More

    ಮಹಿಳೆ ಮತ್ತು ಸ್ವಾತಂತ್ರ್ಯದ ನಿಜವಾದ ಸ್ವರೂಪ; ಸದ್ಗುರು ಅಂಕಣ

    ಮಹಿಳೆ ಮತ್ತು ಸ್ವಾತಂತ್ರ್ಯದ ನಿಜವಾದ ಸ್ವರೂಪ; ಸದ್ಗುರು ಅಂಕಣ

    ಇದೀಗ, ಅನೇಕ ಮಹಿಳೆಯರು ತಮ್ಮ ಪುರುಷಸಮಾನ ಅಂಶದಿಂದ ಸಮಾಜದಲ್ಲಿ ಸ್ಥಾನವನ್ನು ಕಂಡುಕೊಳ್ಳುತ್ತಿದ್ದಾರೆ. ಆದರೆ ಸಮಸ್ತ ಸ್ತ್ರೀಕುಲಕ್ಕೆ ಇದು ಒಳ್ಳೆಯದಲ್ಲ. ಜಗತ್ತಿನಲ್ಲಿ ಸಮಸ್ತ ಮಾನವ ಕುಲದ ಒಳಿತಾಗಬೇಕೆಂದರೆ, ಈ ಬಗೆಗಿನ ಲಿಂಗ ತಾರತಮ್ಯದ ಉತ್ಪ್ರೇಕ್ಷೆ ಆಗಬಾರದು. ಇದು ಬಹಳ ಮುಖ್ಯ.

    ನಮ್ಮ ದೇಶದಲ್ಲಿ ನಾವಿಂದು ವಿಚಿತ್ರ ಪರಿಸ್ಥಿತಿಯಲ್ಲಿದ್ದೇವೆ. ಭಾರತ ಹಿಂದಿನಿಂದಲೂ ಸ್ತ್ರೀ ಅಂಶವನ್ನು ಪೂಜಿಸುತ್ತಲೇ ಬಂದಿರುವಂಥ ಭೂಮಿ. ನೆಲವನ್ನು ‘ಭೂಮಿತಾಯಿ’ ಎಂದೇ ಕರೆಯುತ್ತೇವೆ, ದೇಶವನ್ನು ಕೂಡ ಸ್ತ್ರೀ ಅಂಶಗಳಿಂದಲೇ ಪರಿಕಲ್ಪಿಸಲಾಗಿದೆ- ಅವಳು ಭಾರತ ಮಾತೆ. ಸ್ತ್ರೀ ಅಂಶವನ್ನು ದೇವಿ ಅಥವಾ ಅಮ್ಮ ಅಥವಾ ಬೇರಾವುದಾದರೂ ಒಂದು ರೂಪದಲ್ಲಿ ಪೂಜಿಸದ ಒಂದು ಹಳ್ಳಿಯೂ ಇಲ್ಲ. ಅದೇ ಸಮಯದಲ್ಲಿ, ಮಹಿಳೆಯರನ್ನು ಎರಡನೇ ದರ್ಜೆಯ ಪ್ರಜೆಗಳಾಗಿ ನೋಡುತ್ತಿರುವುದು ವಿಪರ್ಯಾಸ. ಶಿಶುಹತ್ಯೆ, ಭ್ರೂಣಹತ್ಯೆಯಂಥ ಘಟನೆಗಳು ಸಮಾಜಕ್ಕೆ ಶಾಪವಾಗಿ ಪರಿಣಮಿಸಿವೆ.

    ನಿಜವಾಗಿಯೂ ತೊಂದರೆ ಇರುವುದು ಜನರ ಭಾವನೆಯಲ್ಲಿನ ವ್ಯತ್ಯಾಸದಲ್ಲಿ, ಅಂದರೆ ಇದು ಬಹಳ ಸಮಯದ ನಂತರ ತಾರತಮ್ಯದ ರೂಪ ತಳೆದಿದೆ. ಪ್ರತಿಯೊಂದು ಭಿನ್ನತೆಯನ್ನೂ ತಾರತಮ್ಯವನ್ನಾಗಿ ನೋಡಲಾಗುತ್ತಿದೆ. ಜಾತಿ, ಮತ, ಜನಾಂಗ, ಧರ್ಮದ ಹೆಸರಿನಲ್ಲಿ ಪರಸ್ಪರ ತಾರತಮ್ಯ ಮನೆ ಮಾಡಿದೆ. ಆದರೆ ಲಿಂಗ ತಾರತಮ್ಯ ಇವುಗಳಲ್ಲಿ ಅತ್ಯಂತ ಅಪಾಯಕಾರಿ, ಏಕೆಂದರೆ ಇದನ್ನು ನೀವು ಸರಿಪಡಿಸಲಸಾಧ್ಯ. ಆದ್ದರಿಂದ ಇದು ಕೇವಲ ಪುರುಷರು ಮತ್ತು ಮಹಿಳೆಯರ ಬಗೆಗಿನ ವಿಷಯವಲ್ಲ, ಇದು ಮೂಲಭೂತವಾಗಿ: ‘ನನಗೆ ಭಿನ್ನವಾದ ಎಲ್ಲವೂ ನನ್ನ ಶತ್ರುವಾಗಿರಬೇಕು’ ಎಂಬ ವಿಚಿತ್ರ, ವಿಕ್ಷಿಪ್ತ ಮನಸ್ಥಿತಿಯಾಗಿದೆ.

    ಅನ್ಯಾಯದಿಂದ ನ್ಯಾಯದೆಡೆಗೆ: ಈಗೀಗ, ಸ್ವಾತಂತ್ರ್ಯದ ಬಗೆಗಿನ ನಮ್ಮ ಕಲ್ಪನೆಗಳು ಆಯಾ ಸಂದರ್ಭಗಳಿಗೆ ಪ್ರತಿಕ್ರಿಯೆಯಾಗಿ ಬರುತ್ತಿವೆ. ಅವುಗಳನ್ನು ಈ ರೀತಿ ಪರಿಕಲ್ಪಿಸುವುದು ಸರಿಯಲ್ಲ. ಆಯಾ ಸನ್ನಿವೇಶಗಳಿಗೆ ತಕ್ಕಂತೆ ಪ್ರತಿಕ್ರಿಯೆಯಾಗಿ ನ್ಯಾಯವನ್ನು ರಚಿಸಲು ಪ್ರಯತ್ನಿಸಿದಾಗ, ನಾವು ಮತ್ತೊಂದು ರೀತಿಯ ಅನ್ಯಾಯವನ್ನು ಮಾಡಿದ ಹಾಗಾಗುತ್ತದೆ- ಅದು ಯಾವುದೇ ರೀತಿಯಲ್ಲೂ ನ್ಯಾಯಕ್ಕೆ ಕಾರಣವಾಗುವುದಿಲ್ಲ. ಜೀವನವನ್ನು ಹೆಚ್ಚು ಗಾಢವಾಗಿ ನೋಡಬೇಕು ಮತ್ತು ಈ ಭೂಮಿಯ ಮೇಲಿನ ಸಕಲ ಮಾನವಕುಲಕ್ಕೂ ಉತ್ತಮವೆನಿಸುವ ವ್ಯವಸ್ಥೆಯನ್ನು ರಚಿಸಬೇಕು. ಮುಂದಿನ ತಲೆಮಾರಿನ ಜನರನ್ನು ನಿರ್ವಿುಸುವ ಜವಾಬ್ದಾರಿಯನ್ನು ಸ್ತ್ರೀಕುಲ ಹೊಂದಿದೆ- ಅದು ಖಂಡಿತವಾಗಿಯೂ ಸಣ್ಣ ಜವಾಬ್ದಾರಿಯೇನಲ್ಲ. ಆದ್ದರಿಂದ ಪ್ರಕೃತಿ ಪುರುಷರಿಗಿಂತಲೂ ಸ್ತ್ರೀಕುಲಕ್ಕೆ ದೊಡ್ಡ ಜವಾಬ್ದಾರಿಯನ್ನು ನೀಡಿದೆ.

    ನಮ್ಮದು, ಜೀವನದ ಎಲ್ಲ ಕ್ಷೇತ್ರಗಳಲ್ಲಿಯೂ ಪುರುಷರು ಮತ್ತು ಮಹಿಳೆಯರು ಸಂಪೂರ್ಣವಾಗಿ ಸಮಾನ ಸ್ಥಾನದಲ್ಲಿ ವಾಸಿಸುತ್ತಿದ್ದ ದೇಶ, ಆದರೆ ಕಳೆದ 2000 ರಿಂದ 2500 ವರ್ಷಗಳಲ್ಲಿ ನಾವು ಹಾದಿತಪ್ಪಿದ್ದೇವೆ. ಅನೇಕ ಕಾರಣಗಳಿಂದಾಗಿ ನಮ್ಮ ಸಮಾಜ ತಿರುಚಲ್ಪಟ್ಟಿದೆ. ಅವು ಯಾವವು ಎಂದು ಬಗೆದು ನೋಡುವುದರಲ್ಲಿ ಈಗ ಯಾವುದೇ ಅರ್ಥವಿಲ್ಲ, ಆದರೆ ಅದನ್ನು ಹೇಗೆ ಸರಿಪಡಿಸುವುದು ಎಂಬುದರ ಕುರಿತು ಯೋಚಿಸಬೇಕಾಗಿದೆ. ದುರದೃಷ್ಟವಶಾತ್ ಸ್ವಾತಂತ್ರ್ಯದ ಬಗೆಗಿನ ನಮ್ಮ ಆಲೋಚನೆಗಳನ್ನು ಪಾಶ್ಚಿಮಾತ್ಯರಿಂದ ಹೆಚ್ಚು ಎರವಲು ಪಡೆದಿದ್ದೇವೆ. ಪಾಶ್ಚಾತ್ಯದಿಂದ ಬಂದ ಎಲ್ಲವೂ ಆಧುನಿಕ ಎಂಬ ಕಲ್ಪನೆ ನಮ್ಮಲ್ಲಿದೆ. ಅದು ಹಾಗಲ್ಲ. ಪಾಶ್ಚಿಮಾತ್ಯ ದೇಶಗಳಲ್ಲಿ ಮಹಿಳೆಯರಲ್ಲಿನ ಹೆಚ್ಚಿನ ಸ್ವಾತಂತ್ರ್ಯಕ್ಕೆ ಕಾರಣ ತಂತ್ರಜ್ಞಾನವೇ ಹೊರತು, ಸಮಾಜದಲ್ಲಿನ ಯಾವುದೇ ಬದಲಾದ ವರ್ತನೆಯಿಂದಲ್ಲ. ಇಂದು, ತಂತ್ರಜ್ಞಾನವನ್ನು ಬಳಸಿ ನೀವು ಸಂಚರಿಸಬಹುದು, ಸಂವಹನ ಮಾಡಬಹುದು. ಯಾರು ಆಳಬೇಕು ಎಂಬುದರ ನಿರ್ಧಾರ ತೋಳ್ಬಲದಿಂದ ಆಗುತ್ತಿಲ್ಲ ಬದಲಾಗಿ ತಂತ್ರಜ್ಞಾನದಿಂದ ಆಗುತ್ತಿದೆ. ಈ ಕಾರಣಕ್ಕಾಗಿಯೇ ಎಲ್ಲವೂ ಸಾಧ್ಯವಾಗಿರುವುದು. ಈ ಜಗತ್ತನ್ನು ಖಡ್ಗದಿಂದಲೇ ಆಳಬೇಕೆಂದಿದ್ದರೆ, ಸ್ತ್ರೀಯರಿಗೆ ಆಳಲು ಸಾಧ್ಯವಾಗುತ್ತಿರಲಿಲ್ಲ. ಎಲ್ಲರ ರೀತಿಯಲ್ಲೇ ಅವರೂ ಚುನಾಯಿತ ರಾಗುತ್ತಿರುವುದರಿಂದಲೇ, ನಾವು ಅನೇಕ ದೇಶಗಳಲ್ಲಿ ಮಹಿಳಾ ಪ್ರಧಾನ ಮಂತ್ರಿಗಳು ಹಾಗೂ ಅಧ್ಯಕ್ಷರನ್ನು ಕಾಣಬಹುದಾಗಿದೆ. ಆದ್ದರಿಂದ, ಸ್ವಾತಂತ್ರ್ಯ ಅಥವಾ ಅದರ ಬಗೆಗಿನ ಪಾಶ್ಚಾತ್ಯ ದೇಶದ ಪರಿಭಾಷೆ ಯಾವುದೇ ಮನಸ್ಥಿತಿಯ ಬದಲಾವಣೆಯಿಂದ ಸಾಧ್ಯವಾಗಿಲ್ಲ, ಬದಲಾಗಿ ತಾಂತ್ರಿಕ ಪ್ರಗತಿಯಿಂದಾಗಿ ಸಾಧ್ಯವಾಗಿದೆಯಷ್ಟೇ.

    ಭಾರತ ಅದೇ ತಪ್ಪನ್ನು ಮಾಡದಿರುವ ರೀತಿಯಲ್ಲಿ ನೋಡಿಕೊಳ್ಳುವುದು ಬಹಳ ಅಗತ್ಯ. ಏಕೆಂದರೆ, ಪಾಶ್ಚಾತ್ಯದಲ್ಲಿನ ಎರಡನೇ ತಲೆಮಾರಿನ ಮಹಿಳೆಯರ ಜೀವನ ಸಂತೋಷದಿಂದ ಕೂಡಿಲ್ಲ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮೊದಲನೆಯ ತಲೆಮಾರಿನ ಮಹಿಳೆಯರು ಸ್ವಲ್ಪ ಮಟ್ಟಕ್ಕೆ ದೈಹಿಕ ರೂಪದಲ್ಲಿ ಸ್ವಾತಂತ್ರ್ಯವನ್ನು ಪಡೆಯಲು ಯಶಸ್ವಿಯಾದರು ಹಾಗೂ ಅದರಿಂದ ಉತ್ಸಾಹಭರಿತರಾಗಿದ್ದರು. ಆದರೆ ಆ ಗೆಲುವು ತಾವು ಬೇರೆಯವರಿಗಿಂತ ಸ್ವಲ್ಪ ಉತ್ತಮರು ಎಂಬುದನ್ನು ಮಾತ್ರ ಸಾರಿತು. ಇದರ ಮೂಲಕ ಅವರು ನಿಜವಾಗಿಯೂ ಸ್ವತಂತ್ರರಾಗಲಿಲ್ಲ. ಆ ಕ್ಷಣದಲ್ಲಿ, ಅವರಿಗೆ ಅದು ಉತ್ತಮವೆನಿಸಿರಬಹುದು. ಆದರೆ, ನಿಜ ರೂಪದಲ್ಲಿ ಇದು ಸ್ವಾತಂತ್ರ್ಯವಲ್ಲ.

    ಲೈಂಗಿಕತೆ ಜೀವನದ ಒಂದು ಸಣ್ಣ ಭಾಗವಷ್ಟೇ: ಈ ವ್ಯತ್ಯಾಸಗಳನ್ನು ನಾವು ಮಿತಿ ಮೀರಲು ಬಿಡದಿದ್ದರಷ್ಟೇ ಎಲ್ಲರಿಗೂ ಸ್ವಾತಂತ್ರ್ಯ ಸಾಧ್ಯ. ಲಿಂಗಭೇದ ಒಂದು ಸಣ್ಣ ವ್ಯತ್ಯಾಸವಷ್ಟೇ. ಕೆಲವೇ ಕೆಲವು ಕಾರಣಗಳಿಗಾಗಿ, ಮನುಷ್ಯರು ತಮ್ಮ ದೇಹದ ಅಂಗಾಂಗಗಳೊಂದಿಗೆ ಗುರುತಿಸಿಕೊಂಡಿರುತ್ತಾರೆ. ಈ ಕಾರಣಕ್ಕಾಗಿ, ಮಹಿಳೆ ಮತ್ತು ಪುರುಷ ಎಂಬ ಭೇದ. ನಿಜವಾಗಿಯೂ ದೇಹದ ಅಂಗಗಳೊಂದಿಗೆ ಗುರುತಿಸ ಬಯಸಿದರೆ, ನನ್ನ ಪ್ರಕಾರ ಮಿದುಳಿನಿಂದ ಗುರುತಿಸಿಕೊಳ್ಳಬೇಕು, ಜನನಾಂಗಗಳಿಂದಲ್ಲ. ಮಾನವ ಜೀವನದಲ್ಲಿ ಲೈಂಗಿಕತೆಗೆ ಒಂದು ಮುಖ್ಯ ಪಾತ್ರವಿದೆ, ಆದರೆ ಅದುವೇ ಎಲ್ಲವೂ ಅಲ್ಲ. ಇದು ಜೀವನದ ಕೇವಲ ಒಂದು ಭಾಗವಾಗಿದೆಯಷ್ಟೇ. ಸಂತಾನೋತ್ಪತ್ತಿ ಜೀವನದ ಒಂದು ಅಂಶದ ಪೂರೈಕೆಗಷ್ಟೇ ಸೀಮಿತ. ಅದುವೇ ಜೀವನದ ಎಲ್ಲವೂ ಅಲ್ಲ. ಆದರೆ ಇದೀಗ, ಅದನ್ನೇ ಜೀವನದ ಸರ್ವಸ್ವ ಎಂದು ಬಹುಪಾಲು ಜನರು ಭಾವಿಸುತ್ತಿದ್ದಾರೆ. ಜೀವನ ಹಾಗೆ ನಡೆಯುವುದಿಲ್ಲ. ಈ ರೀತಿ ನಡೆದರೆ, ಪುರುಷರು ಮತ್ತು ಮಹಿಳೆಯರು ಇಬ್ಬರೂ ಬಳಲುವಂತಾಗುತ್ತದೆ.

    ನಾವಿಂದು ಸ್ಥಾಪಿಸಿರುವ ಈ ತಿರುಚಿದ ಅಸಭ್ಯ ವಾಸ್ತವದಲ್ಲಿ, ಸುಮಾರು ಶೇಕಡ 90 ಜನಸಂಖ್ಯೆಯ ಮನಸ್ಸಿನಲ್ಲಿ, ಮಹಿಳೆ ಎಂದರೆ ಲೈಂಗಿಕತೆ ಎಂಬಂತಿದೆ. ಈ ಮನಸ್ಥಿತಿ ಹೋಗಬೇಕು, ಇಲ್ಲದಿದ್ದರೆ ಮಹಿಳೆ ಈ ಗ್ರಹದಲ್ಲಿ ಎಂದಿಗೂ ಘನತೆಯ ಅಸ್ತಿತ್ವವನ್ನು ಹೊಂದಿರುವುದಿಲ್ಲ. ಇದು ಹೋಗದಿದ್ದರೆ, ಮಹಿಳೆಯರು ಮುಕ್ತರಾಗಲು ಯಾವುದೇ ಮಾರ್ಗವಿಲ್ಲ. ಮಹಿಳೆಯರು ಬೀದಿಯಲ್ಲಿ ತಿರುಗಾಡಬಹುದು, ಆದರೆ ಸ್ವಾತಂತ್ರ್ಯ ಇರುವುದಿಲ್ಲ, ಏಕೆಂದರೆ ಅವಳನ್ನು ಒಬ್ಬ ವ್ಯಕ್ತಿಯಂತೆ ಪರಿಗಣಿಸಲಾಗುವುದಿಲ್ಲ. ಅವಳನ್ನು ಯಾವಾಗಲೂ ಬೇರೆ ಯಾವುದರಂತೆಯೋ ನೋಡಲಾಗುತ್ತದೆ. ಕಾನೂನುಗಳು ಜನರನ್ನು ಹದ್ದುಬಸ್ತಿನಲ್ಲಿ ಒಳಪಡಿಸಬಹುದು ಆದರೆ ಕಾನೂನುಗಳು ಸಡಿಲಗೊಂಡ ಕ್ಷಣ, ಎಲ್ಲವೂ ತೀವ್ರವಾಗಿ ಹೋಗುತ್ತದೆ. ಆದ್ದರಿಂದ ಮಹಿಳೆಯರ ಬಗ್ಗೆ ಮಾತ್ರವಲ್ಲದೆ ಒಟ್ಟಾರೆಯಾಗಿ ಮಾನವೀಯತೆಯಲ್ಲಿ ಹೆಚ್ಚು ಅಂತರ್ಗತ ಪ್ರಜ್ಞೆ ಇರುವುದು ಬಹಳ ಮುಖ್ಯ.

    ಮಹಿಳೆ ಮತ್ತು ಸ್ವಾತಂತ್ರ್ಯದ ನಿಜವಾದ ಸ್ವರೂಪ; ಸದ್ಗುರು ಅಂಕಣ

    ಮಹಿಳೆಯರ ಹಕ್ಕುಗಳಿಗಾಗಿ ಹೋರಾಟ ಬೇಡ: ಸಮಾಜದಲ್ಲಿ ಉತ್ತಮ ಸ್ಥಾನವನ್ನು ತಲುಪಿರುವ ಮಹಿಳೆಯರು, ಸಮಾಜದಲ್ಲಿ ಬದಲಾವಣೆಯನ್ನು ಮಾಡಬಲ್ಲಂಥ ಮಹಿಳೆಯರು ಈ ಒಂದು ವಿಷಯವನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು, ‘ಮಹಿಳೆಯರ ಹಕ್ಕುಗಳಿಗಾಗಿ ಹೋರಾಟಕ್ಕಿಳಿಯಬಾರದು’, ಬದಲಾಗಿ, ಮಾನವ ಕುಲದ ಉನ್ನತಿಗಾಗಿ ಏನನ್ನು ಮಾಡಬಹುದು ಎಂಬುದನ್ನು ಮಾತ್ರ ನೋಡಬೇಕು. ಪುರುಷರು ಮತ್ತು ಮಹಿಳೆಯರನ್ನು ಎರಡು ಬೇರೆ ಜಾತಿಯಾಗಿ ವಿಭಜಿಸುವುದು ಒಳ್ಳೆಯದಲ್ಲ. ಈ ರೀತಿಯಲ್ಲಿ ನಡೆದರೆ, ಬೀದಿಜಗಳಕ್ಕೆ ಕಾರಣವಾಗಿ ಮತ್ತೆ ತೋಳ್ಬಲದಿಂದ ಪುರುಷರೇ ಆಳುವಂತೆ ಆಗುತ್ತದೆ. ಯುದ್ಧದಂಥ ಪರಿಸ್ಥಿತಿ ಸೃಷ್ಟಿಯಾದಲ್ಲಿ, ಮತ್ತೊಮ್ಮೆ ಮಹಿಳೆಯರು ಸಮಾಜದಲ್ಲಿ ಕೀಳ್ಮುಖರಾಗುವಂತಾಗುತ್ತದೆ. ಈ ರೀತಿ ನಡೆಯಬಾರದೆಂದರೆ, ಪುರುಷರು ಮತ್ತು ಮಹಿಳೆಯರ ನಡುವೆ ಅಂತರವನ್ನು ಹೆಚ್ಚು ಮಾಡಬಾರದು. ನಾವು ಎಲ್ಲ ವರ್ಗದ ಮನುಷ್ಯರನ್ನು ಮನುಷ್ಯರನ್ನಾಗಿಯಷ್ಟೇ ನೋಡಬೇಕಾಗುತ್ತದೆ.

    ಇದು ಸಂಭವಿಸಿದರೆ ಮಾತ್ರವಷ್ಟೇ ಮಹಿಳೆಯರು ಸ್ವಾತಂತ್ರ್ಯವನ್ನು ಮತ್ತು ಜಗತ್ತಿನಲ್ಲಿ ತಮ್ಮ ಸ್ಥಾನವನ್ನು ಕಂಡುಕೊಳ್ಳಬಹುದು. ಇದೀಗ, ಅನೇಕ ಮಹಿಳೆಯರು ತಮ್ಮ ಪುರುಷಸಮಾನ ಅಂಶದಿಂದ ಸಮಾಜದಲ್ಲಿ ತಮ್ಮ ಸ್ಥಾನ ವನ್ನು ಕಂಡುಕೊಳ್ಳುತ್ತಿದ್ದಾರೆ. ಆದರೆ ಸಮಸ್ತ ಸ್ತ್ರೀಕುಲಕ್ಕೆ ಇದು ಒಳ್ಳೆಯದಲ್ಲ. ಜಗತ್ತಿನಲ್ಲಿ ಸಮಸ್ತ ಮಾನವ ಕುಲದ ಒಳಿತಾಗಬೇಕೆಂದರೆ, ಈ ಬಗೆಗಿನ ಲಿಂಗ ತಾರತಮ್ಯದ ಉತ್ಪ್ರೇಕ್ಷೆ ಆಗಬಾರದು. ಇದು ಬಹಳ ಮುಖ್ಯ.

    ಇಲ್ಲಿಯವರೆಗೂ ಸಂಭವಿಸಿದ ಶೋಷಣೆಗಳ ಪ್ರತಿಯಾಗಿ ಸಮಾಜದಲ್ಲಿ ಘಟನೆಗಳು ಆಗುತ್ತಿವೆ, ಆದರೆ ಶೋಷಣೆಯನ್ನು ಸರಿಪಡಿಸಲು ಮತ್ತೊಂದು ಅನ್ಯಾಯದ ಪ್ರಕ್ರಿಯೆಯಿಂದ ಸಾಧ್ಯವಿಲ್ಲ. ಮಾನವನ ಮನಸ್ಸಿನಲ್ಲಿ ಹೆಚ್ಚು ಅಂತರ್ಗತ ಪ್ರಜ್ಞೆ ಉಂಟಾದಾಗ ಮಾತ್ರ ಅದನ್ನು ಸರಿಪಡಿಸಬಹುದು. ಆಗ ಮಾತ್ರ ಮಹಿಳೆಯರು ನಿಜವಾಗಿಯೂ ತಮ್ಮ ಸ್ಥಾನವನ್ನು ಕಂಡುಕೊಳ್ಳುತ್ತಾರೆ.

    (ಸದ್ಗುರು ಅವರು ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ. www.isha.sadhguru.org)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts