More

    ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ 62 ಜನರ ಮೇಲೆ ನಿಗಾ- ಡಾ. ಎಸ್.ಬಿ. ಬೊಮ್ಮನಹಳ್ಳಿ

    ಬೆಳಗಾವಿ: ದೆಹಲಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಜಿಲ್ಲೆಗೆ ಆಗಮಿಸಿರುವ 62 ಜನರ ಮೇಲೆ ವಿಶೇಷ ನಿಗಾವಹಿಸಿದ್ದು, 33 ಜನರನ್ನು ನಗರದ ಬಿಮ್ಸ್‌ನಲ್ಲಿ ಇಡಲಾಗಿದೆ. ಅಲ್ಲದೆ, 14 ದಿನಗಳ ಕ್ವಾರಂಟೈನ್‌ಗಾಗಿ ಹೋಟೆಲ್‌ಗಳನ್ನು ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಎಸ್.ಬಿ. ಬೊಮ್ಮನಹಳ್ಳಿ ತಿಳಿಸಿದ್ದಾರೆ.

    ಧಾರ್ಮಿಕ ಸಭೆಗೆ ಹೋಗಿಬಂದಿರುವ ಬೆಳಗಾವಿ ಜಿಲ್ಲೆಯ 62 ಜನರಲ್ಲಿ ಯಾರಿಗೂ ಸೋಂಕಿನ ಲಕ್ಷಣಗಳಿಲ್ಲ. ಉಳಿದವರನ್ನು ಹೋಂ ಕ್ವಾರಂಟೈನ್‌ನಲ್ಲಿಡಲಾಗಿದೆ. ಡಯಾಬಿಟಿಸ್ ಅಸ್ತ ಮಾ, ಹೈಪರ್ ಟೆನ್ಷನ್ ಹೊಂದಿರುವ 27 ಜನರನ್ನು ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಸ್ಪತ್ರೆಗೆ ಕರೆತಂದು ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಲಾಗುತ್ತಿದೆ. ಆದರೆ, ಯಾರಿಗೂ ಸೋಂಕಿನ ಲಕ್ಷಣಗಳಿಲ್ಲ ಈ ಬಗ್ಗೆ ಜನರು ಭಯ ಪಡುವ ಅಗತ್ಯ ಇಲ್ಲ ಎಂದು ತಿಳಿಸಿದ್ದಾರೆ.

    ಈಗಾಗಲೇ 14 ದಿನಗಳ ಕ್ವಾರಂಟೈನ್‌ನ ಮುಗಿದಿರುವವರ ಮೇಲೆ ವೈದ್ಯರು, ಪೊಲೀಸರು ವಿಶೇಷ ನಿಗಾ ವಹಿಸಿದ್ದಾರೆ. ಅವರ ಆರೋಗ್ಯದಲ್ಲಿ ಏರುಪೇರು ಕಂಡುಬಂದರೆ ತಕ್ಷಣ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಗುವುದು. ಕರೊನಾ ಹರಡುವುದನ್ನು ಸಂಪೂರ್ಣವಾಗಿ ನಿಯಂತ್ರಿಸಲು ನಗರ, ತಾಲೂಕು ಮಟ್ಟದಲ್ಲಿರುವ ಹೋಟೆಲ್‌ಗಳನ್ನು ಕ್ವಾರಂಟೈನ್‌ಗಳಾಗಿ ಬಳಕೆ ಮಾಡಿಕೊಳ್ಳಲು ಅಲ್ಲಲ್ಲಿ ಗುರುತಿಸಿಕೊಳ್ಳಲಾಗಿದೆ. ಅನಿವಾರ್ಯತೆ ಬಂದರೆ ಅವರೆಲ್ಲರನ್ನು ಮನೆಯಲ್ಲಿ ಕ್ವಾರಂಟೈನ್‌ನಲ್ಲಿಡುವ ಬದಲಾಗಿ ಹೋಟೆಲ್, ವಸತಿ ನಿಲಯಗಳಲ್ಲಿಡಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.

    ಈಗಾಗಲೇ ಜಿಲ್ಲೆಯಲ್ಲಿ 263 ಜನರನ್ನು ಕ್ವಾರಂಟೈನ್‌ನಲ್ಲಿಡಲಾಗಿದ್ದು, 184 ಜನರ ಕ್ವಾರಂಟೈನ್‌ನ 14 ದಿನಗಳ ಅವಧಿ ಪೂರ್ಣಗೊಂಡಿದೆ. 74 ಜನರನ್ನು 28 ದಿನಗಳ ಐಸೋಲೇಷನ್‌ನಲ್ಲಿ ಇಡಲಾಗಿದ್ದು, ಕರೊನಾ ಲಕ್ಷಣಗಳು ಕಂಡು ಬಂದಿಲ್ಲ. ಸಾರ್ವಜನಿಕರು ಸಾಮಾಜಿಕ ಅಂತರ ಕಾಪಾಡಿಕೊಂಡು ಮನೆಯಲ್ಲಿದ್ದುಕೊಂಡು ಸರ್ಕಾರದ ಕೆಲಸಕ್ಕೆ ಸಹಕಾರ ನೀಡಬೇಕು. ಜನರಿಗೆ ಸಮಸ್ಯೆ ಉಂಟಾಗದಂತೆ ನಿತ್ಯ ಬಳಕೆ ವಸ್ತುಗಳನ್ನು ಮನೆ ಮನೆಗೆ ಮುಟ್ಟಿಸುವ ಕೆಲಸ ಪ್ರಗತಿಯಲ್ಲಿದೆ. ಸಾರ್ವಜನಿಕರು ಲಾಕ್‌ಡೌನ್ ಆದೇಶವನ್ನು ತಪ್ಪದೆ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts