More

    ಮಹಾ ವಿಕಾಸ್​ ಅಘಾಡಿಯಲ್ಲಿ ಮತ್ತಷ್ಟು ಬಿರುಕು: ಉದ್ಧವ್​ ಠಾಕ್ರೆ ನೀವು ಮಾಡಿದ್ದು ಸರಿಯಿಲ್ಲವೆಂದ ಖರ್ಗೆ

    ಮುಂಬೈ: ಮಹಾರಾಷ್ಟ್ರದ ಮಹಾ ವಿಕಾಸ್​ ಅಘಾಡಿ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ವಿಭಿನ್ನ ತತ್ವ ಸಿದ್ಧಾಂತಗಳನ್ನು ಹೊಂದಿದ ಪಕ್ಷಗಳು ಒಟ್ಟಿಗೆ ಸೇರಿ ಸರ್ಕಾರ ರಚಿಸಿದರೆ ಅದು ತುಂಬಾ ದಿನ ಉಳಿಯುವುದಿಲ್ಲ ಎಂಬ ರಾಜಕೀಯ ಪಂಡಿತರ ಮಾತಿನಂತೆಯೇ ಮಹಾರಾಷ್ಟ್ರ ಶಿವಸೇನಾ-ಎಸ್​ಸಿಪಿ-ಕಾಂಗ್ರೆಸ್​ ನೇತೃತ್ವದ ಸರ್ಕಾರದಲ್ಲಿ ಅಸಮಾಧಾನ ಸ್ಫೋಟಗೊಂಡಿದೆ.

    ಸಿಎಂ ಸ್ಥಾನಕ್ಕಾಗಿ ಒಳಗೊಳಗೆ ಮಸಲತ್ತುಗಳು ನಡೆಯುತ್ತಿರುವ ಮಧ್ಯೆಯೇ ಭೀಮಾ ಕೋರೇಗಾಂವ್​ ಪ್ರಕರಣ ತನಿಖಾ ವಿಚಾರ ಮೈತ್ರಿಕೂಟದ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಿದೆ. ಈ ಪ್ರಕರಣವನ್ನು ಸಿಎಂ ಉದ್ಧವ್​ ಠಾಕ್ರೆ ರಾಷ್ಟ್ರೀಯ ತನಿಖಾ ದಳ(ಎನ್​ಐಎ)ಕ್ಕೆ ಒಪ್ಪಿಸಿದ್ದು, ಈ ಸಂಬಂಧ ಈಗಾಗಲೇ ಎನ್​ಸಿಪಿ ಮುಖ್ಯಸ್ಥ ಶರದ್​ ಪವಾರ್​ ಠಾಕ್ರೆ ವಿರುದ್ಧ ಬಹಿರಂಗವಾಗಿಯೇ ಕಿಡಿಕಾರಿದ್ದಾರೆ. ಇದೀಗ ಆ ಸಾಲಿಗೆ ಕಾಂಗ್ರೆಸ್​ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕೂಡ ಸೇರಿಕೊಂಡಿದ್ದಾರೆ.

    ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಖರ್ಗೆ, ಪ್ರಕರಣದ ತನಿಖೆಯನ್ನು ಎನ್​ಐಎಗೆ ಒಪ್ಪಿಸಿರುವುದು ಸರಿಯಲ್ಲ. ನಾವೆಲ್ಲ ಸರ್ಕಾರದಲ್ಲಿ ಪಾಲದಾರರು. ಇಂತಹ ವಿಚಾರಗಳನ್ನು ನಮ್ಮೊಂದಿಗೆ ಚರ್ಚಿಸಬೇಕು. ನೀವು (ಉದ್ಧವ್​ ಠಾಕ್ರೆ) ಅಧಿಕಾರವನ್ನು ಹೊಂದಿರಬಹುದು ಆದರೆ, ಅದನ್ನು ನ್ಯಾಯಯುತವಾಗಿ ಬಳಸಬೇಕು. ಅಲ್ಲಿ ನಮ್ಮ ಸಚಿವರುಗಳು ಕೂಡ ಇದ್ದಾರೆ. ಅವರು ಹೋರಾಡುತ್ತಾರೆ ಎಂದು ಮಹಾರಾಷ್ಟ್ರ ಉಸ್ತುವಾರಿ ಖರ್ಗೆ ಹೇಳಿದರು.

    ಎನ್​ಸಿಪಿ ಮುಖ್ಯಸ್ಥ ಶರದ್​ ಪವಾರ್ ಖಂಡಿಸಿದ ದಿನದ ಬೆನ್ನಲ್ಲೇ ಖರ್ಗೆ ಪ್ರತಿಕ್ರಿಯಿಸಿದ್ದಾರೆ. ಮೈತ್ರಿ ಪಕ್ಷಗಳ ಜತೆ ಚರ್ಚಿಸದೇ ಭೀಮಾ ಕೋರೇಗಾಂವ್ ಪ್ರಕರಣವನ್ನು ಎನ್​ಐಎಗೆ ವರ್ಗಾಯಿಸಿದ ನಿರ್ಧಾರ ಸರಿಯಲ್ಲ ಎಂದು ಶರದ್​ ಪವಾರ್​ ಅಸಮಾಧಾನ ಹೊರಹಾಕಿದ್ದರು.

    ಕಾನೂನು ಸುವ್ಯವಸ್ಥೆ ವಿಚಾರ ರಾಜ್ಯಕ್ಕೆ ಸಂಬಂಧಿಸಿದ್ದು, ರಾಜ್ಯದ ಹಕ್ಕುಗಳ ಮೇಲೆ ಆಕ್ರಮಣ ಮಾಡುವುದು ಸರಿಯಲ್ಲ. ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಮಹಾರಾಷ್ಟ್ರ ಸರ್ಕಾರವು ಕೂಡ ಬೆಂಬಲ ನೀಡಿದ್ದು ಸರಿ ಹೊಂದಲ್ಲ ಎಂದು ಪವಾರ್​ ಪ್ರತಿಕ್ರಿಯೆ ನೀಡಿದ್ದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts