More

    ಮಾನವೀಯ ಮೌಲ್ಯಗಳನ್ನು ಗೌರವಿಸಿ

    ಪಾಂಡವಪುರ: ಮಾನವೀಯ ಸಂಬಂಧಗಳು ಮತ್ತು ಮೌಲ್ಯಗಳನ್ನು ಗೌರವಿಸುವ ಗುಣವನ್ನು ರೂಢಿಸಿಕೊಳ್ಳಬೇಕು ಎಂದು ಮೈಸೂರು ಮಹಾಜನ ಕಾಲೇಜಿನ ಪ್ರಾಂಶುಪಾಲೆ ಬಿ.ಆರ್.ಜಯಕುಮಾರಿ ಹೇಳಿದರು.

    ತಾಲೂಕಿನ ದೊಡ್ಡಬ್ಯಾಡರಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮೈಸೂರು ಮಹಾಜನ ಕಾಲೇಜಿನ ವತಿಯಿಂದ ಶನಿವಾರ ಆಯೋಜಿಸಿದ್ದ ಮಾನವ ಹಕ್ಕುಗಳು ಮತ್ತು ದುರ್ಬಲ ಗುಂಪುಗಳ ಹಕ್ಕುಗಳ ಕುರಿತು ಕಾರ್ಯಾಗಾರದಲ್ಲಿ ಮಾತನಾಡಿದರು.

    ಹಿಂದೆ ಕೂಡು ಕುಟುಂಬಗಳಿದ್ದು, ಎಲ್ಲರೂ ಪ್ರೀತಿ, ವಿಶ್ವಾಸದಿಂದ ಒಟ್ಟಿಗೆ ಬಾಳುತ್ತಿದ್ದರು. ಇಲ್ಲಿ ಸುಖ, ಸಂತೋಷ, ಸಮಸ್ಯೆ ಹಾಗೂ ಕೊರತೆಗಳು ಇತ್ತು. ಇದೆಲ್ಲದರ ನಡುವೆಯೂ ಮನುಷ್ಯರಾಗಿ ಮಾನವೀಯ ನೆಲೆಗಟ್ಟಿನಲ್ಲಿ ಬದುಕುವುದನ್ನು ಕಲಿತಿದ್ದರು. ಈ ಸಮಾಜದಲ್ಲಿ ಪ್ರತಿಯೊಬ್ಬರಿಗೂ ಬದುಕುವ ಹಕ್ಕು ಮತ್ತು ಸ್ವಾತಂತ್ರ್ಯ ಇದೆ. ಜಗತ್ತಿನ ಸಕಲ ಜೀವರಾಶಿಗಳನ್ನು ಉಳಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

    ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಸುಭದ್ರ ದೇಶ ಕಟ್ಟುವ ಕೆಲಸ ಮಾಡಬೇಕಿದೆ. ನಾವು ಮೊದಲು ಶಿಕ್ಷಿತರಾಗಬೇಕು. ಸರಿ, ತಪ್ಪುಗಳ ವಿಶ್ಲೇಷಣೆ ಮಾಡಲು ಶಿಕ್ಷಣದಿಂದ ಮಾತ್ರ ಸಾಧ್ಯ. ಪ್ರತಿಯೊಬ್ಬರು ಶಿಕ್ಷಣ ಪಡೆಯುವ ಹಕ್ಕು ಹೊಂದಿದ್ದು, ಆ ಹಕ್ಕನ್ನು ಯಾರು ಕಿತ್ತುಕೊಳ್ಳಬಾರದು. ಮಕ್ಕಳಿಗೆ ಶಿಕ್ಷಣ ನೀಡುವುದು ತಂದೆ, ತಾಯಿಯರ ಮೂಲಭೂತ ಕರ್ತವ್ಯ. ಊಟ, ಬಟ್ಟೆಗಳಿಗಿಂತ ಶಿಕ್ಷಣ ಅವಶ್ಯವಾಗಿದೆ. ಇಂದಿಗೂ ಎಲ್ಲೆಡೆ ಬಾಲ ಕಾರ್ಮಿಕರನ್ನು ಕಾಣಬಹುದಾಗಿದೆ. ಆಟ, ಪಾಠದೊಂದಿಗೆ ಸಂತೋಷವಾಗಿ ಕಾಲಕಳೆಯಬೇಕಾದ ಸಣ್ಣ, ಪುಟ್ಟ ಮಕ್ಕಳು ಗ್ಯಾರೇಜ್, ಹೊಟೇಲ್ ಇತ್ಯಾದಿ ಕಡೆಗಳಲ್ಲಿ ಕೆಲಸ ಮಾಡುವುದನ್ನು ನಾವು ನೋಡುತ್ತಿದ್ದೇವೆ. ಮಕ್ಕಳ ಶಿಕ್ಷಣ, ಜ್ಞಾನ, ಕಲಿಕೆ ಎಲ್ಲವನ್ನು ಕಿತ್ತುಕೊಂಡು ಅನಕ್ಷರಸ್ಥರನ್ನಾಗಿ ಮಾಡುವ ಮೂಲಕ ಶೋಷಣೆಗೆ ದೂಡುತ್ತಿದ್ದೇವೆ ಎಂದು ಬೇಸರಿಸಿದರು.

    ಹಿರಿಯ ವಕೀಲ ಜೆರಾಲ್ಡ್ ಕ್ಯಾಸ್ಟ್ರೋಲಿನೊ ಮಾತನಾಡಿ, ಕಾನೂನು ಎನ್ನುವುದು ಸಾಮಾನ್ಯ ಜ್ಞಾನ. ಗೊತ್ತಿಲ್ಲದೆ ಮಾಡಿದ ತಪ್ಪಿಗೂ ಕೂಡ ಇಲ್ಲಿ ಕ್ಷಮೆ ಇರುವುದಿಲ್ಲ. ಮಾನವ ಹಕ್ಕುಗಳು ನೈಸರ್ಗಿಕವಾಗಿ ಬಂದಿದೆ. ಸಕಲ ಜೀವರಾಶಿಗಳಿಗೂ ಬದುಕುವ ಹಕ್ಕಿದೆ. ನೆಮ್ಮದಿಯ ಬದುಕಿಗಾಗಿ 1948 ರಲ್ಲಿ ವಿಶ್ವಸಂಸ್ಥೆ ಮಾನವ ಹಕ್ಕುಗಳ ಬಗ್ಗೆ ಆರ್ಟಿಕಲ್ 19,20 ಮತ್ತು 21 ರಲ್ಲಿ ತಿಳಿಸಿದೆ. ಈ ಮೂಲಕ ಸುಶಿಕ್ಷಿತ ಸಮಾಜ ನಿರ್ಮಾಣ ಹಾಗೂ ವಿಶ್ವ ಶಾಂತಿಯನ್ನು ಬಯಸಿದೆ ಎಂದು ತಿಳಿಸಿದರು.

    ಮೈಸೂರಿನ ಶಾರದಾ ವಿಲಾಸ ಕಾನೂನು ಕಾಲೇಜಿನ ಪ್ರಾಂಶುಪಾಲೆ ವಾಣಿ ಮಾತನಾಡಿ, ಗಂಡು, ಹೆಣ್ಣು ಎಂಬ ತಾರತಮ್ಯದಿಂದಾಗಿ ಮಹಿಳೆಯರು ಮನೆಯಲ್ಲೇ ಶೋಷಣೆಗೆ ಒಳಗಾಗುತ್ತಿದ್ದಾಳೆ. ಇಂತಹ ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡುವಂತಹ ಕಾನೂನುಗಳನ್ನು ನಮ್ಮ ಸಂವಿಧಾನ ನೀಡಿದೆ. ಹೆಣ್ಣು ಭ್ರೂಣ ಹತ್ಯೆ, ವರದಕ್ಷಿಣೆ, ಅತ್ಯಾಚಾರ, ಶೋಷಣೆ ಇಂದಿಗೂ ಜೀವಂತವಾಗಿರುವುದು ದುರ್ದೈವದ ಸಂಗತಿ. ಪಾಲಕರು ಜವಬ್ದಾರಿಯಿಂದ ನುಣುಚಿಕೊಳ್ಳಲು ಬಾಲ್ಯ ವಿವಾಹ ಮಾಡುತ್ತಿದ್ದಾರೆ. ಇದಕ್ಕೆಲ್ಲ ಕಾನೂನಿನಡಿಯಲ್ಲಿ ಶಿಕ್ಷೆ ಇದೆ. ಈ ಅನಿಷ್ಟ ಪದ್ಧತಿಗಳಿಗೆ ಸೂಕ್ತ ಪರಿಹಾರ ಸಿಗಬೇಕಾದರೆ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಬೇಕು ಎಂದರು. ಕಾರ್ಯಕ್ರಮದಲ್ಲಿ ವಕೀಲ ಹರೀಶ್‌ಗೌಡ, ಶಿಕ್ಷಣ ಚಿಂತಕ ರಾಮನಾಥ್, ಗ್ರಾಪಂ ಅಧ್ಯಕ್ಷ ಶಂಕರ್, ಡಾ.ಎಚ್.ಆರ್.ತಿಮ್ಮೇಗೌಡ, ಸಾಹಿತಿ ಚಂದ್ರಶೇಖರಯ್ಯ, ಎಸ್‌ಡಿಎಂಸಿ ಅಧ್ಯಕ್ಷೆ ಲಾವಣ್ಯ, ಶಾಲೆಯ ಮುಖ್ಯ ಶಿಕ್ಷಕ ಪ.ಮ.ನಂಜುಂಡಸ್ವಾಮಿ, ಶಿಕ್ಷಕರಾದ ಜಯರಾಮು, ಕುಮಾರ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts