More

    ಆರ್​ ಆರ್​ ನಗರ, ಶಿರಾದಲ್ಲಿ ರಾಜಕೀಯ ಸ್ಥಿತ್ಯಂತರ: ಕಾಂಗ್ರೆಸ್​ಗೆ ಕಷ್ಟ ಜೆಡಿಎಸ್​ಗೆ ನಷ್ಟ ಬಿಜೆಪಿಗೆ ಲಾಭ?

    ಬೆಂಗಳೂರು: ಉಪಚುನಾವಣೆ ಪ್ರಚಾರ ಕೊನೇ ಹಂತಕ್ಕೆ ತಲುಪಿದ್ದು, ರಾಜಕೀಯ ಪಕ್ಷಗಳು ತಮ್ಮ ಗೆಲುವಿನ ಲೆಕ್ಕಾಚಾರವನ್ನು ಅಳೆಯಲು ಆರಂಭಿಸಿವೆ. ಚುನಾವಣೆ ಘೋಷಣೆಯಾದಾಗ ಇದ್ದ ಸ್ಥಿತಿಗೂ ಈಗಿನ ಸ್ಥಿತಿಗೂ ಬಹಳಷ್ಟು ಮಜಬೂತಾದ ವ್ಯತ್ಯಾಸ ಮಾಡಿಕೊಂಡಿರುವ ರಾಜಕೀಯ ಪಕ್ಷಗಳು, ಗೆಲ್ಲುವ ವಿಶ್ವಾಸದಲ್ಲೇ ಇವೆ. ಈ ನಡುವೆ, ಪಕ್ಷ ಹೊರತಾದ ವ್ಯಕ್ತಿಗಳನ್ನು ಮಾತಿಗೆಳೆದಾಗ ಬೇರೆಯದೇ ಚಿತ್ರಣ ಕಾಣಿಸುತ್ತಿದೆ.

    ಶಿರಾ ಮತ್ತು ರಾಜರಾಜೇಶ್ವರಿ ನಗರ ಉಪಚುನಾವಣೆ ಜೆಡಿಎಸ್ ಪಾಲಿಗೆ ದೊಡ್ಡ ನಷ್ಟ ಉಂಟುಮಾಡಿದೆ. ಪಕ್ಷದ ಪರ ಕೆಲಸ ಮಾಡಿಕೊಂಡಿದ್ದ ದೊಡ್ಡ ಸಂಖ್ಯೆಯ ಪದಾಧಿಕಾರಿಗಳು, ಕಾರ್ಯಕರ್ತರು ಕಾಂಗ್ರೆಸ್​ನತ್ತ ವಲಸೆ ಹೋಗಿದ್ದಾರೆ. ಚುನಾವಣೆಯಲ್ಲಿ ಅಚ್ಚರಿ ನಡೆಯಬಹುದು, ಮತದಾರರು ನಮ್ಮ ಕೈ ಹಿಡಿದರೂ ಹಿಡಿಯಬಹುದು ಎಂಬ ಆಶಾಭಾವನೆಯಷ್ಟೇ ಜೆಡಿಎಸ್ ನಾಯಕರ ಪಾಲಿಗೆ ಉಳಿದಿದೆ. ಬಿಜೆಪಿ ವಿಚಾರಕ್ಕೆ ಬಂದರೆ ಶಿರಾದಲ್ಲಿ ಪರಿಸ್ಥಿತಿ ಸಾಕಷ್ಟು ಸುಧಾರಿಸಿದೆ. ಈ ಹಿಂದಿನ ಚುನಾವಣೆಗಳಲ್ಲಿ ಠೇವಣಿ ಉಳಿಸಿಕೊಳ್ಳುವಷ್ಟು ಮತ ಬರುತ್ತಿತ್ತು. ಈ ಬಾರಿ ಮೊದಲ ಸ್ಥಾನಕ್ಕೆ ಪೈಪೋಟಿ ನೀಡುವಷ್ಟು ವಾತಾವರಣವನ್ನು ಪಕ್ಷ ಬದಲಿಸಿಕೊಂಡಿದೆ.

    ಕಳೆದ ಚುನಾವಣೆಯಲ್ಲಿ ಸೋತ ಕಾಂಗ್ರೆಸ್​ನ ಮಾಜಿ ಸಚಿವ ಜಯಚಂದ್ರ ಸೋಲಿನ ಅನುಕಂಪದ ಆಧಾರದಲ್ಲಿ ಗೆಲ್ಲಬಹುದೆಂಬ ಲೆಕ್ಕಾಚಾರದಲ್ಲಿದ್ದರೆ, ಜೆಡಿಎಸ್ ಅಭ್ಯರ್ಥಿ ಕೂಡ ಅನುಕಂಪದ ಅಲೆಯಲ್ಲೇ ಗೆಲ್ಲುವ ಲೆಕ್ಕ ಹಾಕಿದ್ದಾರೆ. ಇದಕ್ಕೆ ತದ್ವಿರುದ್ಧವಾಗಿ ಯುವ ಅಭ್ಯರ್ಥಿ, ವೈದ್ಯ ಎಂಬ ಅಂಶವನ್ನು ಮುಂದಿಟ್ಟು ಬಿಜೆಪಿ ಹೊರಟಿತ್ತು. ಪಕ್ಷಕ್ಕೆ ತಳ ಮಟ್ಟದಲ್ಲಿ ನೆಲೆ ಇಲ್ಲ. ಈಗ ಅದನ್ನು ಸರಿ ಮಾಡಿಕೊಂಡರೂ ಅದು ಯಾವ ಮಟ್ಟಿಗೆ ಫಲ ನೀಡುಬಹುದೆಂಬ ಅಂದಾಜು ಸಿಗುತ್ತಿಲ್ಲ. ಈ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಎಷ್ಟು ಹೆಚ್ಚು ಮತ ಪಡೆಯುತ್ತಾರೆ ಎಂಬುದರ ಮೇಲೆ, ಕ್ಷೇತ್ರ ಬಿಜೆಪಿಗೋ ಕಾಂಗ್ರೆಸ್​ಗೋ ಎಂಬುದು ನಿರ್ಧಾರವಾಗುತ್ತದೆ. ಜೆಡಿಎಸ್ ಹೆಚ್ಚು ಮತ ಪಡೆದಷ್ಟೂ ತಮಗೆ ಲಾಭ ಎಂದು ಬಿಜೆಪಿ ಎಣಿಸಿದೆ.

    ರಾಜರಾಜೇಶ್ವರಿ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಕಾಂಗ್ರೆಸ್​ನಿಂದ ದೊಡ್ಡ ಪ್ರಮಾಣದಲ್ಲಿ ಕಾರ್ಯಕರ್ತರು, ಮುಖಂಡರನ್ನು ಸೆಳೆದುಕೊಂಡು ಹೋಗಿದ್ದಾರೆ. ಈ ಸ್ಥಾನಕ್ಕೆ ಕಾಂಗ್ರೆಸ್, ಜೆಡಿಎಸ್​ನಿಂದ ಬರ ಸೆಳೆದಿದೆ. ಇದು ಎಷ್ಟು ಪ್ರಮಾಣದಲ್ಲಿ ಲಾಭಕರ ಎಂಬ ಅಂದಾಜು ಪಕ್ಷದ ನಾಯಕರಿಗಿಲ್ಲ. ಡಿ.ಕೆ.ರವಿ, ಒಕ್ಕಲಿಗ, ವಿದ್ಯಾವಂತ ಮಹಿಳೆ ಅಭ್ಯರ್ಥಿ. ಹೀಗೆ ವಿವಿಧ ಆಯಾಮಗಳಲ್ಲಿ ಕಾಂಗ್ರೆಸ್ ಗೆಲುವು ತನ್ನದೆನ್ನುತ್ತಿದೆ. ಹಾಗೆಯೇ ಮೂಲ ಬಿಜೆಪಿಗರು ಆ ಪಕ್ಷದ ಅಭ್ಯರ್ಥಿ ಪರ ಕ್ರಿಯಾಶೀಲವಾಗಿಲ್ಲ, ಇದು ತನಗೆ ಅನುಕೂಲಕರ ಎಂದು ಭಾವಿಸಿದೆ. ಬಿಜೆಪಿ ಕೂಡ ಮುನಿರತ್ನ ವೈಯಕ್ತಿಕ ಬಲ ಮತ್ತು ಪಕ್ಷದ ಮೂಲ ಮತ ಒಟ್ಟುಗೂಡಿದರೆ ಗೆಲುವಿನ ಅಂತರ ಹೆಚ್ಚಾಗಲಿದೆ ಮತ್ತು ಕಾಂಗ್ರೆಸ್​ಗೆ

    ಕ್ಷೇತ್ರದ ಮೇಲೆ ಈವರೆಗೂ ಹಿಡಿತ ಸಿಕ್ಕಿಲ್ಲ ಎಂದು ರಾಜಕೀಯ ಗುಣಾಕಾರದ ಲೆಕ್ಕ ಹೇಳುತ್ತಿದೆ. ಇಲ್ಲಿ ಜೆಡಿಎಸ್ ಬಹುತೇಕ ಆಸೆ ಬಿಟ್ಟಂತೆ ಎಂಬ ಸ್ಥಿತಿ ಇದೆ.

    ಆರ್​ಆರ್ ನಗರ

    1. ಮೂಲ ಬಿಜೆಪಿಗರು ಸಕ್ರಿಯರಾಗಿಲ್ಲ. ಒಕ್ಕಲಿಗ ಮತಗಳು ಒಟ್ಟಾದರೆ ಗೆಲ್ಲಲಡ್ಡಿ ಇಲ್ಲ ಎಂಬುದು ಕಾಂಗ್ರೆಸ್ ನಂಬಿಕೆ.
    2. ಮುನಿರತ್ನ ವೈಯಕ್ತಿಕ ಮತ, ಪಕ್ಷದ ಮತ ಒಂದಾದರೆ ಗೆಲುವಿನ ಅಂತರ ಹೆಚ್ಚಾಗಲಿದೆ ಅಂತ ಬಿಜೆಪಿ ಆಶಾಭಾವನೆ.
    3. ತ್ರಿಕೋನ ಸ್ಪರ್ಧೆ ನಡೆದು ಒಕ್ಕಲಿಗ ಮತ ಹೆಚ್ಚಾಗಿ ಬಂದರೆ ಗೆದ್ದರೂ ಗೆಲ್ಲಬಹುದೆಂದು ಜೆಡಿಎಸ್ ಅಂದುಕೊಂಡಿದೆ.

    ಶಿರಾ

    1. ಕಳೆದ ಬಾರಿ ಸೋತಿದ್ದರಿಂದ ಅನುಕಂಪದ ಮತ, ಪಕ್ಷದ ಮತ ಸೇರಿದರೆ ಸಣ್ಣ ಅಂತರದಿಂದಾರೂ ಗೆಲುವು ಖಚಿತವೆಂಬ ವಿಶ್ವಾಸ ಕಾಂಗ್ರೆಸ್​ನದ್ದು.
    2. ಗೆದ್ದಿದ್ದ ಜೆಡಿಎಸ್ ಅಭ್ಯರ್ಥಿ ಪತ್ನಿಯೇ ಈಗ ಕಣಕ್ಕಿಳಿದಿರುವುದರಿಂದ ಕಳೆದ ಬಾರಿಯಷ್ಟಾದರೂ ಮತ ಬಂದು ಗೆಲ್ಲುಬಹುದೆಂಬ ಅನಿಸಿಕೆ.
    3. ಹೊಸ ಅಭ್ಯರ್ಥಿ, ಜತೆಗೆ ಜನರು ರಾಜ್ಯದಲ್ಲಿ ಆಡಳಿತದಲ್ಲಿರುವ ಪಕ್ಷದ ಪದ ಒಲವು ತೋರುತ್ತಾರೆ, ಹೀಗಾಗಿ ಗೆಲುವು ನಿಶ್ಚಿತ ಎಂದುಕೊಂಡಿದೆ ಬಿಜೆಪಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts