More

    ತೊದಲುವಿಕೆಯ ಅಪಹಾಸ್ಯ ಸರಿಯಲ್ಲ: ಪ್ರೊ.ಎಂ.ಸಂತೋಷ್ ಬೇಸರ

    ಮೈಸೂರು: ತೊದಲುವ ಸಮಸ್ಯೆ ಎದುರಿಸುತ್ತಿರುವವರ ಬಗ್ಗೆ ಅಪಹಾಸ್ಯ ಮಾಡಬೇಡಿ. ಇದು ಸಮಸ್ಯೆ ಪೀಡಿತರ ಆತ್ಮವಿಶ್ವಾಸ ಕುಂದಿಸುತ್ತದೆ ಎಂದು ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ(ಆಯಿಷ್) ಪ್ರಾಧ್ಯಾಪಕ ಪ್ರೊ.ಎಂ.ಸಂತೋಷ್ ಬೇಸರ ವ್ಯಕ್ತಪಡಿಸಿದರು.
    ಜೆಎಸ್‌ಎಸ್ ವಾಕ್ ಮತ್ತು ಶ್ರವಣ ಸಂಸ್ಥೆಯಿಂದ ಶುಕ್ರವಾರ ಜೆಎಸ್‌ಎಸ್ ಹಳೇ ಆಸ್ಪತ್ರೆಯ ಶ್ರೀರಾಜೇಂದ್ರ ಭವನದಲ್ಲಿ ಆಯೋಜಿಸಿದ್ದ ತೊದಲುವಿಕೆ ಚಿಕಿತ್ಸಾ ವಿಧಾನದ ಇತ್ತೀಚಿನ ಪ್ರಗತಿಗಳು ವಿಷಯ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
    ತೊದಲು ಸಮಸ್ಯೆ ಎದುರಿಸುತ್ತಿರುವ ಮಕ್ಕಳು ಹಾಗೂ ವಯಸ್ಕರ ಬಗ್ಗೆ ಹಾಸ್ಯ ಮಾಡಲಾಗುತ್ತಿದೆ. ಸಿನಿಮಾ, ಧಾರವಾಹಿ, ನಾಟಕಗಳಲ್ಲಿಯೂ ತೊದಲಿನ ಸಮಸ್ಯೆಯವರನ್ನು ಕೆಟ್ಟದಾಗಿ ಬಿಂಬಿಸಲಾಗುತ್ತಿದೆ. ಈ ಬಗೆಗಿನ ನಡವಳಿಕೆ, ಮೂದಲಿಕೆ ತೊದಲು ಪೀಡಿತರ ಆತ್ಮವಿಶ್ವಾಸ ಕುಂದಿಸಿವೆ ಎಂದು ಬೇಸರ ವ್ಯಕ್ತಪಡಿಸಿದರು.
    ತೊದಲುವಿಕೆಯ ಸಮಸ್ಯೆಯು ನೂರು ಜನರಲ್ಲಿ ಇಬ್ಬರಿಗೆ ಇರುತ್ತದೆ. ಈ ಸಮಸ್ಯೆಯನ್ನು ಆರಂಭದಲ್ಲಿಯೇ ಗುರುತಿಸಿ ಸೂಕ್ತ ಚಿಕಿತ್ಸೆ, ತರಬೇತಿ ನೀಡಿದರೆ ಎಲ್ಲರಂತೆ ಅವರು ಮಾತನಾಡಲು ಸಾಧ್ಯ. ಹಾಗಾಗಿ ಜನರು ಮೂಢನಂಬಿಕೆಗೆ ಬಲಿಯಾಗಿ ಅವರನ್ನು ಧಾರ್ಮಿಕ ಕೇಂದ್ರಗಳು, ದೇವರು, ಮಾಟ, ಮಂತ್ರ ಎಂದು ಕರೆದುಕೊಂಡು ಹೋಗದೆ ಆಸ್ಪತ್ರೆ ಅಥವಾ ಚಿಕಿತ್ಸೆ ತರಬೇತಿ ಕೇಂದ್ರಕ್ಕೆ ಕರೆದೊಯ್ಯಬೇಕು ಎಂದು ಸಲಹೆ ನೀಡಿದರು.
    ತೊದಲುವ ಮಕ್ಕಳಿಗೆ ಕೆಲವರು ನಾಲಿಗೆ ಲೇಹ್ಯ ಹಚ್ಚಿಸುವ ಪರಿಪಾಠವನ್ನು ಆರಂಭಿಸುತ್ತಾರೆ. ಇದು ಸಮಸ್ಯೆಯನ್ನು ಸಂಕೀರ್ಣಗೊಳಿಸುತ್ತದೆಯೇ ಹೊರತು ಯಾವುದೇ ಪರಿಹಾರ ಅಸಾಧ್ಯ ಎಂದು ಎಚ್ಚರಿಸಿದರು.
    ಆರಂಭದಲ್ಲಿಯೇ ಚಿಕಿತ್ಸೆ ನೀಡದಿದ್ದರೆ ವಯಸ್ಕರಾದಾಗ ಹೆಚ್ಚು ಸಮಯ ಬೇಕಾಗುತ್ತದೆ. ತೊಂದರೆಗೆ ಒಳಗಾದವರಲ್ಲಿ ಆತ್ಮವಿಶ್ವಾಸ ಇರುವುದಿಲ್ಲ. ಜೀವನದಲ್ಲಿ ಏನೂ ಸಾಧನೆ ಮಾಡಲಿಲ್ಲವೆಂಬ ಕೊರಗಿರುತ್ತದೆ. ಮಾನಸಿಕ ಖಿನ್ನತೆ, ಭಯದಿಂದ ಇರುತ್ತಾರೆ. ಹೀಗಾಗಿ ಅವರಲ್ಲಿ ನಡವಳಿಕೆಯ ಬಗ್ಗೆಯೂ ಥೆರಪಿಗಳನ್ನು ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
    ಕೆಲವು ವೈದ್ಯರೂ ತೊದಲುವ ಸಮಸ್ಯೆಯುಳ್ಳವರಿಗೆ ಸರಿಯಾಗಿ ಮಾರ್ಗದರ್ಶನ ನೀಡುತ್ತಿಲ್ಲ. ಮಕ್ಕಳಿದ್ದಾಗಲೇ ಸಮಸ್ಯೆ ಗುರುತಿಸಿ ತರಬೇತಿ ಚಿಕಿತ್ಸೆ ಕೊಡಿಸಿದರೆ ಶೇ 100ರಷ್ಟು ಬಗೆಹರಿಸಲು ಸಾಧ್ಯ. ನುರಿತ ವಾಕ್ ತಜ್ಞರನ್ನು ಭೇಟಿಯಾಗಬೇಕು. ಸಂಪೂರ್ಣ ಗುಣಪಡಿಸಲು ಪಾಲಕರೂ ಕಾಳಜಿ ವಹಿಸುವುದು ಅಗತ್ಯ ಎಂದರು.
    ಯಾವ ವಸ್ತು ಎಷ್ಟು ತೂಕವಿದೆ, ಎಷ್ಟು ಬಲ ಹಾಕಬೇಕು ಎಂಬ ಪ್ರಜ್ಞೆಯನ್ನು ಮಿದುಳು ಹೊಂದಿರುತ್ತದೆ. ಮಿದುಳಿನ ನರವ್ಯೆಹದಲ್ಲಿ ಸಮಸ್ಯೆ ಬಂದರೆ ಮಾತಿನ ಚಲನೆಗಳಲ್ಲಿ ವ್ಯತ್ಯಾಸ ಕಾಣುತ್ತದೆ. ಮಾತು, ಪದಕ್ಕೆ ಬಳಸಬೇಕಾದ ಶಕ್ತಿಯ ಬಗ್ಗೆ ತರಬೇತಿ ಪಡೆದರೆ ಸಮಸ್ಯೆ ಬಗೆಹರಿಸಲು ಸಾಧ್ಯವಾಗುತ್ತದೆ. ಕೆಲವೊಮ್ಮೆ ತೊದಲಿನ ಸಮಸ್ಯೆ ವಂಶವಾಹಿನಿಯಿಂದಲೂ ಬರುತ್ತದೆ ಎಂದು ಹೇಳಿದರು.
    ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಕುಲಸಚಿವ ಡಾ.ಬಿ.ಮಂಜುನಾಥ, ಜೆಎಸ್‌ಎಸ್ ವಾಕ್ ಮತ್ತು ಶ್ರವಣ ಸಂಸ್ಥೆಯ ಪ್ರಾಂಶುಪಾಲೆ ಡಾ.ಆರ್.ಸುಮಾ, ಉಪನ್ಯಾಸಕ ಡಾ.ಎಸ್.ವಿ.ನರಸಿಂಹನ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts