More

    ಕಾಲುಗಳಲ್ಲಿ ವಿಪರೀತ ಉರಿ- ನಡೆಯಲು ತೊಂದರೆ: ಪರಿಹಾರವೇನು?

    ಕಾಲುಗಳಲ್ಲಿ ವಿಪರೀತ ಉರಿ- ನಡೆಯಲು ತೊಂದರೆ: ಪರಿಹಾರವೇನು?ಪ್ರಶ್ನೆ: ನನಗೆ 75 ವರ್ಷ. ಮಧುಮೇಹ, ಬಿಪಿ ಮತ್ತು ಥೈರಾಯ್ಡ್ ಸಮಸ್ಯೆ ಇದೆ. ಶುಗರ್, ಬಿಪಿಗೆ ಔಷಧ ತೆಗೆದುಕೊಳ್ಳುತ್ತಿದ್ದೇನೆ. ಒಂದೂವರೆ ವರ್ಷದ ಹಿಂದೆ ನನಗೆ ಕಾಲು ಉರಿ ಬರುವುದು ಶುರುವಾಯಿತು.

    ಚರ್ಮ ಕಾಲಿನಲ್ಲಿ ಎದ್ದು ಮುಳ್ಳು ಕಲ್ಲು ಚುಚ್ಚಿದಂತೆ ಆಗುತ್ತಿತ್ತು. ಐದು ತಿಂಗಳ ಹಿಂದೆ ಬಿದ್ದು ಏಟು ಮಾಡಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದೆ. ಡಾಕ್ಟರ್​ಗೆ ತೋರಿಸಿದಾಗ ಅದು ಶುಗರ್​, ಮೂಲವ್ಯಾಧಿಯಂತೆಯೇ ಎಂದು ಮಾತ್ರೆ ಕೊಟ್ಟಿದ್ದರು. ಈಗ ಕಾಲಿನಲ್ಲಿ ಏಳುತ್ತಿದ್ದ ಚರ್ಮ ನಿಂತಿದೆ. ಕೆಂಪಾಗುವುದೂ ಇಲ್ಲ. ಆದರೆ, ಉರಿ ಹಾಗೆಯೇ ಇದೆ.

    ಕಾಲಿಟ್ಟರೆ ಎತ್ತುವಾಗ ಅಂಟಿಕೊಂಡಂತೆ ಆಗುತ್ತದೆ. ಆಯಿಂಟ್‍ಮೆಂಟ್ ಹಚ್ಚಿದರೆ ಉರಿ ಜಾಸ್ತಿ ಆಗುತ್ತದೆ. ಬೆರಳು ಮಡಚಲು ಆಗುವುದಿಲ್ಲ. ನಡೆಯಲು ತೊಂದರೆ ಆಗುತ್ತಿದೆ. ಇದಕ್ಕೆ ಏನಾದರೂ ಔಷಧ ಇದ್ದಲ್ಲಿ ತಿಳಿಸಿ.

    ಉತ್ತರ: ಕಾಲುಗಳಲ್ಲಿ ಉರಿ ಬರುವುದು ಮಧುಮೇಹದಿಂದ ಉಂಟಾಗುವ ನ್ಯೂರೋಪತಿಯಿಂದ ಇರಬಹುದು. ನರಗಳ ಸಮಸ್ಯೆಯಿಂದಾಗಿ ಹೀಗಾಗುತ್ತದೆ. ಪ್ರತಿದಿನ ಚಂದನಾದಿ ತೈಲವನ್ನು ಕಾಲಿಗೆ ಹಚ್ಚಿ ಮೃದುವಾಗಿ ಮಸಾಜ್ ಮಾಡಿಕೊಂಡು ಬೆಚ್ಚಗಿನ ನೀರಿನಲ್ಲಿ ಕಾಲಿಟ್ಟು ಕುಳಿತುಕೊಳ್ಳಿ. ನೆಲ್ಲಿಕಾಯಿ ಪುಡಿ, ಗುಲಾಬಿ ದಳಗಳ ಪುಡಿಯನ್ನು ಗುಲಾಬಿ ಜಲ (ರೋಸ್ ವಾಟರ್)ದಲ್ಲಿ ಬೆರೆಸಿ ಕಾಲಿಗೆ ಲೇಪಿಸಿ ಒಂದು ಗಂಟೆ ಸಮಯ ಬಿಟ್ಟು ತೊಳೆದುಕೊಳ್ಳಿ.

    ಥೈರಾಯ್ಡ್ ತೊಂದರೆಗೆ ಈಗ ತೆಗೆದುಕೊಳ್ಳುತ್ತಿರುವ ಔಷಧ ಮುಂದುವರಿಸಿ. ಹಾರ್ಮೋನು ಸ್ರವಿಸುವಿಕೆಯನ್ನು ಸರಿಪಡಿಸಲು ಆಯುರ್ವೇದದಲ್ಲಿ ಅಷ್ಟು ಪರಿಣಾಮಕಾರಿಯಾದ ಔಷಧ ಲಭ್ಯವಿಲ್ಲ. ಆಯುರ್ವೇದದ ಔಷಧಗಳು ಪೂರಕವಾಗಿ ಮಾತ್ರ ಕೆಲಸ ಮಾಡಬಲ್ಲವು. ಬಿಪಿ, ಮಧುಮೇಹಕ್ಕೂ ಈಗ ಸೇವಿಸುತ್ತಿರುವ ಮಾತ್ರೆ ಮುಂದುವರೆಸಿ.

    ಆಹಾರದಲ್ಲಿ ಸಿಹಿ, ಉಪ್ಪು, ಕರಿದ ಪದಾರ್ಥಗಳ ಸೇವನೆ ಬೇಡ. ಕುಡಿಯುವ ನೀರಿಗೆ ಕಾಮಕಸ್ತೂರಿ ಬೀಜ ಇಲ್ಲವೇ ಲಾವಂಚದ ಬೇರು ಹಾಕಿಟ್ಟು ನೀರು ಕುಡಿಯಿರಿ.

    ಕಣ್ಣಿನ ಕೆಳಗಿರುವ ಕಪ್ಪು ವರ್ತುಲ: ವೈದ್ಯರು ಹೇಳಿರುವ ಪರಿಹಾರ ಇಲ್ಲಿದೆ…

    ಅನಿಯಮಿತ ಮೂತ್ರ ಸಮಸ್ಯೆಯೆ?ಆಯುರ್ವೇದ ವೈದ್ಯರ ಪರಿಹಾರ ಇಲ್ಲಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts