More

    ನಿಯಮ ಬಾಹಿರ ಮುಂಬಡ್ತಿ?

    | ಜಗದೀಶ ಹೊಂಬಳಿ ಬೆಳಗಾವಿ

    ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಲ್ಲಿ ವೃಂದ ಮತ್ತು ನೇಮಕಾತಿ ನಿಯಮ ಉಲ್ಲಂಘಿಸಿ ಅನರ್ಹರಿಗೆ ಮುಂಬಡ್ತಿ ನೀಡಿರುವ ಅಧಿಕಾರಿಗಳ ಪ್ರಮಾದವನ್ನು ನಿವೃತ್ತ ನೌಕರರು ಮತ್ತೊಮ್ಮೆ ಖಂಡಿಸಿದ್ದಾರೆ.

    2001, 2003ರಲ್ಲಿ ಜಾರಿಗೆ ಬಂದ ವೃಂದ ಮತ್ತು ನೇಮಕಾತಿ ಹೊಸ ನಿಯಮಗಳನ್ವಯ ಮುಂಬಡ್ತಿ ನೀಡದೆ ಅನನುಭವಿಗಳಿಗೆ ಹುದ್ದೆ ನೀಡಲಾಗಿದೆ. ಇದರಿಂದ ಇಲಾಖೆ ಕಾರ್ಯವೈಖರಿ ಮೇಲೆ ಅಡ್ಡ ಪರಿಣಾಮ ಬೀರಿದೆ. ಅಲ್ಲದೆ, ನೂರಕ್ಕೂ ಹೆಚ್ಚು ಅರ್ಹರು ಮುಂಬಡ್ತಿಯಿಂದ ವಂಚಿತರಾಗಿದ್ದಾರೆ ಎಂದು ಈ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದ ಹಾಗೂ ಅರ್ಹತೆ ಇದ್ದರೂ ಮುಂಬಡ್ತಿ ಸಿಗದೆ ನಿವೃತ್ತರಾದವರು ವಿಜಯವಾಣಿ ಯೊಂದಿಗೆ ಅಸಮಾಧಾನ ತೋಡಿಕೊಂಡಿದ್ದಾರೆ.

    ಇಲಾಖೆಯಲ್ಲಿರುವ ಲಿಪಿಕ ಸಿಬ್ಬಂದಿಗೆ ಮುಂಬಡ್ತಿ ನೀಡಲು ಅವರು ಕನಿಷ್ಠ ಒಂದು ವರ್ಷ ಕೈಗಾರಿಕಾ ಉತ್ತೇಜನ ಅಧಿಕಾರಿಗಾಗಿ ಸೇವೆ ಸಲ್ಲಿಸಿರಬೇಕು. ಇವರಿಗೆ ಮಾತ್ರ ಸಹಾಯಕರ ನಿರ್ದೇಶಕರ ವೃಂದಕ್ಕೆ ಮುಂಬಡ್ತಿ ನೀಡಬೇಕೆಂಬ ನಿಯಮವಿದೆ. ಆದರೆ, ಈ ಮಾನದಂಡ ಅನುಸರಿಸದೆ ಲಿಪಿಕ ನೌಕರರಿಗೆ ಮುಂಬಡ್ತಿ ನೀಡಿ ನಿಯಮಗಳನ್ನು ಉಲ್ಲಂಸಿದ್ದಾರೆ.

    ಅನರ್ಹರಿಗೆ ಮುಂಬಡ್ತಿ: 1999ರ ಡಿಸೆಂಬರ್ 13ರ ಮುಂಬಡ್ತಿ ಸಭೆಯಲ್ಲಿ ಬಹಳಷ್ಟು ಸಿಬ್ಬಂದಿಗೆ ಲಿಪಿಕ ಕೋಟಾದಲ್ಲಿ ಅಧೀಕ್ಷರಾಗಿ ಮುಂಬಡ್ತಿ ನೀಡಲಾಗಿದೆ. ಇವರೆಲ್ಲ 5 ವರ್ಷಗಳ ಅವಧಿಗೆ ಸೇವೆ ಸಲ್ಲಿಸದೆ, ಕೇವಲ 2-3 ವರ್ಷಗಳ ಕಾಲ ಅಧೀಕ್ಷಕರೆಂದು ಕಾರ್ಯನಿರ್ವಹಿಸಿದ್ದಾರೆ. 2001ರ ಜೂನ್ 14ರಂದು ವೃಂದ ನೇಮಕಾತಿ ತಿದ್ದುಪಡಿ ಆದೇಶ ಜಾರಿಗೆ ಬಂದ ಮೇಲೆ ಆಗ ಖಾಲಿ ಇದ್ದ ಹುದ್ದೆಗಳಿಗೆ 32ರ ನಿಯಮದಡಿ ಅವರಿಗೆ ಮುಂಬಡ್ತಿ ನೀಡಿ ಸಹಾಯಕ ನಿರ್ದೇಶಕರನ್ನಾಗಿ ನೇಮಿಸಲಾಗಿತ್ತು. ಅಲ್ಲದೆ, ಉಪನಿರ್ದೇಶಕರ ಹುದ್ದೆಗೂ ನಿಯಮ ಬಾಹಿರ ಮುಂಬಡ್ತಿ ನೀಡಲಾಗಿತ್ತು.

    ನಿವೃತ್ತರ ಖಂಡನೆ: ಅಕ್ರಮ ಬಡ್ತಿಯನ್ನು ಪ್ರಶ್ನಿಸಿದರೆ ತಮ್ಮ ಕೆಲಸಕ್ಕೂ ತೊಂದರೆ ನೀಡುತ್ತಾರೆಂಬ ಕಾರಣಕ್ಕೆ ಅಲ್ಲಿನ ನೌಕರರು ಅಂದು ಚಕಾರ ಎತ್ತಿರಲಿಲ್ಲ. ಇದೀಗ ನಿವೃತ್ತಿ ಹೊಂದಿದ ಬಳಿಕ ಕೆಲ ನೌಕರರು ಈ ಅಕ್ರಮ ಮುಂಬಡ್ತಿಗಳ ವಿರುದ್ಧ ತಿರುಗಿ ಬಿದ್ದಿದ್ದಾರೆ. 2001ರಿಂದ ಇಲ್ಲಿಯವರೆಗೂ ಸುಮಾರು 80 ಅನರ್ಹ ನೌಕರರಿಗೆ ಹಳೇ ನಿಯಮಗಳನ್ವಯ ಮುಂಬಡ್ತಿ ನೀಡಲಾಗಿದೆ. ಇವರಿಗೆ ಅನುಭವ ಇಲ್ಲದಿದ್ದರೂ ಮುಂಬಡ್ತಿ ನೀಡಿದ್ದರಿಂದ ಸರ್ಕಾರಿ ಯೋಜನೆಗಳು ಸರಿಯಾಗಿ ಅನುಷ್ಠಾನಗೊಳ್ಳುತ್ತಿಲ್ಲ ಎಂದು ಅವರು ಅಪಸ್ವರ ಎತ್ತತೊಡಗಿದ್ದಾರೆ.

    ಇಲಾಖೆಗೆ ಪತ್ರ: ಇಲಾಖೆಯಲ್ಲಿ ಸಹಾಯಕ ನಿರ್ದೇಶಕರ ಹುದ್ದೆಗೆ ನಿಯಮ ಉಲ್ಲಂಘಿಸಿ ಮುಂಬಡ್ತಿ ನೀಡಿರುವುದನ್ನು ರದ್ದು ಪಡಿಸುವಂತೆ ಕೋರಿ ಇಲಾಖೆ ನಿವೃತ್ತ ನೌಕರ ಜಿ.ಐ. ಲಕಶೆಟ್ಟಿ ಅವರು, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಸರ್ಕಾರದ ಕಾರ್ಯದರ್ಶಿಗೆ ಪತ್ರ ಬರೆದರೂ ಪ್ರಯೋಜನವಾಗಿಲ್ಲ. ಈ ಬಗ್ಗೆ ಹಲವು ನಿವೃತ್ತ ನೌಕರರು 2010ರಿಂದ ಪದೇ ಪದೆ ಮನವಿ ಮಾಡಿದ್ದರೂ ಇಲಾಖೆ ಅಧಿಕಾರಿಗಳು ಸ್ಪಂದಿಸಿಲ್ಲ.

    ‘2013ರ ಜೇಷ್ಠತೆ ಪಟ್ಟಿಗೆ ತಕರಾರು ಏಕೆ ಸಲ್ಲಿಸಲಿಲ್ಲ’ ಎಂದು ಇಲಾಖೆ ಹಿರಿಯ ಅಧಿಕಾರಿಗಳು ಈಗ ನಮ್ಮನ್ನೇ ಪ್ರಶ್ನಿಸುತ್ತಿದ್ದಾರೆ. ಈಗಲೂ ಕೂಡ ನಿಯಮ ಬಾಹಿರವಾಗಿಯೇ ಮುಂಬಡ್ತಿ ನೀಡುತ್ತಿದ್ದಾರೆ. ಇದರಿಂದ ಅರ್ಹ ನೌಕರರಿಗೆ ಅನ್ಯಾಯವಾಗುತ್ತಿದೆ. ಇನ್ನಾದರೂ ಮುಂಬಡ್ತಿ ನೀಡುವಾಗ ಇಲಾಖೆಯ ನಿಯಮ ಅನುಸರಿಸಿ ಅರ್ಹ ಸಿಬ್ಬಂದಿಗೆ ನ್ಯಾಯ ಸಿಗುವಂತಾಗಲಿ ಎಂದು ನಿವೃತ್ತ ನೌಕರರು ಆಶಯ ವ್ಯಕ್ತಪಡಿಸಿದ್ದಾರೆ.

    3 ವರ್ಷಗಳ ವರೆಗೆ ಆದೇಶ ಅನುಷ್ಠಾನ ವಿಳಂಬ

    ಅಕ್ರಮ ಮುಂಬಡ್ತಿ ರದ್ದು ಮಾಡುವಂತೆ ಕೋರಿ 2001ರಲ್ಲಿ ನೌಕರರು ಕೆಎಟಿ (ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ) ಮೊರೆ ಹೋಗಿದ್ದರು. ಕೆಎಟಿ ಮುಂಬಡ್ತಿ ರದ್ದು ಮಾಡಿ ಆದೇಶ ಮಾಡಿತ್ತು. ಆದರೂ ಇಲಾಖೆ ಅಧಿಕಾರಿಗಳು ಮೂರು ವರ್ಷದವರೆಗೆ ಆದೇಶ ಅನುಷ್ಠಾನಕ್ಕೆ ವಿಳಂಬ ಮಾಡಿದರು. 2005ರಲ್ಲಿ ಹೈಕೋರ್ಟ್ ಮೊರೆ ಹೋಗಿ ಕೆಎಟಿ ಆದೇಶಕ್ಕೆ ತಡೆಯಾಜ್ಞೆ ತಂದಿದ್ದಾರೆ. ಮತ್ತೆ ಹಳೇ ನಿಯಮಗಳನ್ನೇ ಇಲಾಖೆ ಪಾಲಿಸುತ್ತ ಬಂದಿದೆ. ಇದನ್ನು ತಡೆಯುವಂತೆ ಹಾಗೂ ಹೊಸ ನಿಯಮ ಜಾರಿಗೆ ತರುವಂತೆ ಕೋರಿ ನಿವೃತ್ತ ನೌಕರರು 2019ರ ಜನವರಿ 17ರಂದು ಕೆಎಟಿಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಕಾರ್ಯದರ್ಶಿಗೆ ಕೆಎಟಿ ಮತ್ತೊಮ್ಮೆ ನೋಟಿಸ್ ನೀಡಿದೆ. ಆದರೂ ಇಲಾಖೆ ಮೌನವಹಿಸಿದೆ. ಹೀಗಾಗಿ ಇಲಾಖೆ ಅಧಿಕಾರಿಗಳಿಂದ ಬರುವ ಉತ್ತರಕ್ಕಾಗಿ ನಿವೃತ್ತ ನೌಕರರು ಹಾಗೂ ಮುಂಬಡ್ತಿಗೆ ಅರ್ಹರಿರುವ ಸಿಬ್ಬಂದಿ ಕಾಯುತ್ತಿದ್ದಾರೆ.

    15ರಿಂದ 20 ವರ್ಷ ಕೈಗಾರಿಕಾ ಉತ್ತೇಜನಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಸಿಬ್ಬಂದಿಗೆ ಸಹಾಯಕ ನಿರ್ದೇಶಕ ಹುದ್ದೆಗೆ ಮುಂಬಡ್ತಿ ನೀಡಿಲ್ಲ. ವೃಂದ ಮತ್ತು ನೇಮಕಾತಿ ಹೊಸ ನಿಯಮ ರೂಪಿಸಿದ್ದೇಕೆ? ನಿಯಮ ಗಾಳಿಗೆ ತೂರಿ ಇಲಾಖೆ ಅಧಿಕಾರಿಗಳು ಅನರ್ಹರಿಗೂ ಮುಂಬಡ್ತಿ ನೀಡಿದ್ದಾರೆ. ಸರ್ಕಾರ ಹಾಗೂ ಸಚಿವರು ಈ ಬಗ್ಗೆ ಗಮನ ಹರಿಸಿ ವೃಂದ ಮತ್ತು ನೇಮಕಾತಿಗೆ ಹೊಸ ನಿಯಮಗಳನ್ನು ಅಳವಡಿಸಲು ಮುಂದಾಗಬೇಕು.
    | ಜಿ.ಐ. ಲಕಶೆಟ್ಟಿ ಕೈಗಾರಿಕೆ ನಿವೃತ್ತ ಉತ್ತೇಜನಾಧಿಕಾರಿ, ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts