More

    ಉಪ್ಪಿನಕುದ್ರುವಿಗೆ ಉಪ್ಪು ನೀರು ಹಾವಳಿ

    ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ

    ಬೈಂದೂರು ತಾಲೂಕಿನ ತಲ್ಲೂರು ಗ್ರಾಮದ ಉಪ್ಪಿನಕುದ್ರು ಪ್ರದೇಶದಲ್ಲಿ ಮಳೆಗಾಲದಲ್ಲಿ ನೆರೆ ನೀರಿನ ಸಮಸ್ಯೆಯಾದರೆ ಬೇಸಿಗೆಯಲ್ಲಿ ಹನಿ ನೀರಿಗೂ ತತ್ವಾರ. ಈ ಭಾಗದಲ್ಲಿ ಎಲ್ಲರ ಮನೆಯಲ್ಲೂ ಬಾವಿಯಿದ್ದರೂ ಉಪ್ಪು ನೀರಿನ ಸಮಸ್ಯೆಯಿಂದ ಕುಡಿಯಲು ಯೋಗ್ಯ ನೀರು ಸಿಗುತ್ತಿಲ್ಲ. ಉಪ್ಪುನೀರು ತಡೆಗಾಗಿ ಮಯ್ಯರಕೇರಿಯಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸಿದರೂ ನಿರ್ವಹಣೆ ಕೊರತೆಯಿಂದ ನಿಷ್ಪ್ರಯೋಜಕವಾಗಿದೆ. ಕೃಷಿ ಭೂಮಿ ಫಲವತ್ತತೆ ಕಳೆದುಕೊಂಡು ಕೈಬಿಡುವ ಹಂತಕ್ಕೆ ಬಂದಿದೆ.

    ಉಪ್ಪಿನಕುದ್ರುವಿನಲ್ಲಿ ಒಂದು ಸಾವಿರ ಮನೆ, ನಾಲ್ಕು ಸಾವಿರ ಜನ ವಸತಿ ಪ್ರದೇಶವಿದ್ದು, ಭತ್ತ ಪ್ರಮುಖ ಬೆಳೆಯಾಗಿದೆ. ಭತ್ತದ ಕಟಾವು ನಂತರ ಉದ್ದು, ನೆಲಗಡಲೆ ಬೆಳೆಯುತ್ತಾರೆ. ವಾಣಿಜ್ಯ ಕೃಷಿಯಾಗಿ ತೆಂಗು ಬೆಳೆಯುತ್ತಿದ್ದು, ಸಿಗಡಿ ಕೃಷಿಕರೂ ಇದ್ದಾರೆ. ಆದರೆ ಉಪ್ಪು ನೀರು ಸಮಸ್ಯೆಯಿಂದ ಕೃಷಿ ಮಾಡಲು ಭಾರಿ ತೊಂದರೆಯಾಗುತ್ತಿದೆ. ಕಿಂಡಿ ಅಣೆಕಟ್ಟಿನಲ್ಲಿ ಹೊರಹೋಗುವ ಹೆಚ್ಚುವರಿ ನೀರನ್ನು ಕಾಲುವೆ ಮೂಲಕ ಉಪ್ಪಿನಕುದ್ರು ಶ್ರೀ ವಿಷ್ಣು ದೇವಸ್ಥಾನದ ಸಮೀಪ ಕೆರೆಗೆ ಹಾಯಿಸುವುದರಿಂದ ನೀರಿನ ಸಮಸ್ಯೆಗೆ ಪರಿಹಾರ ಪಡೆಯಲು ಸಾಧ್ಯವಿದೆ.

    ಉಪ್ಪಿನಕುದ್ರು ಪ್ರದೇಶದ ನೀರಿನ ಸಮಸ್ಯೆ ಇಂದು ನಿನ್ನೆಯದಲ್ಲ. ಶುದ್ಧ ಕುಡಿಯುವ ನೀರು ಪೂರೈಸಲು ಗ್ರಾಮಪಂಚಾಯಿತಿ ಎರಡು ದಿನಕ್ಕೊಮ್ಮೆ ನಾಲ್ಕಾರು ಕೊಡ ನೀರು ಕೊಟ್ಟು ಕೈತೊಳೆದುಕೊಳ್ಳುತ್ತದೆ. ಕಿಂಡಿ ಅಣೆಕಟ್ಟು ಗುತ್ತಿಗೆದಾರರ ಜೇಬು ತುಂಬಲು ದಾರಿ ಮಾಡಿಕೊಡುತ್ತಿದ್ದು, ಕಳೆದ ಬಾರಿ ನಾಲ್ಕು ಕಿಂಡಿಗೆ ಹಲಗೆ ಹಾಕಿ ಎರಡು ಲೋಡ್ ಮಣ್ಣು ಹಾಕಿದ್ದಕ್ಕೆ 2.70 ಲಕ್ಷ ರೂ. ಅನುದಾನ ಬಳಕೆ ಮಾಡಲಾಗಿದೆ. ಸಮಯಕ್ಕೆ ಸರಿಯಾಗಿ ಕಿಂಡಿ ಅಣೆಕಟ್ಟು ಹಲಗೆ ಹಾಕಬೇಕು. ಕುಡಿಯುವ ನೀರಿನ ಸಮಸ್ಯೆ ಪರಿಹರಿಸಬೇಕು ಇಲ್ಲದಿದ್ದರೆ ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕರಿಸುತ್ತೇವೆ.
    ಸಂತೋಷ ಐತಾಳ, ಕೃಷಿಕ, ಉಪ್ಪಿಕುದ್ರು ಮಯ್ಯರಕೇರಿ

    ಉಪ್ಪುನೀರು ನುಗ್ಗಿ ಕೃಷಿ ಕೈಬಿಡುವ ಸ್ಥಿತಿಗೆ ತಲುಪಿದೆ. ಬೇಸಿಗೆಯಲ್ಲಿ ಯಾವ ಬಾವಿಯ ನೀರೂ ಶುದ್ಧವಾಗಿರುವುದಿಲ್ಲ. ಗ್ರಾಪಂ ಕೊಡುವ ನೀರು ಯಾವುದಕ್ಕೂ ಸಾಕಾಗುವುದಿಲ್ಲ. ಉಪ್ಪಿಕುದ್ರು ಪ್ರದೇಶಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ ಅಗತ್ಯವಿದೆ. ಕಿಂಡಿ ಅಣೆಕಟ್ಟು ನಿರ್ವಹಣೆ ಕೊರತೆಯಿಂದ ಕೃಷಿ ಹಾಗೂ ಬಾವಿನೀರು ಉಪ್ಪಾಗುತ್ತಿದೆ. ಇದೇ ರೀತಿ ಕೃಷಿ ಭೂಮಿ ಸಾರ ಕಳೆದುಕೊಂಡು ಬರಡಾದರೆ ನಾವು ಇಲ್ಲಿಂದ ಗುಳೆ ಹೊರಡಬೇಕಾಗುತ್ತದೆ.
    ಗಿರಿಜಾ ಮಯ್ಯ, ಹಿರಿಯ ಕೃಷಿ ಕುಟುಂಬದ ಮಹಿಳೆ, ಮಯ್ಯರಬೆಟ್ಟು ಉಪ್ಪಿನಕುದ್ರು

    ಉಪ್ಪಿನಕುದ್ರು ಮಯ್ಯರ ಕೇರಿ ಕಿಂಡಿ ಅಣೆಕಟ್ಟು ಸಮಸ್ಯೆ ಹಾಗೂ ಹಲಗೆ ಹಾಕದ ಬಗ್ಗೆ ಗ್ರಾಮ ಪಂಚಾಯಿತಿ ಮಾಹಿತಿ ಪಡೆದು ತಕ್ಷಣ ಹಲಗೆ ಹಾಕುವ ವ್ಯವಸ್ಥೆ ಮಾಡಲಾಗುತ್ತದೆ. ಮುಂದೆ ಅಣೆಕಟ್ಟು ನಿರ್ವಹಣೆಯನ್ನು ಕ್ರಮಬದ್ಧವಾಗಿ ಮಾಡಲಾಗುವುದು.
    ನಾಗಲಿಂಗ ಎಚ್., ಸಹಾಯಕ ಇಂಜಿನಿಯರ್, ಸಣ್ಣ ನೀರಾವರಿ ಇಲಾಖೆ, ಬೈಂದೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts