More

    ದೇಶಭಾಷೆಯಲ್ಲಿ ವ್ಯವಹಾರ, ಜನಹಿತ ಆಡಳಿತ : ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ಸಾಮಯಿಕ ಅಂಕಣ

    ದೇಶಭಾಷೆಯಲ್ಲಿ ವ್ಯವಹಾರ, ಜನಹಿತ ಆಡಳಿತ : ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ಸಾಮಯಿಕ ಅಂಕಣ ‘ಜಾಣ ಜಾಣಿಯರಿಗೆ ಕನಸು ಕೊಡುವವಳೆ/ಬಾಗಿದವರಿಗೆ ಭಾಗ ಹೃದಯ ಕೊಡುವವಳೆ/ನಿನ್ಹಾಂಗ ಧರ್ಮದಲಿ ಧಾರಾಳತನದಲ್ಲಿ/ಈ ಭೂಮಿಯಲಿ ಕಾಣೆ ಧರೆಗೆ ದೊಡ್ಡವಳೆ/ಸಾವಿರದ ಶರಣವ್ವ ಕನ್ನಡದ ತಾಯೇ’- ಚಂದ್ರಶೇಖರ ಕಂಬಾರ

    ‘ಒಟ್ಟು ಜನಸಂಖ್ಯೆಯ ಶೇ. 99 ಜನರಿಗೆ ಅರ್ಥವಾಗದ ಭಾಷೆಯಲ್ಲಿ ಶಾಸನಸಭೆ, ನ್ಯಾಯಾಲಯ, ಪ್ರಯೋಗಾಲಯ, ಕಾರ್ಖಾನೆ, ಸಂಚಾರ ವ್ಯವಸ್ಥೆ- ಹೀಗೆ ಎಲ್ಲ ಬಗೆಯ ಸಾರ್ವಜನಿಕ ಚಟುವಟಿಕೆಗಳನ್ನೂ ನಿರ್ವಹಿಸುತ್ತಿರುವ ಜಗತ್ತಿನ ಏಕೈಕ ನಾಗರಿಕ ದೇಶವೆಂದರೆ ಭಾರತವೇ! ಇಂಗ್ಲಿಷ್ ಭಾಷೆಯು ಭಾರತಕ್ಕೆ ಅಪಾಯ ಮಾಡುತ್ತಿರುವುದಕ್ಕೆ, ಅದು ವಿದೇಶಿ ಭಾಷೆ ಎನ್ನುವುದಕ್ಕಿಂತ ಹೆಚ್ಚಾಗಿ ಭಾರತದ ಸಂದರ್ಭದಲ್ಲಿ ಅದು ಯಜಮಾನಿಕೆಯ ಭಾಷೆಯಾಗಿರುವುದೇ ಪ್ರಮುಖ ಕಾರಣ; ಜನಸಂಖ್ಯೆಯ ಶೇ. ಒಂದರಷ್ಟು ಮಾತ್ರ ಇರುವ ವರ್ಗವು ಈ ಭಾಷೆಯಲ್ಲಿ ನೈಪುಣ್ಯ ಪಡೆದು ಅಧಿಕಾರ ಪಡೆದುಕೊಂಡು ಜನಸಮೂಹದ ಮೇಲೆ ಅಧಿಪತ್ಯ ನಡೆಸಲು ಹಾಗೂ ಅವರನ್ನು ಶೋಷಿಸಲು ಭಾಷೆ ಒಂದು ಸಾಧನವಾಗಿದೆ.’ ಸ್ವಾತಂತ್ರ್ಯ ಬಂದ ಸನಿಹದಲ್ಲಿಯೇ, ಕಳೆದ ಶತಮಾನದ ಅರವತ್ತರ ದಶಕದಲ್ಲಿ ರಾಮಮನೋಹರ ಲೋಹಿಯಾ ಅವರು ಈ ಆತಂಕ ವ್ಯಕ್ತಪಡಿಸಿದ್ದರು. ಅರವತ್ತು ವರ್ಷಗಳ ನಂತರ ಇಂದಿಗೂ ನಾವು ಅದೇ ಆತಂಕದ ಸ್ಥಿತಿಯಲ್ಲಿದ್ದೇವೆ.

    ಕೈಗಾರಿಕಾ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಲು ನಮಗೆ ದೊಡ್ಡ ಯುವ ಪಡೆಯೇ ಬೇಕಾಗಿದೆ. ಇಂಗ್ಲಿಷ್ ಮಾಧ್ಯಮದ ಮೂಲಕ ಇಂತಹ ಪಡೆಯನ್ನು ಕಟ್ಟಬಹುದೆಂದು ಭಾವಿಸಿದ್ದೇವೆ. ಆದರೆ ಈ ಬಗೆಯ ಆಲೋಚನೆಯೇ ನಮ್ಮ ಪ್ರಗತಿಗೆ ಅಡ್ಡಿಯಾಗಿದೆ ಎಂಬುದನ್ನು ನಾವಿನ್ನೂ ಅರ್ಥಮಾಡಿಕೊಂಡಂತಿಲ್ಲ. ಕೈಗಾರಿಕಾ ಕ್ಷೇತ್ರದಲ್ಲಿ ಜಪಾನ್, ಚೀನಾದಂತಹ ದೇಶಗಳು ಸಾಧಿಸಿರುವ ಪ್ರಗತಿಗೆ ಉತ್ತಮ ಆರ್ಥಿಕ ವ್ಯವಸ್ಥೆ ಎಷ್ಟರ ಮಟ್ಟಿಗೆ ಕಾರಣವಾಗಿದೆಯೋ ಅಷ್ಟೇ ಆ ದೇಶಗಳು ತಮ್ಮ ಜನತೆಯ ಭಾಷೆಯ ಮೂಲಕ ಕಾರ್ಯನಿರ್ವಹಿಸಿದ್ದೂ ಕಾರಣವಾಗಿದೆ. ನಮ್ಮ ಚಿಂತನಾ ಕ್ರಮದಲ್ಲಿ ಮನಸ್ಸು ಮತ್ತು ಉದರವನ್ನು ಪ್ರತ್ಯೇಕಿಸಿರುವುದು ನಮ್ಮ ಕಾಲದ ದುರಂತಗಳಲ್ಲೊಂದು. ಯಾವುದೇ ದೇಶದಲ್ಲಿಯಾದರೂ ಮನಸ್ಸಿಗೆ ಚಿಕಿತ್ಸೆ ನೀಡದೆಯೇ ಹಸಿವು ಮತ್ತು ಅರ್ಥವ್ಯವಸ್ಥೆಯನ್ನು ಸರಿಪಡಿಸುತ್ತೇವೆ ಎನ್ನುವುದು ವಿವೇಚನಾರಹಿತ ಆಲೋಚನೆಯೇ ಸರಿ!

    ಇಂಗ್ಲೆಂಡಿನಿಂದ ಬಂದ ಜಾನ್ ಮೆಕೆರಲ್ ಎಂಬಾತ 1820ರಲ್ಲಿ ಕನ್ನಡ ಭಾಷೆಯ ಒಂದು ವ್ಯಾಕರಣ ಗ್ರಂಥವನ್ನು ಪ್ರಕಟಿಸಿದ. ಅದನ್ನು ಆಗಿನ ಇಂಗ್ಲೆಂಡಿನ ರಾಜನಿಗೆ ಸಮರ್ಪಿಸುತ್ತ, ವಿದೇಶೀಯನಾದ ಮೆಕೆರಲ್ ಹೀಗೆ ಬರೆಯುತ್ತಾನೆ: ‘ಸಾರ್ವಜನಿಕ ಹಿತದೃಷ್ಟಿಯಿಂದ ಭಾರತದಲ್ಲಿ ಈ ದೇಶದ ಭಾಷೆಗಳ ಜ್ಞಾನ ಅತ್ಯಂತ ಮುಖ್ಯವಾದದ್ದು. ಏಕೆಂದರೆ ಆ ಜ್ಞಾನವಿಲ್ಲದೆ ಯಾವ ಸರ್ಕಾರಿ ಅಧಿಕಾರಿಯೂ ತನಗೆ ಒಳ್ಳೆಯ ಹೆಸರು ಬರುವಂತಾಗಲೀ, ಸರ್ಕಾರಕ್ಕೆ ಅಥವಾ ಪ್ರಜೆಗಳಿಗೆ ಉಪಯೋಗವಾಗುವಂತಾಗಲೀ ಕೆಲಸವನ್ನು ನಿರ್ವಹಿಸಲಾರ.’ ಮೆಕೆರಲ್ ಈ ಮಾತುಗಳನ್ನು ಹೇಳಿ ಎರಡು ಶತಮಾನಗಳಾಯಿತು. ಈಗಲೂ ನಾವು ಈ ಅರಿವು ಪಡೆದಂತಿಲ್ಲ.

    ಇತ್ತೀಚೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸ್ಥಳೀಯ ಭಾಷೆಗಳನ್ನು ಅರ್ಥಮಾಡಿಕೊಳ್ಳಬಲ್ಲ, ಮಾತನಾಡಬಲ್ಲ ಸಿಬ್ಬಂದಿಯ ತಂಡ ಸಿದ್ಧಪಡಿಸಬೇಕೆಂದು ಬ್ಯಾಂಕುಗಳಿಗೆ ಸೂಚನೆ ನೀಡಿದ್ದಾರೆಂಬ ವರದಿ ಓದಿದೆ. ಯಾವುದೇ ಬ್ಯಾಂಕಿನ ಸಿಬ್ಬಂದಿ ಸ್ಥಳೀಯ ಭಾಷೆಯನ್ನು ಕಲಿತುಕೊಳ್ಳದಿದ್ದರೆ, ಆ ಬ್ಯಾಂಕ್ ನಾವು ಭಾರತದಾದ್ಯಂತ ಶಾಖೆಗಳನ್ನು ಹೊಂದಿದ್ದೇವೆ ಎಂದು ಹೇಳುವಲ್ಲಿ ಯಾವ ಅರ್ಥವೂ ಇಲ್ಲ ಎಂದಿರುವ ನಿರ್ಮಲಾ ದೇಶದಾದ್ಯಂತ ಶಾಖೆಗಳನ್ನು ತೆರೆದು, ಅಲ್ಲಿಯ ಸ್ಥಳೀಯ ಭಾಷೆಯಲ್ಲಿ ಸೇವೆ ನೀಡದಿದ್ದರೆ ಏನು ಪ್ರಯೋಜನ ಎಂದು ಪ್ರಶ್ನಿಸಿದ್ದಾರೆ. ಸಚಿವರ ಕಾಳಜಿ ಔಚಿತ್ಯಪೂರ್ಣವಾದುದು. ಆದರೆ ಅದು ಅವರ ಅಭಿಪ್ರಾಯ ಮಾತ್ರವೇ ಹೊರತು ಆದೇಶವಲ್ಲ. ಇಂತಹ ಮಾತುಗಳನ್ನು ನಾವು ಕೇಳುತ್ತಲೇ ಬಂದಿದ್ದೇವೆ. ಆದರೆ ಆಚರಣೆಯಲ್ಲಿ ಅದಕ್ಕಿಂತ ಭಿನ್ನ ನಿಲವುಗಳನ್ನೇ ಕಂಡಿದ್ದೇವೆ. ಬ್ಯಾಂಕ್ ಸಿಬ್ಬಂದಿ ನೇಮಕಾತಿಗಾಗಿ ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಮಿತಿ (ಐಬಿಪಿಎಸ್)ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ಬರೆಯುವ ಅವಕಾಶವಿಲ್ಲದಿರುವುದೇ ಇದಕ್ಕೆ ನಿದರ್ಶನ. ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿರುವ ಎಲ್ಲ ಭಾಷೆಗಳಲ್ಲೂ ಸ್ಪರ್ಧಾತ್ಮಕ ಪರೀಕ್ಷೆ ನಡೆಸಬೇಕೆಂಬ ಹಕ್ಕೊತ್ತಾಯ ಹಾಗೆಯೇ ಇದೆ. ಈ ಪರೀಕ್ಷೆಗಳನ್ನು ಹಿಂದಿ ಅಥವಾ ಇಂಗ್ಲಿಷಿನಲ್ಲಿ ಮಾತ್ರ ಬರೆಯಲು ಅವಕಾಶವಿದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತಲೇ ಇದ್ದರೂ ಇಂದಿಗೂ ಅದು ಸಾಧ್ಯವಾಗಿಲ್ಲ. 2019ರಲ್ಲಿ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್​ಗಳ ನೇಮಕಾತಿಗೆ ಸಂಬಂಧಿಸಿದ ಮುಖ್ಯ ಪರೀಕ್ಷೆಗಳನ್ನು 13 ಭಾರತೀಯ ಭಾಷೆಗಳಲ್ಲಿ ಬರೆಯಲು ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿತ್ತು. ಈ ಅವಕಾಶವನ್ನು ರಾಷ್ಟ್ರೀಕೃತ ಬ್ಯಾಂಕ್​ಗಳ ಪರೀಕ್ಷೆಗಳಿಗೂ ವಿಸ್ತರಿಸಬಹುದು. ಆದರೆ ಮಾಡಿಲ್ಲ.

    ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಹಿಂದಿ ಅಥವಾ ಇಂಗ್ಲಿಷಿನಲ್ಲಿ ಮಾತ್ರ ನಡೆಸುವುದರಿಂದ, ಹಿಂದಿಯೇತರ ಭಾಷೆಗಳ ಉದ್ಯೋಗಾಕಾಂಕ್ಷಿಗಳಿಗೆ ಸ್ಪರ್ಧೆಯಲ್ಲಿ ಸಮಾನ ಅವಕಾಶವನ್ನು ನಿರಾಕರಿಸಿದಂತಾಗುತ್ತದೆ; ಸಾವಿರಾರು ಪ್ರತಿಭಾವಂತ ತರುಣ ತರುಣಿಯರು ಕೇಂದ್ರ ಸರ್ಕಾರದ ಉದ್ಯೋಗಗಳಿಂದ ವಂಚಿತರಾಗುತ್ತಾರೆ. ಕರ್ನಾಟಕದಲ್ಲಿರುವ ಕೇಂದ್ರ ಸರ್ಕಾರದ ಹುದ್ದೆಗಳಲ್ಲಿ ಕನ್ನಡೇತರರೇ ತುಂಬಿಕೊಂಡಾಗ, ಹಿಂದಿ ಅಥವಾ ಇಂಗ್ಲಿಷ್ ಗೊತ್ತಿಲ್ಲದ ಗ್ರಾಹಕರು ವ್ಯವಹರಿಸಲು ಹಿಂಜರಿಯುವಂತಾಗುತ್ತದೆ.

    ಸಂವಿಧಾನದ ಮೊದಲ ವಾಕ್ಯ: ‘ಇಂಡಿಯಾ, ಅಂದರೆ ಭಾರತ ಅನೇಕ ರಾಜ್ಯಗಳ ಒಂದು ಒಕ್ಕೂಟ.’ ಇಪ್ಪತ್ತೆಂಟು ರಾಜ್ಯಗಳು ಹಾಗೂ ಒಂಬತ್ತು ಕೇಂದ್ರಾಡಳಿತ ಪ್ರದೇಶಗಳು ಸೇರಿ ಭಾರತವಾಗಿದೆ. ರಾಜ್ಯಗಳಿಂದ ರಾಷ್ಟ್ರವೇ ಹೊರತು ರಾಷ್ಟ್ರದಿಂದ ರಾಜ್ಯಗಳಲ್ಲ. ಇದು ಸಾಂವಿಧಾನಿಕ ಸತ್ಯ. ಇದನ್ನು ಕೇಂದ್ರ ಸರ್ಕಾರ, ಅರ್ಥಾತ್ ದೆಹಲಿ ದೊರೆಗಳು ಅರ್ಥ ಮಾಡಿಕೊಳ್ಳಬೇಕು. ಬಹುತ್ವದ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಪ್ರಜಾಪ್ರಭುತ್ವದ ತಾತ್ವಿಕ ನೆಲೆ ರೂಪುಗೊಂಡಿದೆ.

    ನಮ್ಮ ಸಾಮಾಜಿಕ ಬದುಕನ್ನು ಪ್ರಭಾವಿಸುವ ಅನೇಕ ಕಾನೂನುಗಳನ್ನು ಕೇಂದ್ರ ಸರ್ಕಾರ ರೂಪಿಸುತ್ತದೆ. ಈ ಕಾನೂನುಗಳು ಜಾರಿಗೊಳ್ಳುವ ಮುನ್ನ ಅದರ ಕರಡು ಪ್ರತಿಯನ್ನು ಬಿಡುಗಡೆ ಮಾಡಿ ಸಾರ್ವಜನಿಕ ಚರ್ಚೆಗೆ ಅವಕಾಶ ಕಲ್ಪಿಸಿಕೊಡಬೇಕು. ಇದು ಪ್ರಜಾಪ್ರಭುತ್ವದ ಪ್ರಾಥಮಿಕ ಸಂಗತಿ. ಕೇಂದ್ರ ಸರ್ಕಾರ ಇಂತಹ ಕರಡು ಮಸೂದೆಗಳನ್ನು ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮಾತ್ರ ಪ್ರಕಟಿಸುತ್ತದೆ. ಹೊಸ ಶಿಕ್ಷಣ ನೀತಿ, ಪರಿಸರ ಸಂಬಂಧೀ ಅಧಿಸೂಚನೆ, ಕೋವಿಡ್ ಅಧಿಸೂಚನೆ ಇತ್ತೀಚಿನ ಕೆಲವು ನಿದರ್ಶನಗಳು. ಹೀಗಾದಾಗ ಹಿಂದಿ ಮತ್ತು ಇಂಗ್ಲಿಷ್ ಬಾರದ ಬಹುಸಂಖ್ಯಾತ ನಾಗರಿಕರನ್ನು ಚರ್ಚೆಯಿಂದ ಹೊರಗಿಟ್ಟಂತಲ್ಲವೇ? ಇದರಿಂದ ಸಾರ್ವತ್ರಿಕ ಚರ್ಚೆ ಸಾಧ್ಯವಾಗುವುದಿಲ್ಲ, ಆದ್ದರಿಂದ ಅದರ ಅನುವಾದವನ್ನು ಸಂವಿಧಾನದ ಅನುಸೂಚಿಯಲ್ಲಿರುವ ಎಲ್ಲ ಭಾಷೆಗಳಲ್ಲಿಯೂ ಒದಗಿಸಬೇಕೆಂದು ಹಲವು ನಾಗರಿಕ ಹಕ್ಕುಗಳ ಹೋರಾಟಗಾರರು ನ್ಯಾಯಾಲಯದಲ್ಲಿ ದಾವೆ ಹೂಡಿದರು. ದೆಹಲಿ ಹೈಕೋರ್ಟ್ ಇಂತಹ ಅಧಿಸೂಚನೆಗಳನ್ನು ಸಂವಿಧಾನದ ಅನುಸೂಚಿಯಲ್ಲಿರುವ ಎಲ್ಲ ಭಾಷೆಗಳಲ್ಲೂ ಪ್ರಕಟಿಸಬೇಕು ಎಂದು ಸೂಚಿಸಿತು. ಆದರೆ ಕೇಂದ್ರ ಸರ್ಕಾರ ಯಥಾಪ್ರಕಾರ ನಿರಾಸಕ್ತಿ ತಾಳಿತು. ಕರಡು ಪ್ರತಿಯನ್ನು ಪ್ರಕಟಿಸದೆ, ಪ್ರಚಾರ ಕೊಡದೆ ಇರುವ ಕಾನೂನುಗಳನ್ನು ಪಾಲಿಸಲು ನಾಗರಿಕರು ಬದ್ಧರಾಗಿಲ್ಲ ಎಂದು ಒಂದು ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಹೀಗಿದ್ದರೂ ಪ್ರಭುತ್ವ ಗಮನ ಕೊಡದಿರುವ ಹಿಂದಿನ ಹುನ್ನಾರವೇನು?

    ಮೆಕೆರಲ್​ನ ಅಭಿಪ್ರಾಯವನ್ನು ಬ್ರಿಟಿಷ್ ಸರ್ಕಾರ ಗಂಭೀರವಾಗಿ ಪರಿಗಣಿಸಿತ್ತು. ಬ್ರಿಟೀಷರು ಹೊರಡಿಸಿದ ಎಲ್ಲ ಕಾಯಿದೆಗಳೂ ತಕ್ಷಣವೇ ಕನ್ನಡಕ್ಕೆ ಅನುವಾದವಾಗುತ್ತಿದ್ದವು. ಹಾಗೆ ನೋಡಿದರೆ ಆಂಗ್ಲರ ಆಡಳಿತದಲ್ಲಿ ಕನ್ನಡಕ್ಕೆ ಪ್ರಾಮುಖ್ಯತೆಯಿತ್ತು. 1814 ರ ವರ್ತಕರ ಜಿನಸುಗಳ ಮೇಲಿನ ಸುಂಕದ ನಿಯಮ; 1850ರ ರೈಲ್ವೆ ಗೈಡ್; 1860ರ ಅಂಚೆಕಚೇರಿ ಆಕ್ಟ್; 1899ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದ ವಕಾಲತ್ತು; 1857ರಲ್ಲಿ ಪ್ರಕಟವಾದ ಭೂಮಾಪನ ನಕ್ಷೆ ಮತ್ತು ವಿವರಗಳು- ಇವೆಲ್ಲ ಕನ್ನಡದಲ್ಲಿಯೇ ಇವೆ. ಇವು ಕೆಲವು ನಿದರ್ಶನಗಳು ಮಾತ್ರ.

    1799 ರಿಂದ 1829ರವರೆಗೆ ಮೈಸೂರು ಸಂಸ್ಥಾನದಲ್ಲಿ ಸ್ಥಾನಿಕ ಅಧಿಕಾರಿಯಾಗಿದ್ದ ಕಾಸ್ಮಿಜರ್ ಎಂಬುವನು ಸಂಸ್ಥಾನದ ಜಮಾಖರ್ಚುಗಳ ವಿವರಗಳನ್ನು ಕನ್ನಡದಲ್ಲಿಯೇ ಬರೆದಿದ್ದಾನೆ, ಮಾತ್ರವಲ್ಲ ಕನ್ನಡ ಅಂಕಿಗಳನ್ನು ಬಳಸಿದ್ದಾನೆ. ತನ್ನನ್ನು ಕೆಲಸದಿಂದ ತೆಗೆದುಹಾಕಿದುದರ ವಿರುದ್ಧ ಮುನಸೀಫನೊಬ್ಬನು 1833ರಲ್ಲಿ ಮನವಿ ಮಾಡಿಕೊಂಡಾಗ, ಕಲೆಕ್ಟರ್ ಟಿಪ್ಪಣಿ ಬರೆಯುತ್ತ ಆತನ ನ್ಯಾಯಾಲಯ ಇದ್ದ ಪ್ರದೇಶದ ಸ್ಥಳೀಯ ಭಾಷೆ ತಿಳಿಯದಿದ್ದುದರಿಂದ ಆದ ಅವ್ಯವಹಾರಗಳ ಬಗ್ಗೆ ಪ್ರಸ್ತಾಪಿಸಿ, ಸ್ಥಳೀಯ ಭಾಷೆ ತಿಳಿಯದಿದ್ದುದರಿಂದ ಆತ ಅಲ್ಲಿ ಕೆಲಸ ಮಾಡಲು ಅನರ್ಹ ಎಂದಿದ್ದಾನೆ. ಈಗ ಕನ್ನಡ ಬಳಸದ ನಮ್ಮ ಅಧಿಕಾರಿಗಳಿಗೆ ಹೀಗೆ ಎಚ್ಚರಿಕೆ ಕೊಡುವ, ಕ್ರಮ ತೆಗೆದುಕೊಳ್ಳುವ ತಾಕತ್ತು ಪ್ರಭುತ್ವಕ್ಕಿದೆಯೇ? 1930ರಲ್ಲಿ ಕೊಡಗಿನ ಛೀಫ್ ಕಮಿಷನರ್ ಕಳುಹಿಸಿದ ಒಂದು ತಂತಿಯಾಜ್ಞೆಯ ಪ್ರಕಾರ, 11ನೆಯ ಕೂರ್ಗ್ ಇನ್​ಫೆಂಟ್ರಿ ದಳದ ಅಧಿಕಾರಿಗಳು ಕನ್ನಡ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯವಾಗಿತ್ತು. 1866ರಲ್ಲಿ ಅಷ್ಟಗ್ರಾಮದ ಸೂಪರಿಂಟೆಂಡೆಂಟ್ ಆಗಿದ್ದ ಟಿ ಜೆ ಕ್ಲಾರ್ಕ್ ಎಂಬಾತ ‘ಕನ್ನಡದಲ್ಲಿಯೇ ಗೆಜೆಟ್ ಅಚ್ಚಾಗಿ ಆರು ತಿಂಗಳಾಗಿದೆ, ಆದರೆ ಇನ್ನೂ ಜನರು ಇಂಗ್ಲಿಷಿನಲ್ಲಿಯೇ ವ್ಯವಹರಿಸುತ್ತಿದ್ದಾರೆ, ಇನ್ನು ಮುಂದೆ ಕನ್ನಡೇತರ ಭಾಷೆಯಲ್ಲಿ ಬರುವ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ’ ಎಂದು ಹೇಳಿದ್ದಾನೆ. ಈ ಎಲ್ಲವನ್ನೂ ಮಹದೇವ ಬಣಕಾರ ಅವರು ಸಂಶೋಧಿಸಿ, ಸಂಗ್ರಹಿಸಿ ದಾಖಲಿಸಿದ್ದಾರೆ.

    ಹತ್ತೊಂಬತ್ತನೇ ಶತಮಾನದ ಬ್ರಿಟೀಷರ ಆಡಳಿತದಲ್ಲಿ ಹೀಗೆ ಕನ್ನಡ ಆಡಳಿತಭಾಷೆಯಾಗಿತ್ತು. ಅವರಿಗಿದ್ದ ಆಡಳಿತ ಜ್ಞಾನ, ಬದ್ಧತೆ ಈಗಿನ ನಮ್ಮ ಪ್ರಭುತ್ವಕ್ಕಿದೆಯೇ? ಆಂಗ್ಲರು ಕನ್ನಡವನ್ನು ಹೀಗೆ ಬಳಸಿದ್ದು ಕನ್ನಡದ ಬಗೆಗಿನ ಅಭಿಮಾನದಿಂದಲ್ಲ; ಯಶಸ್ವೀ ಆಡಳಿತ ನಡೆಸಲು. ಈ ವಿವೇಕವಾದರೂ ನಮ್ಮ ಈಗಿನ ಜನಪ್ರತಿನಿಧಿಗಳಿಗೆ ಬೇಡವೇ? ತಾಯ್ನುಡಿಯನ್ನು ನಿರ್ಲಕ್ಷಿಸುವ ಇವರು ಆಂಗ್ಲರಿಗಿಂತ ಅಪಾಯಕಾರಿಗಳು ಅಲ್ಲವೇ? ಕೇವಲ ಅಭಿಮಾನದ ಮಾತುಗಳನ್ನಾಡುವುದರಿಂದ ಏನು ಪ್ರಯೋಜನ?

    ಮೇಧಾವಿಗಳೆಂದೆನ್ನಿಸಿಕೊಂಡಿರುವ ಉನ್ನತ ಮಟ್ಟದ ನಮ್ಮ ಅಧಿಕಾರಿಗಳಿಗಾದರೂ ಮೆಕೆರಲ್, ಕ್ಲಾರ್ಕ್​ರಂತಹ ಅಧಿಕಾರಿಗಳಿದ್ದ ವಿವೇಕ ಇರಬಾರದೇ? ಜನರ ತೆರಿಗೆಯ ಹಣದಿಂದ ಐಷಾರಾಮಿ ಸವಲತ್ತುಗಳನ್ನು ಪಡೆಯುವ ಇವರು ಜನರಿಗೆ ಅರ್ಥವಾಗುವ ಭಾಷೆಯಲ್ಲಿ ವ್ಯವಹರಿಸುವ ಕನಿಷ್ಠ ಕಾಳಜಿಯನ್ನಾದರೂ ಪ್ರಕಟಿಸಬೇಡವೇ? ಮೆಕೆರಲ್, ಕ್ಲಾರ್ಕ್​ರ ಆಂಗ್ಲರ ಕಾಲದ ಕನ್ನಡ ಕಾಳಜಿಗೂ ನಮ್ಮವರೇ ಆಳುತ್ತಿರುವ ಈ ಕಾಲಕ್ಕೂ ಕನ್ನಡದ ಸ್ಥಿತಿಗೂ ಹೋಲಿಕೆಯೆಲ್ಲಿ? ಕಳೆದ ಒಂದು ಶತಮಾನದಲ್ಲಿ ನಾವು ಎತ್ತ ಸಾಗುತ್ತಿದ್ದೇವೆ?

    ಈಗ ನವೆಂಬರ್; ಕನ್ನಡ ನಾಡಿನುದ್ದಕ್ಕೂ ಕನ್ನಡದ ಆಡಂಬರ! ಸರ್ಕಾರವೂ ನಾಡು ನುಡಿಯ ಬಗೆಗೆ ಅನೇಕ ಭರವಸೆಗಳನ್ನು ನೀಡುತ್ತದೆ. ಭರವಸೆಗೆ ಬದಲಾಗಿ ಕಳೆದ ಒಂದು ವರ್ಷದಲ್ಲಿ ಕನ್ನಡದ ಬೆಳವಣಿಗೆಗೆ ಸರ್ಕಾರ ಏನು ಮಾಡಿದೆಯೆಂಬುದನ್ನು ಪ್ರತಿ ವರ್ಷ ನವೆಂಬರ್ 1ರಂದು ಜನತೆಯೆದುರು ಮಂಡಿಸಿದರೆ ಸರ್ಕಾರದ ಕನ್ನಡ ಕಾಳಜಿಯ ನಿಜಸ್ವರೂಪ ಜನತೆಗೆ ತಿಳಿಯುತ್ತದೆ; ಭರವಸೆ ಮೂಡುತ್ತದೆ. ಸರ್ಕಾರ ಮಾತ್ರವಲ್ಲ, ಪ್ರತಿಯೊಬ್ಬ ಕನ್ನಡಿಗನೂ ತಾನು ನಾಡು ನುಡಿಯ ಬೆಳವಣಿಗೆಗೆ ಏನು ಮಾಡಿದೆ ಎಂದು ಚಿಂತಿಸುವಂತಾಗಬೇಕು; ಏನಿಲ್ಲವೆಂದರೂ ಕೀಳರಿಮೆಯಿಲ್ಲದೆ ಕನ್ನಡದಲ್ಲಿ ಮಾತನಾಡುವುದು ಸಾಧ್ಯವಾದರೂ ಅದೂ ಕನ್ನಡದ ಬೆಳವಣಿಗೆಗೆ ಕೊಡುಗೆಯೇ! ರಾಜ್ಯೋತ್ಸವ ಹೀಗೆ ಪ್ರಾಮಾಣಿಕ ಆತ್ಮಾವಲೋಕನಕ್ಕೆ ಹಾದಿ ಮಾಡಿಕೊಟ್ಟರೆ ಅದೇ ನಿಜಾರ್ಥದಲ್ಲಿ ಕನ್ನಡದ ಬೆಳವಣಿಗೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts