More

    ಪಕ್ಕದ ಮನೆಯ ಮಹಿಳೆಯರ ಜತೆಯಷ್ಟೇ ಸಲುಗೆಯಿಂದ ವರ್ತಿಸೋ ಪತಿಯ ಮನಸ್ಸನ್ನು ತಿಳಿಯೋದು ಹೇಗೆ ಮೇಡಂ?

    ಪಕ್ಕದ ಮನೆಯ ಮಹಿಳೆಯರ ಜತೆಯಷ್ಟೇ ಸಲುಗೆಯಿಂದ ವರ್ತಿಸೋ ಪತಿಯ ಮನಸ್ಸನ್ನು ತಿಳಿಯೋದು ಹೇಗೆ ಮೇಡಂ?ಮದುವೆಯಾಗಿ ಹತ್ತುವರ್ಷಗಳ ಕಾಲ ಸುಖವಾಗಿಯೇ ಇದ್ದೆವು. ಎಲ್ಲ ರೀತಿಯಲ್ಲೂ ಒಳ್ಳೆಯವರಾಗಿದ್ದ ನನ್ನ ಗಂಡ ಈಗೊಂದು ವರ್ಷದಿಂದ ತುಂಬ ನಾಟಕವಾಡುತ್ತಿದ್ದಾರೆ. ನಮ್ಮ ಮನೆಯ ಎರಡು ಮನೆಗಳಾಚೆ ಇರುವ ಒಬ್ಬ ಗೃಹಿಣಿ ಹಾಗೂ ಉದ್ಯೋಗಸ್ಥೆಯೊಡನೆ ಅತಿ ಸಲುಗೆಯಿಂದ ವರ್ತಿಸುತ್ತಿದ್ದಾರೆ. ಆಕೆಯ ಗಂಡ ಕುಡುಕ. ಆಕೆಗೆ ಕಾಲೇಜಿಗೆ ಹೋಗುವ ಮಗಳು ಮತ್ತು ಹೈಸ್ಕೂಲಿನಲ್ಲಿ ಓದುವ ಮಗ ಇದ್ದಾರೆ. ಆಕೆ ಕೆಲಸ ಮಾಡುವ ಕಂಪನಿ ಇವರ ಆಫೀಸಿನ ಹತ್ತಿರವೇ ಇರುವುದರಿಂದ ಇವರೇ ಪ್ರತಿನಿತ್ಯ ಆಕೆಯನ್ನು ತಮ್ಮ ಸ್ಕೂಟರ್ ಮೇಲೆ ಕರೆದುಕೊಂಡು ಹೋಗುತ್ತಿದ್ದರು. ನಾನು ಅದಕ್ಕೆ ಆಕ್ಷೇಪಣೆ ಮಾಡಿದ ಮೇಲೆ, ಆಕೆ ನಮ್ಮ ರಸ್ತೆಯನ್ನು ದಾಟಿ ಪಕ್ಕದ ಅಡ್ಡ ರಸ್ತೆಯಲ್ಲಿ ನಿಂತಿರುವುದು, ಇವರು ಅಲ್ಲಿಂದ ಕರೆದುಕೊಂಡು ಹೋಗುವುದು ನಡೆದಿದೆ. ರಾತ್ರಿ ಎಲ್ಲ ಮಲಗಿದ ಮೇಲೂ ಫೋನಿನಲ್ಲಿರುತ್ತಾರೆ. ‘ಯಾರ ಜೊತೆಯಲ್ಲಿ ಮಾತಾಡುತ್ತಿದ್ದಿರಿ’ ಎಂದು ಕೇಳಿದರೆ, ಆಫೀಸು, ಗೆಳೆಯ, ಎಂದೆಲ್ಲ ಸಬೂಬು ಹೇಳುತ್ತಾರೆ. ಇವರು ಸ್ನಾನಕ್ಕೆ ಹೋದಾಗ ಚೆಕ್ ಮಾಡಿದರೆ ಎಲ್ಲ ನಂಬರ್​ಗಳು ಡಿಲೀಟ್ ಆಗಿರುತ್ತವೆ.

    ಇವರ ತಾಯಿಯೂ ನಮ್ಮ ಜೊತೆಯಲ್ಲಿಯೇ ಇದ್ದಾರೆ. ಅವರು ಕರೆದು ಬುದ್ಧಿ ಹೇಳಿದರೆ, ಅವರ ತಲೆಯ ಮೇಲೆ ಕೈಯಿಟ್ಟು ಆಣೆಪ್ರಮಾಣ ಮಾಡುತ್ತಾರೆ. ನಾನು ಹೇಗೋ ಆಕೆಯ ಫೋನ್ ನಂಬರ್ ಪತ್ತೆ ಮಾಡಿ ಇಟ್ಟುಕೊಂಡಿದ್ದೇನೆ. ಇವರು ತಮ್ಮ ಫೋನಿನಲ್ಲಿ ಆಕೆಯ ನಂಬರ್ ಅನ್ನು ಸ್ಟೋರ್ ಮಾಡಿಟ್ಟುಕೊಂಡೇ ಇಲ್ಲ. ನೆನಪಿನ ಶಕ್ತಿಯಿಂದಲೇ ಫೋನ್ ಮಾಡುತ್ತಾರೆ. ನಂತರ ತಕ್ಷಣ ಡಿಲೀಟ್ ಮಾಡುತ್ತಾರೆ. ನಾನು ಆಫೀಸಿಗೆ ಹೋಗಿ ಆಕೆಗೆ ಫೋನ್ ಮಾಡಿದರೆ ಎಂಗೇಜ್ ಆಗಿರುತ್ತದೆ. ಅದೇ ಕ್ಷಣದಲ್ಲಿ ಇವರ ಫೋನ್ ಸಹ ಎಂಗೇಜ್! ಈ ಬಗ್ಗೆ ಕೇಳಿದಾಗಲೆಲ್ಲಾ ಮತ್ತೆ ಹುಸಿ ಉತ್ತರಗಳು, ಆಣೆಪ್ರಮಾಣಗಳು.

    ನಾನು ‘ಪೋಲೀಸ್ ಮುಖಾಂತರ ನಿಮ್ಮ ಫೋನ್ ಕಾಲ್ ಲಿಸ್ಟ್ ತರಿಸಿಕೊಳ್ಳುತ್ತೇನೆ, ನನ್ನದೇ ತಪ್ಪಿದ್ದರೆ ನಿಮ್ಮ ಕ್ಷಮೆ ಕೇಳುತ್ತೇನೆ, ನಿಮ್ಮ ತಪ್ಪಿದ್ದರೆ ಇನ್ನು ಹೀಗೆ ಮಾಡುವುದಿಲ್ಲವೆಂದು ಒಪ್ಪಿಕೊಳ್ಳುತ್ತೀರಾ’? ಎಂದು ಹೇಳಿದರೆ, ‘ತರಿಸಿಕೋ, ನನ್ನದೇನೂ ತಪ್ಪಿಲ್ಲವೆಂದಾದರೆ ನೀನು ಶಾಶ್ವತವಾಗಿ ನನ್ನ ಮನೆ ಬಿಟ್ಟು ಹೋಗಬೇಕು’ ಎನ್ನುತ್ತಾರೆ. ‘ನಿನಗೆ ಅನುಮಾನದ ಮನೋರೋಗ, ಮನೋವೈದ್ಯರ ಹತ್ತಿರ ಹೋಗು’ ಎಂದು ಹೀಯಾಳಿಸುತ್ತಾರೆ. ಈ ಸಮಸ್ಯೆಯನ್ನು ಹೇಗೆ ಪರಿಹಾರ ಮಾಡಿಕೊಳ್ಳಲಿ ತಿಳಿಯುತ್ತಿಲ್ಲ.

    ಉತ್ತರ: ನಿಮ್ಮ ನಾಲ್ಕು ಪುಟಗಳ ಸುದೀರ್ಘ ಪತ್ರವನ್ನು ಓದಿದ ಮೇಲೆ ನನಗನ್ನಿಸಿದ್ದು ನಿಮ್ಮಿಬ್ಬರ ಸಮಸ್ಯೆಯ ನಡುವೆ ನೀವಷ್ಟೇ ಅಲ್ಲ, ನಿಮ್ಮ ಮಗನೂ ಗೊಂದಲಗೊಂಡಿದ್ದಾನೆ. ಅವನ ಸಲುವಾಗಿಯಾದರೂ ನೀವು ಈ ಸಮಸ್ಯೆಯನ್ನು ಸಾಂಪ್ರದಾಯಿಕವಾದ ಜಗಳ, ಪಂಚಾಯಿತಿ ಇಂಥ ಹಳವಂಡಗಳನ್ನು ಮಾಡಿಕೊಳ್ಳದೆ ವೈಜ್ಞಾನಿಕ ರೀತಿಯಲ್ಲಿ ಪರಿಹಾರ ಮಾಡಿಕೊಳ್ಳುವುದು ಒಳ್ಳೆಯದು.

    ದಾಂಪತ್ಯವೆನ್ನುವುದು ನಂಬಿಕೆ ಮತ್ತು ಪ್ರಾಮಾಣಿಕತೆಯ ಅಡಿಪಾಯದ ಮೇಲೆ ನಿಂತಿರುವಂಥದ್ದು. ಈಗ ನಿಮ್ಮ ಗಂಡ ಅಪ್ರಾಮಾಣಿಕರಾಗಿದ್ದಾರೆ ಮತ್ತು ನಿಮ್ಮ ಕಡೆಯಿಂದ ಅಪನಂಬಿಕೆ ಪ್ರಾರಂಭವಾಗಿದೆ. ಅದನ್ನು ಹೋಗಲಾಡಿಸಿಕೊಳ್ಳಲು ಫೋನ್ ಚೆಕ್ ಮಾಡುವುದು, ಮಗುವಿನ ಮುಂದೆ ಜಗಳವಾಡುವುದು, ಅತ್ತೆಯಿಂದ ಬುದ್ಧಿ ಹೇಳಿಸುವುದನ್ನು ಮಾಡಿದ್ದೀರಿ. ಇವೆಲ್ಲ ನಿಮ್ಮ ಗಂಡನಲ್ಲಿ ಹಠವನ್ನು ಜಾಸ್ತಿ ಮಾಡುತ್ತವೆ, ಮತ್ತು ನಿಮಗೆ ಬರೀ ಒತ್ತಡ ತಂದುಕೊಡುತ್ತವೆ. ನಿಮ್ಮ ಪತ್ರವನ್ನು ನೋಡಿದರೆ ನಿಮಗೇನೂ ಪ್ಯಾರಾನೈಡ್ ಡಿಸಾರ್ಡರ್ (ಅನುಮಾನದ ರೋಗ) ಇಲ್ಲವೆನಿಸುತ್ತದೆ. ನಿಮ್ಮ ಗಂಡನ ನಡವಳಿಕೆ ಯಾರಿಗಾದರೂ ಅನುಮಾನ ಹುಟ್ಟಿಸುವಂಥದ್ದೇ. ಅದರಲ್ಲೂ ನಿಮ್ಮ ಗಂಡ ‘ಪೋಲೀಸರಿಂದ ಫೋನ್ ವಿವರ ತರಿಸಿಕೊಂಡ ಬಳಿಕ ನನ್ನ ತಪ್ಪಿಲ್ಲದಿದ್ದರೆ ನೀನೇ ಮನೆ ಬಿಟ್ಟು ಹೋಗಬೇಕು’ ಎನ್ನುವ ಷರತ್ತು ಹಾಕಿರುವುದನ್ನು ನೋಡಿದರೆ ಅವರು ನಿಮ್ಮನ್ನು ಎಮೋಷನಲ್ ಬ್ಲಾಕ್​ಮೇಲ್ ಮಾಡುತ್ತಿದ್ದಾರೆ ಅನ್ನಿಸುತ್ತದೆ. ಏನೂ ತಪ್ಪು ಮಾಡದ ಮನುಷ್ಯರಾದರೆ, ‘ತರಿಸಿಕೋ. ಆಗಲಾದರೂ ನಿನ್ನ ಅನುಮಾನ ಪರಿಹಾರವಾಗುತ್ತದೆ, ಇದರಿಂದ ನನಗೂ ಸಂತೋಷ’ ಎನ್ನಬೇಕಿತ್ತಲ್ಲವೇ?

    ಈ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಲು ನಿಮಗಿರುವ ಉತ್ತಮ ಮಾರ್ಗವೆಂದರೆ 1) ಇಬ್ಬರೂ ಒಟ್ಟಿಗೇ ಹೋಗಿ ಮನೋವೈದ್ಯರನ್ನು ಕಾಣುವುದು. 2) ಉತ್ತಮ ಅನುಭವಿ ವಕೀಲರನ್ನು ಕಾಣುವುದು. ಬಹುಶಃ ಈ ಎರಡು ಕಡೆಗಳಲ್ಲಿ ನಿಮಗೆ ಪರಿಹಾರ ಸಿಕ್ಕರೂ ಸಿಗಬಹುದು. ಆದರೂ ನಿಮಗೆ ಒಂದು ಸತ್ಯವನ್ನು ನನ್ನ ಈ 20 ವರ್ಷಗಳ ಕೌನ್ಸೆಲಿಂಗ್ ಅನುಭವದಿಂದ ಹೇಳುತ್ತಿದ್ದೇನೆ. ದಾಂಪತ್ಯದಲ್ಲಿ ಪರಸ್ಪರರಲ್ಲಿ ಪ್ರಾಮಾಣಿಕತೆ ಮರೆಯಾದರೆ ಅಂಥ ದಾಂಪತ್ಯವನ್ನು ಉಳಿಸಲಾಗುವುದಿಲ್ಲ. ಶೀಲವೆನ್ನುವುದು ಪ್ರತಿಯೊಬ್ಬ ವ್ಯಕ್ತಿಯ ಆತ್ಮಸಾಕ್ಷಿಯಾಗಿರಬೇಕು. ನೀತಿ ಮಾರ್ಗವನ್ನು ಬಾಲ್ಯದಿಂದಲೇ ಅಳವಡಿಸಿಕೊಂಡಿರುವವರಿಗೆ ಮನಸ್ಸು ಎಂದಿಗೂ ಚಂಚಲವಾಗಿವುದಿಲ್ಲ. ದುರಂತವೆಂದರೆ, ಇಂದಿನ ದಾಂಪತ್ಯವ್ಯವಸ್ಥೆಯಲ್ಲಿ ಈ ಅನೀತಿಗಳು ತಲೆಹಾಕುತ್ತಿರುವುದು. ಮದುವೆಯಾಗಿ ಒಂದೆರಡು ಮಕ್ಕಳ ತಂದೆ ಹಾಗೂ ತಾಯಿಯಾದ ಮೇಲೂ, ಮತ್ತೊಬ್ಬ ಪುರುಷನ/ ಮಹಿಳೆಯ ಸಂಗಸುಖಕ್ಕಾಗಿ ಹಂಬಲಿಸುವುದು, ಪಡೆಯುವುದನ್ನೆಲ್ಲ ಮಾಡುವುದು ಆತ್ಮಸಾಕ್ಷಿಯನ್ನು ಸಾಯಿಸಿಕೊಂಡ ಜನ. ಇಂಥ ಪರಿಸರದಲ್ಲಿ ಬೆಳೆಯುವ ಮಕ್ಕಳ ನೈತಿಕತೆ ಏನಾಗಬಹುದು? ಮತ್ತೊಬ್ಬರನ್ನು ಬಯಸುವ ಮುನ್ನ ಪ್ರತಿ ಪುರುಷ ಮತ್ತು ಮಹಿಳೆ ತಮಗೆ ತಾವೇ ಈ ಪ್ರಶ್ನೆ ಕೇಳಿಕೊಳ್ಳಬೇಕಾದ್ದು ಇಂದಿನ ತುರ್ತು ಅಗತ್ಯ.

    VIDEO: ತಾನು ಬಿಡೋ ‘ವಾಯು’ ಮಾರಿ ವಾರಕ್ಕೆ 38 ಲಕ್ಷ ರೂ. ಗಳಿಸ್ತಾಳೆ! ಮೂಗು ಮುಚ್ಕೋಬೇಡಿ… ಇವಳ ಬಾಯಲ್ಲೇ ಕೇಳಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts