More

    ಪ್ರೇಕ್ಷಕರಿಂದ ಯಕ್ಷಗಾನ ಕಲೆ ಜೀವಂತ

    ಸಾಗರ: ಯಕ್ಷಗಾನ ಮೇಳಗಳು ನಿರಂತರವಾಗಿ ನಡೆಯಲು ಪರದೆಯ ಹಿಂದೆ ಸಾಕಷ್ಟು ಜನ ತೊಡಗಿಕೊಂಡಿದ್ದಾರೆ. ಅಂತವರನ್ನು ಗುರುತಿಸಿ ಗೌರವಿಸುವುದು ಉತ್ತಮ ಸಂಪ್ರದಾಯ ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ. ಎಚ್.ಎಸ್.ಮೋಹನ್ ಹೇಳಿದರು.
    ನೆಹರು ಮೈದಾನದಲ್ಲಿ ಯಕ್ಷ ಸಾಗರ ಶುಕ್ರವಾರ ಏರ್ಪಡಿಸಿದ್ದ ಸಾಲಿಗ್ರಾಮ ಮೇಳದ ಪೌರಾಣಿಕ ಯಕ್ಷರಾತ್ರಿ ಕಾರ್ಯಕ್ರಮದಲ್ಲಿ ಯಕ್ಷ ಸಂಘಟನೆಯ ಮೂಲಕ ಕಲಾರಾಧನೆಗೈದ ರಘುಪತಿ ಭಟ್ ಸಿರಿವಂತೆ, ಹಾಸ್ಯ ಕಲಾವಿದ ಮಹಾಬಲೇಶ್ವರ ಭಟ್ ಕ್ಯಾದಗಿ ಹಾಗೂ ಯುವ ಭಾಗವತ ಸೃಜನ್‌ಗಣೇಶ್ ಹೆಗಡೆ ಗುಂಡೂಮನೆ ಹಾಗೂ ಕಲಾವಿದರನ್ನು ಅಭಿನಂದಿಸಿ ಮಾತನಾಡಿದರು.
    ಪ್ರಸ್ತುತ ಸಂಘಟನೆಯ ಸವಾಲುಗಳ ನಡುವೆಯೂ ಯಕ್ಷಗಾನ ಪ್ರದರ್ಶನ ಹಾಗೂ ಅರ್ಹರಿಗೆ ಸನ್ಮಾನ ಸಲ್ಲುತ್ತಿರುವುದು ಸರಿಯಾದ ಕ್ರಮ. ಪ್ರೇಕ್ಷಕರು ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸಿದ್ದಾರೆ. ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಈ ಕಲೆ ಇಂದಿಗೂ ಯಶಸ್ವಿಯಾಗಿ ಮುನ್ನಡೆದಿದೆ ಎಂದರು.
    ಪ್ರಸಂಗಕರ್ತ ರಮೇಶ್ ಹೆಗಡೆ ಗುಂಡೂಮನೆ ಮಾತನಾಡಿ, ಪ್ರದರ್ಶನವೊಂದರ ಹಿಂದೆ ಸಂಘಟಕರ, ಕಲಾವಿದರ ಪರಿಶ್ರಮ ಇರಲಿದೆ. ಸಾಗರದ ನೆಲ ಕಲೆ ಮತ್ತು ಕಲಾವಿದರನ್ನು ಸದಾ ಪ್ರೋತ್ಸಾಹಿಸುತ್ತ ಬಂದಿದೆ. ಹೀಗಾಗಿಯೆ ಸಾಂಸ್ಕೃತಿಕ ನಗರ ಎನಿಸಿಕೊಳ್ಳುವುದಕ್ಕೆ ಸಾಧ್ಯವಾಗಿದೆ ಎಂದು ಹೇಳಿದರು.
    ಯಕ್ಷ ಸಾಗರದ ಮುಖ್ಯಸ್ಥ ವಿಜಯೇಂದ್ರ ಹೆಗಡೆ, ಅಮೃತ ಗೌಡ, ಸುಪ್ರೀತಾ ಹೆಗಡೆ, ಗಣೇಶ್ ಇದ್ದರು. ನಂತರ ಉತ್ತರ, ಕೀಚಕ ಮತ್ತು ಬರ್ಬರೀಕ ಎನ್ನುವ ಪೌರಾಣಿಕ ಪ್ರಸಂಗಗಳ ಪ್ರದರ್ಶನ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts