ಹೊಸವರ್ಷಕ್ಕೆ ಭರ್ಜರಿ ಗಿಫ್ಟ್‌: 10 ಕೋಟಿ ರೈತರಿಗೆ 20 ಸಾವಿರ ಕೋಟಿ ರೂ ಪಾವತಿ- ಕರ್ನಾಟಕಕ್ಕೂ ಸಿಂಹ ಪಾಲು

modi
Published on

ನವದೆಹಲಿ/ಬೆಂಗಳೂರು: ಹೊಸ ವರ್ಷದ ಮೊದಲ ದಿನವೇ ರೈತಾಪಿ ವರ್ಗಕ್ಕೆ ಕೇಂದ್ರ ಸರ್ಕಾರ ಭರ್ಜರಿ ಗುಡ್‌ನ್ಯೂಸ್‌ ಕೊಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಪಿಎಂ-ಕಿಸಾನ್‌ ಸಮ್ಮಾನ್‌ ನಿಧಿಯ 10 ನೇ ಕಂತನ್ನು ಬಿಡುಗಡೆ ಮಾಡಿದ್ದಾರೆ. ಈ ಯೋಜನೆಯಲ್ಲಿ ದೇಶದ 10 ಕೋಟಿಗೂ ಅಧಿಕ ರೈತರಿಗೆ 20 ಸಾವಿರ ಕೋಟಿ ರೂ. ಬಿಡುಗಡೆಯಾಗಿದೆ. ಪ್ರತಿವರ್ಷ ಮೂರು ಕಂತುಗಳಲ್ಲಿ ತಲಾ ಎರಡು ಸಾವಿರ ರೂಪಾಯಿ ಅಂದರೆ ವರ್ಷಕ್ಕೆ ಆರು ಸಾವಿರ ರೂಪಾಯಿಗಳನ್ನು ಕೇಂದ್ರ ಸರ್ಕಾರ ನೀಡಲಿದೆ. ಇದಾಗಲೇ 1.6 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಕೇಂದ್ರ ಸರ್ಕಾರ ನೀಡಿದ್ದು, ಇಂದು ಮತ್ತೊಂದು ಕಂತು ಬಿಡುಗಡೆಯಾಗಿದೆ.

ಇದರ ಅಡಿ ಕರ್ನಾಟಕದ ಒಟ್ಟು 34,26,401 ರೈತರಿಗೆ 685 ಕೋಟಿ 28 ಲಕ್ಷ 2ಸಾವಿರ ರೂ. ಹಣ ಬಿಡುಗಡೆಯಾಗಿದೆ ಎಂದು ರಾಜ್ಯದ ಕೃಷಿ ಸಚಿವ ಬಿ.ಸಿ.ಪಾಟೀಲ್ ಮಾಹಿತಿ ನೀಡಿದ್ದಾರೆ.

2018-19 ರಿಂದ ಜ.1, 2022 ರವರೆಗೆ 10 ನೇ ಕಂತಿನವರೆಗೆ ರಾಜ್ಯದ ಒಟ್ಟು 54 ಲಕ್ಷದ 52ಸಾವಿರ ರೈತ ಕುಟುಂಬಗಳಿಗೆ ಒಟ್ಟು 8707 ಕೋಟಿ 97ಲಕ್ಷ ರೂ.ಮೊತ್ತ ಬಿಡುಗಡೆಯಾದಂತಾಗಿದೆ‌.

ಕರ್ನಾಟಕ ರಾಜ್ಯದಲ್ಲಿ ಭಾರತ ಸರ್ಕಾರದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಕಳೆದ 2019 ಫೆ.1ರಿಂದ ಅನುಷ್ಠಾನಗೊಳಿಸಿದ್ದು,ಯೋಜನೆಯಡಿ ವಾರ್ಷಿಕ ರೂ 6000 ರೂ.ಗಳ ಆರ್ಥಿಕ ನೆರವನ್ನು ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ ಮೂಲಕ ನೀಡಲಾಗುತ್ತಿದೆ.ಈ ಅನುದಾನವನ್ನು ರೂ .2000 ಗಳಂತೆ ಮೂರು ಕಂತುಗಳಲ್ಲಿ ನಾಲ್ಕು ತಿಂಗಳಿಗೊಮ್ಮೆ ಇದನ್ನು ನೀಡಲಾಗುತ್ತಿದೆ.

2850 ಕೋಟಿ 54 ಲಕ್ಷ ರೂ.ಗಳಷ್ಟು ಕರ್ನಾಟಕ ಸರ್ಕಾರದಿಂದ ಹೆಚ್ಚುವರಿಯಾಗಿ ರೈತರಿಗೆ ಹಣ ಪಾವತಿಯಾಗಿದೆ.

ಸಾಧ್ಯವಾದಷ್ಟು , ಈ ಯೋಜನೆಯಡಿ ಎಲ್ಲಾ ಪಾವತಿಗಳನ್ನು ಆಧಾರ್‌ ಆಧಾರಿತ ಡಿಬಿಟಿ ಮುಖಾಂತರ ಮಾಡಬೇಕೆಂದು ಸೂಚಿಸಲಾಗಿದ್ದು, ಎಲ್ಲಾ ರಾಜ್ಯಗಳ ಪೈಕಿ , ಕರ್ನಾಟಕ ರಾಜ್ಯವು ಅತಿ ಹೆಚ್ಚು ಶೇಕಡಾವಾರು ಆಧಾರ್‌ ಆಧಾರಿತ ವಹಿವಾಟುಗಳನ್ನು ಅತ್ಯುತ್ತಮವಾಗಿ ನಿರ್ವಹಿಸಿದ ಹಿನ್ನೆಲೆಯಲ್ಲಿ 2021ರ ವರ್ಷದ ಫೆಬ್ರುವರಿಯಲ್ಲಿ ಭಾರತ ಸರ್ಕಾರದಿಂದ ಕರ್ನಾಟಕ ರಾಜ್ಯಕ್ಕೆ ಪ್ರಶಸ್ತಿ ಸಹ ದೊರೆತಿದೆ. ನಿರಂತರ ಮೇಲ್ವಿಚಾರಣೆಯ ಭಾಗವಾಗಿ ಯೋಜನೆಯ ಫಲಾನುಭವಿಗಳಾಗಿರುವ ರೈತ ಕುಟುಂಬಗಳ ಅರ್ಹತೆಯನ್ನು ರಾಜ್ಯದಿಂದ ಆಗಿಂದಾಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net