More

    ರಸ್ತೆ ಅವ್ಯವಸ್ಥೆ ಖಂಡಿಸಿ ಪ್ರತಿಭಟನೆ

    ಬೈಲಹೊಂಗಲ: ಪಟ್ಟಣದ ಚನ್ನಮ್ಮ ವೃತ್ತದಿಂದ ಸಂಗೊಳ್ಳಿ ರಾಯಣ್ಣ ಸರ್ಕಲ್‌ವರೆಗೆ ಗುಂಡಿ ಬಿದ್ದ ರಸ್ತೆಯಲ್ಲಿ ಮಣ್ಣು ಹಾಕಿದ್ದರಿಂದ ರಸ್ತೆಯುದ್ದಕ್ಕೂ ಏಳುತ್ತಿರುವ ಧೂಳಿನಿಂದ ಸಾರ್ವಜನಿಕರಿಗೆ ರೋಗ ಕಾಣಿಸಿಕೊಳ್ಳುತ್ತಿವೆ ಎಂದು ಆರೋಪಿಸಿ ಕೂಡಲೇ ರಸ್ತೆ ದುರಸ್ತಿ ಕಾಮಗಾರಿ ಕೈಗೊಳ್ಳಬೇಕೆಂದು ಆಗ್ರಹಿಸಿ ಅಂಬೇಡ್ಕರ್ ಯುವ ಸೇನೆ ಕಾರ್ಯಕರ್ತರು ಇಲ್ಲಿನ ಪಿಡಬ್ಲುೃಡಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

    ಸಾಮಾಜಿಕ ಕಾರ್ಯಕರ್ತ ರಫೀಕ್ ಬಡೇಘರ್ ಮಾತನಾಡಿ, ಹದಗೆಟ್ಟ ರಸ್ತೆ ದುರಸ್ತಿ ಕೈಗೊಳ್ಳುವಂತೆ ಒತ್ತಾಯಿಸಿ ಒಂದು ವರ್ಷದ ಹಿಂದೆ ಬೃಹತ್ ಪ್ರತಿಭಟನೆ ಮೂಲಕ ಮನವಿ ಸಲ್ಲಿಸಲಾಗಿತ್ತು. ಅಧಿಕಾರಿಗಳು ಶೀಘ್ರ ರಸ್ತೆ ದುರಸ್ತಿ ಕಾಮಗಾರಿ ಕೈಕೊಳ್ಳುವುದಾಗಿ ಭರವಸೆ ನೀಡಿದ್ದರು. ಸುಮ್ಮನೆ ಕುಳಿತಿರುವ ಅಧಿಕಾರಿಗಳ ವಿರುದ್ಧ ಮತ್ತೆ ಪ್ರತಿಭಟನೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

    ರಸ್ತೆ ಕಾಮಗಾರಿ ಕೈಕೊಳ್ಳದಿದ್ದರೆ ಉಪವಿಭಾಗಾಧಿಕಾರಿಗಳ ಕಾರ್ಯಾಲಯದ ಮುಂದೆ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು. ಪೊಲೀಸ್ ಕ್ವಾರ್ಟರ್ಸ್‌ನಿಂದ ಮಳೆಗಾಲದಲ್ಲಿ ನೀರು ಸಮಪರ್ಕವಾಗಿ ಚರಂಡಿಗೆ ಹೋಗದೆ ರಸ್ತೆ ಮೇಲೆ ಹರಿದಾಡುತ್ತಿದೆ. ಹೀಗಾದರೆ ಸಾಮಾನ್ಯ ನಾಗರಿಕರು ಹೇಗೆ ವಾಸಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಸ್ಥಳಕ್ಕೆ ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಭೇಟಿ ನೀಡಿ, ಶೀಘ್ರದಲ್ಲಿ ರಸ್ತೆ ದುರಸ್ತಿ ಕೈಕೊಳ್ಳುವುದಾಗಿ ಭರವಸೆ ನೀಡಿದರು. ಪ್ರತಿಭಟನಾಕಾರರು ನಮಗೆ ಲಿಖಿತ ಹೇಳಿಕೆ ಬೇಕು ಎಂದು ಪಟ್ಟು ಹಿಡಿದರು. ಅಭಿಯಂತರು ಲಿಖಿತವಾಗಿ ಪತ್ರ ನೀಡಿದಾಗ ಧರಣಿ ಹಿಂಪಡೆದರು. ಕಾಮಗಾರಿ ಕೈಕೊಳ್ಳುವರೆಗೆ ನೀರು ಸಿಂಪಡಣೆ ಮಾಡಲಾಗುವುದೆಂದು ತಿಳಿಸಿದರು. ಸಂಘಟನೆ ಉಪಾಧ್ಯಕ್ಷ ಪರಶುರಾಮ ರಾಯಬಾಗ ಮಾತನಾಡಿದರು. ಮಾರುತಿ ಕೊಂಡುರ, ವಿನೋದ ಸವದತ್ತಿ, ಉಮೇಶ ದೊಡಮನಿ, ದಾದಾಪೀರ ಸಂಗೊಳ್ಳಿ, ರಾಮು ಕಳಂಕರ, ಮಂಜು ಮುರಗೋಡ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

    ವಿಜಯವಾಣಿಗೆ ಮೆಚ್ಚುಗೆ: ರಸ್ತೆ ಅವ್ಯವಸ್ಥೆ ಕುರಿತು ವಿಜಯವಾಣಿ ಪತ್ರಿಕೆ ನ.3 ರಂದು ‘ನಾಗರಿಕರಿಗೆ ನಿತ್ಯ ಧೂಳಿನ ಅಭಿಷೇಕ’ ಎಂಬ ಶೀರ್ಷಿಕೆಯಡಿ ಸುದ್ದಿ ಪ್ರಕಟಿಸಿತ್ತು. ಸಮಸ್ಯೆ ಕುರಿತು ವರದಿ ಪ್ರಕಟಿಸಿ ಪತ್ರಿಕೆಯ ಕಾರ್ಯವನ್ನು ಸಾರ್ವಜನಿಕರು ಪ್ರಶಂಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts