More

    ಒಳಮೀಸಲಾತಿ ಅಧಿಸೂಚನೆ ಕೈಬಿಡಲು ಆಗ್ರಹ

    ಮಂಗಳೂರು: ರಾಜ್ಯ ಸರ್ಕಾರ ಇತ್ತೀಚೆಗೆ ಹೊರಡಿಸಿರುವ ಒಳ ಮೀಸಲಾತಿ ಪಟ್ಟಿಯಲ್ಲಿ ಮುಂಡಾಲ ಸಮುದಾಯ ಸೇರಿದಂತೆ 89 ಜಾತಿಗಳಿಗೆ ಶೇ.1ರಷ್ಟು ಮೀಸಲಾತಿ ನೀಡುವುದಾಗಿ ಅಧಿಸೂಚನೆ ಹೊರಡಿಸಲಾಗಿದೆ. ಆದರೆ ಈ ರೀತಿ ಮಾಡುವುದರಿಂದ ಮುಂಡಾಲ ಸಮುದಾಯಕ್ಕೆ ಅನ್ಯಾಯವಾಗಲಿದೆ. ಆದ್ದರಿಂದ ಸರ್ಕಾರ ತಕ್ಷಣ ಈ ಅಧಿಸೂಚನೆಯನ್ನು ಕೈ ಬಿಡಬೇಕು ಎಂದು ಅಖಿಲ ಭಾರತ ಮುಂಡಾಲ ಯುವ ವೇದಿಕೆ ಸ್ಥಾಪಕಾಧ್ಯಕ್ಷ ಕಿರಣ್ ಕುಮಾರ್ ಕೊಡಿಯಾಲ್‌ಬೈಲ್ ಹೇಳಿದರು.

    ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅವೈಜ್ಞಾನಿಕವಾದ ಒಳಮೀಸಲಾತಿ ಪಟ್ಟಿಯನ್ನು ಕೂಡಲೇ ರದ್ದುಗೊಳಿಸಿ ಈ ಹಿಂದೆ ಅನುಸರಿಸಲಾದ ಮೀಸಲಾತಿಯನ್ನೇ ಜಾರಿಗೊಳಿಸಬೇಕು. ಹೊರಡಿಸಲಾದ ಅಧಿಸೂಚನೆ ಕೈ ಬಿಡದಿದ್ದಲ್ಲಿ ಗ್ರಾಮ ಗ್ರಾಮಗಳಲ್ಲಿ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಮೂಲಕ ಉಗ್ರ ಹೋರಾಟ ಕೈಗೆತ್ತಿಕೊಳ್ಳಲಾಗುವುದು ಎಂದರು.

    ದೈವರಾಜ ಭಗವಾನ್ ಶ್ರೀ ಬಬ್ಬುಸ್ವಾಮಿಯನ್ನು ಆರಾಧಿಸಿಕೊಂಡು ಬಂದಿರುವ ಪರಿಶಿಷ್ಠ ಜಾತಿಯ ಉಪಜಾತಿ ಮುಂಡಾಲ ಸಮುದಾಯವು ದ., ಉಡುಪಿ, ಚಿಕ್ಕಮಗಳೂರು, ಕೊಡಗು, ಹಾಸನ, ಶಿವಮೊಗ್ಗ ಕಾಸರಗೋಡು ಸೇರಿದಂತೆ ಸುಮಾರು 7 ಜಿಲ್ಲೆಗಳಲ್ಲಿ ವ್ಯಾಪಿಸಿದೆ. ಸುಮಾರು 3 ಲಕ್ಷದಷ್ಟು ಜನಸಂಖ್ಯೆ ಹೊಂದಿದೆ. ಪ್ರಸ್ತುತ ರಾಜ್ಯ ಸರಕಾರ ಹೊರಡಿಸಿರುವ ಒಳ ಮೀಸಲಾತಿ ಪಟ್ಟಿಯಲ್ಲಿ ಮುಂಡಾಲ ಸಮುದಾಯ ಸೇರಿದಂತೆ 89 ಜಾತಿಗಳಿಗೆ ಶೇ.1ರಷ್ಟು ಮೀಸಲಾತಿ ನೀಡುವುದಾಗಿ ತಿಳಿಸಲಾಗಿದೆ. ಸರ್ಕಾರದ ಈ ನಡೆಯಿಂದ ಸಮುದಾಯ ಜನರಿಗೆ ಅರ್ಥಿಕ, ಸಾಮಾಜಿಕ ಶೈಕ್ಷಣಿಕ, ರಾಜಕೀಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಅನ್ಯಾಯವಾಗಲಿದೆ. ಆದ್ದರಿಂದ ಒಳ ಮೀಸಲಾತಿ ಪಟ್ಟಿಯನ್ನು ರದ್ದುಗೊಳಿಸಬೇಕು ಎಂದರು.

    ವೇದಿಕೆ ಅಧ್ಯಕ್ಷ ಪ್ರಶಾಂತ್ ಕಾಟಿಪಳ್ಳ, ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕಾಪಿಕಾಡ್, ಸಾಂಸ್ಕೃತಿಕ ಕಾರ್ಯದರ್ಶಿ ಚಂದ್ರಹಾಸ್ ಮೇರೆಮಜಲು, ಮಾಜಿ ಉಪಾಧ್ಯಕ್ಷ ಪ್ರವೀಣ್ ಕೋಡಿಕಲ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts