More

    ಭತ್ತಕ್ಕೆ ವರುಣನೇ ಕಂಟಕ

    ಮೂಡಿಗೆರೆ: ಭತ್ತಕ್ಕೆ ಮಳೆ ಕಂಟಕವಾಗುತ್ತಿದೆ. ದೀಪಾವಳಿ ಹಬ್ಬಕ್ಕಿಂತ ಮುಂಚಿತವಾಗಿ ಭತ್ತದ ತೆನೆ ಒಡೆಯುತ್ತದೆ. ಈಗಾಗಲೆ ತೆನೆ ಕಟ್ಟುವ ಹಂತ ತಲುಪಿದ್ದು, ತೆನೆ ಬಿಡುವ 10 ರಿಂದ 20 ದಿನದ ಪೈಕಿ ಒಂದು ದಿನ ಮಳೆಯಾದರೂ ಭತ್ತ ಜೊಳ್ಳಾಗಲಿದೆ. ಗುರುವಾರವೂ ಮಳೆ ಆರ್ಭಟ ಮುಂದುವರಿದಿದ್ದು ಜೂನ್​ನಲ್ಲಿ ಆರಂಭವಾಗಿದ್ದ ಮಳೆ 5 ತಿಂಗಳಾದರೂ ಬಿಡುವು ನೀಡುವ ಲಕ್ಷಣ ಕಾಣುತ್ತಿಲ್ಲ. ಭತ್ತದ ತೆನೆ ಮೊಳಕೆಯೊಡೆಯುವ ಸಂದರ್ಭದಲ್ಲಿ ಮಳೆಯಿಂದ ಜೊಳ್ಳಾಗುವ ಆತಂಕ ರೈತರನ್ನು ಕಾಡುತ್ತಿದೆ.

    1990ರಲ್ಲಿ ತಾಲೂಕಿನಲ್ಲಿ 30 ಸಾವಿರ ಹೆಕ್ಟೇರ್​ನಷ್ಟು ಭತ್ತ ಬೆಳೆಯುವ ಕ್ಷೇತ್ರ ಇತ್ತು. 2000 ಇಸ್ವಿ ವೇಳೆಗೆ 25 ಸಾವಿರ ಹೆಕ್ಟೇರ್​ಗೆ ಕುಸಿಯಿತು. ಈಗ ಕೇವಲ 7 ಸಾವಿರ ಹೆಕ್ಟೇರ್​ನಷ್ಟು ಮಾತ್ರ ಭತ್ತ ಬೆಳೆಯಲಾಗುತ್ತಿದೆ. ಉಳಿದ ಗದ್ದೆಯಲ್ಲಿ ಮನೆ ನಿರ್ವಿುಸಲು ನಿವೇಶನ ಮಾಡಲಾಗುತ್ತಿದೆ. ಕಾಫಿ, ಬಾಳೆ, ಅಡಕೆ, ಶುಂಠಿ ಬೆಳೆಯಲಾಗುತ್ತಿದೆ. ಉಳಿದಂತೆ ಸುಮಾರು 5 ಸಾವಿರ ಹೆಕ್ಟೇರ್​ನಷ್ಟು ಭತ್ತದ ಗದ್ದೆಯನ್ನು 10 ವರ್ಷದಿಂದಲೂ ರೈತರು ಹಾಳು ಬಿಟ್ಟಿದ್ದಾರೆ.

    ಕಾರ್ವಿುಕರ ಕೊರತೆ, ಮಳೆ ಅವಾಂತರ, ಕೆಲವರ್ಷ ಬರಗಾಲ, ಇಳುವರಿ ಕುಂಠಿತ, ನಷ್ಟ ಇವೇ ಮೊದಲಾದ ಕಾರಣಗಳಿಂದ ವರ್ಷದಿಂದ ವರ್ಷಕ್ಕೆ ಭತ್ತ ಬೆಳೆಯುವ ಪ್ರದೇಶ ಕಡಿಮೆಯಾಗುತ್ತಿದೆ. ಇದೂವರೆಗೂ ಪ್ರವಾಹಕ್ಕೆ ಸಿಲುಕಿ, ಕಾಫಿ ತೋಟ, ಭತ್ತದ ಗದ್ದೆ ಹಾನಿಗೊಂಡಿದ್ದರೆ ಈಗ ಕಾಫಿ, ಕಾಳುಮೆಣಸು ಉದುರಿ ಗಿಡ ಬರಿದಾಗುತ್ತಿವೆ.

    ಮಲೆನಾಡು ಭಾಗದಲ್ಲಿ ಭತ್ತದ ಗದ್ದೆ ನಾಟಿ ಮಾಡಿದ ಸಮಯಕ್ಕೆ ಹೋಲಿಕೆ ಮಾಡಿದರೆ ಅ.15ರಿಂದ ತೆನೆ ಒಡೆಯಲಿದೆ. ಈ ಪ್ರಕ್ರಿಯೆ 10ರಿಂದ 20 ದಿನ ನಡೆಯಲಿದೆ. ಪೂರ್ತಿ ತೆನೆ ಹೊರ ಬರುವಾಗ ತೆನೆಯ ಮೇಲ್ಭಾಗದಲ್ಲಿ ಗಂಡು ಮತ್ತು ಹೆಣ್ಣು ಹೂವುಗಳು ಅರಳುತ್ತವೆ. ಆ ಹೂವಿನ ಮೇಲೆ ಮಳೆ ನೀರು ಸಿಂಚನವಾದರೆ ತೆನೆಯೊಳಗೆ ಕಟ್ಟಬೇಕಾದ ಹಾಲು ನಾಶವಾಗಿ ಭತ್ತ ಜೊಳ್ಳಾಗುತ್ತದೆ ಎನ್ನುತ್ತಾರೆ ಮೂಡಿಗೆರೆ ತೋಟಗಾರಿಕೆ ಮಹಾ ವಿದ್ಯಾಲಯದ ಕೃಷಿ ವಿಜ್ಞಾನಿ ಡಾ. ಟಿ.ಪಿ.ಭರತ್​ಕುಮಾರ್.

    ಈ ಹಿಂದೆಯೂ ಹಲವು ಬಾರಿ ಭತ್ತ ತೆನೆ ಒಡೆಯುವ ಸಮಯದಲ್ಲಿ ಮಳೆಯಾಗಿದೆ. ಆಗ ಮಳೆಯಾದ ಭಾಗದಲ್ಲಿ ಭತ್ತ ಜೊಳ್ಳಾಗಿತ್ತು. ಈಗ ತಾಲೂಕಿನಾದ್ಯಂತ ಮಳೆ ಆರ್ಭಟ ಮುಂದುವರಿದಿರುವುದರಿಂದ ಭತ್ತ ಜೊಳ್ಳಾಗುವುದು ನಿಶ್ಚಿತ. ಅತಿವೃಷ್ಟಿಯಿಂದ ಕಾಫಿ, ಕಾಳುಮೆಣಸು ಉದುರಿ ಹೋಗುತ್ತಿವೆ. ಭತ್ತವೂ ಜೊಳ್ಳಾದರೆ ಆರ್ಥಿಕ ಸಂಕಷ್ಟ ಎದುರಿಸುವುದು ಅಸಾಧ್ಯ ಎಂಬುದು ಭತ್ತ ಬೆಳೆಗಾರ ಎನ್.ಎಂ.ಪ್ರವೀಣ್​ಕುಮಾರ್ ಅವರ ಅಳಲು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts