More

    ಇಲ್ಲಿ ಹಸುವಲ್ಲ, ಸೆಗಣಿಯ ಮೇಲೆ ಕಳ್ಳರ ಕಣ್ಣು- 100 ಕೆ.ಜಿ ದಿಢೀರ್‌ ನಾಪತ್ತೆ

    ರಾಯಪುರ (ಛತ್ತೀಸಗಢ): ಹಸುವಿನ ಕಳ್ಳತನವಾಗುವ ವಿಷಯ ಹೊಸತೇನಲ್ಲ, ಆದರೆ ಛತ್ತೀಸಗಢದ ರಾಯಪುರದಲ್ಲಿ ಸೆಗಣಿ ಕಳ್ಳತನ ಹೆಚ್ಚಾಗತೊಡಗಿದೆ.

    ನಾಲ್ಕೈದು ದಿನಗಳಿಂದ ಈ ಕಳ್ಳತನ ಹೆಚ್ಚಾಗಿದ್ದು, ಇದುವರೆಗೆ ರೈತಾಪಿ ಜನರು ಕೂಡಿಟ್ಟಿರುವ 100ಕೆ.ಜಿಗೂ ಅಧಿಕ ಸೆಗಣಿಗಳು ಕಳ್ಳತನವಾಗಿವೆ. ಹಸುವನ್ನು ಕದಿಯುವವರು ಬಲು ಚಾಣಾಕ್ಷಕರು, ತುಂಬಾ ನುರಿತ ಕಳ್ಳರೂ ಆಗಿರಬೇಕು. ಆದರೆ ಸೆಗಣಿ ಕದಿಯುವುದು ಸುಲಭ ಎಂಬ ಕಾರಣಕ್ಕೆ ಇದರ ಕಳ್ಳತನ ಮಾಡುವ ದೊಡ್ಡ ಗ್ಯಾಂಗ್‌ ಹುಟ್ಟಿಕೊಂಡುಬಿಟ್ಟಿದೆ!

    ಅಷ್ಟಕ್ಕೂ ಸೆಗಣಿಯ ಮೇಲೆ ಕಳ್ಳರಿಗೆ ಈ ಪರಿಯ ಪ್ರೀತಿ ಹುಟ್ಟಲು ಕಾರಣವೆಂದರೆ ಛತ್ತೀಸಗಢ ಸರ್ಕಾರವು ಜೂನ್‌ 25ರಂದು ಗೋಧನ್‌ ನ್ಯಾಯ ಯೋಜನೆ ಎನ್ನುವ ಯೋಜನೆಯನ್ನು ಆರಂಭಿಸಿರುವುದು. ಸಾವಯವ ವಿಧಾನದಲ್ಲಿ ಕೃಷಿ ಬೆಳೆಯುವುದನ್ನು ಉತ್ತೇಜಿಸುವ ಸಲುವಾಗಿ ಇಂಥದ್ದೊಂದು ಯೋಜನೆಯನ್ನು ಸರ್ಕಾರ ಆರಂಭಿಸಿದೆ.

    ಈ ಯೋಜನೆಯ ಭಾಗವಾಗಿ ಇದೀಗ ಕೃಷಿಕರಿಂದ ರಾಜ್ಯ ಸರ್ಕಾರ ಹಸುವಿನ ಸೆಗಣಿ ಖರೀದಿಗೆ ಮುಂದಾಗಿದೆ. ಪ್ರತಿ ಕಿಲೋಗ್ರಾಂಗೆ 2 ರೂಪಾಯಿಗಳಂತೆ ಸೆಗಣಿ ಖರೀದಿಸಲು ಯೋಜನೆ ರೂಪಿಸಲಾಗಿದೆ.

    ಸರ್ಕಾರಕ್ಕೆ ಕೊಡುವ ಸಲುವಾಗಿ ರೈತರೆಲ್ಲಾ ಸೇರಿ 100 ಕೆ.ಜಿಗೂ ಅಧಿಕ ಸೆಗಣಿಯನ್ನು ಸಂಗ್ರಹಿಸಿ ಇಟ್ಟಿದ್ದರು. ಅದು ದಿಢೀರ್‌ ಕಣ್ಮರೆಯಾಗಿಬಿಟ್ಟಿದೆ. ಮಾತ್ರವಲ್ಲದೇ ಮನೆಗಳಿಂದಲೂ ಸೆಗಣಿ ಕಾಣೆಯಾಗುತ್ತಿರುವ ಪ್ರಕರಣಗಳು ಇಲ್ಲಿ ನಡೆಯುತ್ತಿವೆ.

    ಇದನ್ನೂ ಓದಿ: ಅನ್ನದಾತರಿಗೆ ಆರ್ಥಿಕ ಬಲ; ಕೃಷಿ ಮೂಲಸೌಕರ್ಯ ನಿಧಿ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

    ಕೃಷಿ ಸಚಿವ ರವೀಂದ್ರ ಚೌಬೆ ನೇತೃತ್ವದ ಸಚಿವಸಂಪುಟದ ಉಪಸಮಿತಿಯು ಕಳೆದ ತಿಂಗಳು ಸೆಗಣಿ ಖರೀದಿಸಲು ಶಿಫಾರಸು ಮಾಡುವ ಮೂಲಕ ಛತ್ತೀಗಢದ ಮುಖ್ಯಮಂತ್ರಿ ಭೂಪೇಶ್ ಬಾಗೆಲ್ ಅವರು ಜೂನ್25ರಂದು ಗೋಧನ್‌ ನ್ಯಾಯ ಯೋಜನೆ ಆರಂಭಿಸಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಎರೆಹುಳುಗೊಬ್ಬರ ತಯಾರಿಸುವ ನಿಟ್ಟಿನಲ್ಲಿ ಇದನ್ನು ಬಳಸಿಕೊಳ್ಳುವ ಯೋಜನೆ ಸರ್ಕಾರಕ್ಕಿದೆ.

    ಜಾನುವಾರು ಸಾಕಣೆಯನ್ನು ಉತ್ತೇಜಿಸುವುದು, ಜಾನುವಾರುಗಳ ಸುರಕ್ಷತೆಯನ್ನು ಖಾತರಿಪಡಿಸುವುದು ಮತ್ತು ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ. ರೈತರಿಂದ ನೇರವಾಗಿ ಸೆಗಣಿ ಸಂಗ್ರಹ ಮಾತ್ರವಲ್ಲದೇ ಸ್ವಸಹಾಯ ಗುಂಪುಗಳ ಮಹಿಳೆಯರು ಮನೆ ಮನೆಗೆ ತೆರಳಿ ಸಗಣಿ ಸಂಗ್ರಹಿಸುವುದಕ್ಕೂ ಇಲ್ಲಿ ಅನುಮತಿ ನೀಡಲಾಗಿದೆ.

    ಈ ಯೋಜನೆ ಅಡಿ ಛತ್ತೀಡಗಢ ಸರ್ಕಾರ ಇದಾಗಲೇ 46 ಸಾವಿರಕ್ಕೂ ಅಧಿಕ ಹಸು ಸಾಕಣೆದಾರರ ಖಾತೆಗಳಿಗೆ 1.65 ಕೋಟಿ ರೂಪಾಯಿಗಳಷ್ಟು ಹಣವನ್ನು ವರ್ಗಾವಣೆ ಮಾಡಿದೆ. ಈ ಯೋಜನೆಯ ವ್ಯಾಪ್ತಿಗೆ 2408 ಗ್ರಾಮೀಣ ಪ್ರದೇಶಗಳು ಮತ್ತು 377 ನಗರ ಪ್ರದೇಶಗಳನ್ನು ಸೇರಿಸಿಕೊಳ್ಳಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts