More

    ಟಾಸ್ಕ್​ಫೋರ್ಸ್ ಸಮಿತಿಗೆ ಜವಾಬ್ದಾರಿ

    ಗದಗ: ಕೋವಿಡ್-19 ಸೋಂಕು ಹಳ್ಳಿಗಳಲ್ಲೂ ಹರಡುತ್ತಿದ್ದು ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಗ್ರಾಮ ಮಟ್ಟದಲ್ಲಿ ರಚಿಸಲಾದ ಟಾಸ್ಕ್​ಫೋರ್ಸ್ ಸಮಿತಿಗಳು ಮುತುವರ್ಜಿಯಿಂದ ಕಾರ್ಯನಿರ್ವಹಿಸಬೇಕು. ಸೋಂಕು ಹರಡುವುದನ್ನು ನಿಯಂತ್ರಿಸಬೇಕು ಎಂದು ಜಿಲ್ಲಾಧಿಕಾರಿ ಸುಂದರೇಶಬಾಬು ಅಧಿಕಾರಿಗಳಿಗೆ ಸೂಚನೆ ನೀಡಿದರು.
    ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಕೋವಿಡ್ ಸೋಂಕು ನಿಯಂತ್ರಣ ಕುರಿತು ತಾಲೂಕು ಮಟ್ಟದ ಅಧಿಕಾರಿಗಳ ವಿಡಿಯೋ ಸಂವಾದ ಸಭೆಯಲ್ಲಿ ಮಾತನಾಡಿದರು.
    ಪ್ರತಿ ತಾಲೂಕುಗಳಲ್ಲಿ ಕೋವಿಡ್ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, ಸೋಂಕಿತರನ್ನು ದಾಖಲಿಸಲು ಕ್ರಮ ಜರುಗಿಸಬೇಕು ಎಂದರು.
    ಗ್ರಾಮೀಣ ಪ್ರದೇಶಗಳಲ್ಲಿ ಸೋಂಕು ದೃಢಪಟ್ಟವರ ಮನೆಗಳಲ್ಲಿ ಪ್ರತ್ಯೇಕ ವಾಸಕ್ಕೆ ಅನುಕೂಲವಿಲ್ಲದವರನ್ನು ಗುರುತಿಸಿ ಕೋವಿಡ್ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಬೇಕು. ಈ ಕಾರ್ಯದಲ್ಲಿ ಗ್ರಾಮಗಳ ಟಾಸ್ಕ್ ಪೋರ್ಸ್ ಸಮಿತಿಯೊಂದಿಗೆ ಸಮನ್ವಯ ಸಾಧಿಸಿ ಸೋಂಕಿತರ ಮನ ಒಲಿಸಿ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲು ಕ್ರಮ ಜರುಗಿಸಬೇಕು ಎಂದರು.
    ತಾಲೂಕು ಅಧಿಕಾರಿಗಳು ತಮ್ಮ ವ್ಯಾಪ್ತಿಯ ಕೋವಿಡ್ ಕಾಳಜಿ ಕೇಂದ್ರಗಳಿಗೆ ಪ್ರತಿದಿನ ನಿಯಮಿತವಾಗಿ ಭೇಟಿ ನೀಡಿ ಕೇಂದ್ರಗಳಲ್ಲಿ ಸ್ವಚ್ಛತೆ, ಕುಡಿಯುವ ನೀರು, ಉತ್ತಮ ಊಟದ ವ್ಯವಸ್ಥೆಗಳ ಕುರಿತು ಪರಿಶೀಲಿಸಬೇಕು. ಕೋವಿಡ್ ಕಾಳಜಿ ಕೇಂದ್ರಗಳಿಗೆ ದಾಖಲಾಗುವ ಸೋಂಕಿತರ ವರದಿಯನ್ನು ಪ್ರತಿದಿನ ಒದಗಿಸಬೇಕು ಎಂದು ಹೇಳಿದರು.
    ಕೋವಿಡ್ ಕಾಳಜಿ ಕೇಂದ್ರಗಳಿಗೆ ಸೋಂಕಿತರನ್ನು ಸ್ಥಳಾಂತರಿಸಲು ಪ್ರತ್ಯೇಕ ವಾಹನ ವ್ಯವಸ್ಥೆ ಮಾಡಿಕೊಳ್ಳಬೇಕು. ಈ ವಿಷಯದಲ್ಲಿ ತಾಲೂಕು ಮಟ್ಟದಲ್ಲಿ ತಹಸೀಲ್ದಾರರ ಜವಾಬ್ದಾರಿ ಹೆಚ್ಚಾಗಿದೆ. ಸೋಂಕು ಹರಡುವಿಕೆ ತಡೆಗಟ್ಟುವುದು ಪ್ರಮುಖವಾಗಿದೆ ಎಂದರು.
    ಸೋಂಕಿತರು ಮೃತಪಟ್ಟರೆ ಸರ್ಕಾರದ ಮಾರ್ಗಸೂಚಿಗಳನ್ವಯ ಉಚಿತವಾಗಿ ಅಂತ್ಯಕ್ರಿಯೆ ನೇರವೇರಿಸಬೇಕು. ತಾಲೂಕು ಆಸ್ಪತ್ರೆಗಳಲ್ಲಿ ಸೋಂಕಿನಿಂದ ಮೃತಪಟ್ಟವರ ವರದಿಗಳನ್ನು ಶೀಘ್ರ ಒದಗಿಸಬೇಕು. ಜತೆಗೆ ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿತರು ಮೃತಪಟ್ಟರೆ ಅವುಗಳ ವರದಿಗಳನ್ನು ಪಡೆದುಕೊಳ್ಳಬೇಕು ಎಂದರು.
    ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ ಎಸ್., ಮಾತನಾಡಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ದಿನಕ್ಕೆ ಎರಡು ಗ್ರಾಮಗಳಿಗೆ ಭೇಟಿ ನೀಡಿ ಟಾಸ್ಕ್​ಫೋರ್ಸ್ ಸಮಿತಿ ಸದಸ್ಯರನ್ನು ಭೇಟಿ ಮಾಡಿ ಸೋಂಕು ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾರ್ಗದರ್ಶನ ನೀಡಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಕಡ್ಡಾಯ ಮಾಸ್ಕ್ ಧಾರಣೆ, ಪರಸ್ಪರ ಅಂತರದ ಬಗ್ಗೆ ಜಾಗೃತಿ ಮೂಡಿಸಬೇಕು. ಸೋಂಕಿತರು ಕಂಡುಬಂದಲ್ಲಿ ಅಂಥಹವರನ್ನು ಆಸ್ಪತ್ರೆ ಅಥವಾ ಕೋವಿಡ್ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಬೇಕು. ಈ ಸಂದರ್ಭದಲ್ಲಿ ಸೋಂಕಿತರು ಅನುಚಿತವಾಗಿ ವರ್ತಿಸುವುದು ಕಂಡುಬಂದರೆ ಅಂತಹವರ ವಿರುದ್ಧ ದೂರು ದಾಖಲಿಸಬೇಕು ಎಂದರು.
    ಅಪರ ಜಿಲ್ಲಾಧಿಕಾರಿ ಸತೀಶಕುಮಾರ, ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ ಬಸರೀಗಿಡದ, ಡಾ.ಬಿ.ಎಂ. ಗೊಜನೂರ ಮತ್ತಿತರರು ಉಪಸ್ಥಿತರಿದ್ದರು.

    ಮುಂದಿನ ವಾರ ನಿರ್ಣಾಯಕ: ಮುಂದಿನ ಒಂದು ವಾರ ನಿರ್ಣಾಯಕವಾಗಿದ್ದು ಸೋಂಕು ನಿಯಂತ್ರಣಕ್ಕಾಗಿ ಹೆಲ್ತ್ ಸರ್ವೆ ಕಾರ್ಯವನ್ನು ತ್ವರಿತವಾಗಿ ಕೈಗೊಂಡು ಸೋಂಕಿತರನ್ನು ಪತ್ತೆ ಹಚ್ಚಬೇಕು. ಸೋಂಕು ಹರಡುವಿಕೆ ಹಾಗೂ ಸೋಂಕಿತರ ಸಂಖ್ಯೆಯನ್ನು ಕಡಿಮೆ ಮಾಡಲು ಮುಂದಾಗಬೇಕು. ಈ ಕಾರ್ಯದಲ್ಲಿ ನಿರ್ಲಕ್ಷ್ಯ ತೋರಬಾರದು ಎಂದು ಜಿಲ್ಲಾಧಿಕಾರಿ ಸುಂದರೇಶಬಾಬು ಹೇಳಿದರು.

    ಆಮ್ಲಜನಕ ಕೊರತೆ ಇಲ್ಲ: ಜಿಲ್ಲೆಯಲ್ಲಿ ಸದ್ಯ ವೈದ್ಯಕೀಯ ಆಮ್ಲಜನಕದ ಕೊರತೆ ಇಲ್ಲ. ತಾಲೂಕು ಆಸ್ಪತ್ರೆಗಳಲ್ಲಿ ವೈದ್ಯಕೀಯ ಆಮ್ಲಜನಕದ ಕೊರತೆ ಆಗದಂತೆ ಅಗತ್ಯ ದಾಸ್ತಾನು ಮಾಡಿಟ್ಟುಕೊಳ್ಳಬೇಕು. ಒಂದು ವೇಳೆ ಆಮ್ಲಜನಕದ ಕೊರತೆ ಉಂಟಾದರೆ ಕೂಡಲೇ ಸಂಬಂಧಿಸಿದವರ ಗಮನಕ್ಕೆ ತರಬೇಕು. ತಾಲೂಕು ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ದಾಖಲಾಗುವ ಸೋಂಕಿತರಲ್ಲಿ ಅಗತ್ಯವಿದ್ದವರಿಗೆ ಮಾತ್ರ ಆಮ್ಲಜನಕ ಒದಗಿಸಬೇಕು. ಕಪ್ಪು ಶಿಲೀಂಧ್ರದ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ವರದಿ ಮಾಡಿ ಅದರ ಚಿಕಿತ್ಸೆಗಾಗಿ ಬೇಕಾದ ಔಷಧಗಳನ್ನು ಪಡೆಯಬೇಕು ಎಂದು ವೈದ್ಯಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಸುಂದರೇಶಬಾಬು ಸೂಚನೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts