More

    IPL 2024: ಇಂದು ಲಖನೌ-ಗುಜರಾತ್​ ಮುಖಾಮುಖಿ; ಮಾಜಿ ಚಾಂಪಿಯನ್​ ಎದುರು ಕೆಎಲ್​ ರಾಹುಲ್​ ಪಡೆಗೆ ಮೊದಲ ಗೆಲುವಿನ ಹಂಬಲ

    ಲಖನೌ: ಹ್ಯಾಟ್ರಿಕ್​ ಗೆಲುವಿನ ಹಂಬಲದಲ್ಲಿರುವ ಲಖನೌ ಸೂಪರ್​ಜೈಂಟ್ಸ್​ ಮತ್ತು ಸ್ಥಿರ ನಿರ್ವಹಣೆ ತೋರುವ ತುಡಿತದಲ್ಲಿರುವ ಗುಜರಾತ್​ ಟೈಟಾನ್ಸ್​ ತಂಡಗಳು ಐಪಿಎಲ್​-17ರಲ್ಲಿ ಭಾನುವಾರದ 2ನೇ ಪಂದ್ಯದಲ್ಲಿ ಮುಖಾಮುಖಿ ಆಗಲಿವೆ. ಗುಜರಾತ್​ ವಿರುದ್ಧದ ಇದುವರೆಗಿನ 4 ಮುಖಾಮುಖಿಗಳಲ್ಲೂ ಸೋತಿರುವ ಕೆಎಲ್​ ರಾಹುಲ್​ ಪಡೆ, ಮೊದಲ ಬಾರಿ ಗೆದ್ದು ಬೀಗುವ ಹಂಬಲದಲ್ಲಿದೆ.

    ಉಭಯ ತಂಡಗಳು 2022ರಲ್ಲಿ ಜತೆಯಾಗಿ ಐಪಿಎಲ್​ಗೆ ಪದಾರ್ಪಣೆ ಮಾಡಿದ್ದವು. ಗುಜರಾತ್​ ತಂಡ ಕಳೆದೆರಡೂ ಆವೃತ್ತಿಗಳಲ್ಲಿ ಫೈನಲ್​ಗೇರಿದ್ದು, ಒಮ್ಮೆ ಚಾಂಪಿಯನ್​ ಆಗಿದೆ. ಇತ್ತ ಲಖನೌ ತಂಡ ಎರಡೂ ಸಲ ಪ್ಲೇಆಫ್​​ಗೇರಿದ್ದರೂ, ಪ್ರಶಸ್ತಿ ಸನಿಹಕ್ಕೇರುವಲ್ಲಿ ಸಲವಾಗಿಲ್ಲ. ಲಖನೌ ಈ ಬಾರಿ ಟೂರ್ನಿಯಲ್ಲಿ ಸೋಲಿನ ಆರಂಭ ಪಡೆದರೂ, ನಂತರದ 2 ಪಂದ್ಯಗಳಲ್ಲಿ ಗೆಲುವು ದಾಖಲಿಸಿ ಆತ್ಮವಿಶ್ವಾಸದಲ್ಲಿದೆ. ಶುಭಮಾನ್​ ಗಿಲ್​ ಸಾರಥ್ಯದ ಗುಜರಾತ್​ ತಂಡ ಇದುವರೆಗೆ ಆಡಿದ 4 ಪಂದ್ಯಗಳಲ್ಲಿ ತಲಾ 2 ಗೆಲುವು-ಸೋಲು ಕಂಡು ಅಸ್ಥಿರ ಫಾರ್ಮ್​ ಪ್ರದರ್ಶಿಸಿದೆ. ಕಳೆದ ಪಂದ್ಯದಲ್ಲಿ ತವರಿನಲ್ಲೇ ಪಂಜಾಬ್​ ಎದುರು ಸೋತಿದ್ದು ಗುಜರಾತ್​ಗೆ ಹಿನ್ನಡೆ ತಂದಿದೆ.

    ನಾಯಕ ಶುಭಮಾನ್​ ಗಿಲ್​ ಬ್ಯಾಟಿಂಗ್​ ಲಯ ಕಂಡುಕೊಂಡಿದ್ದರೆ, ಸಾಯಿ ಸುದರ್ಶನ್​ ಕೂಡ ಗಮನಸೆಳೆದಿದ್ದಾರೆ. ವೃದ್ಧಿಮಾನ್​ ಸಾಹ, ವಿಜಯ್​ ಶಂಕರ್​ರಿಂದ ಸಮರ್ಥ ನಿರ್ವಹಣೆ ಬರಬೇಕಿದೆ. ಬೌಲಿಂಗ್​ನಲ್ಲಿ ಅನುಭವಿ ವೇಗಿ ಮೋಹಿತ್​ ಶರ್ಮ ಮಿಂಚುತ್ತಿದ್ದರೂ, ತಂಡದ ಇತರ ವೇಗಿಗಳು ನಿರಾಸೆ ಮೂಡಿಸುತ್ತಿದ್ದಾರೆ. ಸ್ಪಿನ್ನರ್​ ರಶೀದ್​ ಖಾನ್​ ಕೂಡ ಇನ್ನಷ್ಟು ಪರಿಣಾಮಕಾರಿ ಆಗಬೇಕಿದೆ.

    ಮತ್ತೆ ಮಯಾಂಕ್​ ಮೇಲೆ ಗಮನ
    ಟೂರ್ನಿಯಲ್ಲಿ ತನ್ನ ಉರಿವೇಗದ ದಾಳಿಯಿಂದ ಗಮನಸೆಳೆದಿರುವ ಯುವ ವೇಗದ ಬೌಲರ್​ ಮಯಾಂಕ್​ ಯಾದವ್​ ಈ ಬಾರಿ ಮತ್ತೆ ಪಂದ್ಯದ ಕೇಂದ್ರಬಿಂದುವಾಗಿರಲಿದ್ದಾರೆ. ತನ್ನ ಆರಂಭಿಕ ಎರಡೂ ಪಂದ್ಯಗಳಲ್ಲಿ ತಲಾ 3 ವಿಕೆಟ್​ ಕಬಳಿಸಿ ಎದುರಾಳಿ ಬ್ಯಾಟರ್​ಗಳನ್ನು ಕಂಗೆಡಿಸಿರುವ 21 ವರ್ಷದ ಮಯಾಂಕ್​ ಸತತ 2 ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಈಗಾಗಲೆ ಟೀಮ್​ ಇಂಡಿಯಾಗೂ ಎಂಟ್ರಿ ಪಡೆಯುವ ಚರ್ಚೆಯಲ್ಲಿರುವ ಮಯಾಂಕ್​, ಈ ಬಾರಿ ಗುಜರಾತ್​ ಬ್ಯಾಟರ್​ಗಳಿಗೆ ಸವಾಲೊಡ್ಡುವ ನಿರೀಕ್ಷೆ ಇದೆ. ಮಯಾಂಕ್​ಗೆ ತಂಡದ ಇತರ ಬೌಲರ್​ಗಳಿಂದೂ ಉತ್ತಮ ಬೆಂಬಲ ಲಭಿಸಿದೆ.

    ರಾಹುಲ್​ ದೊಡ್ಡ ಇನಿಂಗ್ಸ್​ ನಿರೀಕ್ಷೆ
    ಟಿ20 ವಿಶ್ವಕಪ್​ಗೆ ಟೀಮ್​ ಇಂಡಿಯಾದ ವಿಕೆಟ್​ ಕೀಪರ್​&ಬ್ಯಾಟರ್​ ಸ್ಥಾನ ತುಂಬುವ ಹಂಬಲದಲ್ಲಿರುವ ಕನ್ನಡಿಗ ಕೆಎಲ್​ ರಾಹುಲ್​, ಫಿಟ್ನೆಸ್​ ಸಮಸ್ಯೆಯ ಜತೆಗೆ ಬಿರುಸಿನ ಬ್ಯಾಟಿಂಗ್​ ನಿರ್ವಹಣೆ ತೋರದೆ ಪರದಾಡುತ್ತಿದ್ದಾರೆ. ಆಯ್ಕೆಗಾರರ ಗಮನಸೆಳೆಯಬೇಕಾದರೆ ಅವರು ದೊಡ್ಡ ಇನಿಂಗ್ಸ್​ ಆಡುವ ಅಗತ್ಯವೂ ಇದೆ. ಪಂಜಾಬ್​ ಎದುರು ಕೇವಲ ಬ್ಯಾಟರ್​ ಆಗಿ ಆಡಿದ್ದ ರಾಹುಲ್​, ಕಳೆದ ಪಂದ್ಯದಲ್ಲಿ ಆರ್​ಸಿಬಿ ಎದುರು ಮತ್ತೆ ನಾಯಕತ್ವ-ಕೀಪಿಂಗ್​ ಎರಡನ್ನೂ ನಿರ್ವಹಿಸಿದ್ದಾರೆ. ಇದರಿಂದ ಅವರ ಫಿಟ್ನೆಸ್​ ಕಳವಳ ದೂರವಾದಂತಾಗಿದೆ. ಇದೇ ವೇಳೆ ಮತ್ತೋರ್ವ ಕನ್ನಡಿಗ ದೇವದತ್​ ಪಡಿಕ್ಕಲ್​ ಆಡಿದ ಮೊದಲ ಮೂರೂ ಪಂದ್ಯಗಳಲ್ಲಿ ಎರಡಂಕಿ ತಲುಪದೆ ನಿರಾಸೆ ಮೂಡಿಸಿದ್ದಾರೆ. ದೇಶೀಯ ಕ್ರಿಕೆಟ್​ನಲ್ಲಿ ರನ್​ಪ್ರವಾಹ ಹರಿಸಿದ್ದ ಎಡಗೈ ಬ್ಯಾಟರ್​ ಪಡಿಕ್ಕಲ್​ ಐಪಿಎಲ್​ನಲ್ಲೂ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕಿದೆ.

    *ಮುಖಾಮುಖಿ: 4
    ಲಖನೌ: 0
    ಗುಜರಾತ್​: 4
    ಆರಂಭ: ರಾತ್ರಿ 7.30
    ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಜಿಯೋಸಿನಿಮಾ.

    ವಿರಾಟ್ ಶತಕದ ನಡುವೆಯೂ ರಾಜಸ್ಥಾನಕ್ಕೆ ಮಣಿದ ಆರ್‌ಸಿಬಿ: ಅಬ್ಬರಿಸಿದ ಬಟ್ಲರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts