ಕಲ್ಲಂಗಡಿ ಒಡೆದಾಗ ಗಡಿಪಾರು ಮಾಡು ಎಂದ ಬುದ್ಧಿಜೀವಿಗಳೇ, ರುಂಡ ಕತ್ತರಿಸಿದ್ದಾರೆ... ಬಾಯಿ ಮುಚ್ಚಿಕೊಂಡಿರುವಿರೇಕೆ?

mutalik
ಮುತಾಲಿಕ್​ ಹಾಗೂ ಶಿರಚ್ಛೇದನ ಮಾಡಿರುವ ಆರೋಪಿಗಳು
Published on

ಧಾರವಾಡ: ಹಿಂದೂ ದೇವರನ್ನು ಅವಹೇಳನ ಮಾಡಿರುವುದನ್ನು ವಿರೋಧಿಸಿ ಬಿಜೆಪಿ ನಾಯಕಿ ನೂಪುರ್​ ಶರ್ಮಾ ಪ್ರವಾದಿ ಮೊಹಮ್ಮದ್​ ವಿರುದ್ಧ ನೀಡಿರುವ ಹೇಳಿಕೆಗೆ ಕಾಂಗ್ರೆಸ್ಸಿಗರು ಸೇರಿದಂತೆ ಇಸ್ಲಾಮಿಕ್​ ರಾಷ್ಟ್ರಗಳು ಪ್ರತಿಭಟನೆ ಮಾಡುತ್ತಿವೆ. ಈ ನಡುವೆಯೇ ಅತ್ಯಂತ ಭಯಾನಕ ಎನ್ನುವ ಘಟನೆ ರಾಜಸ್ಥಾನದ ಉದಯಪುರದಲ್ಲಿ ನಡೆದಿದೆ. ನೂಪುರ್​ ಶರ್ಮಾ ಅವರನ್ನು ಬೆಂಬಲಿಸಿ ಪೋಸ್ಟ್​ ಹಾಕಿದ ಟೇಲರ್​ ಕನ್ಹಯ್ಯಾಲಾಲ್​ ಅವರ ಶಿರಚ್ಛೇದನ ಮಾಡಿರುವ ಕ್ರೂರಿಗಳು, ಆ ಬಗ್ಗೆ ವಿಡಿಯೋ ಮಾಡಿ ಕ್ರೌರ್ಯ ಮೆರೆದಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಹಿಂದೂ ಸಂಘಟನೆಗಳು ಭಾರಿ ಪ್ರತಿಭಟನೆ ನಡೆಸುತ್ತಿವೆ.

ಕಳೆದ ಏಪ್ರಿಲ್​ನಲ್ಲಿ ಮುಸ್ಲಿಂ ವಿರುದ್ಧ ಪ್ರತಿಭಟನೆ ನಡೆಸಿದ್ದ ಕೆಲವು ಹಿಂದೂ ಸಂಘಟನೆ ಕಾರ್ಯಕರ್ತರು ಮುಸ್ಲಿಂ ವ್ಯಾಪಾರಿಯೊಬ್ಬರ ಕಲ್ಲಂಗಡಿ ಹಣ್ಣುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದರು. ದೇವಸ್ಥಾನದಲ್ಲಿ ಅನ್ಯ ಧರ್ಮಿಯರ ವ್ಯಾಪಾರ ನಿಷೇಧ ಮಾಡಬೇಕು ಎಂದು ಪ್ರತಿಭಟಿಸಿ ಹೀಗೆ ಮಾಡಲಾಗಿತ್ತು. ಇದಕ್ಕೆ ಕಾಂಗ್ರೆಸ್​ ಭಾರಿ ವಿರೋಧ ವ್ಯಕ್ತಪಡಿಸಿದ್ದರು. ಕಲ್ಲಂಗಡಿ ಹಣ್ಣನ್ನು ಒಡೆದು ಹಾಕಿದವರನ್ನು ಗಡಿಪಾರು ಮಾಡಿ ಎಂದು ಕಾಂಗ್ರೆಸ್​ ಶಾಸಕ ಪ್ರಸಾದ ಅಬ್ಬಯ್ಯ ಕಿಡಿ ಕಾರಿದ್ದರು.

ಉದಯಪುರದ ಶಿರಚ್ಛೇದನ ಘಟನೆಯನ್ನು ವಿರೋಧಿಸಿ ಇಂದು ಧಾರವಾಡದಲ್ಲಿ ಶ್ರೀರಾಮ ಸೇನೆ ಮುಖ್ಯಸ್ಥ ಮುತಾಲಿಕ್​ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಈ ವಿಷಯದಲ್ಲಿ ಕಾಂಗ್ರೆಸ್​ ಬಾಯಿಮುಚ್ಚಿಕೊಂಡಿರುವುದನ್ನು ವಿರೋಧಿಸಿರುವ ಮುತಾಲಿಕ್​, ಕಲ್ಲಂಗಡಿ ಹಣ್ಣಿನ ಘಟನೆಯನ್ನು ನೆನಪಿಸಿದ್ದಾರೆ.

ಬುದ್ಧಿಜೀವಿಗಳೇ, ದೇವಸ್ಥಾನದಲ್ಲಿ ಅನ್ಯ ಧರ್ಮಿಯರ ವ್ಯಾಪಾರ ನಿಷೇಧಕ್ಕೆ ಸಂಬಂಧಿಸಿದಂತೆ, ಸರ್ಕಾರ ಮಾಡಿದ್ದ ನಿಯಮ ಇತ್ತು. ಅದನ್ನು ಮೀರಿರುವ ಕಾರಣ ಕಲ್ಲಂಗಡಿ ಹಣ್ಣು ಮಾರಾಟ ಮಾಡದಂತೆ ಹೇಳಿ ಪ್ರತಿಭಟಿಸಲಾಗಿತ್ತು. ಆಗ ಕಲ್ಲಂಗಡಿ ಒಡೆದಾಗ ರಕ್ತಪಾತವಾದಂತೆ ರಾದ್ಧಂತ ಮಾಡಿದ್ದವರೇ ಈಗ ಮನುಷ್ಯನ ಶಿರಚ್ಛೇದನವಾಗಿದೆ, ಎಲ್ಲಿ ಇರುವಿರಾ ಎಂದು ಕಿಡಿ ಕಾರಿದ್ದಾರೆ.

ಶಾಸಕ ಪ್ರಸಾದ ಅಬ್ಬಯ್ಯ ಗಡಿಪಾರ ಮಾಡಲು ಹೇಳಿದ್ದರಲ್ಲವೇ, ಈಗ ಕನ್ನಯ್ಯಲಾಲ್ ಹತ್ಯೆ ಆಗಿದೆ, ಎಲ್ಲಿ ಕುಳಿತಿರುವಿರಿ? ರಾಜ್ಯಸ್ಥಾನದಲ್ಲಿ ನಿಮ್ಮದೇ ಸರ್ಕಾರವಿದೆ. ಈಗ ಅಬ್ಬಯ್ಯನವರೇ ಬಾಯಿ ಬಿಡಿ. ಪ್ರತಿಭಟನೆ ಮಾಡಿ ನೋಡೋಣ ಎಂದು ಮುತಾಲಿಕ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬುದ್ಧಿಜೀವಿಗಳು ಮುಸ್ಲಿಂ, ಕ್ರಿಶ್ಚಿಯನ್‌ರ ಏಜೆಂಟರು. ದುಡ್ಡು ತೆಗೆದುಕೊಂಡು ಮಾತನಾಡುತ್ತಾರೆ. ಅವರು ಈ ದೇಶದಲ್ಲಿ ಇರೋಕೆ ಯೋಗ್ಯರಲ್ಲ. ರುಂಡ ಕತ್ತರಿಸಿದ ಘಟನೆ ವಿರುದ್ಧ ಸಿದ್ದರಾಮಯ್ಯ ಸಹ ಮಾತನಾಡಬೇಕು. ಆ ಮನೆಯನ್ನು ಬಹಿಷ್ಕಾರ ಹಾಕಲು ಮುಸ್ಲಿಂ ಸಮಾಜಕ್ಕೆ ಹೇಳಬೇಕು. ಅವರ ಮನೆಗಳ ಪತ್ವಾ ಹೊರಡಿಸಲು ಹೇಳಬೇಕು ಎಂದಿದ್ದಾರೆ.

ಕನ್ನಯ್ಯಲಾಲ್ ಹತ್ಯೆ ಮಾಡಿರುವುದು ಅವರಿಬ್ಬರೇ ಅಲ್ಲ. ಅದು ಇಬ್ಬರ ಕೃತ್ಯ ಅಲ್ಲ. ಇದರ ಹಿಂದೆ ದೊಡ್ಡ ಇಸ್ಲಾಮಿಕ್ ಶಕ್ತಿ ಇದೆ. ಹಿಂದೆ ಟಾಡಾ ಕಾಯಿದೆ ಇತ್ತು. ಅದನ್ನು ಕಾಂಗ್ರೆಸ್ ರದ್ದು ಮಾಡಿತ್ತು. ಈಗ ಅಂತಹ ಕಠಿಣ ಕಾನೂನು ತರಬೇಕು ಎಂದು ಮುತಾಲಿಕ್​ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net