More

    ವಾಸವಾಗದಿದ್ದರೂ ಬಾಡಿಗೆ ಕಡಿತ!

    ಶಿವಕುಮಾರ ಶಶಿಮಠ ಗಜೇಂದ್ರಗಡ

    ವಸತಿ ಗೃಹಗಳ ಅವ್ಯವಸ್ಥೆಯಿಂದಾಗಿ ಶಿಕ್ಷಕರ್ಯಾರೂ ವಾಸಿಸುತ್ತಿಲ್ಲ. ಆದರೂ ಮನೆ ಬಾಡಿಗೆ ಎಂದು ಸಂಬಳದಲ್ಲಿ ಪ್ರತಿ ತಿಂಗಳು 3500 ರಿಂದ 4000 ರೂ. ಕಡಿತವಾಗುತ್ತಿರುವುದು ಹೊರೆಯಾಗಿ ಪರಿಣಮಿಸಿದೆ.

    ತಾಲೂಕಿನ ಮುಶಿಗೇರಿ ಗ್ರಾಮದ ಶಿಕ್ಷಕರ ವ್ಯಥೆ ಇದು. ಗ್ರಾಮದಲ್ಲಿ 2014ರಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರಿಗಾಗಿ 1 ಕೋಟಿ ರೂ. ವೆಚ್ಚದಲ್ಲಿ 8 ವಸತಿ ಗೃಹಗಳನ್ನು ನಿರ್ವಿುಸಲಾಗಿದೆ. ಉದ್ಘಾಟನೆಯಾದ ನಾಲ್ಕೇ ವರ್ಷಗಳಲ್ಲಿ ಮನೆಗಳು ಪಾಳು ಬಿದ್ದಿವೆ. ಜತೆಗೆ ಜೂಜುಕೋರರ ಹಾಗೂ ಅನೈತಿಕ ಚಟುವಟಿಕೆಗಳ ತಾಣವಾಗಿದ್ದು, ಸುತ್ತಮುತ್ತಲಿನ ಜನರಿಗೆ ಕಿರಿಕಿರಿ ಉಂಟು ಮಾಡುತ್ತಿದೆ.

    ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಎಂಟು ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದು, ವಸತಿಗೃಹಗಳ ಅವ್ಯವಸ್ಥೆಯಿಂದಾಗಿ ಯಾರೊಬ್ಬರೂನ ಅಲ್ಲಿ ವಾಸ ಮಾಡುತ್ತಿಲ್ಲ. ಹೀಗಾಗಿ ಕಿಟಕಿ, ಬಾಗಿಲು, ನೆಲಹಾಸು, ಕುಡಿಯುವ ನೀರಿನ ಪೈಪ್​ಗಳು ಕಳ್ಳರ ಪಾಲಾಗಿವೆ. ವಿದ್ಯುತ್ ತಂತಿಗಳು ಎಲ್ಲೆಂದರಲ್ಲೇ ತುಂಡಾಗಿ ಬಿದ್ದಿವೆ. ದುರಸ್ತಿ ಮಾಡುವಂತೆ ಶಿಕ್ಷಕರು ಮೇಲಧಿಕಾರಿಗಳಿಗೆ ಮನವಿ ಮಾಡಿದರೂ ಸಮಸ್ಯೆ ಪರಿಹಾರವಾಗಿಲ್ಲ. ಆದರೂ ಎಂಟು ಶಿಕ್ಷಕರಿಂದ ಪ್ರತಿ ತಿಂಗಳು ತಲಾ 3500 ರಿಂದ 4000 ರೂ.ಗಳು ಮನೆ ಬಾಡಿಗೆ ವೇತನದಲ್ಲಿ ಕಡಿತವಾಗುತ್ತಿದೆ ಎಂಬ ದೂರುಗಳಿವೆ.

    ‘ಮನೆಗಳಿಗೆ ಯಾವುದೇ ಮೂಲಸೌಲಭ್ಯವಿಲ್ಲ. ಹೀಗಿದ್ದರೂ ವೇತನದಲ್ಲಿ ಮನೆ ಬಾಡಿಗೆ ಕಡಿತವಾಗುತ್ತಿದೆ. ಇದರ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಲಿಖಿತ ಮನವಿ ಸಲ್ಲಿಸಿದರೂ ಸಮಸ್ಯೆ ಪರಿಹಾರವಾಗಿಲ್ಲ’ ಎಂದು ಶಿಕ್ಷಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

    ಇಲ್ಲಿರುವ ವಸತಿ ಗೃಹಗಳಿಗೆ ಮೂಲಸೌಲಭ್ಯ ಕಲ್ಪಿಸಿ ಶಿಕ್ಷಕರು ವಾಸವಾಗುವಂತೆ ಮಾಡಬೇಕು.ಇಲ್ಲವೆ ನೌಕರರ ವೇತನದಲ್ಲಿ ಬಾಡಿಗೆ ಕಡಿತ ನಿಲ್ಲಿಸಬೇಕು. ಗುರು ಭವನ ಸಮಸ್ಯೆಯಿಂದ ಗ್ರಾಮಕ್ಕೆ ಶಿಕ್ಷಕರು ಬರಲು ಹಿಂದೇಟು ಹಾಕುತ್ತಿದ್ದು, ಮಕ್ಕಳು ಶಿಕ್ಷಣದಿಂದ ವಂಚಿತರಾಗುವ ಹಂತ ತಲುಪಿದೆ. | ಮಾರುತಿ ನಾಯ್ಕರ, ಮುಶಿಗೇರಿ ನಿವಾಸಿ

    ಒಂದು ಕೋಟಿ ರೂ. ವೆಚ್ಚದಲ್ಲಿ ಕಟ್ಟಿದ ವಸತಿ ಗೃಹದಲ್ಲಿ ಯಾರೂ ವಾಸವಿಲ್ಲದೆ ಇರುವುದರಿಂದ ಪಾಳು ಬಿದ್ದಿವೆ. ಕುಡಿಯುವ ನೀರು, ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಅದನ್ನು ಸರಿಪಡಿಸಬೇಕಿದೆ. ಪಾಳು ಬಿದ್ದು ಅನೈತಿಕ ಚಟುವಟಿಕೆ ಕೇಂದ್ರವಾಗಿರುವ ಕುರಿತು ಅಧಿಕಾರಿಗಳು ಗಮನಕ್ಕೆ ತಂದಿದ್ದಾರೆ. ಸ್ಥಳಕ್ಕೆ ಶೀಘ್ರವೇ ಭೇಟಿ ನೀಡಿ ಪರಿಶೀಲಿಸಲಾಗುವುದು. | ಬಸವಲಿಂಗಪ್ಪ ಜಿ.ಎಂ. ಡಿಡಿಪಿಐ ಗದಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts