More

    VIDEO: ‘ನಾಚಿಗೆ ಆಗಲ್ವಾ? ರಾಜಕಾರಣಿ ಥರ ಕಾಣಿಸ್ತೀರಿ’ ಎಂದು ಹೆಡ್​ಮಾಸ್ಟರ್​ ಸಂಬಳ ಕಟ್​ ಮಾಡಿದ ಮ್ಯಾಜಿಸ್ಟ್ರೇಟ್​!

    ಪಟ್ನಾ (ಬಿಹಾರ): ಶಾಲೆ ಮುಖ್ಯೋಪಾಧ್ಯಾಯರೊಬ್ಬರು ರಾಜಕಾರಣಿಯ ಹಾಗೆ ಕಾಣುತ್ತಿದ್ದಾರೆ ಎನ್ನುವ ಕಾರಣದಿಂದ ಅವರ ಸಂಬಳವನ್ನು ಕಟ್​ ಮಾಡಿ, ಅವರನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿರುವ ಘಟನೆ ಬಿಹಾರದ ಲಖಿಸರಾಯ್ ಜಿಲ್ಲೆಯಲ್ಲಿ ನಡೆದಿದೆ.

    ಅಷ್ಟಕ್ಕೂ ಹೆಡ್​ಮಾಸ್ಟರ್​ ರಾಜಕಾರಣಿಯ ಹಾಗೆ ಕಾಣಿಸಲು ಕಾರಣ ಅವರು ಕುರ್ತಾ, ಪೈಜಾಮ್​ ಧರಿಸಿದ್ದು! ಬಿಹಾರದ ಸಾಂಪ್ರದಾಯಿಕ ಉಡುಗೆಯಾದ ಕುರ್ತಾ, ಪೈಜಾಮ್​ ಧರಿಸಿದ ಕಾರಣಕ್ಕೆ ಅವರನ್ನು ಲಖಿಸರಾಯ್ ಜಿಲ್ಲೆಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಂಜಯ್ ಕುಮಾರ್ ಸಿಂಗ್ ಬಾಯಿಗೆ ಬಂದಂತೆ ಬೈಯ್ದು ಅವರ ಸಂಬಳ ಕಟ್​ ಮಾಡಿದ್ದಾರೆ. ಇದರ ವಿಡಿಯೋ ವೈರಲ್​ ಆಗಿದೆ.

    ಜಿಲ್ಲೆಯ ಸದರ್ ಬ್ಲಾಕ್‌ಗೆ ಒಳಪಡುವ ಬಲ್ಗುದಾರ್ ಪ್ರಾಥಮಿಕ ಶಾಲೆಗೆ ಜಿಲ್ಲಾ ಮ್ಯಾಜಿಸ್ಟ್ರೇಟ್​ ದಿಢೀರ್​ ಭೇಟಿ ಕೊಟ್ಟಿದ್ದರು. ಮುಖ್ಯ ಶಿಕ್ಷಕರು ಆ ಸಮಯದಲ್ಲಿ ಕುರ್ತಾ ಪೈಜಾಮ್​ ಧರಿಸಿದ್ದರು. ಇದನ್ನು ಕಂಡು ಮ್ಯಾಜಿಸ್ಟ್ರೇಟ್​ ರೇಗಿ ಹೋದರು. “ನೀವು ವಿದ್ಯೆ ಕಲಿಸುವ ಗುರುವೋ ಅಥವಾ ಮತ ಕೇಳುವ ರಾಜಕಾರಣಿಯೋ, ಈ ರೀತಿ ಡ್ರೆಸ್​ ಧರಿಸಿದರೆ ಮತಯಾಚಿಸಲು ಜನರ ಬಳಿಗೆ ಹೋಗಿ, ನೀವು ಶಿಕ್ಷಕರಂತೆ ಕಾಣದೆ ಸಾರ್ವಜನಿಕ ಜನಪ್ರತಿನಿಧಿಯನ್ನು ಹೋಲುತ್ತೀರಿ” ಎಂದು ಕಿಡಿ ಕಾರಿದರು.


    ಅಧಿಕಾರಶಾಹಿಗಳು ಆಗಾಗ ತಮ್ಮ ಮಿತಿಯನ್ನು ಮರೆತು ಬಡ ಶಿಕ್ಷಕರನ್ನು ತಮ್ಮ ಗುಲಾಮರಂತೆ ಪರಿಗಣಿಸುತ್ತಾರೆ ಎಂದು ಶಾಲೆಯ ಆಡಳಿತ ಮಂಡಳಿ ಆರೋಪಿಸಿದೆ. ಮ್ಯಾಜಿಸ್ಟ್ರೇಟ್​ ಅವರು ಅಸಭ್ಯವಾಗಿ ನಡೆದುಕೊಂಡಿದ್ದಾರೆ. ಇನ್ನು ಮುಂದೆ ನಾವು ಇದನ್ನು ಸಹಿಸುವುದಿಲ್ಲ ಎಂದು ಕೆಲವರು ಸಿಡಿದೆದಿದ್ದಾರೆ. ಕೆಲ ಶಿಕ್ಷಕರ ಸಂಘಟನೆಗಳು ಕೂಡ ಇದರ ವಿರುದ್ಧ ದನಿ ಎತ್ತಿವೆ. ಬಿಹಾರದಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಯಾವುದೇ ಡ್ರೆಸ್ ಕೋಡ್ ಇಲ್ಲ. ಕುರ್ತಾ ಪೈಜಾಮ ಕೆಟ್ಟದ್ದೇನೂ ಅಲ್ಲ. ಇದು ನಮ್ಮ ಸಾಂಪ್ರದಾಯಿಕ ಉಡುಗೆ. ಇದನ್ನು ಹಾಕಿದ ಕಾರಣಕ್ಕೆ ಛೀಮಾರಿ ಹಾಕಿದ್ದೂ ಅಲ್ಲದೇ ಸಂಬಳ ಕಡಿತ ಮಾಡಿರುವುದು ಅಧಿಕಾರ ದುರ್ಬಳಕೆಗೆ ಪರಮಾವಧಿ ಎಂದು ಎಂದು ಸಂಘಟನೆಗಳು ಆಕ್ರೋಶ ಹೊರಹಾಕಿವೆ.

    ಬಿಹಾರದ ಹೆಚ್ಚಿನ ಶಾಲೆಗಳಲ್ಲಿ ಮೂಲ ಸೌಕರ್ಯಗಳೇ ಇಲ್ಲ. ಅದರತ್ತ ಗಮನ ಹರಿಸುವುದನ್ನು ಬಿಟ್ಟು ಈ ರೀತಿ ಶಿಕ್ಷಕರ ಮೇಲೆ ರೇಗಾಡಿದರೆ ಏನು ಪ್ರಯೋಜನ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಮುಖ್ಯೋಪಾಧ್ಯಾಯರ ಬೆಂಬಲಕ್ಕೆ ಜನ ಅಧಿಕಾರ ಪಕ್ಷದ (ಜೆಎಪಿ) ಮುಖ್ಯಸ್ಥ ಪಪ್ಪು ಯಾದವ್ ಆಗಮಿಸಿದ್ದಾರೆ. ಟ್ವೀಟ್​ ಮಾಡಿರುವ ಅವರು ಜಿಲ್ಲಾ ಮ್ಯಾಜಿಸ್ಟ್ರೇಟ್​ ಅವರನ್ನು ತಕ್ಷಣ ಅಮಾನತುಗೊಳಿಸಬೇಕು ಮತ್ತು ವೇತನವನ್ನು ತಡೆಹಿಡಿಯಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts