More

    ಸಭಾಪತಿ ಹುದ್ದೆಗೆ ನಾನೂ ಆಕಾಂಕ್ಷಿ, ವರಿಷ್ಠರ ಅಭಿಪ್ರಾಯವೂ ಇದೇ ಎಂದ ಹೊರಟ್ಟಿ

    ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ವಿರುದ್ಧ ಬಿಜೆಪಿ ಪ್ರಸ್ತಾಪಿಸಿರುವ ಅವಿಶ್ವಾಸ ನಿರ್ಣಯಕ್ಕೆ ಜೆಡಿಎಸ್ ಬೆಂಬಲಿಸುತ್ತದೆ. ಹಾಗೆಯೇ ಸಭಾಪತಿ ಹುದ್ದೆಗೆ ನಾನೂ ಸಹಿತ ಆಕಾಂಕ್ಷಿಯಾಗಿರುವೆ ಎಂದು ಪರಿಷತ್ ನ ಜೆಡಿಎಸ್ ನಾಯಕ ಬಸವರಾಜ ಹೊರಟ್ಟಿ ಹೇಳಿದರು.

    ವಿಧಾನ ಸೌಧ ಬಳಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸಂಖ್ಯಾಬಲ ಹೆಚ್ಚಿರುವ ಕಾರಣ ಸಭಾಪತಿ ಸ್ಥಾನದ ಆಕಾಂಕ್ಷಿಯಾಗಿರುವುದು ತಪ್ಪೇನಲ್ಲ. ಜೆಡಿಎಸ್ ಸಭಾಪತಿ ಸ್ಥಾನ ಬಿಟ್ಟುಕೊಟ್ಟರೆ ಮಾತ್ರ ಅವಿಶ್ವಾಸಕ್ಕೆ ಜೆಡಿಎಸ್ ಬೆಂಬಲಿಸುತ್ತದೆ ಎಂದು ಹೇಳಲು ಬಯಸುವುದಿಲ್ಲ. ಪಕ್ಷದ ವರಿಷ್ಠರಾದ ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಬಿಟ್ಟದ್ದು ಎಂದು ಸ್ಪಷ್ಟಪಡಿಸಿದರು.

    ಪಕ್ಷ ಹಾಗೂ ಜಾತಿ ಬದಲಿಗೆ ಹಿರಿತನದ ಆಧಾರದಲ್ಲಿ ಹೊರಟ್ಟಿಗೆ ಸಭಾಪತಿ ಮಾಡಬೇಕು ಎಂದು ದೇವೇಗೌಡ ಹಾಗೂ ಕುಮಾರಸ್ವಾಮಿ ದೃಢ ನಿಲುವು ತಳೆದಿದ್ದು, ನನ್ನ ಹೆಸರು ಅಂತಿಮವಾದರೆ ಹಿರಿತನ ಆಧಾರದಲ್ಲಿ ಪರಿಷತ್ ನ ಎಲ್ಲ ಸದಸ್ಯರು ಪಕ್ಷಬೇಧ ಮರೆತು ಒಪ್ಪುವ ವಿಶ್ವಾಸವಿದೆ ಎಂದು ಹೊರಟ್ಟಿ ಹೇಳಿದರು.

    ಮನವೊಲಿಕೆ ಯತ್ನ: ಮುನಿಸಿಕೊಂಡಿರುವ ಮಧು ಬಂಗಾರಪ್ಪ ಹಾಗೂ ಎಚ್.ಡಿ.ದೇವೇಗೌಡರ ಮನವೊಲಿಸಿ ಪಕ್ಷದಲ್ಲೇ ಉಳಿಸಿಕೊಳ್ಳಲು ಪ್ರಯತ್ನಿಸಲಾಗುವುದು. ಪಕ್ಷದ ನಾಯಕರ ಸೂಚನೆ ಮೇರೆಗೆ ರಾಜಿ ಸಂಧಾನಕ್ಕೆ ಮುಂದಾಗಿದ್ದೇವೆ.

    ಸಂವಹನ ಕೊರತೆ, ಸಣ್ಣ ಪ್ರಮಾಣದ ಭಿನ್ನಾಭಿಪ್ರಾಯಗಳಿಂದ ಸಮಸ್ಯೆ ತಲೆದೋರಿದೆ. ಪಕ್ಷ ಹಾಗೂ ವೈಯಕ್ತಿಕ ರಾಜಕೀಯ ಬೆಳವಣಿಗೆ ದೃಷ್ಟಿಯಿಂದ ಮುನಿಸಿಕೊಂಡವರು ಜೆಡಿಎಸ್ ನಲ್ಲಿ ಇರುವುದು ಒಳಿತು ಎಂದು ಹೊರಟ್ಟಿ ಹೇಳಿದರೆ, ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ ಧ್ವನಿಗೂಡಿಸಿದರು.

    ಸಿ.ಎಂ.ಇಬ್ರಾಹಿಂ ಪಕ್ಷಕ್ಕೆ ಸೇರ್ಪಡೆಯಾದ ಬಳಿಕ ರಾಜ್ಯ ಪ್ರವಾಸ ಮಾಡಿ ಜನತಾ ಪರಿವಾರದ ನಾಯಕರನ್ನು ಒಗ್ಗೂಡಿಸಿ, ಬಿಹಾರದ ಮಾದರಿಯಲ್ಲಿ ಮುಂದಿನ ವಿಧಾನಸಭೆ ಚುನಾವಣೆಯನ್ನು ಎದುರಿಸಲು ಸಜ್ಜಾಗುತ್ತಿದ್ದೇವೆ. ಇತ್ತೀಚಿನ ಸಭೆ ಬಳಿಕ ಪಕ್ಷದಲ್ಲಿ ಹೊಸ‌ ಹುಮ್ಮಸ್ಸು ತುಂಬಿದೆ ಎಂದು ಬಸವರಾಜ ಹೊರಟ್ಟಿ ಆಶಾಭಾವನೆ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts