More

    ಡಿಕೆಶಿ, ಸಿದ್ದುಗೆ ಬುದ್ಧಿ ಕಲಿಸಿದ ಮತದಾರ

    ಗದಗ: ಜಾತಿ ರಾಜಕಾರಣ, ದುಡ್ಡಿನ ದರ್ಪ, ಗೂಂಡಾಗಿರಿ ನಡೆಯುವುದಿಲ್ಲ ಎಂಬುದು ಉಪ ಚುನಾವಣೆಯಲ್ಲಿ ಮತ್ತೊಮ್ಮೆ ಸಾಬೀತಾಗಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಅಹಂಕಾರಕ್ಕೆ ಮತದಾರರು ತಕ್ಕ ಪಾಠ ಕಲಿಸಿದ್ದಾರೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

    ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಯಡಿಯೂರಪ್ಪ ಅವರು ಚುನಾವಣೆ ನಂತರ ಮುಖ್ಯಮಂತ್ರಿ ಕುರ್ಚಿಯಿಂದ ಇಳಿಯುತ್ತಾರೆ ಎಂದು ಸುಳ್ಳು ಹೇಳಿ ಜನರ ದಾರಿ ತಪ್ಪಿಸುವ ಕೆಲಸ ಮಾಡಿದರು. ಆದರೆ, ಮತದಾರರು ಬಿಜೆಪಿಗೆ ಮತ ನೀಡುವ ಮೂಲಕ ಇಬ್ಬರಿಗೂ ಬುದ್ಧಿ ಕಲಿಸಿದರು. ಹೀಗಾಗಿ ಡಿ.ಕೆ. ಶಿವಕುಮಾರ ಮತ್ತು ಸಿದ್ದರಾಮಯ್ಯ ಮತದಾರರ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.

    ಕಾಂಗ್ರೆಸ್​ನವರು ಪಾಠ ಕಲಿಯುವರಲ್ಲ. ಸುಳ್ಳು ಹೇಳುವುದು, ಗೂಂಡಾಗಿರಿ ಮಾಡುವುದು ಕಾಂಗ್ರೆಸ್ ರಕ್ತಗತವಾಗಿ ಬಂದಿದೆ. ಮರ್ಯಾದೆಗೆಟ್ಟ ಇಂಥವರನ್ನು ಜನರು ಮೂಲೆಗೆ ತಳ್ಳುತ್ತಾರೆ ಎಂದು ಟೀಕಿಸಿದರು.

    ಯಡಿಯೂರಪ್ಪ ಪೂರ್ಣಾವಧಿ ಸಿಎಂ ಕಾರ್ಯನಿರ್ವಹಿಸಲಿದ್ದು, ಇದರಲ್ಲಿ ಯಾವುದೇ ಸಂಶಯವಿಲ್ಲ. ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟಿದ್ದು ಎಂದರು.

    ಮಠಾಧೀಶರು ತಲೆ ಹಾಕಬಾರದು: ಯೋಗೀಶಗೌಡ ಕೊಲೆ ವಿಷಯಕ್ಕೆ ಸಂಬಂಧಿಸಿದಂತೆ ಸಿಬಿಐ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ತನಿಖೆ ಮುಂದುವರಿದಿದ್ದು, ಈ ವಿಷಯದಲ್ಲಿ ಮಠಾಧೀಶರು ತಲೆ ಹಾಕಬಾರದು ಎಂದು ಸಚಿವ ಈಶ್ವರಪ್ಪ ಮನವಿ ಮಾಡಿದರು.

    ಮಠಾಧೀಶರು ದೇವರ ಸಮಾನ ಎಂದು ಪೂಜಿಸಿ ಪ್ರೀತಿಸುವ ಸಂಸ್ಕೃತಿ ನಮ್ಮದು. ಹೀಗಿದ್ದಾಗ ಜಾತಿ ಮುಂದಿಟ್ಟುಕೊಂಡು ಬಂಧನಕ್ಕೆ ಒಳಗಾಗಿರುವ ವ್ಯಕ್ತಿಯ ಮನೆಗೆ ಭೇಟಿ ನೀಡುವುದು ತರವಲ್ಲ. ಸ್ವಾಮೀಜಿಗಳು ಕೇವಲ ಒಂದು ಜಾತಿಗೆ ಸೀಮಿತವಾಗಿ ಕೆಲಸ ಮಾಡಬಾರದು ಎಂದರು. ಕೂಡಲಸಂಗಮ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರನ್ನು ಅನೇಕ ಸಲ ಭೇಟಿ ಮಾಡಿ ಆಶೀರ್ವಾದ ಪಡೆದಿದ್ದೇನೆ. ಅವರು ನನಗೆ ದೇವರ ಸಮಾನ. ಸ್ವಾಮೀಜಿಯವರು ಒಂದು ರಾಜಕೀಯ ಪಕ್ಷದ ವ್ಯಕ್ತಿಯ ಹಿಂದೆ ಹೋಗಬಾರದು ಎಂದರು.

    ಯೋಗೀಶಗೌಡ ಕೊಲೆಗೆ ಸಂಬಂಧಿಸಿದಂತೆ ದಿನದಿನಕ್ಕೆ ಹೊಸ ಹೊಸ ಸಂಗತಿಗಳು ಬೆಳಕಿಗೆ ಬರುತ್ತಿವೆ ಎಂದು ಈಶ್ವರಪ್ಪ ಹೇಳಿದರು.

    ಸಾಮರ್ಥ್ಯ ರುಜುವಾತುಪಡಿಸಿದ ಸಿಎಂ

    ಗದಗ: ಶಿರಾ ಹಾಗೂ ಆರ್​ಆರ್ ನಗರ ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುವ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ರುಜುವಾತುಪಡಿಸಿ ರಾಜಾಹುಲಿ ಎಂಬುದನ್ನು ತೋರಿಸಿದ್ದಾರೆ ಎಂದು ಸಚಿವ ಸಿ.ಸಿ. ಪಾಟೀಲ ಹೇಳಿದರು.

    ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಶಿರಾ ಕ್ಷೇತ್ರದಲ್ಲಿ ಬಿಜೆಪಿ ಅರಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.

    ಆರ್​ಆರ್ ನಗರದಲ್ಲಿ ಸಂಸದ ಡಿ.ಕೆ. ಸುರೇಶ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ, ಮಾಜಿ ಸಿಎಂ ಸಿದ್ದರಾಮಯ್ಯ ಅಬ್ಬರದ ಪ್ರಚಾರ ಮಾಡಿದರಲ್ಲದೆ, ಎಲ್ಲ ಕಡೆಗೂ ಜಾತಿಯ ಕಾರ್ಡ್ ಉರುಳಿಸಿ ಜನರ ಮನಸ್ಸು ಕದಡಲು ಯತ್ನಿಸಿದರು. ಆದರೆ, ಮತದಾರರ ಇದಕ್ಕೆ ಕ್ಯಾರೇ ಎನ್ನಲಿಲ್ಲ. ಹೀಗಾಗಿ ಇವರ ತಂತ್ರಗಾರಿಕೆ ವರ್ಕೌಟ್ ಆಗಲಿಲ್ಲ ಎಂದರು.

    ನೆರೆ, ಪ್ರವಾಹದ ಸ್ಥಿತಿಯನ್ನು ಉತ್ತಮವಾಗಿ ನಿರ್ವಹಿಸಿದ ಬಿಎಸ್​ವೈ ಸರ್ಕಾರಕ್ಕೆ ಮತದಾರ ಜೈ ಎಂದಿದ್ದಾರೆ. ಮುಂದಿನ ಎರಡೂವರೆ ವರ್ಷದಲ್ಲಿ ಬಿಎಸ್​ವೈ ನೇತೃತ್ವದಲ್ಲಿ ಸರ್ಕಾರ ಯಶಸ್ವಿಯಾಗಿ ಕಾರ್ಯ ನಿರ್ವಹಿಸಲಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts