More

    ಅಂಧದ ಕಥೆಯಲ್ಲಿ ಚೆಂದದ ತಿರುವು: ‘ಸಖತ್’ ವಿಜಯವಾಣಿ ಸಿನಿಮಾ ವಿಮರ್ಶೆ

    • ಚಿತ್ರ: ಸಖತ್
    • ನಿರ್ದೇಶನ: ಸಿಂಪಲ್ ಸುನಿ
    • ನಿರ್ಮಾಣ: ನಿಶಾ ವೆಂಕಟ್ ಕೋನಂಕಿ
    • ತಾರಾಗಣ: ಗಣೇಶ್, ಸುರಭಿ, ನಿಶ್ವಿಕಾ ನಾಯ್ಡು, ಗಿರಿ, ಸಾಧು ಕೋಕಿಲ, ಶೋಭರಾಜ್, ರಂಗಾಯಣ ರಘು ಮುಂತಾದವರು

    | ಚೇತನ್ ನಾಡಿಗೇರ್

    ಬರೀ ಪ್ರತಿಭೆ ಇದ್ದರೆ ಏನೂ ಪ್ರಯೋಜನವಿಲ್ಲ ಎಂದು ಬಾಲುಗೆ ಬಹಳ ಬೇಗ ಗೊತ್ತಾಗಿಬಿಡುತ್ತದೆ. ಚೆನ್ನಾಗಿ ಹಾಡಿದ ಮಾತ್ರಕ್ಕೆ ರಿಯಾಲಿಟಿ ಶೋನಲ್ಲಿ ಭಾಗವಹಿಸುವ ಅವಕಾಶ ಸಿಗುವುದಿಲ್ಲ ಎಂದು ಸ್ಪಷ್ಟವಾಗುತ್ತದೆ. ಅಂಧನಾಗಿ ಎಂಟ್ರಿ ಕೊಟ್ಟರೆ ಅವಕಾಶ ಸಿಗುವುದಷ್ಟೇ ಅಲ್ಲ, ತನ್ನ ಮೆಚ್ಚಿನ ನಿರೂಪಕಿಯ ಜತೆಗೆ ಕಾಲಕಲೆಯಬಹುದು ಎಂಬ ನಿರ್ಧಾರಕ್ಕೆ ಬಂದು ಅಂಧನಾಗಿ ಬಿಡುತ್ತಾನೆ … ‘ಸಖತ್’ ಟೀಸರ್ ನೋಡಿದರೆ, ಇದು ಹಿಂದಿಯ ‘ಅಂಧಾಧುನ್’ ಚಿತ್ರದ ರಿಮೇಕ್ ಇರಬಹುದಾ? ಎಂಬ ಸಂಶಯವನ್ನು ಚಿತ್ರತಂಡವೇ ಹುಟ್ಟುಹಾಕಿದೆ.ಸಂಶಯವೇ ಬೇಡ, ನಾಯಕ ಅಂಧನಂತೆ ನಟಿಸುತ್ತಾನೆ ಎಂಬ ವಿಷಯ ಬಿಟ್ಟರೆ ಎರಡೂ ಚಿತ್ರಗಳಲ್ಲಿ ಬೇರೆ ಸ್ವಾಮ್ಯತೆಗಳಿಲ್ಲ. ಹಾಗೆ ನೋಡಿದರೆ, ಅದಕ್ಕಿಂತ ಈ ಚಿತ್ರದಲ್ಲೊಂದು ‘ಸಖತ್’ ಆದ ಚಿತ್ರಕಥೆ ಇದೆ.

    ಇಲ್ಲಿ ಅಂಧ ಎಂದು ನಟನೆ ಮಾಡುತ್ತಿರುವ ನಾಯಕನ ಎದುರೇ ಒಂದು ಕೊಲೆಯಾಗುತ್ತದೆ ಮತ್ತು ಅದನ್ನು ಅಪಘಾತ ಎಂದು ಬಿಂಬಿಸಲಾಗುತ್ತದೆ. ಕಣ್ಣಿದ್ದವರು ಅದು ಅಪಘಾತ ಎಂದು ಸಾಕ್ಷ್ಯ ನುಡಿವಾಗ, ಕಣ್ಣಿಲ್ಲದಾತ ಅದು ಸುಳ್ಳು ಎಂದು ನಿರೂಪಿಸಬೇಕಾಗುತ್ತದೆ. ಯಾವ ಕಾರಣಕ್ಕೆ ಮತ್ತು ಹೇಗೆ ನಿರೂಪಿಸುತ್ತಾನೆ ಎಂದು ನೋಡುವುದಕ್ಕಾದರೂ ಚಿತ್ರ ನೋಡಬೇಕು. ಯಾವುದೋ ಒಂದು ಜಾನರ್​ಗೆ ಸೀಮಿತವಾಗುವ ಚಿತ್ರವಲ್ಲ ‘ಸಖತ್’. ಇಲ್ಲಿ ಕಾಮಿಡಿ ಇದೆ, ಥ್ರಿಲ್ ಇದೆ, ಸಾಮಾಜಿಕ ಕಳಕಳಿ, ಪ್ರೀತಿ ಎಲ್ಲವೂ ಇದೆ. ಎಲ್ಲವನ್ನೂ ಬೆರಸಿ ಚಿತ್ರ ಮಾಡುವುದು ಸುಲಭವೇನಲ್ಲ. ಆದರೆ, ಸುನಿಗೆ ಇದು ಹೊಸದೇನಲ್ಲ. ಎಲ್ಲ ವರ್ಗದವರಿಗೂ ಸಲ್ಲುವ, ಎಲ್ಲರಿಗೂ ಇಷ್ಟವಾಗುವಂತಹ ಚಿತ್ರಗಳನ್ನು ಮಾಡುವ ಪ್ರಯತ್ನ ಸುನಿ ಮಾಡುತ್ತಲೇ ಇರುತ್ತಾರೆ ಮತ್ತು ‘ಸಖತ್’ ಸಹ ಅಂತಹ ಪ್ರಯತ್ನಗಳಲ್ಲೊಂದು.

    ಚಿತ್ರದಲ್ಲಿ ಎಲ್ಲವೂ ಮಿಕ್ಸ್ ಆಗಿರುವುದರಿಂದ, ಏರಿಳಿತಗಳೂ ಹೆಚ್ಚಿವೆ. ಕೆಲವು ದೃಶ್ಯಗಳು ಪ್ರೇಕ್ಷಕರನ್ನು ನಗೆಡಲಲ್ಲಿ ತೇಲಿಸಿದರೆ, ಇನ್ನೂ ಕೆಲವು ಸಪ್ಪೆ ಎಂದನಿಸುತ್ತವೆ. ಆದರೂ ರಿಯಾಲಿಟಿ ಶೋ, ಕೊಲೆ, ಕೋರ್ಟ್, ಒಂದಿಷ್ಟು ಸಾಮಾಜಿಕ ಕಳಕಳಿ … ಇವೆಲ್ಲವನ್ನೂ ಸೇರಿಸಿ ಒಂದು ಚಿತ್ರ ಮಾಡುವುದು ಅಷ್ಟು ಸುಲಭವಲ್ಲ. ಅದರಲ್ಲೂ ಈ ತರಹದ ಚಿತ್ರಗಳು ಬರದೇ ಬಹಳ ದಿನಗಳಾಗಿದ್ದರಿಂದ, ಒಂದು ಚಾನ್ಸ್ ತೆಗೆದುಕೊಳ್ಳುವುದರಲ್ಲಿ ಅಡ್ಡಿ ಇಲ್ಲ. ನಾಯಕನ ಪಾತ್ರದಲ್ಲಿ ಗಣೇಶ್ ಹೊರತುಪಡಿಸಿ ಇನ್ನೊಬ್ಬರನ್ನು ಊಹಿಸಿಕೊಳ್ಳುವುದು ಕಷ್ಟ. ಗಿರಿ, ಧರ್ಮಣ್ಣ, ಸುರಭಿ, ನಿಶ್ವಿಕಾ, ರಂಗಾಯಣ ರಘು, ಶೋಭರಾಜ್ ಎಲ್ಲರೂ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ಜೂಡಾ ಸ್ಯಾಂಡಿ ಸಂಗೀತ ನಿರ್ದೇಶನದ ಮೂರು ಹಾಡುಗಳು ಗುನುಗುವಂತಿವೆ.

    ಮರಣಸ್ವರೂಪಿ ಕೆಎಸ್​ಆರ್​ಟಿಸಿ?!: ಗಂಡ-ಹೆಂಡತಿ-ಮಗ, ಅಪ್ಪ-ಮಗ, ಅಂಗವಿಕಲೆ ಬಳಿಕ ಇಂದು ಯುವಕನೊಬ್ಬನ ಬಲಿ ಪಡೆದ ಬಸ್​..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts