More

    ಭತ್ತಕ್ಕೆ ಬಂತು ಬೆಂಕಿ ರೋಗ

    ಶಿರಸಿ: ಮಳೆ ಪ್ರಮಾಣ ಕುಂಠಿತವಾಗುತ್ತಿದ್ದಂತೆ ಜಿಲ್ಲೆಯ ಭತ್ತದ ಕಣಜವಾಗಿರುವ ಬನವಾಸಿ ಹೋಬಳಿಯಲ್ಲಿ ಭತ್ತಕ್ಕೆ ಬೆಂಕಿ ರೋಗ ತೀವ್ರಗತಿಯಲ್ಲಿ ವ್ಯಾಪಿಸುತ್ತಿದೆ. ಅತಿವೃಷ್ಟಿಯಿಂದ ತತ್ತರಿಸಿದ್ದ ರೈತರಿಗೆ ಮತ್ತೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
    ಬನವಾಸಿ ಹೋಬಳಿಯ 9 ಗ್ರಾಮ ಪಂಚಾಯಿತಿಗಳಲ್ಲಿ ಬಹುತೇಕ ಭತ್ತವೇ ಪ್ರಮುಖ ಬೆಳೆಯಾಗಿದೆ. 3 ಸಾವಿರ ಎಕರೆಗೂ ಹೆಚ್ಚು ಕ್ಷೇತ್ರದಲ್ಲಿ ಭತ್ತ ಬೆಳೆಯಲಾಗಿದೆ. ಇದರಲ್ಲಿ ದಾಸನಕೊಪ್ಪ, ಕಾಳಂಗಿ, ಕುಪ್ಪಗಡ್ಡೆ, ಅಂಡಗಿ, ಬನವಾಸಿ ಸೇರಿದಂತೆ ಹಲವು ಗ್ರಾಮಗಳಲ್ಲಿ ನಾಟಿ ಮಾಡಿದ ಭತ್ತದ ಸಸಿಗಳಿಗೆ ಬೆಂಕಿ ರೋಗ ಆವರಿಸಿರುವುದು ರೈತರನ್ನು ಕಂಗೆಡಿಸಿದೆ. ಕೆಲವು ಭತ್ತದ ಕ್ಷೇತ್ರದಲ್ಲಿ ಬೆಂಕಿರೋಗ ತಗುಲಿರುವ ಫಸಲು ಸಂಪೂರ್ಣ ಕಂದು ಅಥವಾ ಹಳದಿ ಬಣ್ಣಕ್ಕೆ ತಿರುಗಿದೆ. ಗರಿ ಒಣಗುವ ರೋಗ ಫಸಲಿನಲ್ಲಿ ಕಾಣಿಸಿಕೊಂಡಿದ್ದು, ದಿನದಿಂದ ದಿನಕ್ಕೆ ಇಡೀ ಜಮೀನಿಗೆ ವ್ಯಾಪಿಸಿಕೊಳ್ಳುತ್ತಿದೆ. ಇದನ್ನು ತಡೆಗಟ್ಟಲು ನೀರು ಹಾಯಿಸುವ ಕಾರ್ಯವಾದರೂ ರೋಗ ಹತೋಟಿಗೆ ಬರುತ್ತಿಲ್ಲ ಎಂಬುದು ರೈತರಾದ ವಸಂತ ಗೌಡ, ಬಸವಂತ ಭೋವಿ ಹಾಗೂ ಇತರರ ಮಾತಾಗಿದೆ.
    ಬೆಳೆಯನ್ನು ರಕ್ಷಿಸಿಕೊಳ್ಳಬೇಕು ಎಂಬ ಕಾರಣಕ್ಕಾಗಿ ಅನೇಕ ರೈತರು ಅಂಗಡಿಗಳಿಂದ ಬೆಂಕಿರೋಗ ನಿಯಂತ್ರಣ ಕೀಟ ನಾಶಕಗಳನ್ನು ತಂದು ಸಿಂಪಡಣೆ ಮಾಡುವಲ್ಲಿ ಮುಂದಾಗಿದ್ದಾರೆ. ಕೆಲವೆಡೆ ಭತ್ತಕ್ಕೆ ಯಾವ ರೋಗ ತಗುಲಿದೆ ಎಂಬ ಮಾಹಿತಿ ಇಲ್ಲದೆ ಮಾರುಕಟ್ಟೆಯಲ್ಲಿ ಸಿಗುವ ಫೋರೇಟ್ ಹರುಳನ್ನೂ ಹಾಕುತ್ತಿದ್ದಾರೆ. ಆದರೆ, ತೀವ್ರವಾಗಿ ರೋಗ ಆವರಿಸುತ್ತಿರುವುದಕ್ಕೆ ಕಾರಣ ಏನೆಂಬುದು ತಿಳಿದಿಲ್ಲ ಎಂದು ರೈತರೊಬ್ಬರು ತಮ್ಮ ಅಳಲು ತೋಡಿಕೊಂಡಿದ್ದಾರೆ. ನಾಟಿ ಮಾಡಿದ ತಿಂಗಳ ಬಳಿಕ ರೋಗ ಕಾಣಿಸಿದೆ. ಗಾಳಿಯಲ್ಲಿ ಈ ಸೋಂಕು ಬೇಗ ಹರಡುವುದರಿಂದ ರೈತರಲ್ಲಿ ಮತ್ತಷ್ಟು ಭಯಕ್ಕೆ ಕಾರಣವಾಗಿದೆ.



    ಭತ್ತದ ನಾಟಿ ಮಾಡಿ 40 ದಿನಗಳಾಗಿದ್ದು ಕಳೆ ತೆಗೆದು ಈಗಾಗಲೇ ರೈತರು ಯೂರಿಯಾ ಗೊಬ್ಬರ ಹಾಕಲಾಗಿದೆ. ಬೆಂಕಿ ರೋಗ ಹೆಚ್ಚು ಕಾಣಿಸಿಕೊಂಡಿರುವ ಪ್ರದೇಶಗಳಲ್ಲಿ ಯೂರಿಯಾ, ಪೊಟ್ಯಾಷ್, ಅಮೋನಿಯಂ ಸಲ್ಪೇಟ್​ಗಳ ಮಿಶ್ರಣವನ್ನು ಬೆಳೆಗೆ ಸಿಂಪಡಿಸಿದ್ದೇವೆ. ನೂರಾರು ಎಕರೆ ಪ್ರದೇಶದಲ್ಲಿ ರೋಗ ಕಾಣಿಸಿಕೊಂಡಿದ್ದು ಬೆಳೆ ಕೈ ಸೇರುವುದೇ ಎಂಬ ಚಿಂತೆ ಮೂಡಿದೆ.
    | ಯುವರಾಜ ಗೌಡ
    ಭತ್ತದ ಕೃಷಿಕ

    ಕೃಷಿ ಇಲಾಖೆ ಸಲಹೆ
    ಪೊಟ್ಯಾಷ್, ಅಮೋನಿಯಂ ಸಲ್ಪೇಟ್, ರಂಜಕಯುಕ್ತ ರಸಗೊಬ್ಬರಗಳನ್ನು ಮೇಲುಗೊಬ್ಬರವಾಗಿ ಬಳಕೆ ಮಾಡಬೇಕು. ಈಗಾಗಲೇ ಅಗತ್ಯವಿರುವ ಎಲ್ಲ ಕೀಟ ನಾಶಕಗಳನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ಸಂಗ್ರಹಿಸಿಡಲಾಗಿದೆ. ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗುತ್ತದೆ. ರೋಗ ಕಂಡ ತಕ್ಷಣವಾದರೆ ಕಾಬೋಡೆಜಿನ್ ಔಷಧ ಸಿಂಪಡಣೆ ಮಾಡಿದರೆ ಸಾಕು. ಒಂದು ವೇಳೆ ರೋಗ ಉಲ್ಬಣಿಸಿದ್ದರೆ ಟ್ರೖೆಸೈಕ್ಲೋಜೋಲ್ ಔಷಧವನ್ನು ಪ್ರತೀ ಲೀ. ನೀರಿನೊಂದಿಗೆ 0.6ಗ್ರಾಂನಷ್ಟು ಬೆರಸಿ ಸಿಂಪಡಣೆ ಮಾಡಬೇಕು. ಗರಿ ಒಣಗುವ ರೋಗವಾದರೆ ಅದೊಂದು ಕೀಟ ಬಾಧೆಯಾಗಿದ್ದು, ಸೈಕ್ಲೋಫೋರಿಫಾಸ್ ಔಷಧವನ್ನು ಪ್ರತೀ ಲೀ. ನೀರಿನೊಂದಿಗೆ 2 ಗ್ರಾಂನಷ್ಟನ್ನು ಹಾಕಿ ಸಿಂಪಡಿಸಬೇಕು. ಔಷಧ ಸಿಂಪಡಣೆ ಮಾಡಿದ ನಂತರ 3 ದಿನಗಳ ಕಾಲ ಜಮೀನುಗಳಿಗೆ ನೀರು ಹಾಯಿಸಬಾರದು. ನಂತರ ಅಗತ್ಯವಿದ್ದಲ್ಲಿ ನೀರನ್ನು ಹಾಯಿಸಬಹುದು ಎಂಬುದು ಕೃಷಿ ಇಲಾಖೆ ಅಧಕಾರಿ ಸಲಹೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts