More

    ನದಿ ಜೋಡಣೆ ಯೋಜನೆ ಡೇಂಜರ್

    ಸಾಗರ: ನದಿ ಜೋಡಣೆಯಂತಹ ಯೋಜನೆಗಳನ್ನು ಯೋಚಿಸುವುದೇ ಅಪಾಯಕಾರಿ. ಒಂದು ನದಿಯನ್ನು ಹೊಂದಿಕೊಂಡಂತೆ ಅನೇಕ ಜೀವವೈವಿಧ್ಯತೆಗಳು ಒಳಗೊಂಡಿರುತ್ತವೆ. ಅದನ್ನು ಇನ್ನೊಂದು ನದಿಗೆ ಜೋಡಿಸುವ ಚಿಂತನೆ ಮಾಡಿದರೆ ಜೀವವೈವಿಧ್ಯತೆಯೂ ನಾಶವಾಗುತ್ತದೆ, ಪರಿಸರದ ಮೇಲೂ ಗಂಭೀರ ಪರಿಣಾಮ ಬೀರುತ್ತದೆ ಎಂದು ಐಐಎಸ್ಸಿ ವಿಜ್ಞಾನಿ ಡಾ. ಟಿ.ವಿ.ರಾಮಚಂದ್ರ ಎಚ್ಚರಿಸಿದರು.
    ಹೆಗ್ಗೋಡಿನ ನೀನಾಸಂನಲ್ಲಿ ಭಾನುನಾರ ಕೆ.ವಿ.ಸುಬ್ಬಣ್ಣ ಸ್ಮರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಶ್ಚಿಮಘಟ್ಟಗಳ ಸಂರಕ್ಷಣೆ ಅವಕಾಶ ಮತ್ತು ಸವಾಲುಗಳು ಕುರಿತು ಉಪನ್ಯಾನ ನೀಡಿ, ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿ ಅಪರೂಪದ ಜೀವವೈವಿಧ್ಯತೆಗಳಿವೆ. ಇಂತಹ ಪ್ರದೇಶಗಳಲ್ಲಿ ಬದುಕುತ್ತಿರುವ ನಾವೇ ಧನ್ಯರು. ಆದರೆ ದುಡ್ಡಿನ ಹಿಂದೆ ಬಿದ್ದಿರುವ ಕೆಲವು ಮೂರ್ಖ ಶಿಕಾಮಣಿಗಳು ಅಭಿವೃದ್ಧಿಯ ಹೆಸರಿನಲ್ಲಿ ಪರಿಸರ ನಾಶ ಮಾಡುತ್ತಿರುವುದು ಆತಂಕವನ್ನು ಸೃಷ್ಟಿಸಿದೆ ಎಂದರು.
    ಯಾವುದೇ ಒಂದು ವಿಚಾರವನ್ನು ಅಧ್ಯಯನ ಮಾಡದೆ ಅದರ ನಿರ್ವಹಣೆ ಮಾಡಲು ಸಾಧ್ಯವಿಲ್ಲ, ನಿರ್ವಹಣೆಗೆ ಜ್ಞಾನವಿರಬೇಕು. ಪಶ್ಚಿಮಘಟ್ಟದ ಶ್ರೇಣಿ ತನ್ನ ಪರಿಸರದ ಹೊದಿಕೆಯಿಂದಲೇ ಸಾಕಷ್ಟು ಸಮಸ್ಯೆಗಳನ್ನು ಕಡಿಮೆ ಮಾಡಿದೆ. ಆದರೆ ಆ ಕವಚವನ್ನೇ ನಾಶ ಮಾಡುವ ಸ್ವಾರ್ಥ ಹೆಚ್ಚುತ್ತಿದೆ. ನಾವು ಪಶ್ಚಿಮಘಟ್ಟದ ಅಧ್ಯನಕ್ಕಾಗಿ ಕರೊನಾ ಸಂದರ್ಭದಲ್ಲಿ ಕೆಲವು ಹಳ್ಳಿಗಳನ್ನು ಓಡಾಡಿದಾಗ ಹೊನ್ನಾವರದ ಬೆಟ್ಟಗುಡ್ಡಗಳಿಂದ ಕೂಡಿದ ಪ್ರದೇಶಗಳಲ್ಲಿ ಕರೊನಾ ಲವಲೇಶವೂ ಕಾಣಲಿಲ್ಲ. ಇದಕ್ಕೆ ಕಾರಣ ಅಲ್ಲಿಯ ಪರಿಸರ ಮತ್ತು ಅವರು ಬಳಸುತ್ತಿದ್ದ ಆಹಾರ ಎಂದು ಹೇಳಿದರು.
    ನೀನಾಸಂನ ಅಧ್ಯಕ್ಷ ಸಿದ್ದಾರ್ಥ ಮಾತನಾಡಿ, ಕೆ.ವಿ ಸುಬ್ಬಣ್ಣ ಅವರು ನೀನಾಸಂ ಕಟ್ಟುವ ಮೂಲಕ ಗ್ರಾಮೀಣ ಪ್ರದೇಶದ ಮಹತ್ವವನ್ನು ಪರಿಚಯಿಸುವ ಕೆಲಸ ಮಾಡಿದರು. ಸಾಹಿತ್ಯದ ವಿಮರ್ಶೆಯನ್ನು ಓದುವ ಮೂಲಕ ಬರವಣಿಗೆಯ ವಿವಿಧ ಮಜಲುಗಳನ್ನು ಅರ್ಥೈಸಿಕೊಳ್ಳುವ ಪರಿಯನ್ನು ತಿಳಿಸಿಕೊಟ್ಟರು. ನಾವು ಎಷ್ಟೋ ಸಾಹಿತಿಗಳ ಪುಸ್ತಕಗಳನ್ನು ಓದಿರುತ್ತೇವೆ, ಆದರೆ ಅವರ ಜತೆಯಲ್ಲಿ ಸಂವಾದ ಮತ್ತು ಸಂವಹನವನ್ನು ನಡೆಸುವ ಅವಕಾಶಗಳು ಸಾಧ್ಯವಾಗುವುದಿಲ್ಲ. ಅದನ್ನು ಕೆ.ವಿ.ಸುಬ್ಬಣ್ಣನವರು ನೀನಾಸಂ ಮೂಲಕ ನಮಗೆ ಪರಿಚಯಿಸಿಕೊಟ್ಟರು ಎಂದರು.
    ನಂತರ ಕುವೆಂಪು ರಚಿತ ರಕ್ತಾಕ್ಷಿ ನಾಟಕವನ್ನು ನೀನಾಸಂನಿಂದ ಅಭಿನಯಿಸಲಾಯಿತು. ನಾಟಕವನ್ನು ವೆಂಕಟರಮಣ ಐತಾಳ್ ನಿರ್ದೇಶಿಸಿದ್ದಾರೆ. ಕಾರ್ಯಕ್ರಮದಲ್ಲಿ ಅಶೋಕ್, ಮಾಧವ ಚಿಪ್ಪಳಿ, ಕೆ.ವಿ.ಅಕ್ಷರ, ಶ್ರೀರಾಮ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts