More

    ಸ್ತ್ರೀಯರಿಗೆ 55 ಕಡೆಗಳಲ್ಲಿ ಸಖಿ ಮತಗಟ್ಟೆ

    ಸದೇಶ್ ಕಾರ್ಮಾಡ್ ಮೈಸೂರು
    ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಮಹಿಳಾ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರೂ ಮಹಿಳಾ ಮತದಾರರು ಮತಗಟ್ಟೆಗೆ ಆಗಮಿಸುವುದು ಮಾತ್ರ ಕಡಿಮೆ. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಮತದಾರರನ್ನು ಮತಗಟ್ಟೆಯ ಕಡೆಗೆ ಸೆಳೆಯಲು ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯಿಂದ ಜಿಲ್ಲೆಯಲ್ಲಿ 55 ಸಖಿ ಮತಗಟ್ಟೆಗಳನ್ನು ತೆರೆಯಲಾಗಿದೆ.

    ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕಡೆಗಳಲ್ಲಿ ಸಖಿ ಮತಗಟ್ಟೆ ತೆರೆದು ಮತಗಟ್ಟೆಯನ್ನು ಗುಲಾಬಿ ಬಣ್ಣದಿಂದ ಶೃಂಗರಿಸಲಾಗಿದ್ದು, ಮಹಿಳಾ ಮತದಾರರನ್ನು ಸ್ವಾಗತಿಸಲು ಸಜ್ಜುಗೊಂಡಿದೆ. ಈ ಕ್ಷೇತ್ರದಲ್ಲಿ ಮಹಿಳಾ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರೂ ಮಹಿಳಾ ಮತದಾರರು ಮತಗಟ್ಟೆಗೆ ಬಂದು ಮತ ಚಲಾಯಿಸಲು ಹೆಚ್ಚಿನ ಆಸಕ್ತಿ ತೋರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರನ್ನು ಮತಗಟ್ಟೆಯತ್ತ ಸೆಳೆಯಲು ಜಿಲ್ಲಾಡಳಿತ ಇಂತಹದೊಂದು ವಿಶೇಷ ಪ್ರಯತ್ನ ಕೈಗೊಂಡಿದೆ. ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಈ ವಿಶೇಷ ಪ್ರಯತ್ನಕ್ಕೆ ಮಹಿಳೆಯರು ಈ ಬಾರಿ ಯಾವ ರೀತಿ ಸ್ಪಂದಿಸುತ್ತಾರೆ ಎಂದು ಕಾದು ನೋಡಬೇಕಾಗಿದೆ.

    ಕ್ಷೇತ್ರದಲ್ಲಿ 10,26,324 ಪುರುಷರು, 10,65,714 ಮಹಿಳೆಯರು, 184 ಇತರೆ ಮತದಾರರು ಸೇರಿದಂತೆ ಒಟ್ಟು 20,92,222 ಮತದಾರರು ಇದ್ದಾರೆ. ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಮಡಿಕೇರಿ, ವಿರಾಜಪೇಟೆ, ಪಿರಿಯಾಪಟ್ಟಣ, ಹುಣಸೂರು, ಚಾಮುಂಡೇಶ್ವರಿ, ಕೃಷ್ಣರಾಜ, ಚಾಮರಾಜ ಹಾಗೂ ನರಸಿಂಹರಾಜ ವಿಧಾನಸಭಾ ಕ್ಷೇತ್ರಗಳು ಒಳಗೊಂಡಿದ್ದು, ಈ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಮಹಿಳಾ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಆದರೆ, 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಲು ಆಸಕ್ತಿ ತೋರಲಿಲ್ಲ. ಕಳೆದ ಬಾರಿ ಶೇ 70.01 ರಷ್ಟು ಪುರುಷರು, ಶೇ.67.71 ರಷ್ಟು ಮಹಿಳೆಯರು ಮತದಾನ ಮಾಡಿದ್ದರು. 2019ರಲ್ಲಿ 9.44 ಲಕ್ಷ ಪುರುಷ ಮತದಾರರಲ್ಲಿ 6.64 ಲಕ್ಷ ಮತದಾರರು, 9.49 ಲಕ್ಷ ಮಹಿಳಾ ಮತದಾರರಲ್ಲಿ 6.47 ಲಕ್ಷ ಮತದಾರರು ಮತದಾನ ಮಾಡಿದ್ದರು. ಕಳೆದ ಬಾರಿಯೂ ಕ್ಷೇತ್ರದಲ್ಲಿ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಮತಗಟ್ಟೆಗೆ ಆಗಮಿಸಿ ಮತಚಲಾಯಿಸಲು ಪುರುಷರು ಹೆಚ್ಚಿನ ಆಸಕ್ತಿ ತೋರಿದ್ದು ಕಂಡು ಬಂತು.

    ಎಲ್ಲಿಲ್ಲಿ ಸಖಿ ಮತಗಟ್ಟೆ?:

    ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 5 ಸಖಿ ಮತಗಟ್ಟೆಗಳನ್ನು ತೆರೆಯಲಾಗಿದೆ. ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಣಗಾಲ್, ಬೆಟ್ಟದಪುರ, ಕಿತ್ತೂರು, ರಾವಂದೂರು, ಆಲನಹಳ್ಳಿ, ಕೆ.ಆರ್.ನಗರ ಕ್ಷೇತ್ರ ವ್ಯಾಪ್ತಿಯಲ್ಲಿ ಕೆ.ಆರ್.ನಗರ ಪುರಸಭೆಯ ಪಶ್ಚಿಮ ಭಾಗ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಧುವನಹಳ್ಳಿ, ಕಂಚಿನಕೆರೆ, ಹರದನಹಳ್ಳಿ, ಮಿರ್ಲೆ ಪ್ರೌಢಶಾಲೆ, ಹುಣಸೂರು ಕ್ಷೇತ್ರ ವ್ಯಾಪ್ತಿಯ ಸೋಮನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಲ್ಕುಣಿಕೆ (ದಕ್ಷಿಣ ಭಾಗ), ಗಾವಡಗೆರೆ ಹಾಗೂ ಕರಿಗೌಡನ ರಸ್ತೆಯ ಶಾಲೆ ಹಾಗೂ ಮನಗನಹಳ್ಳಿಯಲ್ಲಿ ಸಖಿ ಮತಗಟ್ಟೆ ತೆರೆಯಲಾಗಿದೆ.

    ಎಚ್.ಡಿ.ಕೋಟೆ ಕ್ಷೇತ್ರ ವ್ಯಾಪ್ತಿಯಲ್ಲಿ ಎಚ್.ಡಿ.ಕೋಟೆ ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆ, ಲೋಕೋಪಯೋಗಿ ಕಚೇರಿ, ಅಂತರಸಂತೆ ಹಾಗೂ ಕೊಳಗಾಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸರಗೂರಿನ ಜೆಎಸ್‌ಎಸ್ ಹಿರಿಯ ಪ್ರಾಥಮಿಕ ಶಾಲೆ, ನಂಜನಗೂಡು ಕ್ಷೇತ್ರ ವ್ಯಾಪ್ತಿಯಲ್ಲಿ ಕಸುವಿನಹಳ್ಳಿ, ಹಲ್ತಾರೆ, ಶಿರಮಲ್ಲಿ, ಕುರಹಟ್ಟಿ, ನೇರಳೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯಲ್ಲಿ ಬೊಮ್ಮೇನಹಳ್ಳಿ, ಇಲವಾಲ, ರತನಹಳ್ಳಿ, ಬೆಳವಾಡಿ, ಬೋಗಾದಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಗಳನ್ನು ಸಖಿ ಮತಗಟ್ಟೆಯಾಗಿ ಶೃಂಗರಿಸಲಾಗಿದೆ.

    ಕೃಷ್ಣರಾಜ ಕ್ಷೇತ್ರ ವ್ಯಾಪ್ತಿಯಲ್ಲಿ ಶಾರದಾ ವಿಲಾಸ ಕಾಲೇಜು, ದೇವಯ್ಯನಹುಂಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಹರ್ಷಿ ಪಬ್ಲಿಕ್ ಶಾಲೆ, ಜೆಎಸ್‌ಎಸ್ ಸೆಂಟ್ರಲ್ ಸ್ಕೂಲ್, ಚಾಮರಾಜ ಕ್ಷೇತ್ರ ವ್ಯಾಪ್ತಿಯಲ್ಲಿ ಕುವೆಂಪುನಗರ, ಕೈಲಾಸಪುರಂ ಮತ್ತು ಕುಂಬಾರಕೊಪ್ಪಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ನಿವೃತ್ತ ಇಂಜಿನಿಯರ್ ಅಧಿಕಾರಿಗಳ ವರುಣ ನಾಲಾ ವಿಭಾಗ ಕಚೇರಿ, ವಿಜಯನಗರದ ಜೆಎಸ್‌ಎಸ್ ಪ್ರೌಢಶಾಲೆ, ನರಸಿಂಹರಾಜ ಕ್ಷೇತ್ರ ವ್ಯಾಪ್ತಿಯಲ್ಲಿ ರಾಜೀವನಗರ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ, ರಾಜೇಂದ್ರ ನಗರದ ಇನ್‌ಸ್ಟಿಟ್ಯೂಟ್ ಆಫ್ ಎಜುಕೇಷನ್ ಹೈಸ್ಕೂಲ್, ಉದಯಗಿರಿಯ ಫಾರೂಕಿಯಾ ಶಿಕ್ಷಕರ ತರಬೇತಿ ಸಂಸ್ಥೆ, ಗೌಸಿಯಾನಗರದ ಅಂಡಲಾಸ್ ನರ್ಸರಿ ಮತ್ತು ಪ್ರಾಥಮಿಕ ಶಾಲೆ, ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ವರುಣ ಕ್ಷೇತ್ರ ವ್ಯಾಪ್ತಿಯ ಕುಪ್ಪರವಳ್ಳಿ, ಹೊಸಕೋಟೆ, ಭುಗತಹಳ್ಳಿ, ವರುಣ, ಉತ್ತನಹಳ್ಳಿ ಸರ್ಕಾರಿ ಶಾಲೆ, ತಿ.ನರಸೀಪುರ ತಾಲೂಕಿನ ಬನ್ನೂರಿನ ಲಯನ್ಸ್ ಅಂಗ್ಲ ಮಾಧ್ಯಮ ಶಾಲೆ, ಹನುಮನಾಳು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಮೂಗೂರಿನ ಪದವಿ ಪೂರ್ವ ಕಾಲೇಜು, ತಲಕಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೊಸಹೆಮ್ಮಿಗೆ ಶಾಲೆಯ ಸಖಿ ಮತಗಟ್ಟೆ ತೆರೆಯಲಾಗಿದೆ.

    ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸಬೇಕು ಎಂಬ ಉದ್ದೇಶದಿಂದ ಪ್ರತಿ ಬಾರಿಯಂತೆ ಈ ಬಾರಿಯೂ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ತಲಾ 5 ಸಖಿ ಮತಗಟ್ಟೆಗಳನ್ನು ತೆರೆಯಲಾಗಿದೆ. ಮತಗಟ್ಟೆಯನ್ನು ಗುಲಾಬಿ ಬಣ್ಣ ಬಳಿದು ಶೃಂಗರಿಸಲಾಗಿದೆ. ಅಲ್ಲದೆ, ಮಹಿಳೆಯರ ಪ್ರಾಮುಖ್ಯತೆ ಬಿಂಬಿಸುವ ಚಿತ್ರಗಳನ್ನು ಬಿಡಿಸಲಾಗಿದೆ. ಸಖಿ ಮತಗಟ್ಟೆಗೆ ಚುನಾವಣಾ ಕಾರ್ಯಕ್ಕೆ ಹಾಗೂ ಭದ್ರತೆಗೆ ಮಹಿಳಾ ಅಧಿಕಾರಿ. ಸಿಬ್ಬಂದಿಯನ್ನೇ ನೇಮಿಸಲಾಗುವುದು.
    ಕೆ.ಎಂ. ಗಾಯತ್ರಿ, ಸಿಇಒ,
    ಜಿಲ್ಲಾ ಪಂಚಾಯಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts