More

    ಯಕ್ಷಗಾನ ರಂಗ ಪ್ರವೇಶ ರಿಷಿ ಹೆಜ್ಜೆ ಗೆಜ್ಜೆ ಸಂಭ್ರಮ 2023

    ಮಂಗಳೂರು: ರಿಷಿ ಸಾಮಾಜಿಕ ಸಾಂಸ್ಕೃತಿಕ ಪ್ರತಿಷ್ಠಾನ ಬೆಳ್ತಂಗಡಿ ವತಿಯಿಂದ ನಗರದ ಉರ್ವಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದ ಸಹಯೋಗದೊಂದಿಗೆ ರಿಷಿ ಕಲಾ ಕೇಂದ್ರದಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳ ಯಕ್ಷಗಾನ ರಂಗ ಪ್ರವೇಶ ರಿಷಿ ಹೆಜ್ಜೆ ಗೆಜ್ಜೆ ಸಂಭ್ರಮ 2023 ಕಾರ್ಯಕ್ರಮ ಉರ್ವಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಭಾನುವಾರ ನಡೆಯಿತು.


    ಉರ್ವಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದ ಅಧ್ಯಕ್ಷ ಸುರೇಂದ್ರ ರಾವ್ ಕಾರ್ಯಕ್ರಮ ಉದ್ಘಾಟಿಸಿ, ರಿಷಿ ಸಾಮಾಜಿಕ ಸಾಂಸ್ಕೃತಿಕ ಪ್ರತಿಷ್ಠಾನದ ಹೆಜ್ಜೆ – ಗೆಜ್ಜೆ ಸಂಭ್ರಮದಲ್ಲಿ ಮುಂದೆ ಉಜ್ವಲ ಭವಿಷ್ಯವುಳ್ಳ ಮಕ್ಕಳು ಯಕ್ಷಗಾನದಲ್ಲಿ ರಂಗ ಪ್ರವೇಶ ಮಾಡುತ್ತಿದ್ದಾರೆ. ಯಕ್ಷಗಾನ ಇಂದು ದ.ಕ.ಜಿಲ್ಲೆಯಲ್ಲಿ ಮಾತ್ರವಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದು ನಿಂತಿದೆ. ಇದಕ್ಕೆ ಶ್ರೀ ಕ್ಷೇತ್ರ ಕಟೀಲು ಹಾಗೂ ಯಕ್ಷಗಾನ ಪ್ರೋತ್ಸಾಹಕರು ಕಾರಣ ಎಂದರು.


    ಆಶೀರ್ವಚನ ನೀಡಿದ ಕಟೀಲು ದೇವಸ್ಥಾನದ ಅರ್ಚಕ ಸದಾನಂದ ವೆಂಕಟೇಶ ಅಸ್ರಣ್ಣ, ಪಾಠದೊಂದಿಗೆ ಪಠ್ಯೇತರ ಚಟುವಟಿಕೆಗಳಾದ ಸಂಗೀತ, ನೃತ್ಯ, ವಾದನ, ವಾಚಿಕ ಕಲೆಗಳಲ್ಲಿ ನಿಪುಣರಾಗಬೇಕೆಂದಿದ್ದಲ್ಲಿ ಯಕ್ಷಗಾನದಲ್ಲಿ ತೊಡಗಿಕೊಳ್ಳಬೇಕು. ಭರತನಾಟ್ಯ, ನಾಟಕ ಕಲೆಗಳಿಗಿಂತಲೂ ಶೇಷ್ಠವಾದ ಕಾರಣ ಯಕ್ಷಗಾನವನ್ನು ಗಂಡು ಕಲೆ ಎಂದು ಗುರುತಿಸಲಾಯಿತು. ನಮ್ಮನ್ನು ನಾವು ವೃದ್ಧಿಸಿಕೊಳ್ಳುವ ಕಲೆಯೇ ಯಕ್ಷಗಾನ. ಉತ್ತಮವಾದ ಸಂದೇಶವನ್ನು ನೀಡುವುದಕ್ಕಾಗಿ ನಮ್ಮ ಹಿರಿಯರು ಪುರಾಣದ ಪ್ರಸಂಗಗಳನ್ನೇ ಯಕ್ಷಗಾನದಲ್ಲಿ ಪ್ರದರ್ಶಿಸಿದರು. ನಮ್ಮ ಸಂಸ್ಕೃತಿ ಮುಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ಪುರಾಣ ಪ್ರಸಂಗಗಳನ್ನು ಪ್ರದರ್ಶಿಸಲಾಯಿತು. ಇಂದು ಯಕ್ಷಗಾನ ಅತ್ಯವಶ್ಯಕವಾದ ಕಲೆ. ಮಕ್ಕಳು ಇದನ್ನು ಕಲಿಯಲೇ ಬೇಕು. ಅಂತಹ ಯಕ್ಷಗಾನವನ್ನು ಉಚಿತವಾಗಿ ಮಕ್ಕಳಿಗೆ ಹೇಳಿಕೊಟ್ಟಿದ್ದಾರೆ. ರಂಗಪ್ರವೇಶ ಮಾಡುವ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ಒದಗಲಿ ಎಂದು ಪ್ರಾರ್ಥಿಸಿದರು.


    ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರತಿಷ್ಠಾನದ ಗೌರವಾಧ್ಯಕ್ಷ ಶ್ರೀಧರ ಮಣಿಯಾಣಿ, ಹಿಂದಿನಿಂದಲೇ ಯಕ್ಷಗಾನ ಅತ್ಯುನ್ನತ ಸ್ಥಾನವನ್ನು ಪಡೆದುಕೊಂಡಿದೆ. ಆದ್ದರಿಂದ ಇಂದಿನ ಪೀಳಿಗೆಗೆ ಯಕ್ಷಗಾನದಲ್ಲಿ ಅಭಿರುಚಿ ಮೂಡಿಸುವ ಅವಶ್ಯಕತೆಯಿದೆ ಎಂದರು.


    ಮುಖ್ಯ ಅತಿಥಿಗಳಾಗಿದ್ದ ಬ್ಯಾಂಕ್ ಆಫ್ ಬರೋಡ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಜಯಪ್ರಕಾಶ್ ಸಿನ್ಹ, ಉರ್ವ ಪೊಲೀಸ್ ಠಾಣೆ ವೃತ್ತ ನಿರೀಕ್ಷಕಿ ಭಾರತಿ, ದ.ಕ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಇಂಜಿನಿಯರ್ ವೇಣುಗೋಪಾಲ ಎಚ್, ಗುತ್ತಿಗೆದಾರ ನಾರಾಯಣ ಪಿ., ಮೆಸ್ಕಾಂ ನಿವೃತ್ತ ಅಧಿಕಾರಿ ಪುರುಷೋತ್ತಮ ಮಂಜಲಕಟ್ಟೆ ಶುಭ ಹಾರೈಸಿದರು.


    ಪ್ರತಿಷ್ಠಾನದ ಸಂಸ್ಥಾಪಕ ದಿವಾಕರ್ ಪದ್ಮುಂಜ, ಅಧ್ಯಕ್ಷ ಅವಿನಾಶ್ ಕುಲಾಲ್ ಉಪಸ್ಥಿತರಿದ್ದರು. ಯಕ್ಷಗಾನ ಗುರು ವಿಶ್ವನಾಥ ಪದ್ಮುಂಜ ಅವರನ್ನು ರಿಷಿ ಕಲಾಕೇಂದ್ರದ ವಿದ್ಯಾರ್ಥಿಗಳ ಪೋಷಕರ ಪರವಾಗಿ ಸನ್ಮಾನಿಸಲಾಯಿತು. ವಸುಧಾ ಉಮೇಶ್ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು. ದೇವಿಕಾ ಸುಳ್ಯ ವರದಿ ವಾಚಿಸಿದರು. ಉಮೇಶ್ ಶೆಟ್ಟಿ ಸ್ವಾಗತಿಸಿದರು. ಜ್ಯೋತಿ ಶೆಟ್ಟಿ ವಂದಿಸಿದರು. ಸ್ವರ್ಣ ಕಾರ್ಯಕ್ರಮ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts