More

    ಐಟಿ ಪಾರ್ಕ್ ಯೋಜನೆಗೆ ಮರುಜೀವ

    ಹರೀಶ್ ಮೋಟುಕಾನ ಮಂಗಳೂರು
    ನಗರದಲ್ಲಿ ಸಾರ್ವಜನಿಕ – ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಲು ಉದ್ದೇಶಿಸಿ, ಬಳಿಕ ಮೂಲೆಗುಂಪಾಗಿದ್ದ ಸುಮಾರು 200 ಕೋಟಿ ರೂಪಾಯಿ ವೆಚ್ಚದ ಐಟಿ ಪಾರ್ಕ್ ಯೋಜನೆಗೆ ಮರು ಜೀವ ಬಂದಿದೆ. ಸರ್ಕಾರದ ಮಟ್ಟದಲ್ಲಿ ಈ ಸಂಬಂಧ ಪ್ರಕ್ರಿಯೆಗಳು ಚುರುಕುಗೊಂಡಿವೆ.

    ಐಟಿ ಉದ್ಯಮ ಬೆಂಗಳೂರಿಗೆ ಸೀಮಿತವಾಗದೆ ರಾಜ್ಯದ ದ್ವಿತೀಯ ಹಂತದ ನಗರಗಳಿಗೂ ವಿಸ್ತರಣೆಯಾಗಬೇಕು ಎನ್ನುವ ಉದ್ದೇಶದಿಂದ 2008-09ರ ಬಜೆಟ್‌ನಲ್ಲಿ ಸರ್ಕಾರ ಹುಬ್ಬಳ್ಳಿ, ಕಲಬುರಗಿ, ಶಿವಮೊಗ್ಗ, ಮೈಸೂರು ಮತ್ತು ಮಂಗಳೂರಿನಲ್ಲಿ ಐಟಿ ಪಾರ್ಕ್ ನಿರ್ಮಿಸುವುದಾಗಿ ಘೋಷಿಸಿತ್ತು. ಐಟಿ ಅಭಿವೃದ್ಧಿ ಪಡಿಸುವ ಸರ್ಕಾರದ ಅಂಗ ಸಂಸ್ಥೆ ಕಿಯಾನಿಕ್ಸ್‌ಗೆ ಪಾರ್ಕ್ ನಿರ್ಮಾಣಕ್ಕಾಗಿ ಎಲ್ಲ ನಗರಗಳಲ್ಲಿ ಸರ್ಕಾರಿ ಜಾಗ ಒದಗಿಸಲಾಗಿತ್ತು. ಆದರೆ ಮಂಗಳೂರು ಮತ್ತು ಮೈಸೂರಿನಲ್ಲಿ ಈ ಯೋಜನೆ ಮುಂದೆ ಹೋಗಿರಲಿಲ್ಲ.

    ಕಿಯಾನಿಕ್ಸ್ (ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ದಿ ನಿಗಮ ನಿಯಮಿತ) ಮಂಗಳೂರು ನಗರದ ದೇರೆಬೈಲಿನಲ್ಲಿ ಐಟಿ ಪಾರ್ಕ್‌ಗಾಗಿ 2009ರಲ್ಲಿ ಜಾಗ ಕಾದಿರಿಸಿದೆ. ಇದನ್ನು ಅಭಿವೃದ್ಧಿ ಪಡಿಸಲು ಟೆಂಡರ್ ಕರೆದಾಗ ಯಾವುದೇ ಕಂಪನಿ ಮುಂದೆ ಬಾರದ ಕಾರಣ ಒಂದಷ್ಟು ತೆಂಗಿನ ಮರ ಹಾಗೂ ಕಾಡು ತುಂಬಿಕೊಂಡು ಜಾಗ ನಿಷ್ಪ್ರಯೋಜಕ ಸ್ಥಿತಿಯಲ್ಲಿದೆ.

    ಹರಿಕೃಷ್ಣ ಬಂಟ್ವಾಳ್ ಕಿಯಾನಿಕ್ಸ್ ಅಧ್ಯಕ್ಷರಾದ ಬಳಿಕ ಮಂಗಳೂರಿನಲ್ಲಿ ಐಟಿ ಪಾರ್ಕ್ ನಿರ್ಮಾಣ ಯೋಜನೆಗೆ ಜೀವ ಕಳೆ ಬಂದಿದೆ. ಪಿಪಿಪಿ ಮಾದರಿಯ ಪ್ರಸ್ತಾವನೆ ತಯಾರಿಸಿ, ಸರ್ಕಾರದ ಮಟ್ಟದಲ್ಲಿ ಅನುಮೋದನೆ ಸಿಗಬೇಕೆನ್ನುವಷ್ಟರಲ್ಲಿ ಅವರನ್ನು ಹುದ್ದೆಯಿಂದ ಕೆಳಗಿಳಿಸಲಾಗಿತ್ತು. ಮೂರ್ನಾಲ್ಕು ತಿಂಗಳ ಬಳಿಕ ಮತ್ತೆ ಅವರನ್ನು ಅಧ್ಯಕ್ಷ ಹುದ್ದೆಯಲ್ಲಿ ಮುಂದುವರಿಸಲಾಗಿದ್ದು, ಇನ್ನುಳಿದಿರುವ ಅವಧಿಯಲ್ಲಿ ಪ್ರಕ್ರಿಯೆಗೆ ವೇಗ ನೀಡಬೇಕಾಗಿದೆ.
     
    ಟೆಂಡರ್‌ಗೆ ನೀರಸ ಪ್ರತಿಕ್ರಿಯೆ: ದೇರೆಬೈಲ್ ಹರಿಪದವು ರಸ್ತೆ ಬದಿ 4.75 ಎಕರೆ ಸಮತಟ್ಟಾದ ಪ್ರದೇಶವನ್ನು ಸರ್ಕಾರ ಕಿಯಾನಿಕ್ಸ್‌ಗೆ ಒದಗಿಸಿದೆ. ಇದರಲ್ಲಿ 1.5 ಎಕರೆ ಜಾಗವನ್ನು ಕಿಯಾನಿಕ್ಸ್ ಸಂಸ್ಥೆ ಎಸ್‌ಟಿಪಿಐ (ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ)ಗೆ ನೀಡಿದ್ದು, ಕೇಂದ್ರ ಸರ್ಕಾರದ ಈ ಸಂಸ್ಥೆ ಪಾರ್ಕ್ ನಿರ್ಮಿಸಿ ಜಾಗವನ್ನು ಸದ್ಬಳಕೆ ಮಾಡಿದೆ. ಉಳಿದ 3.25 ಎಕರೆ ಜಾಗದಲ್ಲಿ 30 ಕೋಟಿ ರೂ. ವೆಚ್ಚದಲ್ಲಿ ಖಾಸಗಿ ಸಹಭಾಗಿತ್ವದ ಐಟಿ ಪಾರ್ಕ್ ನಿರ್ಮಿಸುವುದು ಕಿಯಾನಿಕ್ಸ್‌ನ ಯೋಜನೆ. ಜಾಗದ ಶೇ.40 ಭಾಗದಲ್ಲಿ ಐಟಿ ಪಾರ್ಕ್, ಶೇ.60 ಭಾಗವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವ ನೀಲನಕ್ಷೆ ಸಿದ್ಧಪಡಿಸಿ, 2010ರ ಅಕ್ಟೋಬರ್‌ನಿಂದ ಯೋಜನೆ ಆರಂಭಿಸಲು ಕಿಯಾನಿಕ್ಸ್ ಮುಂದಾಗಿತ್ತು. ಆದರೆ ಟೆಂಡರ್ ಆಹ್ವಾನಿಸಿದಾಗ ಖಾಸಗಿ ಸಂಸ್ಥೆಗಳಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪರಿಣಾಮ ಐಟಿ ಪಾರ್ಕ್‌ಗೆ ಕಾದಿರಿಸಿದ ಜಾಗ ಹಾಗೆಯೇ ಉಳಿದಿದೆ.

    ಮಂಗಳೂರಿನಲ್ಲಿ ಐಟಿ ಪಾರ್ಕ್ ನಿರ್ಮಾಣ ಮಾಡಲು ಪೂರ್ಣ ಪ್ರಮಾಣದಲ್ಲಿ ಪ್ರಯತ್ನ ನಡೆಯುತ್ತಿದೆ. ನನ್ನ ಹಿಂದಿನ ಅವಧಿಯಲ್ಲಿ ಪ್ರಸ್ತಾವನೆ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಮತ್ತೆ ಏನಾಗಿದೆ ಎಂಬುದನ್ನು ಪರಿಶೀಲಿಸಿ, ಫಾಲೋಅಪ್ ಮಾಡಲಾಗುವುದು. ಪಿಪಿಪಿ ಮಾದರಿಯಲ್ಲಿ ಐಟಿ ಪಾರ್ಕ್ ನಿರ್ಮಾಣ ಮಾಡುವ ಉದ್ದೇಶ ಹೊಂದಲಾಗಿದೆ.
    – ಹರಿಕೃಷ್ಣ ಬಂಟ್ವಾಳ್, ಅಧ್ಯಕ್ಷ, ಕಿಯಾನಿಕ್ಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts