More

    ಕೂಳೂರು ಸೇತುವೆಯಲ್ಲಿ ಬೃಹತ್ ಹೊಂಡ

    ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರ ಕೂಳೂರಿನ ಎರಡೂ ಸೇತುವೆಗಳಲ್ಲಿ ಬೃಹತ್ ಹೊಂಡಗಳು ಉಂಟಾಗಿದ್ದು, ವಾಹನಗಳು ಸರಾಗವಾಗಿ ಚಲಿಸಲು ಸಾಧ್ಯವಾಗದೆ ಕೆಲವು ದಿನಗಳಿಂದ ದಟ್ಟಣೆ ಸಾಮಾನ್ಯವಾಗಿದೆ.

    ಸೇತುವೆ ಮೇಲೆ ಹೊಂಡಗಳು ಎದ್ದಿರುವ ಕಾರಣ ವಾಹನಗಳು ನಿಧಾನವಾಗಿ ಚಲಿಸುತ್ತಿದ್ದು, ಬೆಳಗ್ಗೆ ಹಾಗೂ ಸಾಯಂಕಾಲ ಕಿಲೋಮೀಟರ್‌ಗಟ್ಟಲೆ ವಾಹನಗಳ ಸಾಲು ಕಾಣಲಾರಂಭಿಸಿದೆ. ಮಳೆ ಬರುವಾಗ ಸೇತುವೆಯಲ್ಲಿ ನೀರು ನಿಂತು ಹೊಂಡಗಳು ಕಾಣಿಸದೆ ಅಪಘಾತಗಳಿಗೂ ಕಾರಣವಾಗುತ್ತಿವೆ. ಕೆಲವು ಕಾರುಗಳ ಅಡಿಭಾಗ ನೆಲಕ್ಕೆ ತಾಗಿ ಹಾನಿಗೀಡಾಗುತ್ತಿವೆ.
    ಆಂಬುಲೆನ್ಸ್, ಅಗ್ನಿಶಾಮಕದಳ ವಾಹನ ಸೇರಿದಂತೆ ತುರ್ತು ವಾಹನಗಳಿಗೆ ದಟ್ಟಣೆ ಸಂದರ್ಭ ಸಮಸ್ಯೆಯಾಗುತ್ತಿದೆ. ಉಡುಪಿ ಕಡೆಯಿಂದ ವಿಮಾನ, ರೈಲ್ವೆ ನಿಲ್ದಾಣಗಳಿಗೆ ಬರುವವರಿಗೆ ನಿಗದಿತ ಸಮಯಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ. ತಾತ್ಕಾಲಿಕವಾಗಿಯಾದರೂ ಸರಿಪಡಿಸುವಂತೆ ಜನ ಒತ್ತಾಯಿಸಿದ್ದಾರೆ.

    ಕೂಳೂರಿನಲ್ಲಿ ನೂತನ ಸೇತುವೆಯ ಕೆಲಸ ಈಗಷ್ಟೇ ಆರಂಭಗೊಂಡಿದ್ದು, ಅದು ಮುಗಿಯಲು ಇನ್ನೂ ಒಂದೂವರೆ ವರ್ಷ ಬೇಕಾದೀತು. ಅಷ್ಟರ ತನಕ ಹಳೇ ಸೇತುವೆಯಲ್ಲೇ ಸಂಚಾರ ಅನಿವಾರ್ಯ. ಪಾದಚಾರಿಗಳು ಈ ಸೇತುವೆಗಳಲ್ಲಿ ಒಂದು ಬದಿಯಿಂದ ಇನ್ನೊಂದು ಬದಿಗೆ ಹೋಗುವುದೂ ಸವಾಲಾಗಿದೆ.

    ರಸ್ತೆಯಲ್ಲಿ ಕೆಸರು ಮಣ್ಣು: ಕೂಳೂರು ಬಳಿ ಚರಂಡಿ ಕಾಮಗಾರಿ ನಡೆಯುತ್ತಿದ್ದು, ಕೆಲವು ಲಾರಿಗಳನ್ನು ರಸ್ತೆ ಬದಿಯಲ್ಲೇ ನಿಲ್ಲಿಸುತ್ತಾರೆ. ಲಾರಿಗಳು ಇಲ್ಲಿ ತೆಗೆದು ಹಾಕಿರುವ ಕೆಸರು ಮಣ್ಣಿನಲ್ಲಿ ಚಲಿಸಿ ಬಳಿಕ ಡಾಂಬರು ರಸ್ತೆಗೆ ಹೋಗುತ್ತವೆ. ಅದರಿಂದ ಚಕ್ರಗಳಿಗೆ ಅಂಟಿಕೊಂಡಿದ್ದ ಈ ಮಣ್ಣು ರಸ್ತೆಯಲ್ಲಿ ಚೆಲ್ಲುವುದರಿಂದ ಇತರ ವಾಹನಗಳಿಗೆ ಸಮಸ್ಯೆ.

    ಕೂಳೂರು ಸೇತುವೆ ಶಿಥಿಲವಾಗಿದ್ದು, ಅಪಾಯಕಾರಿ ಬೃಹತ್ ಹೊಂಡಗಳು ಉಂಟಾಗಿವೆ. ಇದರಿಂದ ಇಲ್ಲಿ ವಾಹನ ಚಲಾಯಿಸುವುದೇ ಸವಾಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಕಡೆಗೆ ಗಮನ ಹರಿಸಿ ತುರ್ತು ಸರಿಪಡಿಸಬೇಕು.

    ಮಹೇಶ್ ಕೂಳೂರು
    ಕೂಳೂರು ರಸ್ತೆಯಲ್ಲಿ ನಿತ್ಯ ಸಂಚಾರಿ

    ಕೂಳೂರು ಸೇತುವೆಯಲ್ಲಿ ಗುಂಡಿಗಳು ಬಿದ್ದಿರುವುದು ಹಾಗೂ ಸಂಚಾರಕ್ಕೆ ತೊಂದರೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಮಳೆ ಕಡಿಮೆಯಾದ ತಕ್ಷಣ ಅದನ್ನು ಸರಿಪಡಿಸಿ, ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುವುದು.

    ಶಿಶು ಮೋಹನ್
    ಯೋಜನಾ ನಿರ್ದೇಶಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts