More

    1108 ಕೋಟಿ ರೂ. ನೆರವು ಕೇಳಿದ ವಾಕರಸಾ ಸಂಸ್ಥೆ

    ಹುಬ್ಬಳ್ಳಿ: ಕೋವಿಡ್ ಲಾಕ್​ಡೌನ್​ನಿಂದ ಸಾರಿಗೆ ಬಸ್​ಗಳ ಕಾರ್ಯಾಚರಣೆ ಸಂಪೂರ್ಣ ಸ್ಥಗಿತಗೊಂಡು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ ರಾಜ್ಯ ಸರ್ಕಾರದಿಂದ 1108 ಕೋಟಿ ರೂಪಾಯಿ ಹಣಕಾಸು ಸಹಾಯ ಕೇಳಿದೆ. ಇದರಲ್ಲಿ ಸಿಬ್ಬಂದಿ ವೇತನದ ಜತೆ ನಿವೃತ್ತ ನೌಕರರ ಪಿಂಚಣಿ ಹಾಗೂ ಕರೊನಾದಿಂದ ಮೃತಪಟ್ಟವರಿಗೆ ಪಾವತಿಸಬೇಕಾದ ಪರಿಹಾರ ಮೊತ್ತವು ಸೇರಿದೆ.

    ಕರೊನಾ 1ನೇ ಅಲೆ (2020) ಹಾಗೂ 2ನೇ ಅಲೆ (2021) ನಿಯಂತ್ರಣಕ್ಕೆ ಜಾರಿಗೊಳಿಸಲಾದ ಲಾಕ್​ಡೌನ್​ನಿಂದ ಸುಮಾರು 4 ತಿಂಗಳುಗಳ ಕಾಲ ಬಸ್ ಓಡಾಟ ಸ್ಥಗಿತಗೊಂಡಿದ್ದವು. ಈ ಅವಧಿಯಲ್ಲಿ ಸಂಸ್ಥೆಯು ಸಂಪೂರ್ಣ ಆದಾಯ ನಷ್ಟ ಅನುಭವಿಸಿದೆ. ಸಿಬ್ಬಂದಿ ವೇತನ ಪಾವತಿಗೆ ರಾಜ್ಯ ಸರ್ಕಾರವನ್ನು ಅವಲಂಬಿಸಬೇಕಾಗಿದೆ. ಈ ವರ್ಷ ಜೂನ್​ನಿಂದ ಸೆಪ್ಟೆಂಬರ್​ವರೆಗೆ ಸಿಬ್ಬಂದಿ ವೇತನ ಪಾವತಿಗೆ 256 ಕೋಟಿ ರೂ. ನೀಡಬೇಕೆಂದು ಕೋರಿದೆ. ಇದರಲ್ಲಿ ಜೂನ್ ತಿಂಗಳ ವೇತನ ಪಾವತಿಗೆ ರಾಜ್ಯ ಸರ್ಕಾರ ಕಳೆದ ವಾರ 33.21 ಕೋಟಿ ರೂ. ಬಿಡುಗಡೆ ಮಾಡಿದೆ. ಸಂಸ್ಥೆಯು ಸುಮಾರು 22500 ಸಿಬ್ಬಂದಿಯನ್ನು ಹೊಂದಿದ್ದು, ಇದರಲ್ಲಿ ಶೇ. 80 ರಷ್ಟು ಚಾಲಕ-ನಿರ್ವಾಹಕರೇ ಇದ್ದಾರೆ.

    ಸಿಬ್ಬಂದಿಯ ಒಟ್ಟು ವೇತನದಲ್ಲಿ ಕಡಿತ ಮಾಡಲಾದ ಜೀವ ವಿಮಾ ಪಾಲಿಸಿಯ ಮೊತ್ತವನ್ನು ಸಂಸ್ಥೆಯು 2020ರ ಅಕ್ಟೋಬರ್​ನಿಂದ ಭಾರತೀಯ ಜೀವ ವಿಮಾ ನಿಗಮಕ್ಕೆ ಪಾವತಿಸಿಲ್ಲ. ಈ ಮೊತ್ತ 17.70 ಕೋಟಿ ರೂ. ಗೆ ಮುಟ್ಟಿದೆ. 6 ತಿಂಗಳಿಗಿಂತ ಹೆಚ್ಚು ಕಾಲ ಪಾವತಿ ಬಾಕಿ ಉಳಿಸಿಕೊಂಡರೆ ವಿಮೆ ರದ್ದಾಗುವ ಸಂಭವವಿರುತ್ತದೆ. ಈ ಅವಧಿಯಲ್ಲಿ ನೌಕರರು ಮರಣ ಹೊಂದಿದರೆ ವಿಮಾ ಸೌಲಭ್ಯಕ್ಕಾಗಿ ಕಾನೂನು ಹೋರಾಟ ಮಾಡಬೇಕಾದ ಪರಿಸ್ಥಿತಿ ಎದುರಾಗಲಿದೆ.

    ಪಿಎಫ್ ಬಾಕಿ 277 ಕೋಟಿ ರೂ.: ಇದೇ ಪರಿಸ್ಥಿತಿ ಭವಿಷ್ಯ ನಿಧಿ (ಪಿಎಫ್) ವಂತಿಕೆ ಪಾವತಿಯಲ್ಲೂ ಆಗಿದೆ. ಈ ವರ್ಷ ಫೆಬ್ರವರಿಯಿಂದ ಬಾಕಿ ಉಳಿಸಿಕೊಂಡಿರುವ ಮೊತ್ತ 277 ಕೋಟಿ ರೂ.ಗೆ ತಲುಪಿದೆ. ನೌಕರರ ವೇತನದಲ್ಲಿ ಕಡಿತ ಮಾಡಲಾದ ಪಿಎಫ್ ಮೊತ್ತ ಇಪಿಎಫ್​ಒ ಕಚೇರಿಗೆ ಸಂದಾಯವಾಗಿಲ್ಲ. ಸಹಕಾರಿ ಪತ್ತಿನ ಸಂಘಕ್ಕೆ 15.80 ಕೋಟಿ ರೂ. ಪಾವತಿ ಬಾಕಿ ಉಳಿಸಿಕೊಳ್ಳಲಾಗಿದೆ. ನೌಕರರು ಸಂಘದ ಮೂಲಕ ಪಡೆದ ಸಾಲದ ಕಂತನ್ನು ಪ್ರತಿ ತಿಂಗಳು ಸಂಬಳದಲ್ಲಿ ಕಡಿತ ಮಾಡಲಾಗುತ್ತದೆ. ಹೀಗೆ ಕಡಿತ ಮಾಡಿದ ಮೊತ್ತವನ್ನು ಸಂಘಕ್ಕೆ ಗುಂತಾಯಿಸಲು ಸಂಸ್ಥೆಗೆ ಸಾಧ್ಯವಾಗಿಲ್ಲ.

    2019 ಅಕ್ಟೋಬರ್​ನಿಂದ ಉಪಧನ (ಗ್ರಾಚ್ಯುಯಿಟಿ-100.89 ಕೋಟಿ ರೂ.), 2019 ಅಕ್ಟೋಬರ್​ನಿಂದ ನಿವೃತ್ತರಾದ ನೌಕರರ ರಜೆ ನಗದೀಕರಣ (27.70 ಕೋಟಿ ರೂ.) ಬಾಕಿ ಮೊತ್ತ ಪಾವತಿಸಿಲ್ಲ. ಹಾಲಿ ನೌಕರರ ರಜೆ ನಗದೀಕರಣ ಪಾವತಿಯನ್ನು 2016-17ನೇ ಸಾಲಿನಿಂದ ಬಾಕಿ ಉಳಿಸಿಕೊಳ್ಳಲಾಗಿದೆ. ಈ ಮೊತ್ತ 48.71 ಕೋಟಿ ರೂ. ಮುಟ್ಟಿದೆ.

    ಇದಲ್ಲದೆ, ಇಂಧನ ಪೂರೈಕೆದಾರರಿಗೆ (ಎಚ್​ಪಿಸಿಎಲ್) 75 ಕೋಟಿ ರೂ., ಬಿಡಿ ಭಾಗ ಸರಬರಾಜುದಾರರಿಗೆ 12.40 ಕೋಟಿ ರೂ., ಸಿವಿಲ್ ಕಾಮಗಾರಿ ಬಿಲ್ 7.50 ಕೋಟಿ ರೂ., ನಿವೃತ್ತ ನೌಕರರ ಪಿಂಚಣಿ 4.17 ಕೋಟಿ ರೂ., ಅಪಘಾತ ಪರಿಹಾರ ಮೊತ್ತ 21.90 ಕೋಟಿ ರೂ., ವೇತನ ಪರಿಷ್ಕರಣೆ ಬಾಕಿ 19.05 ಕೋಟಿ ರೂ. ನೀಡಬೇಕಿದೆ. ಬಸ್ ನಿಲ್ದಾಣ ಮತ್ತು ಘಟಕಗಳಲ್ಲಿ ಅತಿ ಅವಶ್ಯಕ ಕಾಮಗಾರಿಗಳಿಗೆ 25 ಕೋಟಿ ರೂ. ಬಿಡುಗಡೆ ಮಾಡಬೇಕೆಂದು ಕೋರಲಾಗಿದೆ. 2021-22ನೇ ಸಾಲಿನಲ್ಲಿ ಸಂಸ್ಥೆಯ ಸುಮಾರು 350 ಬಸ್​ಗಳು ಗುಜರಿಗೆ ಹೋಗುತ್ತವೆ. ಅವುಗಳ ಬದಲಿಗೆ ಅಗತ್ಯವಾಗಿ 300 ಹೊಸ ಬಸ್​ಗಳನ್ನು ಖರೀದಿಸಬೇಕಾದ ಅವಶ್ಯಕತೆ ಇದೆ. ಇದಕ್ಕೆ 90 ಕೋಟಿ ರೂ. ಬೇಕಾಗುತ್ತದೆ ಎಂದು ಹೇಳಿದೆ.

    ಕರೊನಾದಿಂದ 71 ಸಾವು

    ಕರೊನಾ 1ನೇ ಮತ್ತು 2ನೇ ಅಲೆಯಿಂದ ವಾಕರಸಾ ಸಂಸ್ಥೆಯ 71 ಸಿಬ್ಬಂದಿ ಮರಣ ಹೊಂದಿದ್ದಾರೆ. ಸರ್ಕಾರವೇ ಘೊಷಿಸಿದಂತೆ ಮೃತ ಸಿಬ್ಬಂದಿಯ ಕುಟುಂಬದವರಿಗೆ ತಲಾ 30 ಲಕ್ಷ ರೂ. ಪರಿಹಾರ ನೀಡಬೇಕಿದೆ. ಇದರ ಒಟ್ಟು ಮೊತ್ತವು 21.30 ಕೋಟಿ ರೂ. ಆಗುತ್ತದೆ. ಇದಲ್ಲದೆ ಕರೊನಾ ಪೀಡಿತರಾಗಿ ಚಿಕಿತ್ಸೆ ಪಡೆದ ಸಿಬ್ಬಂದಿಗೆ ವೈದ್ಯಕೀಯ ವೆಚ್ಚವಾಗಿ 4 ಕೋಟಿ ರೂ. ಮೊತ್ತವನ್ನು ಪಾವತಿಸಬೇಕಿದೆ.

    ಕೋವಿಡ್ ಲಾಕ್​ಡೌನ್​ನಿಂದ ಸಂಸ್ಥೆಯ ಆರ್ಥಿಕ ಪರಿಸ್ಥಿತಿಯ ಮೇಲೆ ಗಂಭೀರ ಪರಿಣಾಮ ಉಂಟಾಗಿದೆ. ಸಿಬ್ಬಂದಿ ವೇತನ, ನೌಕರರಿಗೆ ಶಾಸನಬದ್ಧವಾಗಿ ಸಲ್ಲಬೇಕಾದ ಸವಲತ್ತು, ನಿವೃತ್ತಿ ಸೌಲಭ್ಯ ಹಾಗೂ ಪಿಂಚಣಿ ಪಾವತಿಗೂ ತೊಂದರೆಯಾಗಿದೆ. ಈ ಹಿನ್ನೆಲೆಯಲ್ಲಿ 1108 ಕೋಟಿ ರೂ. ವಿಶೇಷ ಆರ್ಥಿಕ ನೆರವು ನೀಡುವಂತೆ ಮುಖ್ಯಮಂತ್ರಿಯವರಲ್ಲಿ ಕೋರಿದ್ದೇವೆ.

    | ವಿ.ಎಸ್. ಪಾಟೀಲ, ಅಧ್ಯಕ್ಷರು ವಾಕರಸಾ ಸಂಸ್ಥೆ ಹುಬ್ಬಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts