More

    ಧರೆ ಹತ್ತಿ ಉರಿದೊಡೆ ನಿಲಬಹುದೆ? ಇನ್ನಾರಿಗೆ ದೂರುವೆನಯ್ಯಾ?

    ಕಂಡು ಕಂಡುದನೆಲ್ಲವ ಕೊಂಡು

    ಅಟ್ಟಹಾಸದಿ ಮೆರೆವ ಜನಕೆ

    ಕಾಣದ ಜೀವಿಯು ಬಂದು

    ತಲ್ಲಣಿಸುವುದು ಜಗವು ನೋಡಾ ಗುಹೇಶ್ವರ

    ಧರೆ ಹತ್ತಿ ಉರಿದೊಡೆ ನಿಲಬಹುದೆ? ಇನ್ನಾರಿಗೆ ದೂರುವೆನಯ್ಯಾ?ಹನ್ನೆರಡನೆಯ ಶತಮಾನದಲ್ಲಿ ಅಲ್ಲಮ ಹೇಳಿದ ಈ ವಚನ ಇಂದು ಹೆಚ್ಚು ಪ್ರಸ್ತುತವೆನ್ನಿಸುತ್ತಿದೆ. ಈ ವಚನ ನಮ್ಮ ಜೀವನ ವಿಧಾನವನ್ನು ಕುರಿತು ಮಾತನಾಡುತ್ತಿದೆ. ಮನುಷ್ಯನ ಕೊಳ್ಳುಬಾಕತನ, ದುರಾಸೆ, ಭೋಗಸಂಸ್ಕೃತಿಯ ವಿಲಾಸೀ ಜೀವನಕ್ರಮ ಇವೆಲ್ಲವೂ ನಾವು ಈಗ ಎದುರಿಸುತ್ತಿರುವ ಆಧುನಿಕ ಪಿಡುಗುಗಳು ಎಂದು ನಾವಂದುಕೊಂಡರೂ ಇವೆಲ್ಲ ಎಲ್ಲ ಕಾಲದಲ್ಲಿಯೂ ಕಾಡಿದ ಸಮಸ್ಯೆಗಳೇ! ಈಗ ಕರೊನಾ ಜಗತ್ತಿನಾದ್ಯಂತ ಉಂಟುಮಾಡಿರುವ ತಲ್ಲಣ ಊಹಿಸಲೂ ಅಸಾಧ್ಯ. ಈ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ನಮ್ಮ ಸಮೂಹಮಾಧ್ಯಮಗಳಂತೂ ಜನಜಾಗೃತಿ ಮೂಡಿಸುವಲ್ಲಿ ಅವಿರತ ಶ್ರಮಿಸುತ್ತಿವೆ. ಆದರೂ ತತ್ಕಾಲಕ್ಕೆ ಮಾತ್ರವಲ್ಲದೆ ನಮ್ಮ ದೀರ್ಘಕಾಲೀನ ಬದುಕಿಗೂ ಸಂಬಂಧಿಸಿದಂತೆ ಒಂದೆರಡು ಸಂಗತಿಗಳನ್ನು ನಾವಿಲ್ಲಿ ಗಂಭೀರವಾಗಿ ಗಮನಿಸಬೇಕಾಗಿದೆ.

    ಶತಶತಮಾನಗಳ ಹಿಂದೆ ಮನುಷ್ಯ ತನ್ನ ಸುತ್ತಮುತ್ತಲ ಪ್ರಪಂಚವನ್ನು ಕುತೂಹಲದಿಂದ ನೋಡಲಾರಂಭಿಸಿದಾಗ ಕಂಡದ್ದೇನು? ಸೂರ್ಯೋದಯ ಸೂರ್ಯಾಸ್ತಗಳ ಬಣ್ಣದ ಸಿರಿ; ಕಾಮನಬಿಲ್ಲಿನ ಸೊಬಗು; ಮಳೆಯಿಂದ ತೊಯ್ದ ಇಳೆಯಲ್ಲಿ ಹಸುರ ಹಬ್ಬ; ಮಿನುಗುವ ಚುಕ್ಕಿಗಳು; ಹಾಡುವ ಹಕ್ಕಿಗಳು; ಹೂವಿನ ಕಂಪು, ಬೆಳುದಿಂಗಳ ತಂಪು. ಹೀಗೆ ಪ್ರಕೃತಿಯ ಸೊಬಗನ್ನು ಆಸ್ವಾದಿಸುತ್ತಿರುವಾಗಲೇ ಅದರ ಇನ್ನೊಂದು ಮುಖವೂ ಅನುಭವಕ್ಕೆ ಬಂದಿತು. ‘ಇಂದುವದನೆ ಕುಂದರದನೆ/ಇಲ್ಲಿ ಪ್ರಕೃತಿ ರೂಪಸಿ/ಅಲ್ಲಿ ಭೂಮಿ ನಡುಗಿತಂತೆ/ಲಕ್ಷ ಲಕ್ಷ ಮಡಿದರಂತೆ/ರಕ್ತನಖಿ ರಕ್ತಮುಖಿ/ಅಲ್ಲಿ ಪ್ರಕೃತಿ ರಾಕ್ಷಸಿ.’ ಕಾಳ್ಗಿಚ್ಚಿನಿಂದ ಭಸ್ಮವಾಗುತ್ತಿರುವ ಕಾಡು; ಅಗ್ನಿಪರ್ವತಗಳಿಂದ ಉಕ್ಕಿ ಸಿಕ್ಕಿದ್ದನ್ನೆಲ್ಲ ಸುಟ್ಟು ಹರಿಯುತ್ತಿರುವ ಲಾವಾರಸ; ಗುಡುಗು ಸಿಡಿಲುಗಳಿಂದ ಕೂಡಿ ಭೋರೆಂದು ಸುರಿದು ಪ್ರವಾಹ ಸೃಷ್ಟಿಸುವ ವರ್ಷಧಾರೆ; ಇವುಗಳ ನಡುವೆ ಹೇಗೆ ತಾನೆ ಬದುಕುವುದು ಎಂಬ ತಲ್ಲಣ ಮನುಷ್ಯನನ್ನು ಕಾಡಲು ತೊಡಗಿತು. ಪ್ರಕೃತಿಯ ಪ್ರಸನ್ನ, ಕ್ರೂರ ಮುಖಗಳನ್ನು ಕಂಡ ಮನುಷ್ಯ ಪ್ರಕೃತಿಯನ್ನು ಒಂದು ಶಕ್ತಿ ಎಂದು ಭಾವಿಸಿ ಪೂಜಿಸಲಾರಂಭಿಸಿದ. ಅಗ್ನಿ, ವಾಯು, ವರುಣ ಮೊದಲಾದ ದೇವತೆಗಳು ಹೀಗೆ ರೂಪುಗೊಂಡಿರಬೇಕು. ಮಾತ್ರವಲ್ಲ, ಸಸ್ಯಜಗತ್ತು, ಪ್ರಾಣಿಜಗತ್ತು ಎಲ್ಲವೂ ದೈವತ್ವದ ನೆಲೆಗೇರಿದವು. ‘ಆನಂದಮಯ ಈ ಜಗಹೃದಯ/ಏತಕೆ ಭಯ ಮಾಣೊ/ಸೂರ್ಯೋದಯ ಚಂದ್ರೋದಯ/ ದೇವರ ದಯ ಕಾಣೊ’ ಎಂದು ಪ್ರಕೃತಿಯ ಚಟುವಟಿಕೆಗಳಲ್ಲಿಯೇ ಮನುಷ್ಯ ಭರವಸೆಯ ಬೆಳ್ಳಿಗೆರೆ ಕಾಣತೊಡಗಿದ. ನಮ್ಮ ಜನಪದರು ಪ್ರಕೃತಿಯೊಡನೆ ಸಹಬಾಳ್ವೆ ನಡೆಸುವುದನ್ನು ತಮ್ಮ ಜೀವನ ವಿಧಾನವನ್ನಾಗಿಸಿಕೊಂಡು ಬದುಕಿನಲ್ಲಿ ನೆಮ್ಮದಿ ಕಂಡುಕೊಳ್ಳಲು ಪ್ರಯತ್ನಿಸಿದರು. ಋತುಮಾನಕ್ಕೆ ತಕ್ಕಂತೆ ಜೀವನಕ್ರಮವನ್ನು ರೂಪಿಸಿಕೊಂಡರು. ಪ್ರಕೃತಿಯನ್ನು ಜೀವದಾಯಿನಿ ಎಂದೇ ಭಾವಿಸಿ ಆಕೆಯನ್ನು ಪೋಷಿಸಿದರು. ಯಾವನೆಲೆಯಲ್ಲೂ ಪ್ರಕೃತಿಯನ್ನು ಮಲಿನಗೊಳಿಸಲು ಪ್ರಯತ್ನಿಸಲಿಲ್ಲ; ಸುತ್ತಮುತ್ತಲಿನ ಜೀವರಾಶಿಯನ್ನು ನಾಶಮಾಡಲಿಲ್ಲ. ಬದುಕುವ ಹಕ್ಕು ಎಲ್ಲ ಜೀವಿಗಳಿಗೂ ಸಮಾನವಾಗಿತ್ತು.

    ಕ್ರಮೇಣ ಮನುಷ್ಯ ಸ್ವಾರ್ಥಕೇಂದ್ರಿತನಾಗಿ ಎಲ್ಲವನ್ನೂ ತನ್ನ ಭೋಗಕ್ಕೆ ಬಳಸಿಕೊಳ್ಳಲು ಪ್ರಾರಂಭಿಸಿದ. ಪರಿಸರವನ್ನು ನಿರ್ಲಕ್ಷಿಸಿದ. ಸುತ್ತಲಿನ ಜೀವರಾಶಿಗಳನ್ನು ಬಲಿಕೊಡಲು ಹಿಂಜರಿಯಲಿಲ್ಲ. ಪ್ರಕೃತಿಯ ಸಮತೋಲನವನ್ನು ಏರುಪೇರು ಮಾಡಿದ. ಪರಿಣಾಮ ಪ್ರಕೃತಿ ಮುನಿದಳು. ಪ್ರಸನ್ನವದನೆಯಾಗಿದ್ದ ಅವಳು ರಾಕ್ಷಸಿಯಾಗಿ ತನ್ನನ್ನು ರಕ್ಷಿಸಿಕೊಳ್ಳಲು ಜೀವವಿರೋಧಿಯಾದ ಮನುಷ್ಯನಾಶಕ್ಕೆ ಮುಂದಾದಳು. ಹಾಗೆ ನೋಡಿದರೆ ಪ್ರಕೃತಿಯಲ್ಲಿಯೇ ವಿನಾಶವನ್ನು ಎದುರಿಸುವ ಪ್ರತಿರೋಧ ಶಕ್ತಿಯೂ ಇದೆ. ಭೋಗಸುಖ ಪಡೆಯುತ್ತಲೇ ರೋಗದಿಂದ ಪಾರಾಗುವ ಉಪಾಯವನ್ನು ಪ್ರಕೃತಿ ನಮಗೆ ನೀಡಿದೆ. ಅದನ್ನು ನಾವು ಅರ್ಥಮಾಡಿಕೊಳ್ಳಬೇಕಷ್ಟೆ! ನಮ್ಮ ಆಹಾರ ಪದ್ಧತಿಯನ್ನೇ ಗಮನಿಸಿ. ಕೆಲವು ಆಹಾರ ಪದಾರ್ಥಗಳು ನಾಲಗೆಗೆ ರುಚಿ. ಆದರೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಮತ್ತೆ ಕೆಲವು ನಾಲಗೆಗೆ ಅಷ್ಟು ಹಿತವಲ್ಲ, ನಮ್ಮ ಆರೋಗ್ಯವನ್ನು ಕಾಪಾಡುತ್ತವೆ. ನಮಗೆ ಇದರ ಅರಿವಿದ್ದು ಸಮತೋಲನ ಕಾಪಾಡಿಕೊಂಡರೆ ಜೀವನ ಸಹನೀಯವಾಗುತ್ತದೆ. ಯಾವುದು ಅತಿಯಾದರೂ ಅಪಾಯಕ್ಕೆ ಆಹ್ವಾನ. ಯಾವುದೇ ವ್ಯವಸ್ಥೆಯಲ್ಲಿಯೂ ಪ್ರತಿರೋಧ ಶಕ್ತಿ ಕುಂದಿದಾಗ ಅದು ಸರ್ವಾಧಿಕಾರಕ್ಕೆ ಅವಕಾಶ ಮಾಡಿಕೊಡುತ್ತದೆ. ಈಗ ಜಗತ್ತಿನಲ್ಲಿ ಆಗಿರುವುದೂ ಅದೇ! ಒಂದು ವೈರಾಣು ಸರ್ವಾಧಿಕಾರಿಯ ರೀತಿಯಲ್ಲಿ ಜಗತ್ತಿನ ಮೇಲೆ ಆಕ್ರಮಣ ಮಾಡುತ್ತಿದೆ. ಎಲ್ಲರೂ ಅಸಹಾಯಕರಾಗಿ ಜೀವಭಯದಿಂದ ಮನೆಯೊಳಗೆ ಅಡಗಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ಮೂರನೆಯ ಮಹಾಯುದ್ಧಕ್ಕೆ ಹೋಲಿಸಲಾಗುತ್ತಿದೆ. ಈ ಯುದ್ಧ ಯಾರ ಮೇಲೆ? ಇದು ಪ್ರಕೃತಿ ಹೂಡಿದ ಯುದ್ಧವೇ?

    ಆಧುನಿಕ ಜೀವನಶೈಲಿ ನಮ್ಮ ಸಹಜ ಶಕ್ತಿಯನ್ನು ಕುಂದಿಸುತ್ತಿರುವ ಬಗ್ಗೆ ವಿಜ್ಞಾನಿಗಳು ಮತ್ತೆ ಮತ್ತೆ ಎಚ್ಚರಿಸುತ್ತಿದ್ದಾರೆ. ನಮ್ಮೊಳಗೇ ಇರುವ ರಕ್ಷಕ ಕಣಗಳನ್ನು ನಾವು ಕುಂದಿಸಿಕೊಳ್ಳುತ್ತಿರುವ ಬಗ್ಗೆ ತಿಳಿಯಹೇಳುತ್ತಿದ್ದಾರೆ. ಇದಕ್ಕೆಲ್ಲ ನಮ್ಮ ಭೋಗಸಂಸ್ಕೃತಿಯೇ ಕಾರಣ ಎಂಬುದನ್ನು ಮನಂಬುಗುವಂತೆ ವಿವರಿಸುತ್ತಿದ್ದಾರೆ. ನಮ್ಮ ಸಂವೇದನಾಶೀಲ ಮನಸ್ಸುಗಳೂ ಈ ಬಗ್ಗೆ ಆತಂಕ ವ್ಯಕ್ತಪಡಿಸಿರುವುದುಂಟು. ‘ಅತಿಭೋಗವದು ರೋಗ, ಕೊಲ್ಲುವುದು ಬೇಗ/ ಪುರಗಳಿಂದೈತಂದಿಹುದು ಹಳ್ಳಿಗೀಗ/ಸಾಮಾನ್ಯ ಜೀವನವು ಪರಮ ಸುಧೆಯಂತೆ/ ಮಿತಿಮೀರಿದತಿಭೋಗ ಘೊರವಿಷದಂತೆ/ ದೇಶಗಳು ಹಾಳಾದುದತಿಭೋಗದಿಂದ/ ನೀತಿನಾಶವು ಕೀರ್ತಿನಾಶವದ ರಿಂದ’ (ಕುವೆಂಪು). ಆದರೆ ಆಧುನಿಕ ಮನಸ್ಸುಗಳು ಭೋಗಸುಖಕ್ಕೆ ಮಿತಿಮೀರಿ ಮನ ‘ಸೋತಿವೆ’.

    ನಮ್ಮ ಕಾಲದಲ್ಲಾದ ಸಣ್ಣ ಪಲ್ಲಟವೊಂದನ್ನು ನಾನಿಲ್ಲಿ ನಿಮ್ಮ ಗಮನಕ್ಕೆ ತರುತ್ತಿದ್ದೇನೆ. ಇದು ಎಲ್ಲರ ಮನೆಯ ಕತೆಯೇ! ನಾವು ಚಿಕ್ಕವರಿದ್ದಾಗ ಸಾಮಾನ್ಯವಾಗಿ ಚಾಪೆಯ ಮೇಲೆ ಮಲಗುತ್ತಿದ್ದೆವು. ಕೆಲವು ಮನೆಗಳಲ್ಲಿ ಸುತ್ತಿಡುವ ಹಾಸಿಗೆಯಿತ್ತು. ಬೆಳಿಗ್ಗೆ ಎದ್ದ ತಕ್ಷಣ ಹಾಸಿಗೆಯನ್ನು ಸುತ್ತಿ ಒಂದೆಡೆ ಇಡುತ್ತಿದ್ದರು. ಯಾರ ಮನೆಯಲ್ಲಿಯಾದರೂ ಹಗಲಿನಲ್ಲಿ ಹಾಸಿಗೆ ಹಾಸಿದೆಯೆಂದರೆ ಯಾರಿಗೋ ಹುಷಾರಿಲ್ಲ ಎಂಬುದು ನಿಶ್ಚಿತ. ನಮ್ಮ ಅಮ್ಮ ಮಧ್ಯಾಹ್ನ ವಿಶ್ರಾಂತಿಗಾಗಿ ಕೆಲಹೊತ್ತು ತೋಳನ್ನೇ ತಲೆದಿಂಬಾಗಿ ಮಾಡಿಕೊಂಡು ನೆಲದ ಮೇಲೆಯೇ ಉರುಳಿಕೊಳ್ಳುತ್ತಿದ್ದರು. ಈಗ ಬಹುಮಟ್ಟಿಗೆ ಎಲ್ಲರ ಮನೆಯಲ್ಲೂ ಮಂಚ, ಅದರ ಮೇಲೆ ಮಡಿಸಲಾಗದ ಹಾಸಿಗೆ; ಸದಾ ಹಾಸಿರುತ್ತದೆ. ನಮ್ಮ ಜನ ಸದಾ ಅದರ ಮೇಲೆ ಬಿದ್ದುಕೊಂಡಿರುತ್ತಾರೆ. ಟಿವಿ ನೋಡುವುದು, ಓದುವುದು, ಹರಟೆ ಹೊಡೆಯುವುದು, ಅಷ್ಟೇಕೆ, ಕೆಲವೊಮ್ಮೆ ಊಟವೂ ಹಾಸಿಗೆಯ ಮೇಲೆಯೇ! ಇದು ನಮ್ಮ ತಪ್ಪಲ್ಲ. ಹೀಗೆ ಸದಾ ಬಿದ್ದುಕೊಂಡಿರುವ ಒಂದು ಕ್ರಮವನ್ನು ನಮ್ಮ ಜೀವನಶೈಲಿಯೇ ರೂಪಿಸಿದೆ. ‘ಕುದುರೆ ಕಂಡಾಗ ಕಾಲು ನೋಯುತ್ತದೆ’ ಎಂಬಂತೆ ಹಾಸಿಗೆ ಕಂಡಾಗ ಮಲಗಿಕೊಳ್ಳಲು ಮನಸ್ಸು ಬಯಸುತ್ತದೆ. ಸೋಮಾರಿತನ ನಮ್ಮನ್ನು ಸದ್ದಿಲ್ಲದೆ ಆವರಿಸಿಕೊಳ್ಳುತ್ತಿದೆ.

    ಗೊರೂರು ಹೇಳುತ್ತಿದ್ದರು: ತಿನ್ನುವುದು ಸಮಸ್ಯೆಯಲ್ಲಪ್ಪ, ತಿಂದದ್ದನ್ನು ಅರಗಿಸಿ ಕೊಳ್ಳುವ ಶಕ್ತಿ ಬೇಕು. ಈಗ ಜನ ತಿನ್ನುವುದನ್ನು ಕಸುಬಾಗಿಸಿಕೊಂಡಿದ್ದಾರೆ. ಬದುಕಲು ತಿನ್ನುವುದು ಸಹಜ, ಅನಿವಾರ್ಯ. ಆದರೆ ತಿನ್ನಲಿಕ್ಕಾಗಿಯೇ ಬದುಕಿದ್ದೇನೆ ಎಂಬಂತೆ ಜಗತ್ತು ವರ್ತಿಸುತ್ತಿದೆ. ಆದರೆ ತಿಂದದ್ದನ್ನು ಅರಗಿಸಿಕೊಳ್ಳುವ ಶಕ್ತಿಯನ್ನು ಕಳೆದುಕೊಳ್ಳುತ್ತಿದೆ. ಬದುಕಿನ ಕ್ರಮವೇ ಹಾಗೆ ಮಾಡುತ್ತಿದೆ. ಎಲ್ಲದಕ್ಕೂ ರಿಮೋಟ್. ಕುಳಿತಲ್ಲಿಯೇ ಎಲ್ಲವೂ! ಟಿವಿ ನೋಡಲು ಮಾತ್ರವಲ್ಲ, ಈಗ ಮನೆಯ ಬಾಗಿಲು ತೆಗೆದು ಮುಚ್ಚಲು, ಲೈಟ್ ಸ್ವಿಚ್ ಹಾಕಲು, ಯಾವುದೇ ವಸ್ತು ನಮಗೆ ಬೇಕಾದರೂ ಕುಳಿತ ಕಡೆಯೇ ವ್ಯವಹರಿಸುವ ತಂತ್ರಜ್ಞಾನದ ವ್ಯವಸ್ಥೆ. ಇದು ಚಂದ ಸರಿ. ಆದರೆ ಈ ರೀತಿಯ ವ್ಯವಸ್ಥೆ ನಮ್ಮನ್ನು ಎಲ್ಲಿಗೆ ಕರೆದೊಯ್ಯುತ್ತಿದೆ?

    ನಮ್ಮ ಶಿಕ್ಷಣದಲ್ಲಿಯೂ ವಿಕಲಾಂಗ ವ್ಯವಸ್ಥೆ. ‘ತಲೆ’ಗೆ ಮಾತ್ರ ಪ್ರಾಶಸ್ತ್ಯ. ಉಳಿದೆಲ್ಲ ಅಂಗಗಳೂ ನಿಷ್ಕಿ›ಯ. ಚಿಕ್ಕಂದಿನಲ್ಲಿ ನಮಗೆ ಪಾಠದ ಜೊತೆಗೆ ಆಟವೂ ಇರುತ್ತಿತ್ತು. ಈಗ? ಬಂದಿರುವ ಆಪತ್ತಿಗೆ ಯಾರು ಕಾರಣ? ನಾವೇ ಅಲ್ಲವೇ? ಶುದ್ಧ ಗಾಳಿ ಸಿಗದ ಹಾಗೆ ಪರಿಸರ ನಾಶ ಮಾಡುತ್ತಿದ್ದೇವೆ. ನಗರದಲ್ಲಿನ ವಾಯುಮಾಲಿನ್ಯ ಊಹೆಗೂ ನಿಲುಕದ್ದು. ಕೆಲದಿನಗಳಲ್ಲಿಯೇ ನಾವೆಲ್ಲರೂ ಆಮ್ಲಜನಕದ ಸಿಲಿಂಡರ್ ಹೊತ್ತುಕೊಂಡು ಬದುಕಬೇಕಾದ ಸ್ಥಿತಿ ಬರಬಹುದು, ಬರುತ್ತದೆ. ಈಗಾಗಲೇ ಶುದ್ಧ ನೀರು ಸಿಗುತ್ತಿಲ್ಲ. ನಮ್ಮ ಎಲ್ಲ ನದಿಗಳೂ ಮನುಷ್ಯನ ಭೋಗಲಾಲಸೆಯಿಂದಾಗಿ ರಾಸಾಯನಿಕಗಳಿಂದ ಮಲಿನವಾಗಿವೆ. ನಮ್ಮ ಮನೆಯ ಬಳಿಯ ವೃಷಭಾವತಿ ನದಿ ಇಂದು ಕೊಳಚೆ ನೀರಿನ ದೊಡ್ಡ ಮೋರಿಯಾಗಿರುವುದೇ ಇದಕ್ಕೆ ಸಾಕ್ಷಿ. ಕೆರೆಕುಂಟೆಗಳನ್ನು ವ್ಯವಸ್ಥಿತವಾಗಿ ಮುಚ್ಚುತ್ತಿದ್ದೇವೆ. ಅಂತರ್ಜಲಕ್ಕೂ ಕನ್ನಹಾಕಿ ಬತ್ತಿಸುತ್ತಿದ್ದೇವೆ. ಇನ್ನು ಯಾವ ರೀತಿಯ ನಾಶ ಬೇಕು? ನಮ್ಮನ್ನು ಕೊಲ್ಲಲು ವೈರಾಣುಗಳೇ ಬೇಕೆ?

    ಒಂದು ಕಡೆ ಪರಿಸರ ನಾಶ. ಮತ್ತೊಂದು ಕಡೆ ಕುಳಿತು ತಿನ್ನುವ ಚಟ. ಶ್ರಮಸಂಸ್ಕೃತಿಯ ಬಗ್ಗೆ ಅವಹೇಳನ. ಅಭಿವೃದ್ಧಿಯ ಹೆಸರಿನಲ್ಲಿ ಮನುಷ್ಯಕೇಂದ್ರಿತ ಸಮಾಜ ನಿರ್ಮಾಣ ಮಾಡುವ ಸನ್ನಿವೇಶ ನಿರ್ಮಾಣ; ಎಲ್ಲ ಬಗೆಯ ಜೀವಿಗಳ ನಾಶ.

    ಸೇವಾಕ್ಷೇತ್ರಗಳಾಗಿದ್ದ ಆರೋಗ್ಯ ಹಾಗೂ ಶಿಕ್ಷಣವನ್ನು ವ್ಯಾಪಾರೀಕರಣ ಮಾಡಿ, ಉದ್ಯಮಗಳಾಗಿ ರೂಪಾಂತರಿಸಿ, ಜನಸಾಮಾನ್ಯರಿಗೆ ಉತ್ತಮ ಸೌಲಭ್ಯ ಸಿಗದಂತೆ ಮಾಡಿದ ನಮ್ಮ ಜನಪ್ರತಿನಿಧಿಗಳು ಈಗ ಜನರು ತಮ್ಮ ಪ್ರಾಣ ಕಾಪಾಡಿಕೊಳ್ಳಬೇಕೆಂದು, ಜನರಿಗೆ ಬುದ್ಧಿಯೇ ಇಲ್ಲವೆಂದು ಬಡಬಡಿಸುತ್ತಿದ್ದಾರೆ. ಈಗ ಆರೋಗ್ಯ ಕ್ಷೇತ್ರದ ಬಗ್ಗೆ ಕಾಳಜಿ ಮೂಡಿತೇ? ಈ ಕಾಳಜಿ ಮೂಡಿಸಲೂ ಪ್ರಕೃತಿಯೇ ಬೇಕಾಯಿತೇ? ಮನುಷ್ಯ ಪ್ರಕೃತಿಯ ಮೇಲೆ ಇನ್ನಿಲ್ಲದ ರೀತಿಯಲ್ಲಿ ಹಲ್ಲೆ ಮಾಡುತ್ತಿದ್ದಾನೆ. ಕ್ಷಮಯಾಧರಿತ್ರಿಯಾದ ಅವಳು ಎಲ್ಲವನ್ನೂ ತಾಳಿಕೊಂಡು ಮನುಷ್ಯನನ್ನು ಸಲಹುತ್ತಿದ್ದಾಳೆ. ಆದರೆ ಮನುಕುಲದ ನಾಶಕ್ಕೇ ತನ್ನನ್ನು ಅಣಿಮಾಡಿಕೊಳ್ಳುತ್ತಿರುವ ಮನುಷ್ಯನನ್ನು ಎಚ್ಚರಿಸಲು ಬೇರೆ ದಾರಿಯಿಲ್ಲದೆ ಹೀಗೆ ಮುನಿದಿದ್ದಾಳೆಯೇ?

    ಕರೊನಾ ಮನುಕುಲಕ್ಕೆ ಎಚ್ಚರಿಕೆಯ ಗಂಟೆ. ಈಗ ಕರೊನಾ, ನಂತರ ಮತ್ತೊಂದು. ಮನುಷ್ಯ ತನ್ನ ಬದುಕಿನ ಆದ್ಯತೆಗಳನ್ನು ಬದಲಾಯಿಸಿಕೊಳ್ಳದಿದ್ದರೆ ಅಪಾಯ ತಪ್ಪಿದ್ದಲ್ಲ. ನಮ್ಮ ಜೀವನ ಕ್ರಮದಲ್ಲಿಯೇ ಇರುವ ದೋಷಗಳನ್ನು ಆತ್ಮಾವಲೋಕನ ಮಾಡಿಕೊಂಡು ತಿದ್ದಿಕೊಳ್ಳಲು ಇದು ಸಕಾಲ.

    ವಿಶ್ವಸಂಸ್ಥೆಯ ಪರಿಸರಕ್ಕೆ ಸಂಬಂಧಿಸಿದ ವರದಿಯೊಂದು ಹೀಗೆ ಹೇಳುತ್ತದೆ: ‘ನಮ್ಮ ಜನಪದರು ಸಾವಿರಾರು ವರ್ಷಗಳಿಂದ ತಮ್ಮ ಪರಿಸರವನ್ನು ಕುರಿತ ಅರಿವನ್ನು ತಮ್ಮ ಸ್ಥಳೀಯ ಭಾಷೆಗಳಲ್ಲಿ ಬಿಂಬಿಸಿದ್ದಾರೆ. ಜೀವವೈವಿಧ್ಯದ ಬಗ್ಗೆ, ಅದರ ರಕ್ಷಣೆಯ ಬಗ್ಗೆ, ಪೋಷಣೆಯ ಬಗ್ಗೆ ಜನಪದರ ಭಾಷೆಯಲ್ಲಿ ಅಪಾರ ಜ್ಞಾನಸಂಪತ್ತು ಅಡಗಿದೆ’. ಆಧುನಿಕ ಜ್ಞಾನಿಗಳು ನಮ್ಮ ಜನಪದರು ಪ್ರಕೃತಿಯೊಡನೆ ಸಹಬಾಳ್ವೆ ನಡೆಸಲು ಬೇಕಾದ ಜೀವನ ವಿಧಾನವನ್ನು ಕಂಡುಕೊಂಡ ಬಗೆಯನ್ನು ಮರುಪರಿಶೀಲಿಸಿದರೆ ಹೊಸಹೊಳಹುಗಳು ಸಾಧ್ಯವಾಗಬಹುದೇನೋ! ಅಂದ ಮಾತ್ರಕ್ಕೆ ನಾವು ಹಿಂದೆ ಹೋಗಬೇಕೆಂಬ ಅರ್ಥವಲ್ಲ, ಹಿಂದೆ ತಿರುಗಿ ಜನಪದರ ಜೀವನಜ್ಞಾನವನ್ನು ನೋಡುವುದು ಉಪಯುಕ್ತವಾಗಬಲ್ಲುದು ಎಂಬುದನ್ನು ನಾವು ಮರೆಯಬಾರದು. ‘ಹಿಂದಣ ಹೆಜ್ಜೆಯ ನೋಡಿ ಕಂಡಲ್ಲದೇ ನಿಂದ ಹೆಜ್ಜೆಯನರಿಯಲಾಗದು’. ಮತ್ತೆ ಅಲ್ಲಮನ ಮಾತು ನೆನಪಾಗುತ್ತಿದೆ.

    (ಲೇಖಕರು ಖ್ಯಾತ ವಿಮರ್ಶಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts