More

    ಪ್ರವಾಹ ಸಮಸ್ಯೆಗೆ ತುರ್ತಾಗಿ ಸ್ಪಂದಿಸಿ

    ಕುಮಟಾ: ಪ್ರವಾಹದ ಮುನ್ಸೂಚನೆ ಇರುವುದರಿಂದ ಅಧಿಕಾರಿಗಳು ಯಾವುದೇ ಕಾರಣಕ್ಕೂ ಮೊಬೈಲ್​ಫೋನ್ ಸ್ವಿಚ್ ಆಫ್ ಮಾಡಿಕೊಳ್ಳಬಾರದು. ಕ್ಷೇತ್ರದಲ್ಲಿ ಎಲ್ಲಿಯೇ ಪ್ರವಾಹ ಸಮಸ್ಯೆ ತಲೆದೋರಿದರೂ ತಾಲೂಕು ಆಡಳಿತ ಮಾನವೀಯ ಕಾಳಜಿಯಿಂದ ತುರ್ತಾಗಿ ಸ್ಪಂದಿಸಬೇಕು ಎಂದು ಶಾಸಕ ದಿನಕರ ಶೆಟ್ಟಿ ಅಧಿಕಾರಿಗಳಿಗೆ ಸೂಚಿಸಿದರು.
    ಶನಿವಾರ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಪ್ರವಾಹ ಮುಂಜಾಗ್ರತೆ ತುರ್ತು ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರವಾಹ ಪರಿಸ್ಥಿತಿ ಎದುರಿಸಲು ಈಗಾಗಲೇ ನಿಯೋಜಿತರಾದ ನೋಡಲ್ ಅಧಿಕಾರಿಗಳು ಕಾರ್ಯ ಕ್ಷೇತ್ರ ಬಿಟ್ಟು ಬೇರೆಡೆ ತೆರಳುವಂತಿಲ್ಲ. ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕೆಲಸ ನಿರ್ವಹಿಸಬೇಕು ಎಂದರು.
    ನೋಡಲ್ ಅಧಿಕಾರಿಗಳಿಗೆ ಇಲಾಖೆ ವಾಹನಗಳ ಎರವಲು ಪಡೆಯುವ ಜತೆಗೆ ಚತುಷ್ಪಥ ಕಾಮಗಾರಿ ನಡೆಸುತ್ತಿರುವ ಐಆರ್​ಬಿ ಕಂಪನಿಯೂ ಜೆಸಿಬಿ ಮುಂತಾದವುಗಳನ್ನು ಬಳಸಿಕೊಳ್ಳುವುದಕ್ಕೆ ಸನ್ನದ್ಧ ಸ್ಥಿತಿಯಲ್ಲಿಟ್ಟಿರಬೇಕು. ಪ್ರವಾಹ ಸಂಭವನೀಯ ಸ್ಥಳಗಳಲ್ಲಿ ದೋಣಿ ಸಹಿತ ಎಲ್ಲ ವ್ಯವಸ್ಥೆ ಇರಬೇಕು. ಕಾಳಜಿ ಕೇಂದ್ರಗಳಲ್ಲಿ ಒಲೆ, ಇಂಧನ ಸಹಿತ ಧಾನ್ಯ ಸಂಗ್ರಹವೂ ಸಿದ್ಧತೆಯಲ್ಲಿರಲಿ ಎಂದರು.
    ನೂತನ ಉಪವಿಭಾಗಾಧಿಕಾರಿ ರಾಹುಲ್ ರತ್ನಂ ಪಾಂಡೆ ಮಾತನಾಡಿ, ಪ್ರವಾಹ ಸಮಸ್ಯೆಯನ್ನು ಎದುರಿಸಲು ಪೂರ್ವ ಸಿದ್ಧತೆ ಬೇಕು. ಜನರ ಸಮಸ್ಯೆಗೂ ತಕ್ಷಣ ಸ್ಪಂದಿಸುವುದೇ ಈ ಸಭೆಯ ಗುರಿ. ಶಾಸಕರ ಮಾರ್ಗದರ್ಶನದಲ್ಲಿ ಎಲ್ಲರೂ ಪ್ರವಾಹ ಸಮಸ್ಯೆ ನಿಯಂತ್ರಣಕ್ಕೆ ಶ್ರಮಿಸಬೇಕು ಎಂದರು.
    ತಾಪಂ ಆಡಳಿತಾಧಿಕಾರಿ ಈಶ್ವರ ನಾಯ್ಕ ಮಾತನಾಡಿದರು. ಇಒ ಸಿ.ಟಿ. ನಾಯ್ಕ, ತಹಸೀಲ್ದಾರ್ ಆರ್.ವಿ. ಕಟ್ಟಿ, ಪಿಎಸ್​ಐ ಆನಂದಮೂರ್ತಿ, ಕರಾವಳಿ ಕಾವಲು ಪಡೆಯ ಪಿಎಸ್​ಐ ಮಾರುತಿ ನಾಯ್ಕ, ಆರ್​ಎಫ್​ಒ ಪ್ರವೀಣಕುಮಾರ ನಾಯಕ, ಬಿಇಒ ರಾಜೇಂದ್ರ ಭಟ್, ಡಾ. ವಿಶ್ವನಾಥ ಹೆಗಡೆ, ಗಜಾನನ ನಾಯ್ಕ, ಆರೋಗ್ಯಾಧಿಕಾರಿ ಡಾ. ಆಜ್ಞಾ ನಾಯಕ, ತೋಟಗಾರಿಕೆ ಸಹಾಯಕ ನಿರ್ದೇಶಕ ಚೇತನ ನಾಯ್ಕ, ದೀಪಾ ಶೆಡಗೇರಿ, ಆರ್.ಬಿ. ಪಾಟೀಲ, ಗಣೇಶ ಪಟಗಾರ, ಸೋಮನಾಥ ಭಂಡಾರಿ, ಸತೀಶ ಗೌಡ, ಮಣಿಕಂಠ, ರಾಮದಾಸ ಪ್ರಭು, ರಾಘವೇಂದ್ರ ನಾಯ್ಕ, ಐಆರ್​ಬಿಯ ಶ್ರೀನಿವಾಸ, ವೆಂಕಟ್ರಮಣ ಹೆಗಡೆ ಇತರರಿದ್ದರು.


    2018ರಲ್ಲಿ ಪ್ರವಾಹ ತಲೆದೋರಿದಾಗ ಹಲವು ಹೊಸ ಪ್ರದೇಶಗಳಿಗೆ ನೀರು ನುಗ್ಗಿ ಸಮಸ್ಯೆಯಾಗಿತ್ತು. ಮಧ್ಯರಾತ್ರಿಯಲ್ಲೂ ಸಮರೋಪಾದಿಯಲ್ಲಿ ಜನರ ರಕ್ಷಣೆ ಹಾಗೂ ಉಪಚಾರ ಮಾಡಿದ್ದೇವೆ. ಮುಂದೆಯೂ ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುತ್ತೇವೆ. ಸಾರ್ವಜನಿಕರು ವಿಶ್ವಾಸದಿಂದಿರಬೇಕು. ಕರಾವಳಿ ಹಾಗೂ ಘಟ್ಟದ ಮೇಲ್ಭಾಗದಲ್ಲಿ ಏಕಕಾಲಕ್ಕೆ ಅತಿವೃಷ್ಟಿಯಾದಾಗ ಪ್ರವಾಹದ ಆತಂಕ ಎದುರಾಗುತ್ತದೆ. ಆದರೂ ಪ್ರಕೃತಿ ವಿಕೋಪ, ಪ್ರವಾಹ ಉಂಟಾಗದಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. | ದಿನಕರ ಶೆಟ್ಟಿ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts