More

    ಮಳೆ-ಗಾಳಿ ಹಾನಿಗೆ ತ್ವರಿತವಾಗಿ ಸ್ಪಂದಿಸಲಿ

    ಹಾವೇರಿ: ಅಕಾಲಿಕ ಮಳೆಯಿಂದ ಉಂಟಾಗುವ ಸಂಭವನೀಯ ಅವಘಡಗಳನ್ನು ತಡೆಯುವ ನಿಟ್ಟಿನಲ್ಲಿ ಆಯಾ ತಾಲೂಕಿನ ಅಧಿಕಾರಿಗಳು ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕು. ಅವಘಡ ಸಂಭವಿಸಿದಲ್ಲಿ ತ್ವರಿತವಾಗಿ ಸ್ಪಂದಿಸಬೇಕು ಎಂದು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಸೂಚಿಸಿದ್ದಾರೆ.


    ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ಹಾಗೂ ಅಕಾಲಿಕ ಮಳೆಯಿಂದ ಉಂಟಾಗುವ ಸಂಭವನೀಯ ಹಾನಿ ತಡೆ ಕುರಿತು ತಾಲೂಕು ಆಡಳಿತದೊಂದಿಗೆ ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭಾನುವಾರ ಸುರಿದ ಮಳೆಗೆ ಜಿಲ್ಲೆಯಲ್ಲಿ ಉಂಟಾಗಿರುವ ಸಮಸ್ಯೆಗಳ ಕುರಿತು ಮಾಹಿತಿ ಪಡೆದುಕೊಂಡರು.


    ನಗರ ಪ್ರದೇಶದಲ್ಲಿ ರಾಜಕಾಲುವೆ ಸೇರಿದಂತೆ ಎಲ್ಲ ಚರಂಡಿಗಳನ್ನು ಎರಡು ದಿನದೊಳಗಾಗಿ ಸ್ವಚ್ಛಗೊಳಿಸಬೇಕು. ಮಳೆ-ಗಾಳಿಯಿಂದ ಬೆಳೆಹಾನಿ ಹಾಗೂ ಮನೆ ಹಾನಿ ಸ್ಥಳಕ್ಕೆ ತಕ್ಷಣವೇ ತೆರಳಬೇಕು. ಹಾನಿಯ ವರದಿ ಅತ್ಯಂತ ನಿಖರವಾಗಿರಬೇಕು. ವರದಿ ಸಂಗ್ರಹಿಸುವ ಸಂದರ್ಭದಲ್ಲಿ ಜಿಯೋ ಟ್ಯಾಗ್, ಫೋಟೋದೊಂದಿಗೆ ಅಂದೇ ಇ-ಮೇಲ್ ಮೂಲಕ ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು. ಹಾನಿ ಸಮೀಕ್ಷೆ ಸಂದರ್ಭದಲ್ಲಿ ನಷ್ಟಕ್ಕೊಳಗಾದ ಮನೆಯ, ಜಮೀನಿನ ಮಾಲೀಕರ ಎದುರೇ ಸರ್ವೇ ಮುಗಿಸಬೇಕು. ಹಾನಿಯ ಪ್ರಮಾಣ ಒಮ್ಮೆ ವರದಿ ಮಾಡಿದ ನಂತರ ಯಾವುದೇ ಕಾರಣಕ್ಕೂ ತಿದ್ದುಪಡಿಯಾಗಲಿ, ಬದಲಾವಣೆಯಾಗಲಿ ಮಾಡಬಾರದು ಎಂದು ಸೂಚಿಸಿದರು.


    ಹಾಳಾದ ವಿದ್ಯುತ್ ಕಂಬಗಳನ್ನು ತ್ವರಿತವಾಗಿ ಬದಲಾಯಿಸಬೇಕು. ಒಂದೊಮ್ಮೆ ವಿಳಂಬವಾದರೆ ಗ್ರಾಮಸ್ಥರಿಗೆ ಮಾಹಿತಿ ನೀಡಬೇಕು. ವಿದ್ಯುತ್ ಸಂಪರ್ಕ ಕಡಿತಗೊಂಡರೆ ತಕ್ಷಣವೇ ಸ್ಥಳೀಯ ಗ್ರಾಮ ಪಂಚಾಯಿತಿ ಅಥವಾ ನಗರ ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ಹೆಸ್ಕಾಂ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿ ಕಡಿತಗೊಂಡ ವಿದ್ಯುತ್ ಮರು ಸ್ಥಾಪನೆಗೆ ಕ್ರಮವಹಿಸುವಂತೆ ತಿಳಿಸಿದರು.

    ರಸ್ತೆ ಮೇಲೆ ನಿಲ್ಲದಿರಲಿ ನೀರು

    ಮಳೆ ಮತ್ತು ಗಾಳಿಯಿಂದ ರಸ್ತೆ ಸಂಪರ್ಕ ಕಡಿತ ಹಾಗೂ ರೈಲ್ವೆ ಕೆಳಸೇತುವೆ, ರಸ್ತೆಯ ಕೆಳ ಸೇತುವೆ, ರಸ್ತೆಯ ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಜನರಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಈ ಕುರಿತಂತೆ ಲೋಕೋಪಯೋಗಿ ಇಲಾಖೆ ಕಾರ್ಯ ನಿರ್ವಹಣಾಧಿಕಾರಿಗಳು ಮಳೆಯಿಂದ ಜಿಲ್ಲೆಯಲ್ಲಿ ಎಲ್ಲೆಲ್ಲಿ ನೀರು ನಿಂತು ಸುಗಮ ಸಂಚಾರಕ್ಕೆ ತೊಂದರೆ ಉಂಟಾಗುವ ಕಡೆ ಪರ್ಯಾಯ ಕ್ರಮಗಳ ಕುರಿತಂತೆ ಸ್ಥಳ ಪರಿಶೀಲನೆ ನಡೆಸಿ, ವರದಿ ನೀಡಲು ಡಿಸಿ ಸೂಚಿಸಿದರು.
    ಸದ್ಯದ ಪರಿಸ್ಥಿಯಲ್ಲಿ ಯಾವುದೇ ನೀರಿನ ಸಮಸ್ಯೆ ಇರುವುದಿಲ್ಲ. ಟ್ಯಾಂಕರ್ ಮೂಲಕ ಯಾವುದೇ ಗ್ರಾಮಕ್ಕೆ ನೀರು ಪೂರೈಸುತ್ತಿಲ್ಲ. ನೀರಿನ ಸಮಸ್ಯೆ ಇರುವ ಕೆಲ ಗ್ರಾಮಗಳಿಗೆ ಖಾಸಗಿ ಬೋರವೆಲ್ ಬಾಡಿಗೆ ಪಡೆದು ನೀರು ಪೂರೈಸುತ್ತಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದರು.

    ಶಿಥಿಲ ಕೊಠಡಿಯಲ್ಲಿ ಪಾಠ ಬೇಡ

    ಗಾಳಿ-ಮಳೆಯಿಂದ ಚಾವಣಿ ಕುಸಿತ ಹಾಗೂ ಶಿಥಿಲ ಶಾಲಾ ಕೊಠಡಿಗಳಲ್ಲಿ ತರಗತಿಗಳನ್ನು ನಡೆಸದಂತೆ ಶಾಲಾ ಶಿಕ್ಷಣ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಜಿಲ್ಲಾಧಿಕಾರಿ ಸೂಚಿಸಿದರು.
    ಮಳೆಯಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ತೊಂದರೆಗೆ ಒಳಗಾಗುವ ಪ್ರದೇಶಗಳನ್ನು ಗುರುತಿಸಿಕೊಳ್ಳಬೇಕು. ಪರ್ಯಾಯ ಕ್ರಮವಾಗಿ ಕಾಳಜಿ ಕೇಂದ್ರಗಳನ್ನು ತೆರೆಯಲು ಸಿದ್ಧತೆ ಮಾಡಿಕೊಳ್ಳಬೇಕು. ಅಗತ್ಯವಾದ ವಿಪತ್ತು ನಿರ್ವಹಣೆ ಪರಿಕರಗಳೊಂದಿಗೆ ಸಿದ್ಧತೆ ಮಾಡಿಕೊಳ್ಳುವಂತೆ ಸಂಬಂಧಿಸಿದವರಿಗೆ ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts