More

    ರಸ್ತೆ ಗುಂಡಿಗೆ ಸವಾರ ಬಲಿ; ಜಲಮಂಡಳಿ ವಿರುದ್ಧ ಕೋರ್ಟ್ ತೀರ್ಪು

    ಬೆಂಗಳೂರು: ರಸ್ತೆಗುಂಡಿಗೆ ಮೂರು ಚಕ್ರದ ಸ್ಕೂಟರ್ ಬಿದ್ದು ಅಂಗವಿಲಕ ಸವಾರ ಸಾವನ್ನಪ್ಪಿದ ಪ್ರಕರಣದಲ್ಲಿ ಜಲಮಂಡಳಿ ಅಪರಾಧಿ ಎಂದು ನ್ಯಾಯಾಲಯ ಘೋಷಣೆ ಮಾಡಿದ್ದು, ಪರಿಹಾರ ಪಡೆಯಲು ಜಲಮಂಡಳಿ ವಿರುದ್ಧ ನ್ಯಾಯಾಲಯದ ಮೊರೆ ಹೋಗುವಂತೆ ಸಲಹೆ ಕೂಡ ನೀಡಿದೆ.

    ಮೂರು ಚಕ್ರದ ಸ್ಕೂಟರ್ ಸವಾರ ಖುರ್ಷಿದ್ ಅಹ್ಮದ್ (65) ಮೃತ ವ್ಯಕ್ತಿ. 2021ರಲ್ಲಿ ಕೆಂಪೇಗೌಡ ಲೇಔಟ್‌ನಲ್ಲಿ ರಾತ್ರಿ ವೇಳೆ ಸ್ಕೂಟರ್‌ನಲ್ಲಿ ಖುರ್ಷಿದ್ ಅಹ್ಮದ್ ಸಾಗುವಾಗ ರಸ್ತೆಗುಂಡಿಯಿಂದ ಅಪಘಾತ ಸಂಭವಿಸಿ ಸಾವನ್ನಪ್ಪಿದ್ದರು. ಈ ಬಗ್ಗೆ ಕಾಮಾಕ್ಷಿಪಾಳ್ಯ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜತೆಗೆ ದಿನಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿ ಮೇರೆಗೆ ರಾಜ್ಯ ಮಾನವ ಹಕ್ಕುಗಳ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿತ್ತು.

    ತನಿಖೆ ನಡೆಸಿದ ಸಂಚಾರ ಪೊಲೀಸರು, ಏಕಮುಖ ರಸ್ತೆಯಲ್ಲಿ ಚಲಿಸಿದ ಕಾರಣಕ್ಕೆ ಸವಾರ ಮತ್ತು ಅನುಮತಿ ಪಡೆಯದೆ ರಸ್ತೆಯಲ್ಲಿ ಕಾಮಗಾರಿ ನಡೆಸಿದ್ದ ಜಲಮಂಡಳಿ ಅಧಿಕಾರಿಗಳ ವಿರುದ್ಧ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಕೆಂಪೇಗೌಡ ಲೇಔಟ್‌ನಲ್ಲಿ ಬಿಡಿಎ ಅನುಮತಿ ಪಡೆಯದೆ ಜಲಮಂಡಳಿ ಕಾಮಗಾರಿ ಕೈಗೊಂಡಿತ್ತು. ಇದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.

    ಸಂಚಾರ ಪೊಲೀಸರ ತನಿಖೆಯನ್ನು ಅಂಗೀಕರಿಸಿದ್ದ ಮಾನವ ಹಕ್ಕುಗಳ ಆಯೋಗ, ಸ್ವಯಂಪ್ರೇರಿತ ದೂರನ್ನು ಮುಕ್ತಾಯ ಮಾಡಿತ್ತು. ಮತ್ತೊಂದೆಡೆ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ, ಕಾಮಗಾರಿ ಮುಗಿಸಿದ ಮೇಲೆ ಮೊದಲಿನಂತೆ ರಸ್ತೆ ಮರು ನಿರ್ಮಾಣ ಮಾಡದೆ ಇರುವ ಕಾರಣ ಅಪಘಾತಕ್ಕೆ ಸಂಭವಿಸಿದೆ. ಆದರಿಂದ ಮೃತ ಸವಾರನ ಕುಟುಂಬಸ್ಥರು ಪರಿಹಾರಕ್ಕಾಗಿ ಜಲಮಂಡಳಿ ವಿರುದ್ಧ ನ್ಯಾಯಾಲಯ ಮೊರೆ ಹೋಗುವಂತೆ ಆದೇಶದಲ್ಲಿ ಉಲ್ಲೇಖಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts