More

    ರೇಣುಕಾ ಎಲ್ಲಮ್ಮ ದೇವಿ ಜಾತ್ರಾ ಮಹೋತ್ಸವ ನಾಳೆಯಿಂದ

    ಮದ್ದೂರು: ಪಟ್ಟಣದ ಹೊಳೆ ಬೀದಿಯಲ್ಲಿರುವ ಪುರಾಣ ಪ್ರಸಿದ್ಧ ಹಾಗೂ ಚಿಕ್ಕಸವದತ್ತಿ ಎಂದೇ ಪ್ರಸಿದ್ಧಿಯಾಗಿರುವ ಶ್ರೀ ರೇಣುಕಾ ಎಲ್ಲಮ್ಮ ದೇವರ ಜಾತ್ರಾ ಮಹೋತ್ಸವವವು ಶುಕ್ರವಾರದಿಂದ ವಿಜೃಂಭಣೆಯಿಂದ ನಡೆಯಲಿದ್ದು, ಅದಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

    23ರ ಶುಕ್ರವಾರ ಸಂಜೆ 6 ಗಂಟೆಗೆ ಮೂಲ ದೇವರಿಗೆ ಹಾಗೂ ಗಣಪತಿ ಪೂಜೆ ಸಲ್ಲಿಸುವ ಮೂಲಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ಸಿಗಲಿದ್ದು, ಕಳಸ ಪ್ರತಿಷ್ಠಾಪನೆ ನಂತರ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ.

    24 ರ ಶನಿವಾರ ಬೆಗ್ಗೆ 9 ಗಂಟೆಗೆ ಚಂಡಿಕಾಯಾಗ ನಡೆಯಲಿದ್ದು, ನಂತರ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಹಾಗೂ ಮುತ್ತೈದೆಯರಿಂದ ತಂಬಿಟ್ಟಿನ ಆರತಿ ಏರ್ಪಡಿಸಲಾಗಿದ್ದು, ಮಧ್ಯಾಹ್ನ 1 ರಿಂದ 4 ರವರೆಗೆ ಸಹಸ್ರಾರು ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ.

    ಇದರ ಜತೆಗೆ 2.30 ರಿಂದ ಸಂಜೆ 5.30 ರವರೆಗೆ ನಿಂಬೆಹಣ್ಣಿನ ದೀಪದ ಆರತಿ ಮತ್ತು ಉಯ್ಯಲೋತ್ಸವವನ್ನು ದೇವಸ್ಥಾನದ ಟ್ರಸ್ಟ್ ವತಿಯಿಂದ ಏರ್ಪಡಿಸಲಾಗಿದೆ. ರಾತ್ರಿ 8.30ಕ್ಕೆ ಹೊಳೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಆರಂಭಿಸಿ ದೇವಿಯ ಮುತ್ತಿನ ಪಲ್ಲಕ್ಕಿ ಉತ್ಸವ ನಡೆಯಲಿದ್ದು, ವಿವಿಧ ವಿಶೇಷ ಹೂವುಗಳಿಂದ ಹಾಗೂ ದೀಪಾಲಂಕಾರದಿಂದ ಪಲ್ಲಕ್ಕಿ ಉತ್ಸವ ಕಂಗೊಳಿಸಲಿದೆ.

    ಈ ವೇಳೆ ತಿರುಪತಿ ತಿರುಮಲ ದೇವಸ್ಥಾನದ ಮಂಜು ಬಾಲಾಜಿ ಅವರ ವಾದ್ಯಗೋಷ್ಠಿ, ಮಂಗಳೂರಿನ ಯಕ್ಷಗಾನ, ಕೇರಳದ ಚಂಡೆ ಮೇಳ, ತಮಿಳುನಾಡಿನ ಬ್ಯಾಂಡ್ ಸೆಟ್ ಸೇರಿದಂತೆ ಮದ್ದೂರಮ್ಮನ ಪೂಜಾ ಕುಣಿತ, ದಂಡಿನಮಾರಮ್ಮನ ಪೂಜಾ ಕುಣಿತ, ಕಲಾವಿದರಿಂದ ತಮಟೆ, ನಗಾರಿ, ಜಾನಪದ ಮೇಳ ಸೇರಿದಂತೆ ಹಲವು ಕಲಾತಂಡಗಳು ಮೆರವಣಿಗೆಯಲ್ಲಿ ಸಾಗಲಿವೆ.

    ರಾತ್ರಿಇಡೀ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ಸಾಗಿ ಭಾನುವಾರ ಬೆಳಗ್ಗೆ 6 ಕ್ಕೆ ದೇವಸ್ಥಾನದ ಮೂಲಸ್ಥಾನ ತಲುಪಲಿದ್ದು ಭಕ್ತರು ದೇವಿ ದರ್ಶನ ಪಡೆಯಬೇಕೆಂದು ರೇಣುಕಾ ಎಲ್ಲಮ್ಮ ದೇವಿ ಸೇವಾ ಟ್ರಸ್ಟ್ ಅಧ್ಯಕ್ಷ ಎ.ನಾರಾಯಣಸ್ವಾಮಿ, ಕಾರ್ಯದರ್ಶಿ ಟಿ.ಶ್ರೀನಿವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts