ಪ್ರಾಂತ್ಯವಾರು ಸಾಂಪ್ರದಾಯಿಕ ಭೇದಗಳಿವೆ. ಅಂದರೆ ಬೆಳೆ ಮತ್ತು ಗ್ರಾಮ ಶ್ರೇಯಕ್ಕಾಗಿ ಕಟ್ಟಿದ ಸಾಂಪ್ರದಾಯಿಕ ರಕ್ಷೆ ಹರಿದು ಮುಂದಿನ ಬೆಳೆ ಪದ್ದತಿ ಬಗ್ಗೆ ತಿಳಿದುಕೊಳ್ಳುವ ಕ್ರಿಯೆಯನ್ನು ಕರಿಹರಿಯುವ ಕ್ರಿಯೆ ಎಂದೂ ಹೇಳಲಾಗುತ್ತದೆ.ಮುಂಗಾರು ಬೆಳೆ ಭವಿಷ್ಯ ನಿರ್ಧರಿಸುವ ಎತ್ತುಗಳುಕಾರಹುಣ್ಣಿಮೆ ಆಚರಣೆ ಜತೆಗೆ ಅಂದಿನ ವರ್ಷದ ಕೃಷಿ ಭವಿಷ್ಯದ ಬಗ್ಗೆ ಮಾಹಿತಿ ಪಡೆಯುವ ಕಾರ್ಯವನ್ನು ಮಾಡಲಾಗುತ್ತದೆ. ಇದಕ್ಕಾಗಿ ಹೋರಿ, ಎತ್ತುಗಳನ್ನು ಬಳಸಲಾಗುತ್ತದೆ. ಕರಿಹರಿಯುವ ವೇಳೆ ವಿವಿಧ ಬಣ್ಣದ ಹೋರಿ, ಎತ್ತುಗಳನ್ನು ಬಳಸಲಾಗುತ್ತದೆ. ಆದರೆ ಬಯಲು ಸೀಮೆಯಲ್ಲಿ ಕರಿಹರಿಯುವ ಭವಿಷ್ಯ ಪಡೆಯಲು ಕಪ್ಪು ಅಥವಾ ಬಿಳಿಯದ್ದು, ಕೆಂದು ಅಥವಾ ಬಿಳಿಯ ಎತ್ತನ್ನು ಬಳಸಲಾಗುತ್ತದೆ. ಒಂದೊಂದು ಪ್ರಾಂತ್ಯಕ್ಕೂ ಒಂದೊಂದು ನಿಯಮ ಇದೆ. ಕೆಲವೆಡೆ ಐದು ಎತ್ತುಗಳನ್ನು, ಇನ್ನು ಕೆಲವೆಡೆ ಎಲ್ಲ ಬಗೆಯ ದನಗಳನ್ನು ಕರಿ ಹರಿಯಲು ಬಿಡುತ್ತಾರೆ. ಈ ಕಾರ್ಯಕ್ಕೆ ನಿರ್ದಿಷ್ಟ ಮನೆತನವನ್ನು ಅಥವಾ ವಂಶದವರನ್ನು ನಿಗದಿ ಮಾಡಲಾಗಿರುತ್ತದೆ.

    ಇವರ ಉಸ್ತುವಾರಿಯಲ್ಲಿ ಕರಿಹರಿಯಲಾಗುತ್ತದೆ. ಕರಿಹರಿಯುವ ಮಾರ್ಗದಲ್ಲಿ ಬೇವು, ಮಾವು, ಹೂವುಗಳಿಂದ ಮಾಡಿದ ತೋರಣ ಹಾಕಲಾಗುತ್ತದೆ. ಅವುಗಳ ನಡುವೆ ಕೊಬ್ಬರಿ ಬಟ್ಟಲ ಸರ ಕಟ್ಟಲಾಗಿರುತ್ತದೆ. ಬಳಿಕ ಸಿಂಗರಿಸಲಾದ ಹೋರಿ, ಎತ್ತುಗಳನ್ನು ಊರಲ್ಲಿ ಮೆರವಣಿಗೆ ಮಾಡಲಾಗುತ್ತದೆ. ನಂತರ ಊರ ಭಜಂತ್ರಿಯವರು ಮಜಲು ಮಾಡುತ್ತಾ ನಡುವೆ ಈ ಹೋರಿ, ಎತ್ತುಗಳನ್ನು ರಭಸದಿಂದ ಓಡಿಸುತ್ತಾರೆ. ಕರಿಯ ತೋರಣದ ತಡೆಯನ್ನು ಹರಿಯುವ ಎತ್ತುಗಳು ಮುಂದೆ ಊರ ಹೊರಗಿನ ಬಾಗಿಲನ್ನು ತಲುಪುವಂತೆ ಮಾಡಲಾಗುತ್ತದೆ. ಇಲ್ಲಿ ಮೊದಲು ಬರುವ ಹೋರಿ ಅಥವಾ ಎತ್ತುಗಳು ಮುಂದಿನ ಬೆಳೆಯ ಭವಿಷ್ಯ ರೂಪಿಸುವ ಭವಿಷ್ಯಕಾರರು. ಈ ಓಟದಲ್ಲಿ ಕಪ್ಪು ಅಥವಾ ಕೆಂದು ಬಣ್ಣದ ಹೋರಿ ಅಥವಾ ಎತ್ತು ಮುಂದಾದರೆ ಆ ವರ್ಷ ಮುಂಗಾರು ಧಾನ್ಯ ಹೆಚ್ಚಾಗುವುದೆಂದೂ, ಬಿಳಿ ಹೋರಿ ಬಂದರೆ ಹಿಂಗಾರು ಧಾನ್ಯ ಸಮೃದ್ಧಿ ಆಗುವುವು ಎಂದರ್ಥ.

    (ಲೇಖಕರು ಸಂಸ್ಕೃತ ಉಪನ್ಯಾಸಕರು ಮತ್ತು ಜ್ಯೋತಿಷಿ, ಧಾರವಾಡ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts