More

    ನಿರಾಶ್ರಿತ ಕುಟುಂಬಗಳಿಗೆ ನೇಮಕಾತಿಯಲ್ಲಿ ಮೀಸಲಾತಿ

    ಕಾರವಾರ: ನಿರಾಶ್ರಿತರಾದ ಕುಟುಂಬಗಳಿಗೆ ಸರ್ಕಾರಿ ಇಲಾಖೆಗಳ ಸಿ ಮತ್ತು ಡಿ ದರ್ಜೆಯ ಹುದ್ದೆಗಳ ನೇಮಕಾತಿಯಲ್ಲಿನ ಮೀಸಲಾತಿ ಯನ್ನು 2025 ರವರೆಗೆ ಮುಂದುವರಿಸುವ ಪ್ರಸ್ತಾವನೆ ಸರ್ಕಾರದ ಮುಂದಿದೆ ಎಂದು ಕಂದಾಯ ಸಚಿವ ಆರ್. ಅಶೋಕ ತಿಳಿಸಿದ್ದಾರೆ.

    ಶಾಸಕಿ ರೂಪಾಲಿ ನಾಯ್ಕ ಸದನದಲ್ಲಿ ಕೇಳಿದ ಪ್ರಶ್ನೆಗೆ ಅವರು ಲಿಖಿತ ಉತ್ತರ ನೀಡಿದ್ದಾರೆ. ವಿವಿಧ ಸಾರ್ವಜನಿಕ ಉಪಯೋಗಿ ಯೋಜನೆಗಳ ಜಾರಿಗೆ ಭೂಮಿ ನೀಡಿ, ನಿರಾಶ್ರಿತರಾದವರಿಗೆ ಉದ್ಯೋಗ ಮೀಸಲಾತಿ ದಿನಾಂಕವನ್ನು ವಿಸ್ತರಿಸುವ ಕಡತ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಲ್ಲಿದೆ ಎಂದಿದ್ದಾರೆ. ಯೋಜನಾ ನಿರಾಶ್ರಿತ ಕುಟುಂಬದ ಒಬ್ಬರಿಗೆ ಸಿ ಮತ್ತು ಡಿ ದರ್ಜೆಯ ಹುದ್ದೆಗಳ ನೇಮಕಾತಿಯಲ್ಲಿ ಶೇ. 5 ರಷ್ಟು ಮೀಸಲಾತಿ ಕಲ್ಪಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ 2000ರ ಡಿಸೆಂಬರ್​ನಲ್ಲಿ ಆದೇಶ ಹೊರಡಿಸಿತ್ತು. ಅದರಂತೆ ಇದುವರೆಗೆ ಕ್ಷೇತ್ರದಲ್ಲಿ 2098 ನಿರಾಶ್ರಿತ ಕುಟುಂಬಗಳಿಗೆ ನೌಕರಿ ನೀಡಲಾಗಿದೆ. ಆದರೆ, ಮೀಸಲಾತಿ ಅಧಿಸೂಚನೆಯ ಕಾಲಾವಧಿ 2020 ರ ಡಿಸೆಂಬರ್ 23ಕ್ಕೆ ಮುಕ್ತಾಯವಾಗಿದೆ. ಈ ಮೀಸಲಾತಿಯನ್ನು 2025 ರವರೆಗೆ ಮುಂದುವರಿಸುವ ಕುರಿತು ಆರ್ಥಿಕ ಮತ್ತು ಕಾನೂನು ಇಲಾಖೆಯೊಂದಿಗೆ ಸಮಾಲೋಚಿಸಿ ನಾಗರಿಕ ಸೇವಾ ನಿಯಮಗಳಿಗೆ ತಿದ್ದುಪಡಿ ಮಾಡಬೇಕಿದೆ ಎಂದು ಸಚಿವರು ತಿಳಿಸಿದ್ದಾರೆ. ಭೂ ಸ್ವಾಧೀನ ಕಾಯ್ದೆಯಲ್ಲಿಯೇ ಸಂಬಂಧಪಟ್ಟ ಯೋಜನಾ ನಿರಾಶ್ರಿತರಿಗೆ ಉದ್ಯೋಗ ನೀಡುವುದನ್ನು ಸೇರ್ಪಡೆ ಮಾಡುವ ಪ್ರಸ್ತಾಪ ಇದೆಯೇ ಎಂದು ರೂಪಾಲಿ ನಾಯ್ಕ ಮಾಡಿದ ಮರು ಪ್ರಶ್ನೆಗೆ, ಅಂತಹ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಸಚಿವರು ತಿಳಿಸಿದ್ದಾರೆ.

    7339 ನಿರಾಶ್ರಿತರು: ಕಾರವಾರ-ಅಂಕೋಲಾ ಕ್ಷೇತ್ರದಲ್ಲಿ 7339 ನಿರಾಶ್ರಿತ ಕುಟುಂಬಗಳಿವೆ. ಸೀಬರ್ಡ್ ನೌಕಾ ಯೋಜನೆಯಲ್ಲಿ 4604, ಕರ್ನಾಟಕ ವಿದ್ಯುತ್ ನಿಗಮ ಹಾಗೂ ಅಣು ವಿದ್ಯುತ್ ನಿಗಮದಲ್ಲಿ 1032, ಕೊಂಕಣ ರೈಲ್ವೆ ನಿಗಮದಿಂದ 1703 ಕುಟುಂಬಗಳು ನಿರಾಶ್ರಿತವಾಗಿವೆ. 412 ಕುಟುಂಬಗಳು ಎರಡನೇ ಬಾರಿ, 160 ಕುಟುಂಬಗಳು 3ನೇ ಬಾರಿಗೆ ನಿರಾಶ್ರಿತವಾಗಿವೆ ಎಂದು ಆರ್. ಅಶೋಕ ಉತ್ತರಿಸಿದ್ದಾರೆ.

    ದೋಣಿ ದೇಣಿಗೆ: ಸಂತೋಷಿಮಾತಾ ದೇವಸ್ಥಾನದಿಂದ ಕಾಳಿ ದ್ವೀಪಕ್ಕೆ ತೆರಳಲು ಶಾಸಕಿ ರೂಪಾಲಿ ನಾಯ್ಕ ಸ್ವಂತ ಖರ್ಚಿನಿಂದ ದೋಣಿಯೊಂದನ್ನು ದೇಣಿಗೆ ನೀಡಿದ್ದಾರೆ. ಶುಕ್ರವಾರ ಪೂಜೆ ಸಲ್ಲಿಸಿ ಅದೇ ಬೋಟ್​ನಲ್ಲಿ ಕಾಳಿ ಮಾತಾ ದ್ವೀಪಕ್ಕೆ ತೆರಳಿ ದೇವಿಗೆ ಪೂಜೆ ಸಲ್ಲಿಸಿದರು. ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ, ನಾಗೇಶ ಕುರ್ಡೆಕರ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts