More

    ಜಲಜೀವನ ಮಿಷನ್ ಅವ್ಯವಸ್ಥೆ: ಅಗೆತದಿಂದ ರಸ್ತೆ ಸಮಸ್ಯೆ

    ಉಳ್ಳಾಲ: ತಾಲೂಕು ವ್ಯಾಪ್ತಿಯ ಹತ್ತು ಗ್ರಾಮಗಳಲ್ಲಿ ಕೇಂದ್ರ ಸರ್ಕಾರದ ಜಲಜೀವನ ಮಿಷನ್ ಯೋಜನೆ ಕಾಮಗಾರಿ ಚಾಲ್ತಿಯಲ್ಲಿದ್ದು ಅವ್ಯವಸ್ಥ್ಥಿತವಾಗಿ ಸಾಗುತ್ತಿದೆ. ಗುತ್ತಿಗೆ ಪಡೆದ ಎರಡು ಸಂಸ್ಥೆಗಳಿಗೆ ಪೈಪ್‌ಲೈನ್, ಟ್ಯಾಂಕ್ ನಿರ್ಮಾಣ, ಮೀಟರ್ ಅಳವಡಿಕೆ ಇತ್ಯಾದಿ ಕಾಮಗಾರಿ ಮುಕ್ತಾಯಕ್ಕೆ ನಿರ್ದಿಷ್ಟ ಗಡುವು ವಿಧಿಸಲಾಗಿದ್ದರೂ ಎಲ್ಲೂ ಕೆಲಸ ಪೂರ್ಣಗೊಂಡಿಲ್ಲ. ಈ ನಡುವೆ ಬೇಸಿಗೆಯಲ್ಲಿ ಬಿಂದಾಸ್ ಆಗಿದ್ದ ಗುತ್ತಿಗೆದಾರರು ಮಳೆಗಾಲದಲ್ಲಿ ತರಾತುರಿಯಲ್ಲಿ ಮನಬಂದಂತೆ ರಸ್ತೆಬದಿ ಅಗೆದು ಹಾಕಿದ್ದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಅಂಬ್ಲಮೊಗರು ಮತ್ತು ಬೋಳಿಯಾರ್ ಗ್ರಾಮದಲ್ಲಿ ಪೈಪ್‌ಲೈನ್ ಮುಗಿದು ಮೀಟರ್ ಅಳವಡಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಕೆವಿಆರ್ ಕಂಪನಿ ಗುತ್ತಿಗೆ ಪಡೆದಿರುವ ಇತರ ಗ್ರಾಮಗಳಲ್ಲಿ ಕಾಮಗಾರಿ ಕುಂಟುತ್ತಿದೆ. ಬೇಸಿಗೆಯಲ್ಲಿ ತಣ್ಣಗಿದ್ದು ಮಳೆಗಾಲದಲ್ಲಿ ರಸ್ತೆಬದಿ ಅಗೆದು ಪೈಪ್‌ಲೈನ್ ಕಾಮಗಾರಿ ನಡೆಸಿ ಸಾರ್ವಜನಿಕರಿಗೆ ತೊಂದರೆ ನೀಡಿರುವ ಬಗ್ಗೆ ಆರೋಪ ಕೇಳಿ ಬಂದಿದೆ.

    ಪಾವೂರು ಗ್ರಾಮದ ಪೋಡಾರ್ ಸೈಟ್, ನಾಗಮೂಲೆ ಟ್ಯಾಂಕ್ ನಿರ್ಮಾಣ ಪ್ರಗತಿಯಲ್ಲಿದೆ. ಆದರೆ ಮೂರು ವಾರ್ಡ್‌ಗಳಲ್ಲಿ ಇನ್ನೂ ಕೆಲಸ ಆರಂಭಿಸದಿರುವುದು ಗ್ರಾಮಸ್ಥರ ಪ್ರಶ್ನೆಗೆ ಕಾರಣವಾಗಿದೆ. ಈ ಬಗ್ಗೆ ಇಂಜಿನಿಯರ್ ಬಳಿ ಕೇಳಿದರೆ ಟ್ಯಾಂಕ್ ನಿರ್ಮಾಣಕ್ಕೆ ಜಾಗ ತೋರಿಸಿಲ್ಲ ಎಂದು ಉತ್ತರ ನೀಡುತ್ತಾರೆ. ಪಂಚಾಯಿತಿ ಅಧಿಕಾರಿಗಳು ಸೂಕ್ತ ಜಾಗ ತೋರಿಸಿದರೂ ಕೆಲಸ ಆರಂಭಿಸಲು ಹಿಂದೇಟು ಹಾಕಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ.

    ಗ್ರಾಮಗಳಲ್ಲಿ ಕಾಮಗಾರಿ

    ಜಲಜೀವನ್ ಮಿಷನ್ ಯೋಜನೆಯಡಿ ಉಳ್ಳಾಲ ವ್ಯಾಪ್ತಿಯ ಹತ್ತು ಗ್ರಾಮಗಳಲ್ಲಿ ಕೆಲಸ ನಡೆಯಿತ್ತಿದೆ. ಪಾವೂರು, ಹರೇಕಳ, ಮುನ್ನೂರು, ಅಂಬ್ಲಮೊಗರು, ಕಿನ್ಯ, ಕೊಣಾಜೆ, ಬೋಳಿಯಾರ್, ಬೆಳ್ಮ, ಮಂಜನಾಡಿ ಮತ್ತು ತಲಪಾಡಿ ಗ್ರಾಮಕ್ಕೆ ಯೋಜನೆಯ ಲಾಭ ಸಿಗಲಿದೆ. ನಿಗದಿತ ಸಮಯದೊಳಗೆ ಕಾಮಗಾರಿ ಪೂರ್ಣವಾಗದಿರುವುದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಇಬ್ಬರು ಗುತ್ತಿಗೆದಾರರು ಕಾಮಗಾರಿ ಟೆಂಡರ್ ಪಡೆದಿದ್ದು ನಿಗದಿತ ದಿನ ಈ ತಿಂಗಳು ಮುಗಿಯುತ್ತಿದೆ. ಮಳೆಗಾಲದಲ್ಲಿ ಕೆಲಸ ಮಾಡದಂತೆ ಸೂಚಿಸಲಾಗಿದೆ. ಪಾವೂರು ಗ್ರಾಮದ ಎಲ್ಲ ವಾರ್ಡ್‌ಗಳಲ್ಲಿ ಸೂಕ್ತ ಜಾಗ ತೋರಿಸದ ಕಾರಣ ಮೂರು ಕಡೆ ಮಾತ್ರ ಕೆಲಸ ಪ್ರಗತಿಯಲ್ಲಿದೆ.
    – ಸಂದೀಪ್, ಜೆಜೆಎಂ ಇಂಜಿನಿಯರ್

    ———-
    ಟೆಂಡರ್ ಆಗಿದ್ದರೂ ಕೆಲಸ ಆರಂಭಿಸದ ಗುತ್ತಿಗೆದಾರರು ಮಳೆಗಾಲದಲ್ಲಿ ರಸ್ತೆಬದಿ ಅಗೆದು ಸಾರ್ವಜನಿಕರಿಗೆ ತೊಂದರೆ ಮಾಡುತ್ತಿದ್ದಾರೆ. ಟ್ಯಾಂಕ್ ನಿರ್ಮಾಣ ಸಂದರ್ಭ ನಿರ್ಲಕ್ಷೃ ವಹಿಸಿದ್ದರಿಂದ ರಾಜಗುಡ್ಡೆಯಲ್ಲಿ ತೊಂದರೆಯಾಗಿತ್ತು.
    ಬದ್ರುದ್ದೀನ್ ಫರೀದ್ ನಗರ, ಹರೇಕಳ ಗ್ರಾಪಂ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts