More

    ಸಾಮಯಿಕ ಅಂಕಣ: ರಕ್ತವರ್ಣದ ಛಾಯೆಯ ನಡುವೆ ಕಂಗೊಳಿಸಿದ ನೀಲಿ ಹಸುರು

    ವಿಯಟ್ನಾಂ ಎಂದಾಕ್ಷಣ ಪ್ರಕೃತಿಯ ಪ್ರಶಾಂತ ಚೆಲುವು, ರಣರಂಗದ ರಕ್ತಸಿಕ್ತ ಕೆಸರು ಒಟ್ಟಿಗೇ ನಮ್ಮ ಕಣ್ಮುಂದೆ ಬರುತ್ತದೆ. ಹಕ್ಕು ಸ್ಥಾಪಿಸಲು ಹೊರಗಿನ ಶಕ್ತಿಗಳು ನಡೆಸುವ ಹುನ್ನಾರಗಳಿಗೆ ಬಲಿಯಾದ ವಿಯಟ್ನಾಮಿಗಳ ಕಥನವೇ ವಿಯಟ್ನಾಂ ಚರಿತ್ರೆಯನ್ನು ರೂಪಿಸಿದಂತೆ ತೋರುತ್ತದೆ. ಹಸುರು ಹಾಗೂ ಕೆಂಪು ಬಣ್ಣಗಳ ವರ್ಣಮಯ ಚಿತ್ರ ವಿಯಟ್ನಾಂ ಸಾಮಾಜಿಕ ಬದುಕಿನ ರಚನೆಯ ಸ್ವರೂಪವನ್ನು ವಿನ್ಯಾಸಗೊಳಿಸಿದೆ.

    ಸಾಮಯಿಕ ಅಂಕಣ: ರಕ್ತವರ್ಣದ ಛಾಯೆಯ ನಡುವೆ ಕಂಗೊಳಿಸಿದ ನೀಲಿ ಹಸುರುನಾವು ವಿಯಟ್ನಾಂಗೆ ಕಾಂಬೋಡಿಯದಿಂದ ರಸ್ತೆಯ ಮೂಲಕವೇ ಪ್ರವೇಶಿಸಿದೆವು. ಗಡಿಯಲ್ಲಿ ಪ್ರವೇಶ ಸಿಗಬೇಕಾದರೆ ಒಳಒಪ್ಪಂದದ ಅನುಭವವಾಯಿತು. ಇಂತಹ ಒಳಒಪ್ಪಂದಗಳೇ ವಿಯಟ್ನಾಂ ಇತಿಹಾಸವನ್ನು ಬರೆದಿವೆ ಎಂಬುದನ್ನು ನಾವು ಗಮನಿಸಬಹುದು.

    ಕಾಂಬೋಡಿಯಾಗೂ ವಿಯಟ್ನಾಮಿಗೂ ಇರುವ ಪ್ರಮುಖ ವ್ಯತ್ಯಾಸವೆಂದರೆ ಕಾಂಬೋಡಿಯಾಗೆ ಗಟ್ಟಿಯಾದ ಸಾಂಸ್ಕೃತಿಕ ಪರಂಪರೆಯಿದೆ. ವಿಯಟ್ನಾಮಿಗೆ ಆ ಬಗೆಯ ಪರಂಪರೆಯಿಲ್ಲ, ಬದಲಿಗೆ ಸುದೀರ್ಘ ಇತಿಹಾಸವಿದೆ. ಕಾಂಬೋಡಿಯಾದ್ದು ಸಂಸ್ಕೃತಿ ಕಥನ; ವಿಯಟ್ನಾಮಿನದು ಚರಿತ್ರೆಯ ಅಧ್ಯಯನ.

    ಎರಡನೆಯ ಶತಮಾನದ ವೇಳೆಗೆ ಚೀನಾದ ಭಾಗವಾಗಿದ್ದ ವಿಯಟ್ನಾಂ ಅನೇಕ ಶತಮಾನಗಳ ಕಾಲ ಚೀನಾದ ಒಂದು ಪ್ರಾಂತ್ಯವಾಗಿಯೇ ಇತ್ತು. ಹತ್ತನೇ ಶತಮಾನದ ವೇಳೆಗೆ ತನ್ನದೇ ‘ರಾಜ’ನನ್ನು ಪಡೆದು ಹತ್ತೊಂಬತ್ತನೇ ಶತಮಾನದವರೆಗೂ ವಿವಿಧ ರಾಜಮನೆತನಗಳ ಆಳ್ವಿಕೆಯಲ್ಲಿದ್ದು ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಾ ಹೋಯಿತು. ಹದಿನೈದನೇ ಶತಮಾನದಲ್ಲಿ ಪೋರ್ಚುಗೀಸರು, ಹದಿನಾರನೇ ಶತಮಾನದಲ್ಲಿ ಡಚ್ಚರು, ಹದಿನೇಳನೇ ಶತಮಾನದಲ್ಲಿ ಬ್ರಿಟೀಷರು ವಿಯಟ್ನಾಂ ಮೇಲೆ ಪ್ರಭುತ್ವ ಸ್ಥಾಪಿಸಲು ಪ್ರಯತ್ನಿಸಿದರು. ಈ ಪ್ರಯತ್ನಗಳು ಸಂಪೂರ್ಣ ಸಫಲವಾಗಲಿಲ್ಲ. ಆದರೆ 1880 ರ ವೇಳೆಗೆ ರಾಜಪ್ರಭುತ್ವ ಕೊನೆಗೊಂಡಿತು. ಫ್ರೆಂಚರು ತಮ್ಮ ಅಧಿಪತ್ಯ ಸ್ಥಾಪಿಸಿದರು. ಇವರು ರಾಜಕೀಯವಾಗಿ ಮಾತ್ರವಲ್ಲ, ಸಾಂಸ್ಕೃತಿಕವಾಗಿಯೂ ಪ್ರಭಾವ ಬೀರಿದರು. ಆಧುನಿಕ ಶಿಕ್ಷಣದ ಮೂಲಕ ಪಾಶ್ಚಾತ್ಯ ಪ್ರಭಾವಕ್ಕೆ ವಿಯಟ್ನಾಂ ಒಳಗಾಯಿತು. ಸೈಗಾನ್ ಹಾಗೂ ಹನಾಯ್ ಪ್ರಾಂತ್ಯಗಳಲ್ಲಿ ಈಗಲೂ ಈ ಪ್ರಭಾವವನ್ನು ಕಾಣಬಹುದು.

    1954 ರ ವೇಳೆಗೆ ಸ್ವತಂತ್ರಗೊಂಡ ವಿಯಟ್ನಾಂ ಉತ್ತರ ವಿಯಟ್ನಾಂ ಹಾಗೂ ದಕ್ಷಿಣ ವಿಯಟ್ನಾಂ ಎಂದು ಎರಡು ಭಾಗವಾಗಿ ರೂಪುಗೊಂಡಿತು. ಉತ್ತರ ವಿಯಟ್ನಾಂ ಬೆಂಬಲಕ್ಕೆ ಸೋವಿಯತ್ ಯೂನಿಯನ್, ದಕ್ಷಿಣ ವಿಯಟ್ನಾಂ ಬೆಂಬಲಕ್ಕೆ ಅಮೆರಿಕ ಸಂಯುಕ್ತ ಸಂಸ್ಥಾನ ನಿಂತವು. ಅನೇಕ ವರ್ಷಗಳ ಕಾಲ ಅಂತಃಕಲಹ ನಡೆಯಿತು. ಈ ಇತಿಹಾಸ ನಮ್ಮ ಕಾಲದ್ದು. ಯುದ್ಧದ ಭೀಕರ ಪರಿಣಾಮಕ್ಕೆ ವಿಯಟ್ನಾಂ ನಲುಗಿಹೋಯಿತು. ಜಗತ್ತಿನಾದ್ಯಂತ ಈ ಯುದ್ಧ ಪ್ರಭಾವ ಬೀರಿತು. ಎಪ್ಪತ್ತರ ದಶಕದಲ್ಲಿ ಅಮೆರಿಕ ತನ್ನ ಆಕ್ರಮಣದಿಂದ ಹಿಂದೆ ಸರಿಯಿತು. ಆ ವೇಳೆಗಾಗಲೇ ಸಾಕಷ್ಟು ಅನಾಹುತಗಳು ಸಂಭವಿಸಿ ವಿಯಟ್ನಾಂ ವಿಕೃತಗೊಂಡಿತ್ತು. 1976ರಲ್ಲಿ ವಿಯಟ್ನಾಮಿನ ಎರಡೂ ಭಾಗಗಳು ಒಂದಾದವು. ನಾವು ನೋಡಿದ್ದು ಈ ‘ನವವಿಯಟ್ನಾಂ’.

    ಈಗ ವಿಯಟ್ನಾಂ ತನ್ನೆಲ್ಲ ಗಾಯಗಳನ್ನು ಮರೆತು ಹೊಸ ಬದುಕಿಗಾಗಿ ಹಂಬಲಿಸುತ್ತಿದೆ. ಕೃಷಿ ಹಾಗೂ ಕೈಗಾರಿಕೆಗಳಲ್ಲಿ ಹೊಸ ಆವಿಷ್ಕಾರಗಳ ಮೂಲಕ ಪ್ರಗತಿ ಸಾಧಿಸಲು ಪ್ರಯತ್ನಿಸುತ್ತಿದೆ. ರಫ್ತು ಉದ್ಯಮಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಿದೆ. ಕಟ್ಟಡ ನಿರ್ಮಾಣ ತ್ವರಿತ ಗತಿಯಲ್ಲಿ ಸಾಗುತ್ತಿದೆ. ಇಲ್ಲಿ ಬಂಡವಾಳ ಹೂಡಲು ಅನ್ಯ ದೇಶಗಳನ್ನು ಪೋ›ತ್ಸಾಹಿಸಲಾಗುತ್ತಿದೆ. ಆದರೆ ಇದೆಲ್ಲವನ್ನೂ ಭ್ರಷ್ಟಾಚಾರದ ಕಬಂಧಬಾಹು ನಿಯಂತ್ರಿಸುತ್ತಿರುವಂತೆ ತೋರುತ್ತಿದೆ.

    ನಾವು ಕಾಂಬೋಡಿಯಾದ ಪೆನಾಮ್ ಪೆನ್​ನಿಂದ ರಸ್ತೆ ಮೂಲಕ ಪ್ರಯಾಣ ಮಾಡಿ ವಿಯಟ್ನಾಮಿನ ಹೊ ಚಿ ಮಿನ್ ನಗರವನ್ನು ತಲುಪಿದಾಗ ರಾತ್ರಿ 9 ಗಂಟೆ. ದೀರ್ಘ ಪ್ರಯಾಣವಾದರೂ ನಮ್ಮ ಗುಂಪಿನ ಉತ್ಸಾಹ ಕಿಂಚಿತ್ತೂ ಕುಂದಿರಲಿಲ್ಲ. ಹಾಡು, ಹರಟೆ, ಕುರುಕಲು ತಿಂಡಿಯ ಸ್ವಾದ ಆಯಾಸವನ್ನು ಮರೆಸಿತ್ತು.

    ಹೋ ಚಿ ಮಿನ್ ನಗರ ವಿಯಟ್ನಾಮಿನ ವಾಣಿಜ್ಯ ಕೇಂದ್ರ. ಆಧುನಿಕತೆಗೆ ಒಳಗಾಗಿರುವ ನಗರಕ್ಕೆ ಮೊದಲು ಸೈಗಾನ್ ಎಂಬ ಹೆಸರಿತ್ತು. ವಿಯಟ್ನಾಮಿನ ಅಪ್ರತಿಮ ನಾಯಕ ಹೋ ಚಿ ಮಿನ್ ನೆನಪಿಗೆ ಈ ನಗರಕ್ಕೆ ಆತನ ಹೆಸರಿಡಲಾಗಿದೆ. ಆದರೆ ಜನಮನದಲ್ಲಿ ಇನ್ನೂ ಇದು ‘ಸೈಗಾನ್’ ಎಂದೇ ಬಳಕೆಯಲ್ಲಿದೆ.

    ಬೆಳಿಗ್ಗೆ ನಗರ ವೀಕ್ಷಣೆಗೆಂದು ಹೊರಟೆವು. ಅಮೆರಿಕದಿಂದ ಆಘಾತಕ್ಕೊಳಗಾದ ಚಿತ್ರ ನೀಡುವ ಮ್ಯೂಸಿಯಂ ನೋಡಿದೆವು. ಯಥಾಪ್ರಕಾರ ಯುದ್ಧ ಹಾಗೂ ಅದರ ಪರಿಣಾಮ; ಕೆಲವರ ಅಧಿಕಾರದ ಹಂಬಲದಿಂದ ಹಲವರು ನೋವು ಅನುಭವಿಸುವ ಯುದ್ಧ, ಶೌರ್ಯದ ಹೆಸರಿನಲ್ಲಿ ಹಿಂಸಿಸುವ ಪ್ರವೃತ್ತಿ. ಅದರ ಇನ್ನೊಂದು ಮುಖವೆಂದರೆ ದಬ್ಬಾಳಿಕೆಯಿಂದ ತಪ್ಪಿಸಿಕೊಳ್ಳುವ ಸ್ವಾತಂತ್ರ್ಯದ ಹಂಬಲವೂ ಹೌದು. ಕಾರಣವೇನೇ ಇರಲಿ, ಪರಿಣಾಮ ಜನಸಾಮಾನ್ಯರ ಬದುಕು ನರಕವಾಗುವ ಪರಿ! ನನಗೆ ಕುವೆಂಪು ಅವರ ‘ಸ್ಮಶಾನ ಕುರುಕ್ಷೇತ್ರ’ ನಾಟಕ ನೆನಪಾಯಿತು. ಹೋ ಚಿ ಮಿನ್ ಪ್ರತಿಮೆಯ ಬಳಿ ಫೋಟೋ ಸೆಷನ್ ನಡೆಯಿತು. ಕ್ಷಣಾರ್ಧದಲ್ಲಿ ಸ್ಥಳೀಯ ಹಿನ್ನೆಲೆಯಲ್ಲಿ ನಿಮ್ಮ ಫೋಟೋ ನಿಮ್ಮ ಕೈಯಲ್ಲಿ! ಅದೊಂದು ಉದ್ಯಮ. ಈಗಂತೂ ಎಲ್ಲರ ಬಳಿಯೂ ಮೊಬೈಲ್ ಇರುವುದರಿಂದ ಎಲ್ಲರೂ ಫೋಟೋಗ್ರಾಫರ್​ಗಳೇ! ಜೊತೆಗೆ ಹೋದ ಕಡೆಯಲ್ಲೆಲ್ಲಾ ಕುಶಲ ಕಲೆಯ ವಸ್ತುಗಳ ಮಾರಾಟ. ಬೀದಿ ಬದಿಯ ಕೆಲ ವ್ಯಾಪಾರಗಾರರಂತೂ ನಮ್ಮ ವಾಹನವನ್ನು ತಮ್ಮ ವಾಹನದಲ್ಲಿ ಹಿಂಬಾಲಿಸಿ ನಾವು ಎಲ್ಲಿಗೆ ಹೋಗುತ್ತೇವೆಯೋ ಅಲ್ಲಿಗೇ ಬೆನ್ನು ಹತ್ತಿ ಬಂದರು. ಹೇಗೋ ಮಾಡಿ ನಮ್ಮಲ್ಲಿ ಕೆಲವರನ್ನು ತಮ್ಮ ಗ್ರಾಹಕರನ್ನಾಗಿಸಿಕೊಂಡರು. ಹಳೆಯ ಕಾಲದ ಸ್ಮಾರಕವೆಂಬಂತಿರುವ ಅಂಚೆ ಕಚೇರಿಯೂ ಪ್ರವಾಸಿ ತಾಣವಾಗಿ, ಅಲ್ಲಿಯೂ ಮಾರಾಟ ಮಳಿಗೆಗಳೇ ವಿಜೃಂಭಿಸುತ್ತಿದ್ದವು. ಪ್ರವಾಸಿಗರನ್ನು ಆಕರ್ಷಿಸಲು ಇರುವ ಸಾಧ್ಯತೆಗಳನ್ನೆಲ್ಲ ಅಲ್ಲಿಯ ವ್ಯವಸ್ಥೆ ಬಳಸಿಕೊಳ್ಳುತ್ತಿರುವಂತೆ ತೋರಿತು. ನಾನು ಕಂಡಂತೆ ಅನೇಕ ದೇಶಗಳಲ್ಲಿ ಪ್ರವಾಸೋದ್ಯಮ ನಾಡಿನ ಪ್ರಮುಖ ಸಂಪನ್ಮೂಲಗಳಲ್ಲೊಂದು. ಆದರೆ ನಮ್ಮ ದೇಶದಲ್ಲಿಯೇ ಆ ಬಗ್ಗೆ ಹೆಚ್ಚು ಗಮನ ನೀಡಿದಂತಿಲ್ಲ.

    ಇಲ್ಲಿಯ ಅರಮನೆ ನೋಡಿದೆವು. ಅದು ಇತ್ತೀಚಿನ ನಿರ್ಮಾಣ; ನಮಗೆ ಇರುವ ‘ಅರಮನೆ’ಯ ಪರಿಕಲ್ಪನೆಗಿಂತ ಇದು ಭಿನ್ನವಾಗಿತ್ತು. ಒಂದು ರೀತಿಯಲ್ಲಿ ಇದು ಅತ್ಯಾಧುನಿಕ ಹೋಟೆಲಿನ ಮಾದರಿಯಲ್ಲಿದೆ ಎಂಬುದು ನಮ್ಮ ಜೊತೆಗಿದ್ದವರ ಅಭಿಪ್ರಾಯ; ಮತ್ತೆ ಕೆಲವರು ಕಾರ್ಪೆರೇಟ್ ಆಫೀಸ್ ಇದ್ದ ಹಾಗಿದೆ ಎಂದರು. ಯಾರಿಗೂ ನೋಡುವ ಕುತೂಹಲವಿರಲಿಲ್ಲ. ಹಾಳು ಬಿದ್ದ ಹಳೆಯ ರಚನೆಗಳನ್ನು ಆಸಕ್ತಿಯಿಂದ ನೋಡಿದ ಇವರೆಲ್ಲ, ಸುಸಜ್ಜಿತವಾದ ಈ ಅತ್ಯಾಧುನಿಕ ಮಹಲಿನ ಬಗ್ಗೆ ಯಾಕೆ ನಿರಾಸಕ್ತಿ ತೋರಿಸುತ್ತಿದ್ದಾರೆ? ಇದೇನು ನನಗೆ ಆಶ್ಚರ್ಯವೆನ್ನಿಸಲಿಲ್ಲ. ಕಲಾತ್ಮಕವಲ್ಲದಿದ್ದರೆ ಅದು ನಮಗೆ ಸಂತೋಷ ನೀಡಲಾರದೇನೋ! ಆಧುನಿಕ ಕಟ್ಟಡಗಳು ಬೆರಗು ಮೂಡಿಸುತ್ತವೆ, ಆದರೆ ನಮಗೆ ಮೆಚ್ಚುಗೆಯಾಗುವುದು ಕಷ್ಟ. ಕಲೆಗೂ ಬದುಕಿಗೂ ಇದ್ದ ಅವಿನಾಭಾವ ಸಂಬಂಧ ಮರೆಯಾಗಿಬಿಟ್ಟಿತೇ? ನನ್ನ ಜತೆಗಿದ್ದವರ ಅಭಿಪ್ರಾಯ ನಮ್ಮ ಸಂವೇದನೆಯ ಸ್ವರೂಪವನ್ನೂ ಸೂಚಿಸುತ್ತಿತ್ತು.

    ಇತಿಹಾಸವೆಂದರೆ ರಕ್ತಸಿಕ್ತ ಚರಿತ್ರೆಯೆಂಬುದು ಯಾವುದೇ ದೇಶದಲ್ಲೂ ಅನುಭವಕ್ಕೆ ಬರುವ ಸಂಗತಿ. ಹೋ ಚಿ ಮಿನ್ ನಗರದ ಹಿನ್ನೆಲೆಯಲ್ಲಿದ್ದುದೂ ಅದೇ ಕತೆ. ಚರಿತ್ರೆ ಈಗ ವಾಣಿಜ್ಯವಾಗಿದೆ. ಸರಿ! ನಮ್ಮವರು ಇಲ್ಲಿನ ಅಂಗಡಿಗಳಲ್ಲಿ ಒಂದಷ್ಟು ವ್ಯಾಪಾರ ಮಾಡಿದರು. ಅಲ್ಲಿಂದ ನಮ್ಮ ಪಯಣ ಹನಾಯ್ ಕಡೆಗೆ!

    ಮಾರನೆಯ ಬೆಳಿಗ್ಗೆ ನಾವು ಹೊರಟದ್ದು ತೇಲುವ ಮನೆಯಲ್ಲಿ ಒಂದು ದಿನ ಕಳೆಯಲು! ಅದೊಂದು ವಿಶಿಷ್ಟ ಅನುಭವ. ನಮ್ಮ ಗುಂಪಿಗೇ ಒಂದು ಪ್ರತ್ಯೇಕ ಕ್ರೂಸ್ ಇದ್ದುದರಿಂದ ಯಾವುದೋ ಸಮಾರಂಭಕ್ಕೆ ಕುಟುಂಬದ ಸದಸ್ಯರೆಲ್ಲ ಒಟ್ಟಿಗೇ ಸೇರಿದಂತೆ ಆಪ್ತ ವಾತಾವರಣವೊಂದು ನಿರ್ಮಾಣವಾಗಿತ್ತು. ಒಳ್ಳೆಯ ಊಟೋಪಚಾರ! ಎಲ್ಲರಲ್ಲೂ ಸಂಭ್ರಮ ಸಡಗರದ ಮನೋಭಾವ.

    ಪ್ರಕೃತಿಗಿರುವ ಸೊಬಗನ್ನು ಮನುಷ್ಯ ಎಷ್ಟು ಪ್ರಯತ್ನಿಸಿದರೂ ಸೃಷ್ಟಿಸುವುದು ಕಷ್ಟ. ವಿಶಾಲ ಜಲರಾಶಿ! ಮಧ್ಯೆ ಮಧ್ಯೆ ತಲೆಯೆತ್ತಿ ನಿಂತ ಗಿರಿಶಿಖರಗಳು! ಅವುಗಳ ವಿನ್ಯಾಸ ಅನಂತ. ಒಂದರಂತೆ ಮತ್ತೊಂದಿಲ್ಲ. ಅವೆಲ್ಲ ಜಲಕನ್ಯೆಯರು ಕಡೆದ ಶಿಲ್ಪ ಕಲಾಕೃತಿಗಳ ಪ್ರದರ್ಶನದಂತಿತ್ತು, ಅಥವಾ ಅವರೇ ಇಲ್ಲಿ ಕಲಾಕೃತಿಗಳಾಗಿ ರೂಪ ತಳೆದಿದ್ದಾರೋ! ಮೇಲೆ ನೀಲಾಕಾಶದಲ್ಲಿ ನಿಧಾನ ಚಲಿಸುತ್ತಿರುವ ಮೋಡಗಳ ಹಂಸ ನಡಿಗೆ! ನೀರ ಮೇಲೆ ತೇಲುತ್ತಿರುವಂತೆ ಕಾಣುವ ಹಸುರುಡುಗೆಯುಟ್ಟ ಹಲವಾರು ದ್ವೀಪಗಳ ನಡುವೆ ನಮ್ಮ ತೇಲುವ ಮನೆಯ ಪಯಣ. ಗಂಧರ್ವರ ನಾಡೆಂದರೆ ಇದೇ ಇರಬಹುದೇ!

    ಯಾರಿಗೂ ಮಾತು ಬೇಕಿರಲಿಲ್ಲ. ಮಾತಿಗೆ ನಿಲುಕದ ಭಾವದಲ್ಲಿ ಎಲ್ಲರ ಮನಃಸ್ಥಿತಿಯಿತ್ತು. ಎಷ್ಟು ನೋಡಿದರೂ ತಣಿಯದ ನಿಸರ್ಗದ ಚೆಲುವು! ಬೇರೆ ಬೇರೆ ಕಡೆ ಹೀಗೆ ಕ್ರೂಸ್​ನಲ್ಲಿ ಪ್ರಯಾಣ ಮಾಡಿದ ಅನುಭವ ಅಲ್ಲಿನ ಅನೇಕರಿಗಿತ್ತು. ಆದರೆ ಅವೆಲ್ಲಕ್ಕಿಂತ ಇದು ಚಂದದ ಅನುಭವ ಎಂಬುದು ಸರ್ವಸಮ್ಮತ ಅಭಿಪ್ರಾಯವಾಗಿತ್ತು. ಎಲ್ಲರ ಮೊಬೈಲ್​ನ ಕ್ಯಾಮರಾಗಳಿಗೆ ಬಿಡುವಿರಲಿಲ್ಲ. ಆದರೆ ಕೊನೆಯಿಲ್ಲದ ಕಡಲಿನ ಜಲರಾಶಿಯನ್ನು ಬೊಗಸೆಯಲ್ಲಿ ಎಷ್ಟೆಂದು ಹಿಡಿಯಬಹುದು?

    ಅಲ್ಲೊಂದು ದ್ವೀಪ. ಅಲ್ಲಿಯ ಗುಹೆಯನ್ನು ನೋಡಲು ತೇಲುವ ಮನೆಯಿಂದ ಮತ್ತೊಂದು ದೋಣಿಯಲ್ಲಿ ಕರೆದೊಯ್ದರು. ಗುಹೆಯಲ್ಲಿ ತೆವಳಿ, ನುಸುಳಿ ಹೋಗಬೇಕೆಂದು ಕೆಲವರು ಮನೆಯಲ್ಲೇ ಉಳಿದರು. ಆ ಗುಹೆ ಮಯನಿರ್ಮಿತವೋ, ಆದಿವಾಸಿನಿರ್ಮಿತವೋ, ಪ್ರಕೃತಿಯ ಸಹಜನಿರ್ಮಿತಿಯೋ ಎಂಬ ಸಂದೇಹ ಸಹಜವಾಗಿ ಮೂಡಿದರೂ, ನೀರ ಕೊರೆತದಿಂದುಂಟಾದ ಆ ಗುಹೆಯನ್ನು ಮಾನವ ತನ್ನ ವಾಸಸ್ಥಾನವನ್ನಾಗಿ ಮಾಡಿಕೊಂಡಿದ್ದನೆಂದು ತೋರುತ್ತದೆ. ಮನುಷ್ಯ ತನ್ನ ರಕ್ಷಣೆಗೆ ಮಾಡಿಕೊಳ್ಳುವ, ಅಥವಾ ದೇವರಿಗಾಗಿ ನಿರ್ಮಿಸುವ ಗುಹಾಂತರ್ದೇವಾಲಯಗಳ ಸ್ವರೂಪವೇ ಬೇರೆ! ಇದರ ವಿನ್ಯಾಸವೇ ಬೇರೆ! ಇದರ ಕಲಾತ್ಮಕತೆ ನಿಸರ್ಗ ಸಹಜವಾದದ್ದು. ಹಿಮಾಲಯದ ತಪ್ಪಲಲ್ಲಿ ಮಂಜಿನ ಶಿಖರಗಳಲ್ಲಿ ಹಿಮನಿರ್ಮಿತವಾದ ನಿಸರ್ಗಸಹಜ ಕಲಾನೈಪುಣ್ಯವನ್ನು ನೋಡಿದ ನೆನಪಾಯಿತು. ಯಾವ ಗುಡಿ ಮಿಗಿಲು ಈ ಭುವನ ದೇವಾಲಯಕೆ?

    ಹಗಲಿನ ದೃಶ್ಯವೇ ಒಂದು ಬಗೆ! ರಾತ್ರಿ ಎಲ್ಲರೂ ತಮ್ಮ ಕೊಠಡಿಗಳನ್ನು ಸೇರಿದ ನಂತರ ನಾನು, ರಜನಿ ಡೆಕ್ ಮೇಲೆ ಹೋದೆವು. ಆ ಅನುಭವವೇ ಮತ್ತೊಂದು ಬಗೆ! ಅದು ದಿನನಿತ್ಯದ ಅನುಭವವಲ್ಲ! ಸುತ್ತಲಿನ ಜಲರಾಶಿಯೂ ನಿದ್ದೆಯ ಮೂಡಿನಲ್ಲಿತ್ತು. ಹೀಗಾಗಿ ನೀರವ ಮೌನ. ಆ ಮೌನವನ್ನು ಭೇದಿಸಿ ಬರುತ್ತಿದ್ದ ಪಿಸುಮಾತು ಮನುಷ್ಯರದಲ್ಲ. ನಿಸರ್ಗಕನ್ಯೆ ನಾಚಿ ನುಡಿಯುತ್ತಿದ್ದಳು. ಅದಕೆ ಸ್ಪಂದಿಸಿದ ನಲ್ಲನ ನಗುವಿನಂತೆ ಅಲೆಯ ಮೆಲ್ಲುಲಿ. ನರನಾಡಿಗಳಲ್ಲಿ ಹರಿದಾಡುವ ಛಳಿಯ ನಡುಕ. ಅಲ್ಲಲ್ಲಿ ನಿಂತ ತೇಲುವ ಮನೆಗಳ ದೀಪಗಳ ಬೆಳಕನ್ನು ನಾಚಿಸುವ ನಕ್ಷತ್ರಗಳ ಹೊಳಪು. ನಮಗೂ ಮಾತು ಬೇಕಿರಲಿಲ್ಲ. ಆದರೆ ನಮ್ಮಿಬ್ಬರ ಮೌನದಲ್ಲಿಯೂ ಮಾತಿನ ದನಿಯಿತ್ತು. ಸಂಜೆ ಕ್ರೂಸ್ ಸಿಬ್ಬಂದಿಯಲ್ಲೊಬ್ಬ ನುಡಿಸಿದ ಕೊಳಲ ದೇಸಿ ಗಾನ ಹಿನ್ನೆಲೆಯ ಸಂಗೀತದಂತೆ ಒಳದನಿಯಾಗಿ ಕೇಳಿಸುತ್ತಲೇ ಇತ್ತು. ಭಾವದ ಮಿಂಚುಹಕ್ಕಿಯ ರೆಕ್ಕೆಯನ್ನೇರಿ, ಧರಣಿ, ತಂಗದಿರ, ತಾರೆ, ನೀಹಾರಿಕೆಯ ಮೀರಿ, ಕಾಲದಾಚೆಗೆ, ದೇಶದಾಚೆಗೆ, ಎಲ್ಲ ಚಿಂತೆಗಳಾಚೆಗೆ ಹಾರಿದ ದಿವ್ಯಾನುಭವ!

    ಮಾರನೆಯ ದಿನ ನಿಸರ್ಗ ನಿರ್ಮಿಸಿದ ಕಮಾನಿನೊಳಗೆ ತೂರಿ ಬರುವ ದೋಣಿಯಾಟ! ಕೆಲವರು ತಾವೇ ಹುಟ್ಟು ಹಾಕುತ್ತ ಹೊರಟರು. ಮತ್ತೆ ಕೆಲವರು ನಾವಿಕನ ಜೊತೆ. ಚೆಲ್ಲಾಟವಾಡುವ ಮನೋಭಾವ ಹಿರಿಯರಿಗೂ ಇತ್ತು. ಇನ್ನು ಕಿರಿಯರನ್ನು ಬಿಡಿ! ಅಲ್ಲಿಂದ ಹೊರಡುವಾಗ ಅವರೆಲ್ಲ ಬೀಳ್ಕೊಟ್ಟ ರೀತಿ ಮನೆ ಬಿಟ್ಟು ಹೊರಟಂತೆಯೇ ಇತ್ತು. ವಿಯಟ್ನಾಂ ಪ್ರವಾಸದ ಕಡೆಯ ಅನುಭವ ಆಹ್ಲಾದಕರವಾಗಿತ್ತು. ರಕ್ತವರ್ಣದ ದಟ್ಟ ಛಾಯೆ ಮರೆಯಾಗಿ ತೆಳುನೀಲಿ ಹಿನ್ನೆಲೆಯಲ್ಲಿ ಹಸುರು ಕಂಗೊಳಿಸಿ, ಮುಂಜಾನೆಯ ಹೂ ಬಿಸಿಲಿನ ಬೆಚ್ಚನೆಯ ಅನುಭವ ನಮ್ಮದಾಗಿತ್ತು.

    (ಲೇಖಕರು ಖ್ಯಾತ ವಿಮರ್ಶಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts