More

    265 ಮತಗಟ್ಟೆಗಳಲ್ಲಿ ಮತದಾನಕ್ಕೆ ಸಿದ್ಧತೆ

    ದೇವದುರ್ಗ: ವಿಧಾನಸಭೆ ಚುನಾವಣೆ ಮತದಾನಕ್ಕೆ ತಾಲೂಕಿನಾದ್ಯಂತ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಎಲ್ಲ 265 ಮತಗಟ್ಟೆ ಕೇಂದ್ರಗಳಲ್ಲಿ ಶಾಂತಿಯುತ ವೋಟಿಂಗ್‌ಗೆ ಅಗತ್ಯ ಭದ್ರತೆ ಕೈಗೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ಎಂ.ಎನ್.ಚೇತನಕುಮಾರ ಹೇಳಿದರು.

    ಪಟ್ಟಣದ ಡಾನ್‌ಬೋಸ್ಕೋ ಶಿಕ್ಷಣ ಸಂಸ್ಥೆಯಲ್ಲಿ ಮಂಗಳವಾರ ಮಸ್ಟರಿಂಗ್ ವ್ಯವಸ್ಥೆ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಚುನಾವಣೆಗೆ ನಿಯೋಜನೆಗೊಂಡ ಪಿಆರ್‌ಒ, ಎಪಿಆರ್‌ಒ, ಪೊಲೀಸರು ಹಾಗೂ ಇತರ ಸಿಬ್ಬಂದಿಗೆ ವಿಶೇಷ ವಾಹನ ವ್ಯವಸ್ಥೆ ಮಾಡಲಾಗಿದ್ದು, ಸಂಜೆ 4 ಗಂಟೆ ಒಳಗೆ ಕೇಂದ್ರಕ್ಕೆ ತೆರಳಿದ್ದಾರೆ. ತಾಲೂಕಿನಲ್ಲಿ 1,14,701 ಮಹಿಳೆ, 1,16,452 ಪುರುಷರು ಹಾಗೂ ಇತರರು ಸೇರಿ ಒಟ್ಟು 2,33,492 ಮತದಾರರಿದ್ದಾರೆ. ಪ್ರತಿ ಮತಗಟ್ಟೆಗೆ 4 ಸಿಬ್ಬಂದಿ ನಿಯೋಜಿಸಲಾಗಿದ್ದು, ಚುನಾವಣೆ ಪ್ರಕ್ರಿಯೆಗೆ ಒಟ್ಟು 1220 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದರು.

    ಚುನಾವಣಾ ಮಾಹಿತಿ ಸಾರ್ವಜನಿಕರಿಗೆ ಸಕಾಲದಲ್ಲಿ ನೀಡಲು ಪ್ರತ್ಯೇಕ ಆ್ಯಪ್ ಮಾಡಿದ್ದು, ಪ್ರತಿ 2 ಗಂಟೆಗೆ ಮಾಹಿತಿ ಅಪ್‌ಲೋಡ್ ಮಾಡಲಾಗುವುದು. 72 ಸೂಕ್ಷ್ಮ, 61ಅತಿಸೂಕ್ಷ್ಮ ಮತಗಟ್ಟೆ ಎಂದು ಗುರುತಿಸಲಾಗಿದೆ. 22 ಸೆಕ್ಟರ್ ಅಧಿಕಾರಿಗಳ ತಂಡ ಎಲ್ಲ ಮತಗಟ್ಟೆಗಳಿಗೆ ಭೇಟಿ ನೀಡಿ ಮೂಲಸೌಕರ್ಯ ಕಲ್ಪಿಸಿದ್ದಾರೆ ಎಂದು ಹೇಳಿದರು.

    ಐದು ವಿಶೇಷ ಮತಗಟ್ಟೆಗಳನ್ನು ಮಾಡಿಕೊಂಡಿದ್ದು, 5 ಪಿಂಕ್ (ಸಖಿ)ಮತಗಟ್ಟೆಯಲ್ಲಿ ಮಹಿಳಾ ಸಿಬ್ಬಂದಿ ನೇಮಕ ಮಾಡಲಾಗಿದ್ದು, ಎಲ್ಲರಿಗೂ ಪಿಂಕ್ ಸಮವಸ್ತ್ರ ನೀಡಲಾಗಿದೆ. ಪಟ್ಟಣದ ಪುರಸಭೆ, ಅರಕೇರಾ, ಗಲಗ, ಮುಕ್ಕನ್ನಾಳ ಮತ್ತು ಮಸರಕಲ್ ಮತಗಟ್ಟೆಗೆ ನಿಯೋಜಿಸಲಾಗಿದೆ. ಪಟ್ಟಣದ ಬಾಪೂಜಿ ಓಣಿಯಲ್ಲಿ ವಿಕಲಚೇತನ ಮತಗಟ್ಟೆ, ಯಾಟಗಲ್ ಗ್ರಾಮದಲ್ಲಿ ಯುವ ಮತದಾರರು ಹಾಗೂ ಪಟೇಲ್ ಓಣಿಯಲ್ಲಿ ಮಾದರಿ ಮತಗಟ್ಟೆೆಗಳನ್ನು ಸ್ಥಾಪಿಸಲಾಗಿದೆ.

    79 ರೂಟ್‌ಗಳಲ್ಲಿ ಸಿಬ್ಬಂದಿ ಮತಗಟ್ಟೆಗೆ ತೆರಳಲು ಸಿದ್ದತೆ ಮಾಡಿಕೊಂಡಿದ್ದು, 33 ಬಸ್, 23 ಮಿನಿಬಸ್, 23 ಕ್ರೂಷರ್ ವ್ಯವಸ್ಥೆ ಮಾಡಲಾಗಿದೆ. ಇಂಡಿಯನ್ ಟಿಬೇಟಿಯನ್ ತುಕಡಿ, ಸಿಆರ್‌ಪಿಎಫ್ ಸೇರಿ ಪೊಲೀಸರನ್ನು ನಿಯೋಜಿಸಲಾಗಿದೆ. ಮತದಾನ ಮುಗಿದ ನಂತರ ಮತಪೆಟ್ಟಿಗೆಗಳನ್ನು ರಾಯಚೂರಿಗೆ ಸಾಗಿಸಲು ವ್ಯವಸ್ಥೆ ಮಾಡಲಾಗಿದೆ ಎಂದರು.

    ತಹಸೀಲ್ದಾರ್ ವೈ.ಕೆ.ಬಿದರಿ, ತಾಪಂ ಇಒ ಪಂಪಾಪತಿ ಹಿರೇಮಠ, ಸಹಾಯಕ ನಿರ್ದೇಶಕ ಬಸಣ್ಣ ನಾಯಕ, ಬಿಇಒ ಸುಖದೇವ, ಸಹಾಯಕ ಚುನಾವಣಾಧಿಕಾರಿ ಶ್ರೀನಿವಾಸ ಚಾಪೆಲ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts