More

    ರೌಡಕುಂದಾ ಗ್ರಾಮ ಪಂಚಾಯಿತಿ ವಿವಿಧ ಯೋಜನೆಗಳಲ್ಲಿ ಬಿಲ್ ಕಲೆಕ್ಟರ್‌ನಿಂದ ಭ್ರಷ್ಟಾಚಾರ

    ಸಿಂಧನೂರು: ತಾಲೂಕಿನ ರೌಡಕುಂದಾ ಗ್ರಾಪಂನಲ್ಲಿ ವಸತಿ ಯೋಜನೆಯಡಿ ಹಿಂದಿನ ವರ್ಷಗಳಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ, ಬಿಲ್ ವಸೂಲಿಯಲ್ಲಿ ಆಗಿರುವ ಲೋಪಗಳ ಕುರಿತು ಸ್ವತಃ ಆಡಳಿತ ಮಂಡಳಿಯೇ ಗ್ರಾಮೀಣ ಪೊಲೀಸ್ ಠಾಣೆಗೆ ಗುರುವಾರ ದೂರು ಸಲ್ಲಿಸಿದೆ.

    ಗ್ರಾಪಂ ವ್ಯಾಪ್ತಿಯಲ್ಲಿ 2014 ರಿಂದ ಈವರೆಗೆ 70 ಫಲಾನುಭವಿಗಳ ಹೆಸರಿನಲ್ಲಿ ಮನೆ ಮಂಜೂರಾದರೂ ಅವುಗಳು ಫಲಾನುಭವಿಗಳಿಗೆ ತಲುಪಿಲ್ಲ. ಜನ ಇನ್ನೂ ಗುಡಿಸಸಲ್ಲೇ ವಾಸವಿದ್ದಾರೆ. ಆದರೆ, ಅವರ ಹೆಸರಿನಲ್ಲಿ ಬಿಲ್‌ಗಳನ್ನು ಪಡೆದುಕೊಳ್ಳಲಾಗಿದೆ. ಶೌಚಗೃಹ ಗಳಿದ್ದರೂ ಕಟ್ಟಿಸಿದ್ದಾಗಿ ಬಿಲ್ ಪಡೆಯಲಾಗಿದೆ. ಸದ್ಯ ಗ್ರಾಪಂನಲ್ಲಿ 90 ಫಲಾನುಭವಿಗಳಿಗೆ ಮನೆ ಮಂಜೂರು ಮಾಡಿದ್ದಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳು ಉಳಿದಿಲ್ಲ. ಗ್ರಾಪಂನಿಂದ ಕರವಸೂಲಿಯಲ್ಲೂ ಅವ್ಯವಹಾರ ನಡೆದಿದೆ. ಈ ಎಲ್ಲ ಹಗರಣದಲ್ಲಿ ಬಿಲ್‌ಕಲೆಕ್ಟರ್ ರಂಜಾನ್‌ಸಾಬ್ ಸೂತ್ರಧಾರನಾಗಿದ್ದು, ಆತನ ವಿರುದ್ಧವೇ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಸ್ವತಃ ತಾನೇ ತನ್ನ ಸಂಬಂಧಿಕರ ಹೆಸರಿನಲ್ಲೂ 6 ಮನೆಗಳನ್ನು ಕಟ್ಟಿಸಿಕೊಂಡು ಹಣ ಪಡೆದಿದ್ದಾಗಿ ದೂರಿನಲ್ಲಿ ಆರೋಪಿಸಲಾಗಿದೆ.

    ಕರವಸೂಲಿಗಾರ ರಂಜಾನ್ ಸಾಬ್ ಆಶ್ರಯ ಮನೆ, ಶೌಚಗೃಹ ನಿರ್ಮಾಣ, ಕರ ವಸೂಲಿ ಹಾಗೂ ಗ್ರಾಪಂ ವಿವಿಧ ಹಣಕಾಸು ಮೂಲಗಳಿಂದ ಎರಡು ಕೋಟಿಗೂ ಅಧಿಕ ಭ್ರಷ್ಟಾಚಾರ ಮಾಡಿದ್ದಾರೆ. ಇದು ಗ್ರಾಪಂ ಮಟ್ಟದಲ್ಲಿ ತಾಲೂಕಿನಲ್ಲೇ ಅತೀ ದೊಡ್ಡ ಭ್ರಷ್ಟಾಚಾರ ಪ್ರಕರಣವಾಗಿದೆ. ಕೂಡಲೇ ಆತನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ತನಿಖೆ ನಡೆಸಬೇಕೆಂದು ಗ್ರಾಪಂ ಅಧ್ಯಕ್ಷ ಮಹಾಂತೇಶ ಹಿರೇಗೌಡರ್, ಉಪಾಧ್ಯಕ್ಷೆ ಲಕ್ಷ್ಮೀ, ಸದಸ್ಯರಾದ ರೇಣುಕಮ್ಮ, ಆಯಾಬ್ ಕಾಗೇರಿ, ಬಿ.ಶ್ರೀನಿವಾಸ, ದುರುಗಪ್ಪ, ಕಾಶೀಂಸಾಬ್, ಜಗದೀಶಗೌಡ, ಗಂಗಪ್ಪ, ರವಿಕುಮಾರ, ರಾಘವೇಂದ್ರ, ವಿಜಯ, ಮಹಾಂತೇಶ ಕುಮಾರ, ಚಂದ್ರಶೇಖರ, ಮರಿಯಮ್ಮ ದೂರಿನಲ್ಲಿ ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts