More

    ರೇಷ್ಮೆ ಕೃಷಿಯಲ್ಲಿ ವಿಫುಲ ಅವಕಾಶ: ಆಯುಕ್ತ ಎಂ.ಬಿ.ರಾಜೇಶ್‌ಗೌಡ ಅಭಿಮತ

    ಮಂಡ್ಯ: ರೇಷ್ಮೆ ಕೃಷಿ ಆಧಾರಿತ ಗ್ರಾಮೀಣ ಗುಡಿ ಕೈಗಾರಿಕೆಯಾಗಿದ್ದು, ವಿಫುಲ ಉದ್ಯೋಗಾವಕಾಶವನ್ನು ಹೊಂದಿದೆ ಎಂದು ರೇಷ್ಮೆ ಕೃಷಿ ಅಭಿವೃದ್ಧಿ ಆಯುಕ್ತ ಎಂ.ಬಿ.ರಾಜೇಶ್‌ಗೌಡ ತಿಳಿಸಿದರು.
    ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ, ರೇಷ್ಮೆ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ರೇಷ್ಮೆ ಕೃಷಿಮೇಳ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು. ರೇಷ್ಮೆ ಬೆಳೆಗಾರರ ಸಾಧನೆಗಳನ್ನು ಗುರುತಿಸಿ ಸನ್ಮಾನ ಮಾಡುತ್ತಿರುವುದು ಶ್ಲಾಘನೀಯ ಎಂದರು.
    ಹಿಪ್ಪುನೇರಳೆ ರೇಷ್ಮೆ ಉತ್ಪಾದನೆಯಲ್ಲಿ ಕರ್ನಾಟಕ ದೇಶದಲ್ಲಿಯೇ ಮುಂಚೂಣಿಯಲ್ಲಿದ್ದು, ವಾರ್ಷಿಕ 11,191 ಮೆಟ್ರಿಕ್ ಟನ್ ಕಚ್ಚಾ ರೇಷ್ಮೆ ಉತ್ಪಾದನೆ ಮಾಡುತ್ತಿದೆ. ಈ ಪೈಕಿ 2,438 ಮೆ.ಟನ್ ದ್ವಿತಳಿ ರೇಷ್ಮೆ ಉತ್ಪಾದನೆ ಆಗುತ್ತಿದೆ. ರಾಜ್ಯದಲ್ಲಿ 1,38,000 ರೇಷ್ಮೆ ಬೆಳೆಗಾರರು 2,87,500 ಎಕರೆ ಪ್ರದೇಶದಲ್ಲಿ ಹಿಪ್ಪುನೇರಳೆ ಬೇಸಾಯವನ್ನು ಮಾಡುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಬಿತ್ತನೆ ಪ್ರದೇಶದ ರೇಷ್ಮೆ ಬೆಳೆಗಾರರು, ರೇಷ್ಮೆ ಭಾಗಿದಾರರು, ರೇಷ್ಮೆ ಮೊಟ್ಟೆ ತಯಾರಕರು ಮತ್ತು ಚಾಕಿ ಸಾಕಾಣಿಕೆ ಕೇಂದ್ರಗಳು ಕೆಲಸ ನಿರ್ವಹಿಸುತ್ತಿವೆ. ಗುಣಮಟ್ಟದ ಕಚ್ಚಾ ರೇಷ್ಮೆ ಬೇಡಿಕೆಯನ್ನು ಪೂರೈಸುವಲ್ಲಿ ಕಳೆದ ಒಂದು ದಶಕದಿಂದಲೂ ಸ್ವಯಂಚಾಲಿತ ರೇಷ್ಮೆ ನೂಲು ಬಿಚ್ಚಾಣಿಕೆ ಘಟಕ ಸ್ಥಾಪನೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾ ಬಂದಿದ್ದೇವೆ ಎಂದು ಹೇಳಿದರು.
    ಸಮಾರಂಭವನ್ನು ಶಾಸಕ ಎಂ.ಶ್ರೀನಿವಾಸ್ ಉದ್ಘಾಟಿಸಿದರು. ಕೇಂದ್ರ ರೇಷ್ಮೆ ಮಂಡಳಿ ನಿರ್ದೇಶಕ ಡಾ.ಬಿ.ಟಿ.ಶ್ರೀನಿವಾಸ್, ರೇಷ್ಮೆ ಇಲಾಖೆ ನಿರ್ದೇಶಕಿ ಮೇಘಲಾ, ಕೇಂದ್ರ ರೇಷ್ಮೆ ಸಂಶೋಧನಾ ತರಬೇತಿ ನಿರ್ದೇಶಕಿ ಡಾ.ಮೇರಿ ಜೋಸೆಪ್, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಶ್ರೀನಿವಾಸ್, ರೇಷ್ಮೆ ಕೃಷಿ ಹಿತರಕ್ಷಣಾ ವೇದಿಕೆಯ ರಾಜ್ಯ ಸಂಚಾಲಕ ಮಳ್ಳೂರು ಶಿವಣ್ಣ ಇತರರಿದ್ದರು. ಇದೇ ವೇಳೆ ರೇಷ್ಮೆ ಕೃಷಿಯಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts