More

    ಬರಿಯ ಸಂಪತ್ತನ್ನಲ್ಲದೆ ಯೋಗಕ್ಷೇಮವನ್ನೂ ಸೃಷ್ಟಿಸಬೇಕು: ಸದ್ಗುರು ಅಂಕಣ

    ಬರಿಯ ಸಂಪತ್ತನ್ನಲ್ಲದೆ ಯೋಗಕ್ಷೇಮವನ್ನೂ ಸೃಷ್ಟಿಸಬೇಕು: ಸದ್ಗುರು ಅಂಕಣಈ ಪ್ರಪಂಚದಲ್ಲಿ ನಮಗೆ ಬೇಕಾಗಿರುವುದು ಕೇವಲ ‘ಸಂಪತ್ತಿನ ಸೃಷ್ಟಿಯಲ್ಲ’, ನಾವು ಯೋಗಕ್ಷೇಮವನ್ನೂ ಸೃಷ್ಟಿಸಬೇಕು. ಸಂಪತ್ತು ಮಾನವ ಅಭಿವೃದ್ಧಿಗೆ ಒಂದು ಉಪಕರಣ, ಆದರೆ ಅದೇ ಎಲ್ಲವೂ ಅಲ್ಲ. ಸಂಪತ್ತು ಬೇಕಾಗಿರುವುದು ಹೊರಜಗತ್ತಿನಲ್ಲಿ ನಮ್ಮನ್ನು ಅನುಕೂಲವಾಗಿರಿಸಲು ಮಾತ್ರ. ಆದರೆ ಈಗ, ಜನರು ಹಣವೇ ತಮ್ಮ ಧರ್ಮ ಎನ್ನುವ ರೀತಿಯಲ್ಲಿ ಅದನ್ನು ಹಿಂಬಾಲಿಸುತ್ತಿದ್ದಾರೆ. ಹಣವನ್ನು ದೇವರನ್ನಾಗಿ ಭಾವಿಸಿ ಅದರ ಹಿಂದೆ ಹೋಗುತ್ತಿದ್ದಾರೆ. ಹಣವು ಒಂದು ಮಾಧ್ಯಮ; ಅದೇ ಕೊನೆಯಲ್ಲ. ಅದನ್ನು ನಾವು ಸೃಷ್ಟಿಸಿದ್ದು ನಮ್ಮ ಅನುಕೂಲತೆಗೋಸ್ಕರ. ಹಾಗಾಗಿ ಸಂಪತ್ತಿನ ಶೇಖರಣೆಯ ಯೋಚನೆಯ ಬದಲು, ಮಾನವ ಯೋಗಕ್ಷೇಮದ ಬಗ್ಗೆ ಯೋಚಿಸಬೇಕು. ಆಗ ಏನು ಬೇಕೋ, ಎಷ್ಟು ಬೇಕೋ, ಅಷ್ಟನ್ನೇ ಮಾಡುತ್ತೇವೆ.

    ಹಣದ ಹಿಂದೆ ಬಿದ್ದು, ನಾವು ಬದುಕುತ್ತಿರುವ ಈ ಭೂಮಿಯನ್ನೇ ಹಾಳು ಮಾಡುತ್ತಿದ್ದೇವೆ. ಒಂದು ಪಿನ್, ಕಂಪ್ಯೂಟರ್, ಕಾರ್ ಅಥವಾ ಯಾವುದೇ ಒಂದು ದೊಡ್ಡಯಂತ್ರ ಸೇರಿ ಏನೇ ತಯಾರಿಸಿದರೂ ಅದಕ್ಕೆ ಈ ಭೂಮಿಯನ್ನೇ ಅಗೆಯುತ್ತಿದ್ದೇವೆ. ಯಾವುದೋ ಒಂದು ಹಂತದಲ್ಲಿ, ಎಷ್ಟು ಅಗೆಯಬೇಕು, ಈ ಭೂಮಿ ಎಷ್ಟು ಅಗೆಯುವಿಕೆಯನ್ನು ತಡೆದುಕೊಳ್ಳುತ್ತದೆಯೆಂದು ನಾವು ನಿರ್ಧರಿಸಬೇಕು. ಈ ಬಗ್ಗೆ ಗಮನ ಕೊಡದಿದ್ದರೆ, ಸಂಪತ್ತು ಮಾಡಿಕೊಳ್ಳುವ ಯೋಚನೆಯಿಂದ, ಈ ಭೂಮಿಯನ್ನು ಸರ್ವನಾಶ ಮಾಡಿಬಿಡಬಹುದು, ಈಗಾಗಲೇ ಇದನ್ನು ಎಷ್ಟೋ ರೀತಿಯಲ್ಲಿ ಮಾಡುತ್ತಿದ್ದೇವೆ.

    ಮೊದಲು ಅರ್ಥ ಮಾಡಿಕೊಳ್ಳಬೇಕಾದದ್ದು ‘ಸಂಪತ್ತು ಎಂದರೇನು?’ ಎಂದು. ಅದು ಕೇವಲ ಹೆಚ್ಚು ಕಟ್ಟಡಗಳು, ಹೆಚ್ಚು ಯಂತ್ರಗಳು, ಹೆಚ್ಚು ಕಾರುಗಳು, ಎಲ್ಲವೂ ಹೆಚ್ಚೆಚ್ಚು? ಹೆಚ್ಚು, ಹೆಚ್ಚು, ಹೆಚ್ಚು… ಎಂದರೆ ಮರಣ. ಪ್ರಪಂಚದ ಶ್ರೀಮಂತ ದೇಶಗಳಲ್ಲಿ ಉದಾಹರಣೆಗೆ ಅಮೆರಿಕದಲ್ಲಿ, ಅರ್ಧದಷ್ಟು ಜನಸಂಖ್ಯೆ ಖಿನ್ನತೆ-ಶಮನಕಾರಿ ಔಷಧಗಳನ್ನು ನಿಯಮಿತವಾಗಿ ತೆಗೆದುಕೊಳ್ಳುತ್ತಿದ್ದಾರೆ. ಒಂದಿಷ್ಟು ನಿರ್ದಿಷ್ಟ ಔಷಧವನ್ನು ಮಾರುಕಟ್ಟೆಯಿಂದ ತೆಗೆದುಬಿಟ್ಟರೆ ಅರ್ಧದಷ್ಟು ಜನಕ್ಕೆ, ಅರ್ಧದಷ್ಟು ದೇಶಕ್ಕೆ ಹುಚ್ಚು ಹಿಡಿಯುತ್ತದೆ. ಇದು ಯೋಗಕ್ಷೇಮವಲ್ಲ. ಸಾಧಾರಣವಾಗಿ ನಾವು ಏನು ಬೇಕೆಂದು ಕನಸು ಕಾಣುತ್ತೇವೆಯೋ ಅದೆಲ್ಲ ಒಬ್ಬ ಅಮೆರಿಕನ್ ಬಳಿ ಇರುತ್ತದೆ. ಸಾಕಷ್ಟು ಸಂಪತ್ತು ಇರುತ್ತದೆ. ಆದರೆ ನೆಮ್ಮದಿ ಇಲ್ಲ. ಅಂದಮೇಲೆ ಈ ಸಂಪತ್ತನ್ನೆಲ್ಲ ಏನು ಮಾಡುತ್ತೀರಿ?

    ಜೀವನದಲ್ಲಿ, ‘ಏನನ್ನು’ ‘ಎಷ್ಟು’ ಮಾಡಬೇಕೆಂದು ನಿರ್ಧರಿಸಬೇಕು. ಹೊರಗಿನ ಚಟುವಟಿಕೆ ಎಷ್ಟು, ಆಂತರ್ಯಕ್ಕೆಷ್ಟು ಗಮನ, ಸಾಮಾಜಿಕ ಯೋಗಕ್ಷೇಮ ಎಷ್ಟು- ನಮಗೇನು ಮಾಡಬೇಕೆಂದುಕೊಳ್ಳುತ್ತಿದ್ದೇವೆ? ನಮ್ಮನ್ನು ಅಥವಾ ನಮ್ಮ ಪರಿಸರವನ್ನು ಹಾಳು ಮಾಡದೆ, ಜೀವನವನ್ನು ಸಮತೋಲನದಲ್ಲಿ ಇಡುವುದು ಹೇಗೆ? ದುರದೃಷ್ಟವಶಾತ್ ಆ ಬುದ್ಧಿವಂತಿಕೆ ಈಗ ಪ್ರಪಂಚದಲ್ಲಿ ಕಣ್ಮರೆಯಾಗಿದೆ. ನಾವು ಸುಮ್ಮನೆ ಅತಿರೇಕದಿಂದ ಹೋಗುತ್ತಿದ್ದೇವೆ. ಹೀಗೆ ಹೋಗುತ್ತಿರುವುದು ಹುಚ್ಚುತನ. ಏಕೆಂದರೆ ಪ್ರಪಂಚ ಆಯ್ಕೆ ಮಾಡಿಕೊಂಡಿರುವ ಜೀವನಶೈಲಿ ಸುಸ್ಥಿರವಾದುದ್ದಲ್ಲ. ಇದನ್ನು ನಾವೇ ಸರಿಪಡಿಸಬಹುದು. ಇಲ್ಲದಿದ್ದರೆ ಪ್ರಕೃತಿ ಸರಿ ಮಾಡುತ್ತದೆ. ಪ್ರಕೃತಿಯೇ ಇದನ್ನು ಸರಿಪಡಿಸಿದರೆ, ಅದು ಕ್ರೂರವಾಗಿರುತ್ತದೆ. ಈ ಸತ್ಯವನ್ನು ಅರಿತು ತಿಳಿವಳಿಕೆಯಿಂದ ಬದುಕಿದರೆ ಕ್ಷೇಮ. ಪ್ರಶ್ನೆ ಸಂಪತ್ತು ಅಥವಾ ದಾರಿದ್ರ್ಯದ ಆಯ್ಕೆಗಳ ಬಗ್ಗೆ ಅಲ್ಲ; ಯಾರೂ ಬಡವರಾಗಿ ಬದುಕಲು ಇಷ್ಟ ಪಡುವುದಿಲ್ಲ. ಪರಿಹಾರ ಏನೆಂದರೆ ನಮ್ಮ ಅವಶ್ಯಕತೆಗಳನ್ನು ಸರಿಯಾದ ರೀತಿ ಯಲ್ಲಿ ಪೂರೈಸಿಕೊಳ್ಳುವುದು. ಇದು ಹೀಗೆ, ನನಗೆ 2 ಹೊತ್ತಿನ ಊಟ ಶ್ರೀಮಂತಿಕೆ ಎಂದೆನಿಸುತ್ತದೆ, ಆದರೆ ಕೆಲವರಿಗೆ ದಿನಕ್ಕೆ 10 ಸಾರಿ ಊಟ ಬೇಕು, ಅದು ಸಾವು.

    ನಾವು ಏನು ಮಾಡುತ್ತಿದ್ದೇವೆ ಎಂಬುದು ನಮಗೇ ತಿಳಿದಿಲ್ಲ. ನಾವು ಮಾಡಿದ್ದಕ್ಕೆಲ್ಲ ಒಂದು ಒಳ್ಳೆಯ ಹೆಸರನ್ನು ಕೊಡಲು ಬಯಸುತ್ತೇವೆ. ನಾನು ವಾಣಿಜ್ಯ ಅಥವಾ ವ್ಯಾಪಾರದ ವಿರುದ್ಧವಾಗಿಲ್ಲ; ಅದು ಮಾಡಲೇಬೇಕು. ಹೊಟ್ಟೆಯಲ್ಲಿ ಆಹಾರ ಇಲ್ಲದಿದ್ದರೆ ಧ್ಯಾನ ಮಾಡಬಲ್ಲಿರಾ? ಬದುಕುಳಿಯುವಿಕೆಯೇ ಪ್ರಶ್ನೆಯಾಗಿದ್ದರೆ, ಧ್ಯಾನದ ಬಗ್ಗೆ ಯೋಚನೆಯಾದರೂ ಮಾಡಲಾಗುತ್ತದೆಯೇ? ಬದುಕುಳಿಯುವಿಕೆ ಸ್ಥಿರವಾದ ಮೇಲೆ ತಾನೇ ಧ್ಯಾನ ಮಾಡಲು ಯೋಚಿಸುತ್ತೀರಿ. ಗೊಂದಲಗಳು ಇಲ್ಲದಿರುವ ಪರಿಸ್ಥಿತಿಯಲ್ಲಿ ಗೊಂದಲವನ್ನು ಸೃಷ್ಟಿಸಬೇಡಿ. ನಾನು ಒಂದು ಮನೆಯನ್ನು ಕಟ್ಟಿದರೆ ನನ್ನ ಆಧ್ಯಾತ್ಮಿಕತೆ ಕಡಿಮೆಯಾಗುವುದೇ?

    ಒಬ್ಬ ಅಮೆರಿಕನ್ ಲೇಖಕ ಭಾರತಕ್ಕೆ ಬಂದ. ಅವನು ಪ್ರಸಿದ್ಧವಾದ ಆಧ್ಯಾತ್ಮಿಕ ತಾಣಗಳಿಗೆ ಭೇಟಿ ನೀಡಿದ. ಆದರೆ, ಆ ಜಾಗಗಳು ಸಾಧಾರಣವಾಗಿ ಬಹಳ ಕೊಳಕು ಮತ್ತು ಭಯಾನಕವಾಗಿರುವವು- ಅವನು ಅಮೆರಿಕಕ್ಕೆ ಹಿಂದಿರುಗಿ ಹೀಗೆ ಹೇಳಿದ, ‘ನನಗೆ ಅರ್ಥವಾಗಿದ್ದೇನೆಂದರೆ, ನೀವು ಬಡವರಾಗಿದ್ದು, ಸರಿಯಾದ ಆಹಾರ ಇಲ್ಲದಿದ್ದರೆ, ಉಡಲು ಬಟ್ಟೆ ಇಲ್ಲದಿದ್ದರೆ, ಬದುಕಲು ಬಾರದಿದ್ದರೆ, ನೀವು ಆಧ್ಯಾತ್ಮಿಕತೆಯಲ್ಲಿ ಇದ್ದೀರಿ’ ಎಂದು. ಇದು ಆಧ್ಯಾತ್ಮಿಕತೆ ಅಲ್ಲ. ಆಧ್ಯಾತ್ಮಿಕತೆ ಎಂದರೆ ಆಂತರ್ಯದಲ್ಲಿ ಮಾಡುವಂಥದು. ಹೊರಗಿನ ಪರಿಸ್ಥಿತಿಯನ್ನು, ನಿಮಗೆ ಅಗತ್ಯವಿರುವಷ್ಟು ಮಾತ್ರ ವ್ಯವಸ್ಥೆ ಮಾಡಿಕೊಳ್ಳುವುದು.

    ಪ್ರತಿಯೊಬ್ಬ ಮನುಷ್ಯನೂ ಒಂದು ಮಟ್ಟದ ಅನುಕೂಲತೆಯ ಜೀವನವನ್ನು ಬಯಸುತ್ತಾನೆ. ನೀವು ಎಷ್ಟನ್ನು ನಿರ್ವಹಿಸಲು ಸಾಧ್ಯ? ಮನೆಯಲ್ಲಿ ನಾಲ್ಕು ಜನ ಇದ್ದರೆ 3 ಅಥವಾ 4 ಕೋಣೆಗಳ ಮನೆ ಕಟ್ಟಿಕೊಳ್ಳಬಹುದು ಅಥವಾ ಕೆಲವು ಅತಿಥಿಗಳನ್ನು ನಿರೀಕ್ಷಿಸುತ್ತಿದ್ದರೆ, 6 ಕೋಣೆಗಳ ಮನೆ ಕಟ್ಟಿಕೊಳ್ಳಬಹುದು. ಅದೇ 150 ಕೋಣೆಗಳ ಮನೆಯನ್ನು ಕಟ್ಟಿಸಿದರೆ…! ಜನ ಹೀಗೆ ಮಾಡಿದ್ದಾರೆ ಕೂಡ. ಯಾರೂ ಬರದಿದ್ದಾಗ ಅದು ಒಂದು ದೆವ್ವದ ಮನೆಯಾಗುತ್ತದೆ ಅಥವಾ ಎಲ್ಲ ರೂಮುಗಳು ತುಂಬಿದರೆ ಅದೊಂದು ಹೋಟೆಲ್ ಆಗುತ್ತದೆಯೇ ಹೊರತು ಅದು ಮನೆ ಎನ್ನಿಸಿಕೊಳ್ಳುವುದಿಲ್ಲ. ಹಾಗಾಗಿ ಎಷ್ಟು ಕೋಣೆಗಳು ಆಧ್ಯಾತ್ಮಿಕ? ಅದು ಆಧ್ಯಾತ್ಮಿಕತೆಯ ಬಗ್ಗೆ ಅಲ್ಲವೇ ಅಲ್ಲ. ಅದು ಸರಳ ತಿಳಿವಳಿಕೆ. ಯಾವುದು ಅನ್ವಯಿಸುತ್ತದೆ ಯಾವುದು ಅನ್ವಯಿಸುವುದಿಲ್ಲ ಎಂದಷ್ಟೇ.

    ಪ್ರತಿಯೊಬ್ಬ ವ್ಯಕ್ತಿಯೂ, ಪ್ರತ್ಯೇಕವಾಗಿ ಹಾಗೂ ಒಟ್ಟಾರೆ ಮಾನವ ಜನಾಂಗವಾಗಿ, ಎಷ್ಟನ್ನು ವಿವೇಚನೆಯಿಂದ ನಿರ್ವಹಿಸಬಹುದು ಎಂಬ ನಿರ್ಣಯವನ್ನು ತೆಗೆದುಕೊಳ್ಳಬೇಕು. ಇದರಲ್ಲಿ ಆಧ್ಯಾತ್ಮಿಕತೆಯೇನೂ ಇಲ್ಲ. ಅದೊಂದು ಸರಳ ವಿವೇಚನೆಯಷ್ಟೇ. ವಿವೇಚನೆ ಇಲ್ಲದಿದ್ದರೆ ಆಧ್ಯಾತ್ಮಿಕ ವ್ಯಕ್ತಿಯಾಗಲೂ ಸಾಧ್ಯವಿಲ್ಲ. ನಾನು ಪಾಶ್ಚಾತ್ಯ ದೇಶಗಳಿಗೆ ಹೋದಾಗ ಅವರನ್ನು, ‘ನೀವು ಏಕೆ ಧ್ಯಾನ ಮಾಡುತ್ತಿಲ್ಲ’ ಎಂದು ಕೇಳಿದರೆ ಬರುವ ಉತ್ತರ, ‘ಒಹ್, ನಮಗೆ ಕಟ್ಟಲು ಬಹಳ ಬಿಲ್ಲುಗಳಿವೆ’. ಅದಕ್ಕೆ ನಾನು, ‘ಅಷ್ಟೊಂದು ಬಿಲ್ಲುಗಳನ್ನು ಏಕೆ ಉತ್ಪಾದಿಸುವಿರಿ? ಇಡೀ ಜೀವನವೇ ಬಿಲ್ಲುಗಳನ್ನು ಕಟ್ಟುವುದಾದರೆ, ಆ ಹಾಳು ಬಿಲ್ಲುಗಳನ್ನು ಏಕೆ ಉತ್ಪಾದಿಸುವಿರಿ. ಆಸೆಗಳನ್ನು ಸ್ವಲ್ಪ ಕುಗ್ಗಿಸಿ, ಇನ್ನೂ ಸ್ವಲ್ಪ ಆರಾಮವಾಗಿ ಇರಬಹುದಲ್ಲವೇ? ಬಹಳ ಜಾಸ್ತಿ ಬಿಲ್ಲುಗಳು, ಮತ್ತೆ ಅವನ್ನು ಕಟ್ಟಲು ಕೆಲಸ ಮಾಡಿ, ಮಾಡಿ, ನಿರಂತರವಾಗಿ ಮಾಡುತ್ತಿದ್ದೀರಿ. ಇದರಿಂದ ಏನು ಲಾಭ?’ ಎಂದರೆ, ಅವರು, ‘ಹಾಗಲ್ಲ, ಇಡೀ ಸಮಾಜ ಇದನ್ನು ಮಾಡುತ್ತಿದೆ’ ಎನ್ನುತ್ತಾರೆ. ಅವರು ಏನಾದರೂ ಮಾಡಿಕೊಳ್ಳಲಿ. ಅವರು ಬೇರೆಯವರ ಪ್ರಭಾವದಲ್ಲಿ ಇದ್ದಾರೆ. ನಿಮಗೆ ಸ್ವಲ್ಪವಾದರೂ ವಿವೇಚನೆ ಇದ್ದರೆ, ಎಷ್ಟು ಬೇಕೋ, ಎಷ್ಟನ್ನು ಆರಾಮವಾಗಿ ಮಾಡಬಲ್ಲಿರೋ ಅಷ್ಟಕ್ಕೆ ಶ್ರಮಿಸಬೇಕು. ನಿಮಗಿಂತ ಸಾವಿರ ಪಾಲು ಹೆಚ್ಚು ಕೆಲಸವನ್ನು ಯಾವುದೇ ಒತ್ತಡವಿಲ್ಲದೆ ಮತ್ತು ಆರಾಮವಾಗಿ ಮಾಡುವವರು ಇರಬಹುದು. ಆದರೆ ನಿಮಗೆ ಒಂದು ದಿನದಲ್ಲಿ ಮೂರೇ ಕೆಲಸಗಳು ಮಾಡಲು ಸಾಧ್ಯವಾಗಬಹುದು. ಅದು ಪರವಾಗಿಲ್ಲ. ಬೇರೆಯವರು ಮಾಡುವುದನ್ನು ನೀವು ಮಾಡಲು ಪ್ರಯತ್ನಿಸಬೇಡಿ. ಹೊರಗಿನ ಪರಿಸ್ಥಿತಿಗಳ ವಿಷಯಕ್ಕೆ ಬಂದಾಗ ನಾವು ಸಮಾನ ಸಾಮರ್ಥ್ಯಗಳನ್ನು ತೆಗೆದುಕೊಂಡು ಬಂದಿಲ್ಲ. ಯಾವುದೇ ಇಬ್ಬರು ಮನುಷ್ಯರು ಸಮಾನವಾದ ಸಾಮರ್ಥ್ಯಗಳೊಡನೆ ಹುಟ್ಟಿಲ್ಲ.

    ಇದೇ ಇವತ್ತಿನ ಬಹಳ ದೊಡ್ಡ ಸಮಸ್ಯೆ. ನಾವು ಎಲ್ಲವನ್ನೂ ಬೇರೆಯವರ ಹಾಗೆ ಮಾಡಲು ಬಯಸುತ್ತೇವೆ. ಹಾಗಾಗಿ ಅದರಲ್ಲಿ ಆಧ್ಯಾತ್ಮಿಕತೆಯೇನೂ ಇಲ್ಲ. ಆಧ್ಯಾತ್ಮಿಕತೆ ನಮ್ಮ ಆಂತರ್ಯಕ್ಕೆ ಸಂಬಂಧಿಸಿದ್ದು. ನೀವು ಹೊರಗಡೆ ಮಾಡುತ್ತಿರುವುದು ಯಾವುದೂ ನಿಮ್ಮ ಅಂತರಂಗದಲ್ಲಿ ನಡೆಯುತ್ತಿರುವುದಕ್ಕೆ ಸಂಬಂಧವಿಲ್ಲ. ಯಾವುದೇ ಚಟುವಟಿಕೆಗಳನ್ನು ಮಾಡುತ್ತಿದ್ದರೂ, ನಿಮ್ಮೊಳಗೆ ಒಂದು ನಿರ್ದಿಷ್ಟ ರೀತಿಯಲ್ಲಿ ಇರಬಹುದು.

    ನಿಮ್ಮೊಳಗೆ ಹೇಗೆ ಇರಬೇಕೆಂದು ನಿಮಗೆ ಒಮ್ಮೆ ತಿಳಿದ ಮೇಲೆ, ಹೊರಗಿನ ಚಟುವಟಿಕೆ ಪರಿಸ್ಥಿತಿಗೆ ಅನುಗುಣವಾಗಿರುತ್ತದೆ. ಆದರೆ ದುರದೃಷ್ಟವಶಾತ್, ಜನರು ಅವರೊಳಗೆ ಸ್ಥಿರವಾಗಿಲ್ಲದ ಕಾರಣ, ಚಟುವಟಿಕೆಗಳು ಅವರ ಬಗ್ಗೆಯೇ ಆಗಿಬಿಟ್ಟಿದೆ. ಅಷ್ಟೊಂದು ಚಟುವಟಿಕೆಗಳನ್ನು ಮಾಡಿದರೆ, ನಿಮ್ಮೊಳಗೇ ನೀವು ಬೇರೊಬ್ಬರಾಗುವಿರಿ- ಅದು ಜೀವನದ ತಪು್ಪವಿಧಾನ. ನಿಮ್ಮೊಳಗೆ ಸ್ಥಿರವಾಗಿದ್ದಾಗ ಪರಿಸ್ಥಿತಿಗೆ ಬೇಕಾದ ಹಾಗೆ ನಡೆದುಕೊಳ್ಳುವಿರಿ. ಅದು ಕೇವಲ ಪರಿಸ್ಥಿತಿಗೆ ಅನುಗುಣವಾಗಿರುವಾಗ ಸಹಜವಾಗಿಯೇ ಸಂಪೂರ್ಣವಾದ ಶ್ರದ್ಧೆಯಿಂದ, ಅವಶ್ಯಕತೆಯಿದ್ದಷ್ಟು ಕೆಲಸ ಮಾಡುವಿರಿ. ಅದರ ಅವಶ್ಯಕತೆ ಇಲ್ಲದಿದ್ದರೆ ಸುಮ್ಮನೆ ಕಣ್ಣು ಮುಚ್ಚಿಕೊಂಡು ಕುಳಿತುಕೊಳ್ಳುವಿರಿ. ಧ್ಯಾನವೆಂಬುದು ಆಲಸ್ಯತನವಲ್ಲ; ಬಹಳ ಜನರು ಅವರ ಕಣ್ಣು ಮುಚ್ಚಿ ಕುಳಿತರೆ ಅದು ಈ ಜಗತ್ತನ್ನೇ ಉಳಿಸಬಹುದು.

    (ಸದ್ಗುರು ಅವರು ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ. www.isha.sadhguru.org)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts